ಸೆಪ್ಟೆಂಬರ್ 1ರಿಂದ ಜಾನುವಾರು ಗಣತಿ, ರೈತರು ತಿಳಿದಿರಬೇಕಾದ ಮಾಹಿತಿಗಳು
ಬೆಂಗಳೂರು, ಆಗಸ್ಟ್ 21: ಭಾರತದಲ್ಲಿ 21ನೇ ಜಾನುವಾರು ಗಣತಿ ಸೆಪ್ಟಂಬರ್ 1ಕ್ಕೆ ಆರಂಭಗೊಳ್ಳುತ್ತಿದೆ. ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸುತ್ತಿದ್ದ ಗಣತಿಕಾರರು ಈ ಬಾರಿ ಮೊದಲ ಬಾರಿಗೆ ಸ್ಮಾರ್ಟಫೋನ್ ಬಳಸಿ ಗಣತಿ ನಡೆಸುತ್ತಾರೆ. ರಾಜ್ಯದ ಪಶುಸಂಗೋಪನೆ ಇಲಾಖೆಯೂ 4 ತಿಂಗಳ ಕಾಲ ನಡೆಯುವ ಈ ಬೃಹತ್ ಸಮೀಕ್ಷಾ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ.
ಇದು ದೇಶದಲ್ಲಿ ನಡೆಯುತ್ತಿರುವ 21ನೇ ಜಾನುವಾರು ಗಣತಿ ಪ್ರಕ್ರಿಯೆಯಾಗಿದೆ. ಗಣತಿ ಪ್ರಕ್ರಿಯೆಯಲ್ಲಿ ರೈತರು ಯಾವ-ಯಾವ ಮಾಹಿತಿಯನ್ನು ನೀಡಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ 21ನೇ ಜಾನುವಾರು ಗಣತಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಸ್ಮಾರ್ಟ್‌ಪೋನ್ ಮೂಲಕ ಗಣತಿ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಗಣತಿದಾರರಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿ, ತರಬೇತಿಯನ್ನು ಸಹ ನೀಡಲಾಗಿದೆ. ಈ ಬಾರಿ ಪುಸ್ತಕದಲ್ಲಿ ಗಣತಿ ಮಾಹಿತಿಯನ್ನು ನಮೂದಿಸುವುದಿಲ್ಲ.
ಸ್ಮಾರ್ಟಫೋನ್ ಬಳಸಿ ಮನೆ ಮನೆಯಲ್ಲಿ ಗಣತಿ: ಈ ಜಾನುವಾರು ಗಣತಿಗಾಗಿಯೇ ಕೇಂದ್ರ ಪಶುಸಂಗೋಪನಾ ಸಚಿವಾಲಯ '21ಫಸ್ಟ್ ಲೈವ್ ಸ್ಟಾಕ್ ಸೆನ್ಸಸ್' ಎನ್ನುವ ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಶನ್ ಬಳಕೆ ಮಾಡುವ ಕುರಿತು ತರಬೇತಿಯನ್ನೂ ನೀಡಲಾಗಿದೆ. ಹಿಂದಿನ ಗಣತಿ ಸಮಯದಲ್ಲಿ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಿತ್ತು.
ಈ ಬಾರಿಯ ಗಣತಿಯಲ್ಲಿ ಚುಟುಕಾಗಿ ಅಪ್ಲಿಕೇಶನ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್‌ವರ್ಕ್ ಇಲ್ಲದಿದ್ದರೂ ಈ ಅಪ್ಲಿಕೇಶನ್ ನೆಟ್‌ವರ್ಕ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿಯನ್ನು ಹಂಚಿಕೊಳ್ಳವಂತೆ ವಿನ್ಯಾಸಗೊಳಿಸಲಾಗಿದೆ.
ಯಾವ ಮಾಹಿತಿ ನೀಡಬೇಕು?: ಜಾನುವಾರು ಗಣತಿ ಸಂದರ್ಭದಲ್ಲಿ, ಯಾವ ತಳಿಯ ಜಾನುವಾರುಗಳು? ಯಾವ ವಯಸ್ಸು?, ಎಷ್ಟು ರೈತರು?, ಯಾವ ವರ್ಗದ ರೈತರು?, ಎಷ್ಟು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ? ಎಂಬ ಮಾಹಿತಿ ಕಲೆ ಹಾಕಲಾಗುತ್ತದೆ.
ಈ ಮೂಲಕ ಸರ್ಕಾರಗಳು ತಮ್ಮ ಮುಂದಿನ ಯೋಜನೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ ಕಾರ್ಯಕ್ರಮ ನಿರೂಪಿಸುವುದಕ್ಕಾಗಿ ಗಣತಿಯ ಅಂಕಿ-ಅಂಶಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಜಾನುವಾರು ಗಣತಿಯ ಸಂದರ್ಭದಲ್ಲಿ ಮನೆಗಳಲ್ಲಿ ಸಾಕಲಾಗುವ ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟ್ರಿಚ್ ಪಕ್ಷಿಗಳ ಮಾಹಿತಿ ಪಡೆಯಲಾಗುತ್ತದೆ.
ಬಿಡಾಡಿ ದನ, ನಾಯಿಗಳ ಮಾಹಿತಿಯನ್ನು ಗಣತಿಯಲ್ಲಿ ಸೇರಿಸಲಾಗುತ್ತದೆ. ಗೋ ಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಹೆಚ್ಚು ದನಗಳಿದ್ದರೆ, 1000ಕ್ಕಿಂತ ಹೆಚ್ಚು ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆಯಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಲಾಗುತ್ತದೆ.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವಿಕೆಯಲ್ಲಿ ಜಾನುವಾರು ಗಣತಿಯನ್ನು ನಡೆಸುತ್ತದೆ. ಇದರ ಮೂಲಕ ಎಲ್ಲಾ ಸಾಕು ಪ್ರಾಣಿಗಳು ಮತ್ತು ದನ, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ, ಹೇಸರಗತ್ತೆ, ಕತ್ತೆ ಒಂಟೆ, ನಾಯಿ, ಮೊಲ ಮತ್ತು ಆನೆ ಮತ್ತು ಕೋಳಿ ಪಕ್ಷಿಗಳ (ಕೋಳಿ, ಬಾತುಕೋಳಿ) ನಂತಹ ಒಟ್ಟು 16 ಜಾತಿಯ ಪ್ರಾಣಿಗಳ ಅಂಕಿ ಸಂಖ್ಯೆ ಸಂಗ್ರಹ ಮಾಡಲಾಗುತ್ತದೆ.
ಗಣತಿಯ ಬಳಿಕ ಕಳೆದ ಎರಡು ದಶಕಗಳಲ್ಲಿನ ಸಂಖ್ಯೆ ಮತ್ತು ಹಿಂದಿನ ಪ್ರವೃತ್ತಿಗಳನ್ನು ಪರಿಗಣಿಸಿದರೆ, ಅಳಿವಿನ ಅಂಚಿನಲ್ಲಿರುವ ಜಾನುವಾರು ಸೇರಿ ಇತರ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.












Click it and Unblock the Notifications