FPO: ದೇಶದಲ್ಲಿ 1100 ಹೆಚ್ಚುವರಿ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ; ಕೇಂದ್ರ ಸಹಕಾರ ಸಚಿವಾಲಯ
ರೈತರ ಕಲ್ಯಾಣ ಮತ್ತು ರೈತರ ಆದಾಯ ಹೆಚ್ಚಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಕೃಷಿ ಮತ್ತು ಸಹಕಾರ ಸಚಿವಾಲಯದ ಸಂಯೋಜನೆಯೊಂದಿಗೆ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 'ಸಹಕಾರ್ ಸೇ ಸಮೃದ್ಧ' ಆಶಯದಲ್ಲಿ ಸಹಕಾರ ಕ್ಷೇತ್ರದಲ್ಲಿ 1100 ರೈತ ಉತ್ಪಾದಕ ಸಂಸ್ಥೆಗಳು(ಎಫ್‌ಪಿಒ) ಸ್ಥಾಪಿಸಲಾಗುವುದು ಎಂದು ಕೇಂದ್ರ ಸಹಕಾರ ಸಚಿವಾಲಯ ತಿಳಿಸಿದೆ.
ಕೇಂದ್ರ ಕೃಷಿ ಸಚಿವಾಲಯದ 6,865 ಕೋಟಿ ರೂ.ಗಳ ಬಜೆಟ್ ಅನುದಾನದೊಂದಿಗೆ 2021ರ ಫೆಬ್ರವರಿಯಿಂದ ಈವರೆಗೆ 10,000 ರೈತ ಉತ್ಪಾದಕ ಸಂಸ್ಥೆಗಳನ್ನು ರಚನೆ ಮಾಡಲಾಗಿದೆ.

ಈ ಯೋಜನೆಯಲ್ಲಿ 1100 ಹೆಚ್ಚುವರಿ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮಕ್ಕೆ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಹಕಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದರಲ್ಲಿ ಪ್ರತಿ ರೈತ ಉತ್ಪಾದಕ ಸಂಸ್ಥೆಗೆ 33 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ, ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಗಳ ಪ್ರತಿ ರೈತ ಉತ್ಪಾದಕ ಸಂಸ್ಥೆಗೆ 25 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತದೆ.
ಕೇಂದ್ರ ಸಹಕಾರ ಸಚಿವಾಲಯದ ಪ್ರಕಾರ, ಈಗಾಗಲೇ 13 ಕೋಟಿ ರೈತರನ್ನು ಹೊಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಅಲ್ಪಾವಧಿಯ ಸಾಲ, ಬೀಜ ಹಾಗೂ ಗೊಬ್ಬರ ವಿತರಣೆಯಲ್ಲಿ ನಿರತವಾಗಿವೆ. ಇದೀಗ ಹೊಸ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆಯೊಂದಿಗೆ ಇತರ ಆರ್ಥಿಕ ಚಟುವಟಿಕೆಗಳನ್ನು ಮುಂದುವರೆಸಲು ಸಾಧ್ಯವಾಗಲಿದೆ ಎಂದು ಸಹಕಾರ ಸಚಿವಾಲಯ ತಿಳಿಸಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಗ್ರಾಮೀಣ ಪ್ರದೇಶಗಳಲ್ಲಿ ಜೇನುಸಾಕಣೆ, ಅಣೆಬೆ ಕೃಷಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯ ಗಳಿಸಲು ಪ್ರೋತ್ಸಾಹ ನೀಡಲಾಗುವುದು. ಇದರ ಜೊತೆಗೆ ರೈತರಿಗೆ ಅಗತ್ಯ ಮಾರುಕಟ್ಟೆ ವ್ಯವಸ್ಥೆ ಮತ್ತು ಸಂಪರ್ಕ ಒದಗಿಸುವ ಮೂಲಕ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿಪಡಿಸುವುದನ್ನು ಖಚಿತಪಡಿಸಲಾಗುವುದು ಎಂದು ಕೇಂದ್ರ ಸಹಕಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications