ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಂದ ರೈತರಿಗೆ ಕೃಷಿ ತಂತ್ರಜ್ಞಾನ

By * ಪ್ರಕಾಶ್, ಮೈಸೂರು
|
Google Oneindia Kannada News

ಕೇಳುವ ಮಾಧ್ಯಮವಾದ ರೇಡಿಯೋವನ್ನು ದೃಶ್ಯಮಾಧ್ಯಮವನ್ನಾಗಿ ಪರಿವರ್ತಿಸಬಹುದೇ? ಹೀಗೊಂದು ಪ್ರಶ್ನೆ ಮುಂದಿಟ್ಟರೆ, ಯಾಕಾಗಬಾರದು, ನಾವೇ ಮಾಡುತ್ತಿದ್ದೇವಲ್ಲಾ , ಕಳೆದ ಮೂರು ವರ್ಷಗಳಿಂದ ಎನ್ನುತ್ತಾರೆ ಮೈಸೂರು ಆಕಾಶವಾಣಿ ಕೃಷಿ ರಂಗ ಕಾರ್ಯಕ್ರಮ ನಿರ್ವಹಿಸುತ್ತಿರುವ ಪ್ರಸಾರ ನಿರ್ವಾಹಕ ಕೇಶವಮೂರ್ತಿ.

ರೇಡಿಯೋದಲ್ಲಿ ಕೇಳಿದ್ದನ್ನು ಪ್ರತ್ಯಕ್ಷವಾಗಿ ರೈತರ ಹೊಲದಲ್ಲಿ ನೋಡುವ, ನೋಡಿದ್ದನ್ನು ಅನುಸರಿಸಿ ಮತ್ತೊಬ್ಬರಿಗೆ ತಿಳಿಸುವ, ರೈತರಿಂದ ರೈತರಿಗೆ, ಕೃಷಿ ವಿಜ್ಞಾನಿಗಳಿಂದ ರೈತರಿಗೆ ಕೃಷಿ ತಂತ್ರಜ್ಞಾನ ವರ್ಗಾಯಿಸುವ ವಿನೂತನ ಪ್ರಯೋಗವೊಂದರಲ್ಲಿ ನಿರತವಾಗಿದೆ ಮೈಸೂರು ಆಕಾಶವಾಣಿ ತನ್ನ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದ ಮೂಲಕ.

2006ರಿಂದ ಸತತವಾಗಿ ಪ್ರತೀ ತಿಂಗಳೂ ಕೊನೆಯ ಭಾನುವಾರದಂದು ಆಸಕ್ತ ರೈತರ ಹೊಲದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಈ ಕಾರ್ಯಕ್ರಮ ಪ್ರಯೋಗಶೀಲ, ಕ್ರಿಯಾಶೀಲ ರೈತರ ತಂಡವೊಂದನ್ನು ಸೃಷ್ಟಿಸಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಕೊಡಗು ಜಿಲ್ಲೆಗಳಿಂದ ರೈತರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ.

ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಆತಿಥ್ಯ ವಹಿಸುವಲ್ಲಿ ರೈತರು ತೋರುತ್ತಿರುವ ಆಸಕ್ತಿಯೇ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಿದೆ. ದೂರದ ಊರುಗಳಿಂದ ಬರುವ ರೈತರು ಹಿಂದಿನ ದಿನವೇ ಬಂದು ಕಾರ್ಯಕ್ರಮ ನಡೆಯುವ ಊರಿನಲ್ಲಿ ತಂಗುತ್ತಾರೆ. ಅಲ್ಲಿನ ರೈತರ, ವ್ಯವಸಾಯ ವಿಧಾನದ ಕುರಿತು ಚರ್ಚಿಸುತ್ತಾರೆ. ತಮಗೆ ತಿಳಿದಿದ್ದನ್ನು ಹೇಳುತ್ತಾರೆ.

ಯಾವುದೇ ಒಂದು ವ್ಯವಸಾಯದ ವಿಧಾನವನ್ನು ಜನಪ್ರಿಯಗೊಳಿಸುವ ಬದಲು ರೈತರಿಗೆ ಲಾಭ ತರಬಹುದಾದ ಸುಸ್ಥಿರ ಕೃಷಿ, ಭೂಮಿಯ ಆರೋಗ್ಯ, ಕೃಷಿ ಸಂಬಂಧಿ ಉಪಕಸುಬುಗಳು ರೈತರ ಸ್ವಾವಲಂಬನೆಗೆ ಪೂರಕವಾದ ವಸ್ತುಗಳ ತಯಾರಿಕೆ ಕುರಿತ ತರಬೇತಿ ಈ ಎಲ್ಲವನ್ನು ಬಾನುಲಿ ಕೃಷಿ ಬೆಳಗು ಒಳಗೊಂಡಿದೆ.

ಫೆಬ್ರವರಿ ತಿಂಗಳ ಆತಿಥ್ಯ ವಹಿಸಿದ್ದ ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದ ರೈತ ಕುಟುಂಬ ಪುಟ್ಟೇಗೌಡ ಮತ್ತು ಗೌರಮ್ಮ, ಅವರ ಮಕ್ಕಳಾದ ಹೆಚ್.ಪಿ. ರಾಮಚಂದ್ರ , ಸತೀಶ ಮತ್ತು ನಂದೀಶ, ಸೊಸೆ ಅನಿತಾ ಅವರು ನಡೆದಾಡುವ ಬ್ಯಾಂಕುಗಳೆಂದೇ ಕರೆಸಿಕೊಳ್ಳುವ ಮೇಕೆಗಳನ್ನು ಸಾಕುವುದರಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸುಮಾರು ಒಂದುನೂರು ಮೇಕೆ ಸಾಕಿರುವ ಇವರು ಅವುಗಳನ್ನು ಹೊರಗಡೆ ಮೇಯಲು ಬಿಡದೆ, ಮನೆಯ ಬಳಿಯೇ ಕೊಟ್ಟಿಗೆಯಲ್ಲಿ ಸಾಕಿ, ಜಮೀನಿನಲ್ಲಿ ಅವುಗಳಿಗಾಗಿ ವಿವಿಧ ಮರಗಳನ್ನು ಬೆಳೆಸಿ ಸೊಪ್ಪು ಒದಗಿಸುತ್ತಾರೆ. ಜೊತೆಗೆ ರೇಷ್ಮೆ ಹುಳುವಿನ ತ್ಯಾಜ್ಯ, ಮನೆಯ ಹಿಂದಿನ ಹಿತ್ತಲನ್ನು ಸಾವಯವ ವಿಧಾನದಲ್ಲಿ ಬಾಳೆ ಬೆಳೆಸಲು ಬಳಸಿಕೊಂಡಿದ್ದಾರೆ. ಸಮೃದ್ಧವಾಗಿ ಬೆಳೆದ ಬಾಳ ಹಾಗೂ ಮೇಕೆ ಸಾಕಾಣಿಕೆ ಭಾಗವಹಿಸಿದ್ದವರೆಲ್ಲರ ಮೆಚ್ಚುಗೆ ಗಳಿಸಿತು. ಚಾಕಿ ಸಾಕಾಣಿಕೆ ಬಗ್ಗೆ ಆಸಕ್ತಿಯಿದ್ದು ಅದಕ್ಕಾಗಿ ಪ್ರತ್ಯೇಕ ಮನೆ ನಿರ್ಮಿಸಿಕೊಂಡಿದ್ದಾರೆ.

ಮಂಡ್ಯದ ವಿಕಸನ ಸಂಸ್ಥೆ , ಕೃಷಿ ಇಲಾಖೆ, ವಾರ್ತಾ ಇಲಾಖೆ, ವಿಜಯಾ ಬ್ಯಾಂಕ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ , ಕೃಷಿ ವಿಜ್ಞಾನ ಕೇಂದ್ರಗಳೂ ಸಹ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಾ ಬಂದಿವೆ.ಕೃಷಿ ತರಬೇತಿ ಕಮ್ಮಟಗಳ ಜೊತೆಗೆ ಸೋಪು, ಸೊಳ್ಳೆ ಬತ್ತಿ , ಪೌಷ್ಠಿಕ ಆಹಾರ ತಯಾರಿಕೆ, ಇನ್ನಿತರ ತರಬೇತಿ ಶಿಬಿರಗಳನ್ನು ಸಹ ಏರ್ಪಡಿಸಲಾಗುತ್ತಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಕಾರ್ಯಕ್ರಮದ ದಿನದಂದು ಪ್ರದರ್ಶಿಸಿ, ಮಾರಾಟ ಮಾಡುವ ವ್ಯವಸ್ಥೆಯೂ ಇದೆ.

Krishi Belagu Baanuli , akashavani program
ಬಾನುಲಿಯಿಂದ ರೈತರಿಗೆ ಆತ್ಮವಿಶ್ವಾಸ

ಬಾನುಲಿ ಕೃಷಿ ಕಾರ್ಯಕ್ರಮಕ್ಕೆ ಪ್ರತೀ ತಿಂಗಳೂ ತಪ್ಪದೇ ಬರುವ ಹಲವು ರೈತರಿದ್ದಾರೆ. ಇವರಿಗೆ ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗದಿದ್ದರೆ ಸಮಾಧಾನವೇ ಇರುವುದಿಲ್ಲ. ಅಂತಹ ಆತ್ಮೀಯತೆ ಬೆಳೆದಿದೆ ಎನ್ನುತ್ತಾರೆ ಕಾರ್ಯಕ್ರಮ ರೂಪಿಸಿರುವ ಕೇಶವಮೂರ್ತಿ. ಇವರಿಗೆ ಆಕಾಶವಾಣಿ ನಿಲಯ ನಿರ್ದೇಶಕರಾದ ಡಾ: ಎಂ.ಎಸ್. ವಿಜಯಾಹರನ್ ಹಾಗೂ ಸಹೋದ್ಯೋಗಿ ಕಾರ್ಯಕ್ರಮ ನಿರ್ವಾಹಕ ಜಗದೀಶ್ ಅವರ ಬೆಂಬಲವೂ ಇದೆ.ರೇಡಿಯೋದಲ್ಲಿ ಪ್ರಸಾರವಾಗಿ, ಕೇಳಿ ಮರೆತು ಹೋಗಬಹುದಾಗಿದ್ದ ಅನೇಕ ವಿಷಯಗಳು, ಅವುಗಳ ಬಗ್ಗೆ ತಜ್ಞರು ರೈತರಿಂದ ಪ್ರಾತ್ಯಕ್ಷಿಕೆ ಸಹಿತವಾಗಿ ಮತ್ತೊಮ್ಮೆ ಚರ್ಚೆಗೊಳಗಾಗುವುದರಿಂದ ವಿಷಯ ಮನದಟ್ಟಾಗುವುದೇ ಅಲ್ಲದೇ ವಿಶ್ವಾಸವೂ ಮೂಡುತ್ತಿದೆ ಇದು ರೈತರ ಮಾತುಗಳಲ್ಲಿ ವ್ಯಕ್ತವಾಗುತ್ತದೆ.

ಇದೀಗ ಈ ಕಾರ್ಯಕ್ರಮ ಕೃಷಿ ತಂತ್ರಜ್ಞಾನಕ್ಕೆ ಸೀಮಿತಗೊಳ್ಳದೇ ಪರ್ಯಾಯ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸಿದೆ. ಪರ್ಯಾಯ ಜೈವಿಕ ಇಂಧನ ತಯಾರಿಕೆ ಬಗ್ಗೆ ಆಲೋಚನೆ ನಡೆಸಿದೆ ಟ್ರಸ್ಟ್‌ವೊಂದನ್ನು ಸ್ಥಾಪಿಸಿಕೊಳ್ಳುವ ಮೂಲಕ.ಕೃಷಿ ನಷ್ಟದ ಬಾಬತ್ತಾಗಿ, ರೈತರು ವಿಶ್ವಾಸ ಕಳೆದುಕೊಂಡು, ಅದರಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಮೈಸೂರು ಆಕಾಶವಾಣಿಯು ರೈತರನ್ನು ಆತ್ವವಿಶ್ವಾಸದ ಬದುಕಿಗೆ ಪ್ರಚೋದಿಸುತ್ತಿರುವುದು ಶ್ಲಾಘನೀಯವಾಗಿದೆ. ಮೈಸೂರು ಆಕಾಶವಾಣಿಯ ಈ ಕಾರ್ಯ ಇತರೇ ಆಕಾಶವಾಣಿ ಕೇಂದ್ರಗಳಿಗೂ ಮಾದರಿಯಾಗಿದೆ.
ಪೂರಕ ಓದಿಗೆ:
ರೈತರ ಬದುಕಿಗೆ ಆಸರೆಯಾದ ಎರೆಹುಳ ಗೊಬ್ಬರ
ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆಆಕಾಶವಾಣಿ ಗುಲಬರ್ಗಾ ಕೇಂದ್ರಕ್ಕೆ ದ್ವಿತೀಯ ಸ್ಥಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X