ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಬದುಕಿಗೆ ಆಸರೆಯಾದ ಎರೆಹುಳ ಗೊಬ್ಬರ

By Staff
|
Google Oneindia Kannada News

Successful farmer Shivanand Garur, Gulbarga
"ಓದು ಒಕ್ಕಾಲು ಬುದ್ಧಿ ಮುಕ್ಕಾಲು" ಎಂಬಂತೆ ಕೇವಲ 3ನೇ ತರಗತಿವರೆಗೆ ಓದಿದ ಶಿವಾನಂದ ಗರೂರ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಪ್ರಗತಿಪರ ರೈತರಾಗಿ ರೂಪುಗೊಂಡಿದ್ದಾರೆ. ಇದಲ್ಲದೆ ಭೂಮಾಲಿನ್ಯ ತಡೆ, ಅಂತರ್ಜಲ ಹೆಚ್ಚಳ, ಕೃಷಿ ತ್ಯಾಜ್ಯಗಳ ಮರುಬಳಕೆ ಮಾಡುವ ಮೂಲಕ ಜಿಲ್ಲೆಯ ಇಡೀ ಕೃಷಿ ಸಮಾಜಕ್ಕೆ ಮಾದರಿಯಾಗಿ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.

ವರದಿ : ಜಿ.ಚಂದ್ರಕಾಂತ, ಗುಲ್ಬರ್ಗಾ

ಗುಲಬರ್ಗಾ ಜಿಲ್ಲೆಯ ಅಫಜಲಪೂರ ತಾಲೂಕಿನ ಗುಡೂರ ಒಂದು ಚಿಕ್ಕ ಗ್ರಾಮ. "ರೈತ ದೇಶದ ಬೆನ್ನೆಲುಬು, ಕೃಷಿ ದೇಶದ ಜೀವಾಳ" ಎಂಬುದನ್ನರಿತ ಈ ಗ್ರಾಮದ 44 ವರ್ಷ ವಯಸ್ಸಿನ ಶಿವಾನಂದ ಗರೂರ ಕಳೆದ ಐದು ವರ್ಷಗಳಿಂದ ಕಸದಿಂದ ರಸ ಸೃಷ್ಟಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ 12.24 ಎಕರೆ ಹೊಲದಲ್ಲಿ ದೊರೆಯುವ ಕಸಕಡ್ಡಿ ಮತ್ತಿತರ ಕೃಷಿ ತ್ಯಾಜ್ಯ ವಸ್ತುಗಳಲ್ಲಿ ಕಾಮಧೇನು ಕಂಡುಕೊಂಡಿದ್ದಾರೆ. ಇದಕ್ಕೆಲ್ಲ "ಬಸವಾ ಎರೆಹುಳು ಗೊಬ್ಬರ" ತಯಾರಿಕಾ ಘಟಕವೇ ಮೂಲ ಕಾರಣ. ಪ್ರಗತಿಪರ ಶ್ರೇಷ್ಠ ಕೃಷಿಕನ ಯಶೋಗಾಥೆಯು ಇಲ್ಲಿದೆ.

ಕೌಟುಂಬಿಕ ಹಿನ್ನೆಲೆ : ಗುಡೂರ ಗ್ರಾಮದ ರೇವಣಸಿದ್ದಪ್ಪ ಮತ್ತು ಕಮಲಾಬಾಯಿ ದಂಪತಿಗಳ ಮೊದಲನೆಯ ಮಗನಾಗಿ ಶಿವಾನಂದ 1963ರಲ್ಲಿ ಜನಿಸಿದರು. ಮೂವರು ತಮ್ಮಂದಿರು ಹಾಗೂ ನಾಲ್ಕು ಜನ ತಂಗಿಯರನ್ನು ಹೊಂದಿದ ಶಿವಾನಂದ ಕೇವಲ ಮೂರನೆಯ ತರಗತಿಯವರೆಗೆ ಓದಿದ್ದಾರೆ. ನಂತರ ಓದಿಗೆ ವಿದಾಯ ಹೇಳಿ ಪಿತ್ರಾರ್ಜಿತ 6 ಎಕರೆ ಹೊಲದಲ್ಲಿ ಕೃಷಿ ಬದುಕನ್ನು ಪ್ರಾರಂಭಿಸಿದರು. ಪರಂಪರಾಗತ ಬೆಳೆ ಪದ್ಧತಿ ಅಳವಡಿಕೆ ಹಾಗೂ ರಾಸಾಯನಿಕಗೊಬ್ಬರ ಬಳಕೆಯಿಂದ ಅವರ ಈ ಕೃಷಿ ಬದುಕು ವಿಫಲವಾಯಿತು. ಕುಟುಂಬದ ಹೊರೆಯೊಂದಿಗೆ ಸಾಲದ ಬಾಧೆ ತಾಳದೇ ಮನೆ ಬಿಟ್ಟು ತಿರುಗಾಡುತ್ತಿದ್ದ ಶಿವಾನಂದ ಗರೂರ ಈಗ ಪ್ರಗತಿಪರ ರೈತ.

ಬದುಕಿಗೆ ತಿರುವು : ಗುಲಬರ್ಗಾ ಕೃಷಿ ವಿಜ್ಞಾನ ಕೇಂದ್ರದ ಗೊಬ್ಬರ ತಜ್ಞ ಹಾಗೂ ವಿಜ್ಞಾನಿ ಡಾ.ರಾಜು ತೆಗ್ಗಳ್ಳಿ ಅವರ ಪರಿಚಯದಿಂದ ಶಿವಾನಂದ ಅವರ ಜೀವನ ಹೊಸ ತಿರುವು ಪಡೆಯಿತು. ಡಾ.ರಾಜು ತೆಗ್ಗಳ್ಳಿ ಅವರ ಪ್ರೇರಣೆ, ಸೂಕ್ತ ಸಲಹೆ ಮತ್ತು ಮಾರ್ಗದರ್ಶನದಿಂದ 2004ರಲ್ಲಿ ಎರೆಹುಳು ಗೊಬ್ಬರ ಘಟಕ ಪ್ರಾರಂಭಿಸಿದರು. ಇದಕ್ಕಾಗಿ ಸ್ಟೇಶನ್ ಗಾಣಗಾಪೂರದ ಕೃಷ್ಣಾ ಗ್ರಾಮೀಣ ಬ್ಯಾಂಕಿನಿಂದ 3.94 ಲಕ್ಷ ರು. ಸಾಲ ಪಡೆದರು. ಇವರು 42X62 ಅಡಿಯ ಒಂದು ಶೆಡ್ ನಿರ್ಮಿಸಿಕೊಂಡು ಇದರಲ್ಲಿ 12 ಅಡಿ ಉದ್ದ, 3 ಅಡಿ ಅಗಲ ಮತ್ತು 2 ಅಡಿ ಆಳ ಹೊಂದಿದ 48 ಎರೆಹುಳು ಗೊಬ್ಬರ ತಯಾರಿಕಾ ಗುಂಡಿಗಳನ್ನು ನಿರ್ಮಿಸಿ ಸುಸಜ್ಜಿತ ಎರೆಹುಳು ಗೊಬ್ಬರ ಉದ್ಯಮಕ್ಕೆ ನಾಂದಿ ಹಾಡಿದರು.

ಎರೆಹುಳು ಗೊಬ್ಬರ ಘಟಕ : ಎರೆಹುಳುಗಳು ರೈತರ ಜೀವನಾಡಿ. ರಾಸಾಯನಿಕ ಗೊಬ್ಬರ, ಔಷಧಿಗಳ ಬಳಕೆಯಿಲ್ಲದೆ ಕೃಷಿ ಮಾಡುತ್ತಿದ್ದ ಹಿಂದಿನ ಕಾಲದಲ್ಲಿ ಭೂಮಿಯಲ್ಲಿರುವ ಈ ಎರೆಹುಳುಗಳಿಂದ ಗೊಬ್ಬರ ತಯಾರಿಕೆಯ ಸಹಜ ಪ್ರಕ್ರಿಯೆ ನಡೆಯುತ್ತಿತ್ತು ಎಂದು ಕೆಲವರು ಹೇಳುತ್ತಾರೆ. ಎರೆಹುಳು ಗೊಬ್ಬರ ಎಲ್ಲ ಬೆಳೆಗಳ ಬೆಳವಣಿಗೆಗೆ ಬೇಕಾಗುವ ಹಲವಾರು ಪೋಷಕಾಂಶ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಹೊಂದಿದೆ. ಸತುವು, ಕಬ್ಬಿಣ, ತಾಮ್ರ, ಸೂಕ್ಷ್ಮಾಣು ಜೀವಿಗಳಂತಹ ಲಘು ಪೋಷಕಾಂಶ ಮತ್ತು ಬೆಳೆ ಪ್ರಚೋದಕಗಳು ಈ ಎರೆಹುಳು ಗೊಬ್ಬರದಲ್ಲಿವೆ.

ತಯಾರಿಕೆ ಮತ್ತು ಲಾಭಾಂಶ : ಕಬ್ಬಿನ ರವದಿ, ತೊಗರಿ, ಸೂರ್ಯಪಾನ, ಜೋಳದ ದಂಟಿನ ಬಿರುಸಾದ ಕೃಷಿ ವ್ಯಾಜ್ಯಗಳನ್ನು ಪುಡಿಮಾಡಿ ಈ ಗುಂಡಿಗಳ ತಳಭಾಗದಲ್ಲಿ 3-4 ಇಂಚು ದಪ್ಪ ಹಾಕುವರು. ಒಂದು ಬಕೇಟ್ ಸಗಣಿ, ಗೋಮೂತ್ರ (ಗಂಜಲ) ಹಾಗೂ ನೀರಿನ ಮಿಶ್ರಣಮಾಡಿ ಅದರ ಮೇಲೆ ಸಿಂಪಡಿಸುತ್ತಾರೆ. ಇದೇ ಪ್ರಮಾಣದಲ್ಲಿ ಮೆದುವಾದ ರವದಿ, ಗಿಡದ ಎಲೆ ಹಾಗೂ ಇತರೆ ಕೃಷಿ ತ್ಯಾಜ್ಯ ಗುಂಡಿಯನ್ನು ಮೂರ್‍ನಾಲ್ಕು ದಿನಕ್ಕೊಮ್ಮೆ ನೀರು ಸಿಂಪಡಿಸುತ್ತ 20 ದಿನಗಳವರೆಗೆ ಬಿಡುತ್ತಾರೆ. ಇಪ್ಪತ್ತು ದಿನಗಳ ಬಳಿಕ ಈ ಗುಂಡಿಗಳಿಗೆ ಒಂದು ಕೆ.ಜಿ.ಯಂತೆ ಎರೆಹುಳುಗಳನ್ನು ಬಿಡುತ್ತಾರೆ. ಈ ಹುಳುಗಳು ಗುಂಡಿಯಲ್ಲಿರುವ ಎಲ್ಲ ಕೃಷಿ ತ್ಯಾಜ್ಯ ನುಂಗಿ ಹಿಕ್ಕಿಯನ್ನು ಹಾಕುತ್ತಾ 90 ದಿನಗಳಲ್ಲಿ ತ್ಯಾಜ್ಯವನ್ನೆಲ್ಲ ಮುಗಿಸಿ ಬಿಡುತ್ತವೆ. ಇದರಿಂದ ಗುಂಡಿ ಎರೆಹುಳು ಗೊಬ್ಬರದಿಂದ ತುಂಬಿ ತುಳುಕುತ್ತದೆ. ನಂತರ ಗೊಬ್ಬರವನ್ನು ಸೋಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಬಿಡುವರು. ತಯಾರಾದ ಈ ಗೊಬ್ಬರಕ್ಕೆ "ಬಸವ ಎರೆಗೊಬ್ಬರ" ಎಂಬ ಬ್ರ್ಯಾಂಡ್ ಹೆಸರನ್ನಿಟ್ಟು ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷ 140 ಮೆಟ್ರಿಕ್ ಟನ್ ಗೊಬ್ಬರ ಮಾರಾಟ ಮಾಡುವ ಇವರು ಇದರಿಂದ ವರ್ಷಕ್ಕೆ ಸುಮಾರು 3.8 ಲಕ್ಷ ರು.ವರೆಗೆ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ ವಂಶಾಭಿವೃದ್ಧಿಯಿಂದ 90 ದಿನಗಳಲ್ಲಿ ಈ ಗುಂಡಿಗಳಲ್ಲಿ 6 ಕೆ.ಜಿ.ಯಷ್ಟು ಹುಳುಗಳು ಹೆಚ್ಚಾಗಿರುತ್ತವೆ. ಇವುಗಳ ಮಾರಾಟದಿಂದಲೂ 2 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ. ಈ ಲಾಭಾಂಶದಿಂದ ಇವರ ಕೃಷಿ ಬದುಕು ಹಸನಾಗಿದ್ದು, ಪಿತ್ರಾರ್ಜಿತದ 6 ಎಕರೆಯೊಂದಿಗೆ ಇನ್ನೂ 6.21 ಎಕರೆ ಭೂಮಿಯನ್ನು ಖರೀದಿಸಿರುವುದು ವೈಶಿಷ್ಟ್ಯವಗಾಗಿದೆ. ಗುಂಡಿಗಳಲ್ಲಿ ಕೃಷಿ ತ್ಯಾಜ್ಯ ವಸ್ತುಗಳನ್ನು ಹಾಕುವಾಗ ಸಮಪ್ರಮಾಣದಲ್ಲಿ ಏಕದಳ ಮತ್ತು ದ್ವಿದಳ ಸಸ್ಯ ಬಳಸುವುದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಗೋಮೂತ್ರ ಸಿಂಪಡಿಸುವರು. ಇದರಿಂದ ಇವರು ತಯಾರಿಸುವ ಗೊಬ್ಬರ ಸಾಕಷ್ಟು ಪೋಷಕಾಂಶಗಳಿಂದ ಕೂಡಿದ್ದು, ಇವರ ಬಸವ ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಗುಲಬರ್ಗಾ ಜಿಲ್ಲೆಯಲ್ಲೇ ಅತ್ಯಂತ ಬೃಹತ್ ಎರೆಹುಳು ಗೊಬ್ಬರ ತಯಾರಿಕಾ ಘಟಕ ಇವರದಾಗಿದ್ದು, ಅವರೇ ಹೇಳುವಂತೆ ಗೊಬ್ಬರಕ್ಕಾಗಿ 15-20 ದಿನ ಮುಂಚಿತವಾಗಿ ಬೇಡಿಕೆ ಸಲ್ಲಿಸಿದಾಗ ಮಾತ್ರ ಗೊಬ್ಬರ ಲಭ್ಯವಾಗುತ್ತದೆ ಎನ್ನುತ್ತಾರೆ.

ಅತ್ಯಧಿಕ ಇಳುವರಿ : ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ವಿ.ಐ.ಬೆನಗಿ ಅವರ ಮಾರ್ಗದರ್ಶನ ಹಾಗೂ ಸಲಹೆಯಂತೆ ಶಿವಾನಂದ ತಮ್ಮ 10 ಆಕಳುಗಳ ಗಂಜಲನ್ನು ಮಣ್ಣಲ್ಲಿ ಬೆರೆಸಿ, ಒಣಗಿಸಿ ಅದನ್ನು ತಮ್ಮ ಕೃಷಿ ಭೂಮಿಗೆ ಸಿಂಪಡಿಸಿ ಹಾಗೂ ತಾವೇ ತಯಾರಿಸಿದ ಎರೆಹುಳು ಗೊಬ್ಬರವನ್ನು ಹೊಲದಲ್ಲಿ ಬಳಸಿ ಅತ್ಯಧಿಕ ಇಳುವರಿ ಪಡೆಯುತ್ತಿದ್ದಾರೆ. ತಮ್ಮ 12.21 ಎಕರೆ ಹೊಲದಲ್ಲಿ 4 ಕೊಳವೆ ಬಾವಿಗಳನ್ನು ನಿರ್ಮಿಸಿ ಸುಮಾರು 11 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಪ್ರಸ್ತುತ ವರ್ಷ ಐದೂವರೆ ಎಕರೆ ಪ್ರದೇಶದಲ್ಲಿ ಪಪ್ಪಾಯಿ, 3 ಎಕರೆಯಲ್ಲಿ ಕಲ್ಲಂಗಡಿ, 2 ಎಕರೆಯಲ್ಲಿ ಖರಬೂಜ್ ಹಾಗೂ ಒಂದೂವರೆ ಎಕರೆಯಲ್ಲಿ ಬಿಳಿಜೋಳವನ್ನು ಬಿತ್ತಿದ್ದಾರೆ. ಇವರ ಭೂಮಿಗೆ ವಿಫುಲವಾದ ನೀರು, ಸಾಕಷ್ಟು ಸಾವಯವ ಗೊಬ್ಬರ ದೊರಕುವುದರಿಂದ ಎರಡು ಪಟ್ಟು ಬೆಳೆ ಪಡಯುತ್ತಾರೆ.

ಮಾದರಿ ಕೃಷಿಕ : ಶಿವಾನಂದ ಗರೂರ ಎಷ್ಟೋ ರೈತರಿಗೆ ಉಚಿತವಾಗಿ ಎರೆಹುಳುಗಳನ್ನು ನೀಡಿದ್ದಾರೆ. ಸ್ವತ: ಮುಂದೆ ನಿಂತು ಹಲವಾರು ರೈತರ ಹೊಲಗಳಲ್ಲಿ ಎರೆಗುಂಡಿ ಕಟ್ಟಿಸಿಕೊಟ್ಟು ಸಾವಯವ ಗೊಬ್ಬರ ತಯಾರಿಕೆಗೆ ಶ್ರಮಿಸಿದ್ದಾರೆ. ಶರಣ ಸಿರಸಗಿ, ಧರ್ಮವಾಡಿ, ಸಾವಳಗಿ ಗ್ರಾಮಗಳ ರೈತರಿಗೆ ಎರೆಹುಳು ತಯಾರಿಕೆಯ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸುಮಾರು ಒಂದು ನೂರಕ್ಕಿಂತ ಅಧಿಕ ರೈತರು ಎರೆಹುಳು ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವಂತೆ ಪ್ರೇರಣೆ ನೀಡಿದ್ದಾರೆ. ಇವರು ಸುಮಾರು 75 ಸಾವಿರ ರು. ವೆಚ್ಚದಿಂದ ಕೃಷಿ ಹೊಂಡ ನಿರ್ಮಿಸಿದ್ದು, ಇದರಲ್ಲಿ 1000 ಅಡಿ ನೀರು ಸಂಗ್ರಹಿಸಿ ಇವರ 4 ಕೊಳವೆ ಬಾವಿ ಹಾಗೂ ಒಂದು ತೆರೆದ ಬಾವಿಯಲ್ಲಿ ಜಲಮಟ್ಟ ಹೆಚ್ಚಲು ಸಹಕಾರಿಯಾಗಿದೆ. "ಓದು ಒಕ್ಕಾಲು ಬುದ್ಧಿ ಮುಕ್ಕಾಲು" ಎಂಬಂತೆ ಕೇವಲ 3ನೇ ತರಗತಿವರೆಗೆ ಓದಿದ ಶಿವಾನಂದ ಗರೂರ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಪ್ರಗತಿಪರ ರೈತರಾಗಿ ರೂಪುಗೊಂಡಿದ್ದಾರೆ. ಇದಲ್ಲದೆ ಭೂಮಾಲಿನ್ಯ ತಡೆ, ಅಂತರ್ಜಲ ಹೆಚ್ಚಳ, ಕೃಷಿ ತ್ಯಾಜ್ಯಗಳ ಮರುಬಳಕೆ ಮಾಡುವ ಮೂಲಕ ಜಿಲ್ಲೆಯ ಇಡೀ ಕೃಷಿ ಸಮಾಜಕ್ಕೆ ಮಾದರಿಯಾಗಿ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ರಣರಣ ಬಿಸಿಲಿನಲ್ಲೂ ಶಿವಾನಂದ ಗರೂರ ಅವರು ಚಪ್ಪಲಿ ಇಲ್ಲದೆ ತಿರುಗಾಡುವ ಗಟ್ಟಿತನ ಇವರದು ವೈಶಿಷ್ಟ್ಯವಾಗಿದೆ. ಇದು ಎಲ್ಲರಿಗೂ ಆಶ್ಚರ್ಯ ಹಾಗೂ ಕೌತುಕವನ್ನುಂಟು ಮಾಡುತ್ತಾದರೂ ಈ ವಿಷಯ ಕಟುಸತ್ಯವಾಗಿದೆ. ಚಪ್ಪಲಿ ಇಲ್ಲದೆಯೇ ಹೊಲದ ಎಲ್ಲ ಕೆಲಸಗಳನ್ನು ಮಾಡುತ್ತಾರೆ.

ಪೂರಕ ಓದಿಗೆ

ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ
ಮಲೆನಾಡ ನೇಗಿಲ ಯೋಗಿಯ ಹಾಡು ಪಾಡು
ಪಂಚಗವ್ಯ - ರೈತರಿಗೆ ವರದಾನ
ಗುಲಬರ್ಗಾದ ಮತ್ತೊಬ್ಬ ಸಾಧಕ ವೆಂಕಟೇಶ ಗುರುನಾಯಕ

ರೈತ, ಕೃಷಿಗೆ ಸಂಬಂಧಿಸಿದ ಲೇಖನಗಳಿಗೆ ಸದಾ ಸ್ವಾಗತ
ನೀವೂ ವರದಿಗಾರರಾಗಿರಿ : ದಟ್ಸ್ ಕನ್ನಡ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X