• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ವಿರಹ ನೂರು ನೂರು ತರಹ

By * ಅಂಜಲಿ ರಾಮಣ್ಣ, ಬೆಂಗಳೂರು
|

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡಿಗರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ ಎಷ್ಟೋ ಲಕ್ಷ ಕನ್ನಡಿಗರಿಗೆ ಅಲ್ಲಿಗೆ ಹೋಗಿ ಕನ್ನಡ ಹಬ್ಬದ ನಲಿವನ್ನು ತಾವೂ ಉಣಬೇಕೆಂಬ ಆಸೆ ಇರ್ತದೆ. ಆದರೆ ಎಲ್ಲರಿಗೂ ಕಾಲ ಕೈಗೂಡಿಬರುವುದಿಲ್ಲ. ಕಾರಣಗಳು ಕಾರಣಗಳಷ್ಟೆ ಎನಿಸಿದರೂ ಸಮ್ಮೇಳನಕ್ಕೆ ಹೋಗಲಾರದವರ ತಳಮಳ ಒಂದೆರಡಲ್ಲ. ಬೆಂಗಳೂರಲ್ಲೇ ಕುಳಿತು ಹಗಲು ಇರುಳು ಬೆಳಗಾವಿಯನ್ನು ಕನವರಿಸುತ್ತಿರುವ ಕನ್ನಡತಿಯೊಬ್ಬರು ಕಂಡ ಕನಸು ನಿಮಗೂ ಬಿದ್ದಿರಬೇಕು, ಓದಿ - ಸಂಪಾದಕ.

ಅಣ್ಣಯ್ಯ, ಈ ಸರ್ತಿ ನೀನು ಕುದುರೆ ತರದೆ ಜೀನು ಬಿಗಿಯದೆ ತವರಿಗೆ ಬಾ ತಂಗಿ ಅಂತ ಕಳಿಸಿದ ಆಹ್ವಾನ ಬಂತು. ಆಗೇನೋ ನಾನು ಅಂಗಳ ತೊಳೆಯೋರಿಲ್ಲ, ಗಂಗಾಳ ಬೆಳಗೋರಿಲ್ಲ ಅಂತ ಹೇಳಿದ್ದೆ. ಆದ್ರೆ, ಈಗಲೂ ನನ್ನ ಸ್ಥಿತಿಯೇನು ಸುಧಾರ್‍ಸಿಲ್ಲ ನೋಡು. ಬೆಳಗಾವಿ ಮೈಸೂರು ದಸರಾ ತರಹ ಸಿಂಗಾರ ಮಾಡ್ಕೊಂಡಿದೆ ಅಂತ ಕೇಳದಾಗ್ನಿಂದ ಇಲ್ಲಿ ಮನಸ್ಸೇ ನಿಲ್ಲ್ತಿಲ್ಲ.

ಸಮಾರಂಭ ಉದ್ಘಾಟನೆಗೆ ನಾರಾಯಣ ಮೂರ್ತಿ ಬರ್ತಾರೆ ಅಂತ ಗೊತ್ತಾದಾಗ ಪುಷ್ಪಕ ವಿಮಾನ ಮಾಡ್ಕೊಂಡು ಹಾರಿ ಬರ್‍ಬೇಕು ಅನ್ನಿಸ್ತು. ನಿನಗೇ ಗೊತ್ತಲ್ಲ ನನಗೆ ಮೂರ್ತಿ ಸಾಹೇಬ್ರನ್ನ ಕಂಡ್ರೆ ಎಷ್ಟು ಇಷ್ಟ ಅಂತ. ಯಾಕೆ ಅಂತ ಕೇಳೋಕ್ಕೆ ಮುಂಚೇನೆ ಹೇಳ್ಬಿಡ್ತೀನಿ ಕೇಳು ನನಗೆ ಸುಧಮ್ಮನ ಕಂಡ್ರೆ ಎಲ್ಲಿಲ್ಲದ ಪ್ರೀತಿ, ಅದಕ್ಕೇ ಸಾಹೇಬ್ರೂ ಇಷ್ಟ ಆಗ್ತಾರೆ. ಅದಕ್ಕಿಂತ ಇನ್ಟ್ರೆಸ್ಟಿಂಗ್ ವಿಷಯ ಅಂದ್ರೆ, ಹಗಲು ವೇಷ ಹಾಕೊಂಡಿರೋ ಎಲ್ಲರನ್ನು ಮರ್ಯಾದಸ್ತ ಮನುಷ್ಯರಾಗೋಣ ಅಂತ ಕಳಕಳಿಯಿಂದ ಕೇಳಿಕೊಂಡ ನಮ್ಮಿಬ್ಬರ ಮೆಚ್ಚಿನ ಬರಗೂರರು ವಾದ ವಿವಾದ ಮಾಡಿದ್ಮೇಲಂತೂ ಇಲ್ಲಿ ಕಾಲೇ ನಿಲ್ಲ್ಹಾಂಗಿಲ್ಲ ನೋಡು ಮಾರಾಯ.

ಏನೋ ಅಣ್ಣಯ್ಯ, 7 ಕಡೆ ಊಟದ ವ್ಯವಸ್ಥೆ ಮಾಡಿದ್ದೀಯಂತೆ. ಅಬ್ಬಬ್ಬಬ್ಬಾ, ಮೂರು ಮುಕ್ಕಾಲು ಟನ್ ಕುಂದ ಮಾಡ್ಸಿದ್ದೀಯಂತೆ! ಬಾಯಲ್ಲಿ ನೀರ್‍ಬರ್ತಿದೆ ಕಣಪ್ಪ. ಅಲ್ಲೋ ಮಾರಾಯ, ಪಟ್ಟದಕಲ್ಲಿನ ಮಾದರಿ ವೇದಿಕೆ ನಿರ್ಮಾಣ ಮಾಡಿ ಮುಂದ್ಗಡೆಗೆ 45000 ಪಕ್ಕದ ಗ್ಯಾಲರಿಯಲ್ಲಿ 30000 ಖುರ್ಚಿ ಹಾಕ್ಕೋಕ್ಕೆ ಜಾಗ ಸಾಕಾಯ್ತೇನು? ಹಚ್ಚೇವು ಕನ್ನಡದ ದೀಪ ಅಂತ ಒಟ್ಟಿಗೆ 1200 ಮಕ್ಕಳು ಅಬ್ಯಾಸ ಮಾಡ್ತಿರೋದನ್ನ ಟೀವಿಲೀ ನೋಡ್ದೆ. ಆ ಹೆಣ್ಮಕ್ಳಿಗೆ ದೃಷ್ಟಿ ಬೊಟ್ಟಿಡಕ್ಕಾದ್ರೂ ನಾನು ಬರ್ಬೇಕೂಂತನಿಸುತ್ತೆ. ಅಲ್ಲ ಕಣೋ ಅಣ್ಣಯ್ಯ, ಶಿಲ್ಪ ಶೆಟ್ಟಿ ಹೊಕ್ಕ್ಳಿಂದ್ಕೆಳಗೆ ಸೀರೆ ಉಡ್ತಾಳೆ ಅಂತ ಅವಳನ್ನು ಕರೆಯೋದ್ಬೇಡ ಅಂದ್ಕೊಂಡಿದ್ದೀರಲ್ಲ, ಐಶ್ವರ್ಯ ರೈ ಬುರ್ಖದಲ್ಲಿ ಹೇಗ್ಕಾಣ್ತಾಳೆ ಅಂತ ನೋಡೋಕ್ಕಾದ್ರೂ ನಾನು ಬರ್‍ಬೇಕು ಅನ್ನಿಸ್ತಿದೆ! ಶಿವಣ್ಣ ಡ್ಯಾನ್ಸ್ ಮಾಡ್ತಿರೋವಾಗ ದಿಗಂತನ ಕೆನ್ನೆ ಗುಳಿಬೀಳೋದನ್ನು ನೋಡೋಕ್ಕೆ, ಅರ್ಚನ, ನಂದಿತ ಎಲ್ಲಾ ಹಾಡೋದನ್ನು ಕೇಳೋಕ್ಕೆ, ಕಡಲಾಚೆಯ ಕನ್ನಡಿಗರು ಬಂದು ನಾಟ್ಕ ಆಡೋವಾಗ ಚಪ್ಪಾಳೆ ಹೊಡೆಯೋಕ್ಕೆ, ಲಂಡನ್‌ನಿಂದ ಬಂದು ಅದೇನೋ ಫ್ಯೂಷನ್ ಸಂಗೀತ ನುಡಿಸ್ತಾರಂತಲ್ಲ ಅದು ಹೇಗಿರುತ್ತೆ ಅಂತ ತಿಳ್ಕ್ಕೋಳೋಕ್ಕಾದ್ರೂ ಅಲ್ಲಿಗೆ ಬರ್‍ಬೇಕೂಂತನಿಸುತ್ತೆ. 13 ವೇದಿಕೆಯಲ್ಲಿ ಇನ್ನೂ ಏನೇನೋ ಗೋಷ್ಟಿಗಳಿರುತ್ತೆ ಅಂತ ಊಹಿಸ್ಬಲ್ಲೆ. ಆದ್ರೆ ನನ್ನಂತ ಯಕಃಶ್ಚಿತ್ ಕನ್ನಡತಿಗೆ ವಿವರ ಕೊಡೋರ್‍ಯಾರು ಹೇಳು?

1500 ಜನನ್ನ ತುಂಬ್ಕೊಂಡು ರಾತ್ರಿ 9 ಗಂಟೆಗೆ ಹೊರಡ್ಬೇಕಿದ್ದ ರೈಲು ಏಳ್ನೂರೇ ಜನನ್ನ ಕೂರ್ಸ್ಕೊಂಡು 8 ಗಂಟೆಗೇ ಯಶವಂತಪುರದಿಂದ ಹೊರಟ್ಬಿಡ್ತಂತೆ. ನನಗೆ ಮಿಸ್ ಆಗ್ಹೋಯ್ತು ನೋಡು. ಜಯಂತ್ ಕಾಯ್ಕಿಣಿ ದಂಪತಿಗಳು ನೀವೆಲ್ಲ ಸರಿಯಾಗಿ ವ್ಯವಸ್ಥೆ ಮಾಡಿಲ್ಲ ಅಂತ ಅಲವತ್ತಿಕೊಂಡು ಪ್ರೈವೇಟ್ ಬಸ್ಸ್‌ನಲ್ಲಿ ಹೊರಟಿದ್ದಾರಂತೆ. ಅಂದಹಾಗೆ, ಅಣ್ಣಯ್ಯ, ನಾರಾಯಣ ಮೂರ್ತಿಗಳಿಗೆ ಕನ್ನಡ ಬರೋಲ್ಲ ಅನ್ನೋ ನ್ಯೂಸ್ ನೀನೇನಾದ್ರು ಓದಿದ್ರೆ ಅದು ಸುಳ್ಳು ಕಣೋ ಮಾರಾಯ. ಇವತ್ತು ಟೀವಿನಲ್ಲಿ ನೋಡಿದೆ, ಸ್ಪಷ್ಟವಾಗಿ ಕನ್ನಡ ಮಾತಾಡಿ ಕಾರ್ನಾಡು, ಅನಂತ ಮೂರ್ತಿ, ಭೈರಪ್ಪ್ನೋರ ಹೆಸರೂ ಹೇಳಿದ್ರು ನೋಡು. ಅಣ್ಣಯ್ಯ, ತವರಿಗೆ ಬರೋಕ್ಕೆ ನೀನೊಬ್ಬನೇ ಕರೆದಿಲ್ಲ ಕಣೋ, ಸರ್‍ಕಾರ್ದವರೂ ಬೆಳಗಾವಿ ಹೆಣ್ಣ್ಮಕ್ಕಳಿಗೆಲ್ಲಾ ಹಾಗೇ ಆಹ್ವಾನ ಕೊಟ್ಟಿದ್ದಾರಂತೆ. ಇನ್ನೊಂದು ಗುಟ್ಟು ಏನ್ಗೊತ್ತಾ, ಅತ್ತಿಗೆಗೆ ಹೇಳ್ಬೇಡ, ನನ್ನ ಗೆಳೆಯ ಕೂಡ ಬಾರೇ ಮಾರಾಯ್ತಿ ಒಂದ್ನಾಕ್ ದಿನ ಬೆಳಗಾವಿಲೀ ಕಣ್ಣಲ್ಲೇ ಕನ್ನಡದ ಕವನ ಮಾತಾಡಿ ಬರೋಣ ಅಂತ ಕರೆದ. ಅವನು ಹಾಗೆ ಕರೆದಾಗ, ಎಲ್ಲಾ ಬಿಟ್ಟು ಜೋಗತಿಯಂತೆ ಜೋಗಿ ಹಿಂದೆ ಹೊರಟೇ ಬಿಡೋಣ ಅನ್ನಿಸ್ತು. ಆದ್ರೆ ಏನ್ಮಾಡ್ಲಿ ಹೇಳು?

ಬೆಂಗಳೂರಿನ ಹೈಫೈ ಜೀವನಕ್ಕೆ ಬಿದ್ದ್ಮೇಲೆ ನನಗೆ ಶೆಖೆ, ಜನರ ಗುಂಪು ಅಂದ್ರೆ ಸ್ವಲ್ಪ ಮುಜುಗರ ತಾನೆ. ಆದ್ರೂ ಕನ್ನಡಮ್ಮ ನನ್ನಮ್ಮ ತಾನೆ ಅಂದ್ಕೊಂಡು ಹೊರಡೋಣ ಅಂದ್ರೆ, ತಾಪತ್ರಯ ಕಣೋ ಅಣ್ಣಯ್ಯ. ನಾಳೆ ಮಗನಿಗೆ ಇಂಗ್ಲೀಷ್ ಪರೀಕ್ಷೆ. ಸೋ, ಓದಿಸ್ಲೇಬೇಕು. ಶನಿವಾರ ಅತ್ತೆಮ್ಮಂಗೆ ಕ್ಯಾಟರ್‍ಯಾಕ್ಟ್ ಆಪರೇಷನ್‌ಗೆ ಹೇಳಿದ್ದಾರೆ. ಸಂಜೆ ನಿನ್ನ ಭಾವಯ್ಯನ ಆಫೀಸ್ ಪಾರ್ಟಿ. ಸಿಗೋದೊಂದು ಭಾನುವಾರ ಪೆಡಿಕ್ಯೂರ್, ಐಬ್ರೋಸು ಮಾಡಿಸ್ಕೊಳ್ಳ್ದೇಯಿದ್ದ್ರೆ ಇನ್ನ್ತಿಂಗ್ಳಿಡೀ ಅಸಹ್ಯ. ಸರಿಯೇ ಸರಿ ಅವತ್ತು ಸಂಜೆ, ವಾರಕ್ಕಾಗೋ ಅಷ್ಟು ತರಕಾರಿ, ಅದೂ-ಇದೂ ತಂದು ಫ್ರಿಡ್ಜ್ ಸೇರಿಸ್ದಿದ್ದ್ರೆ ನನ್ನ ಗೋಳು ಯಾರ್ಕೇಳ್ತಾರೆ?

ನಿನಗೆ ನೆನಪಿದೆಯಾ, ಕಳೆದ ವಿಶ್ವ ಕನ್ನಡ ಸಮ್ಮೇಳನ ಆದಾಗ ನಾವೆಲ್ಲಾ ಶಾಲೆಗ್ಹೋಗೋ ಮಕ್ಕಳು. ನಮ್ಮನೆಲ್ಲ ಮನೆಲೇ ಬಿಟ್ಟು ಅಪ್ಪ, ಅಮ್ಮ, ನೆಂಟರೂ ಇಷ್ಟರೂ ಎಲ್ಲರೂ ಹೋಗಿದ್ರಲ್ಲ್ವಾ? ಈ ಬಾರಿ ನೀನಾದ್ರೂ ನೋಡೋ ಹಂಗಾಯ್ತು. ಮುಂದಿನ ಸರ್ತಿ ನೋಡೋಣ. ಜವಾಬ್ದಾರಿಗಳೆಲ್ಲ ಕಳೆದಿದ್ದ್ರೆ ಈ ತಂಗಿ ನಿಜವಾಗ್ಲೂ ವಿಶ್ವ ಕನ್ನಡತಿ ಆಗ್ತಾಳೆ ನೋಡ್ತಿರು! ಇನ್ನೊಂದು ವಿಷಯ ಏನು ಗೊತ್ತಾ, ನಾಳೆ ಆ ಚ್ಯಾನಲ್‌ನವರು ಬೆಳಿಗ್ಗೆ 9 ಗಂಟೆಯಿಂದಾನೇ ನೇರ ಪ್ರಸಾರ ಕೊಡ್ತಾರಂತೆ. ಆದರೆ ನನಗೆ ನೋಡಕ್ಕಾಗಲ್ಲ ಆಫೀಸ್‌ನಲ್ಲಿ ಮೀಟಿಂಗ್‌ಗಳಿವೆ. ಕೊನೆಗೂ ತವರು ಮನೆ ಸಡಗರ ಸಂಭ್ರಮ ನೋಡೋಕ್ಕೆ ಇಂಟರ್ನೆಟ್ಟೇ ಗತಿ. ಅಷ್ಟರ ಮಟ್ಟಿಗೆ ನಿನ್ನ ತಂಗಿ ವಿಶ್ವ ಕನ್ನಡತಿ. ಸಮಾರಂಭ ಚೆನ್ನಾಗಿ ನಡೀಲಿ. ಹೊಳೆದಂಡೇಲಿರೋ ಗರಕೆಯ ಕುಡಿ ಹಂಗೆ ಹಬ್ಬಲಿ ನನ್ನ ಕನ್ನಡದ ಬಳ್ಳಿ ಅಂತಷ್ಟೆ ನನ್ನ ಹಾರೈಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is dream of million Kannadigas to attend Belgaum Kannada Convention. But all dreams will not come true, why? Anjali Ramanna digs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more