ಅಯೋಧ್ಯೆಗೆ ಮೆಮು ರೈಲು; ಬೆಂಗಳೂರು-ಕೋಲಾರ ಪ್ರಯಾಣಿಕರಿಗೆ ಸಂಕಷ್ಟ
ಬೆಂಗಳೂರು, ಫೆಬ್ರವರಿ 14: ಬೆಂಗಳೂರು ನಗರ ಮತ್ತು ಕೋಲಾರ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ವಿದ್ಯುತ್ ಚಾಲಿತ ಮೆಮು ರೈಲು ಸೇವೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ. ಮೆಮೆ ರೈಲೊಂದು ಅಯೋಧ್ಯೆಗೆ ತೆರಳಿದ್ದು, ಇನ್ನೂ ವಾಪಸ್ ಬಂದಿಲ್ಲ.
ಪ್ರತಿನಿತ್ಯ ಸಾವಿರಾರು ಜನರು ಕೋಲಾರ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಆಗಮಿಸುತ್ತಾರೆ. ಆದರೆ ಡೆಮು ರೈಲಿನಲ್ಲಿ ಸೀಟು ಸಿಗುವುದು ಕಷ್ಟವಾಗಿದೆ. ಈ ಮಾರ್ಗದಲ್ಲಿ ಮೆಮು ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ.

ಅಮೃತ್ ಗೌಡ ಎಂಬುವವರು ಆರ್‌ಟಿಐ ಮೂಲಕ ಈ ಕುರಿತು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವನ್ನು ಪ್ರಶ್ನೆ ಮಾಡಿದ್ದರು. ಆಗ ಬೇಡಿಕೆಯಂತೆ ಮೆಮು ರೈಲನ್ನು ಅಯೋಧ್ಯೆಗೆ ಕಳಿಸಲಾಗಿದೆ. ಅದು ಇನ್ನೂ ವಾಪಸ್ ಬಂದಿಲ್ಲ. ಬಂದ ಬಳಿಕ ಕೋಲಾರ-ಬೆಂಗಳೂರು ಮಾರ್ಗದಲ್ಲಿ ಮೆಮು ರೈಲು ಓಡಿಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂಬ ಉತ್ತರ ಬಂದಿದೆ.
ವಿದ್ಯುದೀಕರಣ ಪೂರ್ಣ: ಯಲಹಂಕ-ಬಂಗಾರಪೇಟೆ ವಯಾ ಕೋಲಾರ ನಡುವಿನ 149 ಕಿ. ಮೀ. ಉದ್ದದ ಮಾರ್ಗದ ವಿದ್ಯುದೀಕರಣ ಏಳು ತಿಂಗಳ ಹಿಂದೆ ಪೂರ್ಣಗೊಂಡಿದೆ. ಆದ್ದರಿಂದ ಡೆಮು ಬದಲು ಮೆಮು ರೈಲು ಓಡಿಸಿದರೆ ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು.
ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಎಲೆಕ್ಟ್ರಿಕ್ ರೈಲುಗಳು ಸಂಚಾರ ನಡೆಸುತ್ತಿವೆ. ಆದರೆ ವಿದ್ಯುದೀಕರಣ ಪೂರ್ಣಗೊಂಡರೂ ಸಹ ಅದಕ್ಕೂ ಮುಂದೆ ರೈಲು ಓಡಿಸುತ್ತಿಲ್ಲ. ಹೊಸ ಮಾರ್ಗದಲ್ಲಿ ಮೆಮು ರೈಲು ಓಡಿಸಲು ರೈಲುಗಳ ಕೊರತೆ ಇದೆ. ಅಯೋಧ್ಯೆಗೆ ಹೋಗಿರುವ ರೈಲು ವಾಪಸ್ ಬಂದ ಬಳಿಕ ದಿನಕ್ಕೆ 2-3 ರೈಲುಗಳನ್ನು ಓಡಿಸಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
@kuntavalliguru pic.twitter.com/dlGitcRlui
— amruth gowda (@amruthkumar1310) February 14, 2024
ಕೇವಲ ರೈಲುಗಳ ಕೊರತೆ ಮಾತ್ರವಲ್ಲ, ಸಿಬ್ಬಂದಿ ಕೊರತೆಯೂ ಇದೆ. ಮೆಮು ರೈಲು ಸಂಚಾರ ಆರಂಭಿಸಿದರೆ ಕೋಲಾರ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ. ರೈಲು ನಿರ್ವಹಣೆಗೆ ಹೆಚ್ಚಿನ ತಾಂತ್ರಿಕ ಸಹಾಯವೂ ಬೇಕು. ನೇಮಕಾತಿ ಆಗದ ಕಾರಣ ಸಿಬ್ಬಂದಿಗಳ ಕೊರತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಮು ರೈಲಿನ ಕೊರತೆ ಇದೆ. ಕೋಲಾರ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದೆ. ಚಿಕ್ಕಬಳ್ಳಾಪುರ-ಕೋಲಾರ ಮಾರ್ಗ ಏಕಪಥವಾಗಿದೆ. ಚಿಕ್ಕಬಳ್ಳಾಪುರ ತನಕ ಸಾಗುವ ರೈಲನ್ನು ಕೋಲಾರ ತನಕ ವಿಸ್ತರಣೆ ಮಾಡುವುದು ಸದ್ಯಕ್ಕೆ ಕಷ್ಟ ಎಂದು ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ವಿವರಣೆ ನೀಡಿದೆ.
ಈ ಮಾರ್ಗದಲ್ಲಿ 4 ಡೆಮು ರೈಲುಗಳು ಸಂಚಾರ ನಡೆಸುತ್ತಿವೆ. ಕೆಲವು ರೈಲುಗಳು ಕೆಎಸ್ಆರ್ ಬೆಂಗಳೂರು, ಕೆಲವು ಯಲಹಂಕ ಮತ್ತೆ ಕೆಲವು ಕೋಲಾರದಿಂದ ಹೊರಡುತ್ತವೆ. ಒಂದು ಡೆಮು ರೈಲು ಹಾಸನ ತನಕ ಸಹ ಸಂಚಾರ ನಡೆಸುತ್ತದೆ. ಕೋಲಾರ-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಸುಮಾರು 3 ಗಂಟೆ. ಆದರೆ ಸೀಟು ಸಿಗುವುದಿಲ್ಲ ಎಂಬುದು ಜನರ ಆರೋಪ.
ಡೆಮು ರೈಲಿನಲ್ಲಿ 8 ಬೋಗಿಗಳಿದ್ದು, ಗರಿಷ್ಠ 800 ಪ್ರಯಾಣಿಕರು ಸಂಚಾರ ನಡೆಸಬಹುದು. ಅದೇ ಮೆಮೆ ರೈಲು 16 ಬೋಗಿ ಒಳಗೊಂಡಿದ್ದು, 1000 ಜನರು ಪ್ರಯಾಣ ಮಾಡಬಹುದು. ಅಲ್ಲದೇ ಇದು ವೇಗವಾಗಿ ಸಂಚಾರ ನಡೆಸುವುದರಿಂದ ಸಮಯವೂ ಉಳಿತಾಯವಾಗುತ್ತದೆ.












Click it and Unblock the Notifications