ಭಕ್ತರಿಗೆ ದೇಗುಲಗಳ ದರ್ಶನ ನೀಡುವ ವೈಷ್ಣವ ಕ್ಷೇತ್ರ ಮೇಲುಕೋಟೆ
ಮಂಡ್ಯ, ಆಗಸ್ಟ್ 16: ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರಗಳಾದ ಶ್ರೀರಂಗ, ತಿರುಪತಿ, ಕಾಂಚೀಪುರ ಜತೆ ಸೇರಿಕೊಂಡಿರುವ ಜಿಲ್ಲೆಯ ಮೇಲುಕೋಟೆ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಚೆಲುವರಾಯಸ್ವಾಮಿ ದೇಗುಲ ಹಾಗೂ ಬೆಟ್ಟದ ಮೇಲೆ ನೆಲೆ ನಿಂತಿರುವ ಯೋಗನರಸಿಂಹ ದೇವಾಲಯ ಸೇರಿದಂತೆ ಹತ್ತಾರು ದೇಗುಲಗಳನ್ನು ಹೊಂದಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ದೈವದರ್ಶನ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ.
ದೇಗುಲಗಳ ಸಮುಚ್ಛಯವೇ ಇಲ್ಲಿದ್ದು, ಇದರ ಜತೆಗೆ ದೈವ ಮಹತ್ವ ಹೊಂದಿರುವ ಕಲ್ಯಾಣಿ, ಕೊಳಗಳು, ಹಲವು ಮಠಗಳಿರುವುದು ವಿಶೇಷವಾಗಿವೆ. ಇಲ್ಲಿನ ಪ್ರಕೃತಿ ಚೆಲುವು ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರನ್ನು ಸೆಳೆಯುತ್ತದೆ. ಹೀಗಾಗಿ ಇಲ್ಲಿಗೆ ವರ್ಷಪೂರ್ತಿ ದೈವದರ್ಶನಕ್ಕಾಗಿ ಮಾತ್ರವಲ್ಲದೆ, ದೇಶ, ವಿದೇಶದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ನಾವು ದಿನ ನಿತ್ಯ ಕಾಣಬಹುದಾಗಿದೆ. ಅದರಲ್ಲೂ ವಿಶೇಷ ದಿನಗಳಲ್ಲಿ ಸಹಸ್ರಾರು ಮಂದಿ ಇಲ್ಲಿಗೆ ಬಂದು ದೇವರ ದರ್ಶನ ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ.

ಯಾರೇ ಆಗಲಿ ಮೇಲುಕೋಟೆಗೆ ತೆರಳಿ ಒಂದು ಕ್ಷಣ ಅಲ್ಲಿ ನಿಂತು ಕಣ್ಣು ಹಾಯಿಸಿದರೆ ನಿಸರ್ಗದ ಸುಂದರ ನೋಟ ಮೈಮನಕ್ಕೆ ಉಲ್ಲಾಸ ತುಂಬುತ್ತದೆ. ಅಷ್ಟೇ ಅಲ್ಲದೆ ಭಕ್ತಿಭಾವ ಹೊರ ಹೊಮ್ಮುತ್ತದೆ. ಸುತ್ತಲೂ ಕಾಣಸಿಗುವ ದೃಶ್ಯಗಳಂತು ಮನಮೋಹಕವಾಗಿರುತ್ತದೆ. ಆಕಾಶದೆತ್ತರಕ್ಕೆ ನಿಂತ ಬೆಟ್ಟಗುಡ್ಡಗಳು ಆ ಬೆಟ್ಟಗಳ ಮೇಲೆ ಮತ್ತು ನಡುವೆ ನೆಲೆನಿಂತಿರುವ ಹಲವು ದೇಗುಲಗಳು... ಸ್ಪಟಿಕದಂತೆ ಹೊಳೆಯುವ ಸುಂದರ ಕಲ್ಯಾಣಿ, ಕೆರೆಗಳು... ಹಚ್ಚ ಹಸಿರಿನೊಂದಿಗೆ ಸುತ್ತಲೂ ಹರಡಿಕೊಂಡಿರುವ ಕೃಷಿ ಭೂಮಿಗಳು... ಹೀಗೆ ಪ್ರಕೃತಿಯ ಚೆಲುವು ನಮ್ಮನ್ನು ಮೂಕಸ್ಮಿತರನ್ನಾಗಿಸಿ ಬಿಡುತ್ತದೆ.
ದೇಗುಲಗಳು, ಕಲ್ಯಾಣಿಗಳು, ಕೆರೆಗಳು
ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ತಾಣವೇ ಮೇಲುಕೋಟೆಯಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಹಲವಾರು ದೇಗುಲಗಳು, ಕಲ್ಯಾಣಿಗಳು, ಕೆರೆಗಳು, ಮಠಗಳು ಈ ಕ್ಷೇತ್ರದ ಮಹಿಮೆಯನ್ನು ಸಾರುತ್ತದೆ. ಪ್ರತಿದೇಗುಲ, ಕಲ್ಯಾಣಿಗಳಿಗೂ ತನ್ನದೇ ಆದ ಮಹಿಮೆಯಿರುವುದನ್ನು ನಾವು ಕಾಣಬಹುದಾಗಿದೆ.

ವಿಶಿಷ್ಟ ವಾಸ್ತುಶಿಲ್ಪದ ವಿಶಾಲವಾದ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಚೆಲುವರಾಯಸ್ವಾಮಿ ದೇಗುಲ ಹಾಗೂ ಬೆಟ್ಟದ ಮೇಲೆ ನೆಲೆ ನಿಂತಿರುವ ಯೋಗನರಸಿಂಹ ದೇವಾಲಯದ ನಡುವೆ ಬದರಿ ನಾರಾಯಣ ದೇವಾಲಯ, ಪಟ್ಟಾಭಿರಾಮ ದೇವಾಲಯ, ಶಾಂಡಿಲ್ಯದ ಸನ್ನಿಧಿ, ಕುಲಶೇಖರ್ ಆಳ್ವಾರ್ ಸನ್ನಿಧಿ, ಜೀಯರ್ ಸನ್ನಿಧಿ, ವೇದಾಂತದೇಶಿಕರ ಸನ್ನಿಧಿ, ಕೇಶವ ದೇವರ ಸನ್ನಿಧಿ, ನಂಜೀಯರ್ ಸನ್ನಿಧಿ, ಮಾರಮ್ಮನ ಸನ್ನಿಧಿ, ಪೇಟೆ ಆಂಜನೇಯ ಸನ್ನಿಧಿ, ನಮ್ಮಾಳ್ವಾರ್ ಗುಡಿ, ತಿರುಮಂಗೈ ಆಳ್ವಾರ್ ಗುಡಿ, ಪೇಟೆ ಕೃಷ್ಣದೇವರ ಗುಡಿ, ಸೀತಾರಣ್ಯ ಕ್ಷೇತ್ರ, ಕರಣಿಕ ನಾರಾಯಣನ ಗುಡಿ, ವೆಂಕಟೇಶ್ವರ ಗುಡಿಯಿದೆ.
ಕ್ಷೇತ್ರದ ಮಹಿಮೆಗೆ ಸಾಕ್ಷಿಯಾದ ದೇಗುಲಗಳು
ಇಷ್ಟೇ ಅಲ್ಲದೆ, ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ, ಆದಿಶೇಷ ಸನ್ನಿಧಿ, ಪಂಚ ಭಾಗವತ ಕ್ಷೇತ್ರ ಸನ್ನಿಧಿ, ಪೇಯಾಳ್ವಾರ್ ಸನ್ನಿಧಿ, ವರಾಹ ದೇವಾಲಯ, ಬಿಂದು ಮಾಧವ ದೇವಾಲಯ, ಹನುಮಾನ್ ದೇವಾಲಯ, ಹಯಗ್ರೀವ ಸನ್ನಿಧಿ, ಲಕ್ಷ್ಮಿ ನಾರಾಯಣ ಸನ್ನಿಧಿ, ದತ್ತ ನಾರಾಯಣ ಗುಡಿ, ವರಸಿದ್ದಿ ವಿನಾಯಕ (ಏಕಶಿಲೆ ಗಣಪ), ಕೇಶವ (ನಯನಕ್ಷೇತ್ರ), ಶನೇಶ್ವರ ಗುಡಿ, ಕವಿಗಲ್ ಆಂಜನೇಯ ಗುಡಿ, ಕರಮೆಟ್ಟಿಲು ಆಂಜನೇಯ ಗುಡಿ,

ಮೂಡ ಬಾಗಿಲು ಆಂಜನೇಯ ಗುಡಿ, ರಾಯರಗೋಪುರ ಆಂಜನೇಯ ಗುಡಿ, ಚೋಳರ ಬಂಡೆ, ಶ್ರೀನಿವಾಸ ದೇವಾಲಯ, ಸುಗ್ರೀವನ ಗುಡಿ, ಕಾಳಮ್ಮನ ಗುಡಿ, ಗರುಡ ದೇವರ ಗುಡಿ, ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ), ಹೊರತಮ್ಮನ ದೇವಾಲಯ, ಶಿವನ ಗುಡಿ(ಉಳ್ಳಿಬಾವಿ) ಮೊದಲಾದ ದೇವಾಲಯಗಳು ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಿವೆ.
ಇದರ ಜತೆಗೆ ಬೇರೆಲ್ಲೂ ಕಾಣದಷ್ಟು ಕೊಳ, ಕಲ್ಯಾಣಿ, ಕೆರೆಗಳನ್ನು ನಾವು ನೋಡಬಹುದಾಗಿದೆ. ಅವುಗಳೆಂದರೆ ವಿಶಾಲ ಭವ್ಯ ಕಲ್ಯಾಣಿ, ತೆಪ್ಪಕೊಳ, ಅಕ್ಕತಂಗಿಕೊಳ(ಚಲುವರಸಿಯರ ಕೊಳ), ನಿಂಗಣ್ಣನ ಕಟ್ಟೆ, ನಕ್ಷತ್ರಕೊಳ, ವೃತ್ತಕೊಳ, ಬಸವರಾಜನಕೊಳ, ವೇದಪುಷ್ಕರಣಿ, ಚಿಕ್ಕಯ್ಯನಕೊಳ, ದರ್ಭತೀರ್ಥ, ಯಾದವತೀರ್ಥ, ಪಲಾಶ ತೀರ್ಥ, ಮೈತ್ರೇಯ ತೀರ್ಥ, ಪದ್ಮತೀರ್ಥ, ನಾರಾಯಣ ತೀರ್ಥ, ತೊಟ್ಟಿಲಮಡು, ಹಾಲುಕೊಲ, ಭಟ್ಟರಕೊಳ, ನರಸಿಂಹಮಡು(ಬೆಟ್ಟದಕೊಳ), ಅಜ್ಜನಕಟ್ಟೆ, ಅಕ್ಕತಂಗಿಕೊಳ(ಗಿರಿ ಪ್ರದಕ್ಷಿಣೆ), ಒಕ್ಕರಣೆ(ಪಂಚಬಾವಿ), ಒಂಭತ್ತು ಕಲ್ಲು ಬಾವಿ, ಹೊಸಬಾವಿ, ಛತ್ರಿಕೊಳ, ಸಂತೆಮಡು, ಗಣಪತಿ ಕಟ್ಟೆ, ಪುಟ್ಟನರಸೀಕೊಳ, ಸಿಹಿನೀರುಕೊಳ, ಕೆಳಗಿನ ಚಿಕ್ಕಯ್ಯನಕೊಳ ಮೊದಲಾದ ನೀರಿನಕೊಳಗಳು ಹಾಗೂ ದಳವಾಯಿ ಕೆರೆ, ಹೊಸಕೆರೆ, ಯಾದವ, ಹೆಬ್ಬಳ್ಳ ಕೆರೆಗಳು ಗಮನಸೆಳೆಯುತ್ತದೆ.
ಐತಿಹಾಸಿಕ ಮಹತ್ವ ಸಾರುವ ಮೇಲುಕೋಟೆ
ಯತಿರಾಜ ಮಠ, ವಾನಮಾಮಲೈ ಮಠ, ಪರಕಾಲ ಮಠ, ಅಹೋಬಲ ಮಠ, ಆಂಡವನ್ ಆಶ್ರಮಂ, ಕಂಚಿವಾದ ಕೇಸರಿ ಆಳಹಿಯ ಮಣವಾದ ಮಠ, ತ್ರಿದಂಡಿ ಚಿನ್ನಜೀಯಾರ್ ಮಠ, ತಿರುಪತಿ ಪೆರಿಯ ಜೀಯಾರ್ ಮಠ, ಬೈರಾಗಿ ಮಠಗಳು ಇಲ್ಲಿನ ಐತಿಹಾಸಿಕ ಮಹತ್ವವನ್ನು ಸಾರುತ್ತಾ ಬರುತ್ತಿವೆ. ಮೇಲುಕೋಟೆಯಲ್ಲಿ ಪ್ರೇಕ್ಷಣೀಯ ತಾಣಗಳಾಗಿ ಪ್ರವಾಸಿಗರನ್ನು ರಾಯಗೋಪುರ(ಪಟ್ಟಣದ ಬಾಗಿಲು), ನಯನಕ್ಷೇತ್ರ(ಗುಹಾಂತರ ದೇವಾಲಯ), ತಾರ್ಕ್ಷ್ಯ ಕ್ಷೇತ್ರ, ಏಕಶಿಲಾ ಗಣಪತಿ, ಅಕ್ಕತಂಗಿಯರ ಕೊಳ, ಭುವನೇಶ್ವರಿ ಮಂಟಪ, ದಳವಾಯಿಕೆರೆ, ಹೊಗರಮ್ಮನ ಗುಡಿ ಆಕರ್ಷಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಮೇಲುಕೋಟೆ ನಿಸರ್ಗ ಸುಂದರ ಮತ್ತು ದೈವಕ್ಷೇತ್ರವಾಗಿದ್ದು, ಇಲ್ಲಿನ ಆದಿದೈವ ಚೆಲುವರಾಯಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಾ ಬೇಡಿ ಬಂದವರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವುದು ಮಹಿಮೆಗೆ ಸಾಕ್ಷಿಯಾಗಿದೆ. ಈ ಕ್ಷೇತ್ರ ಮಂಡ್ಯ ಮಾತ್ರವಲ್ಲದೆ, ಇಡೀ ಕರ್ನಾಟಕಕ್ಕೆ ಹೆಮ್ಮೆ ತರುತ್ತಿದ್ದು, ಭಕ್ತರು ಒಮ್ಮೆಯಾದರೂ ಈ ಕ್ಷೇತ್ರದ ದರ್ಶನ ಮಾಡಬೇಕೆಂದು ಬಯಸುವುದು ಸಹಜವಾಗಿದೆ.












Click it and Unblock the Notifications