"ಸಾಮಾನ್ಯ ಆಟೋ ಹತ್ತಲೇಬೇಡಿ!" ಹೆಂಡತಿ ಮೇಲಿನ ಪ್ರೀತಿಗೆ ಯುವತಿಯ ಜೇಬಿಗೆ ಕತ್ತರಿ ಹಾಕಿದ ಡ್ರೈವರ್
ಆಟೋದಲ್ಲಿ ಪ್ರಯಾಣಿಸುವಾಗ ನಮಗೆಲ್ಲರಿಗೂ ಒಂದಲ್ಲ ಒಂದು ವಿಚಿತ್ರ ಅನುಭವಗಳಾಗಿರುತ್ತವೆ. ಕೆಲವೊಮ್ಮೆ ಆಟೋ ಚಾಲಕರ ಜೊತೆ ನಡೆಯುವ ವಾಗ್ವಾದಗಳು ದಿನವಿಡೀ ನಮ್ಮ ಮೂಡ್ ಹಾಳುಮಾಡಬಹುದು. ಆದರೆ, ಇಲ್ಲೊಬ್ಬಳು ಕಾಲೇಜು ವಿದ್ಯಾರ್ಥಿನಿಗೆ ಆದ ಅನುಭವ ಮಾತ್ರ ತುಂಬಾನೇ ವಿಭಿನ್ನ ಹಾಗೂ ಹಾಸ್ಯಾಸ್ಪದವಾಗಿದೆ.
ಓಲಾ ಅಥವಾ ಉಬರ್ ಬುಕ್ ಮಾಡುವ ಬದಲು ಸಾಮಾನ್ಯ ಆಟೋ ಹತ್ತಿದ ಯುವತಿಗೆ ಆಟೋ ಚಾಲಕನೊಬ್ಬ ತನ್ನ ಹೆಂಡತಿಗೆ ಟಿಫಿನ್ ಕೊಡಲು ದಾರಿ ಬದಲಿಸಿ, ಬಳಿಕ ಪ್ರಯಾಣಿಕಳಿಂದಲೇ ಹೆಚ್ಚುವರಿ ಹಣ ವಸೂಲಿ ಮಾಡಿರುವ ಘಟನೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸೃಷ್ಟಿ ಅವರ ವಿಚಿತ್ರ ಆಟೋ ಪ್ರಯಾಣ
ಸೃಷ್ಟಿ ಎಂಬ ಎಕ್ಸ್ ಬಳಕೆದಾರರು ತಮ್ಮ ಈ ವಿಚಿತ್ರ ಆಟೋ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಇಂಟರ್ನ್‌ಶಿಪ್ ಮುಗಿಸಿ ಹಾಸ್ಟೆಲ್‌ಗೆ ಮರಳಲು ಅವರು ಓಲಾ/ಉಬರ್ ಬದಲು ಸಾಮಾನ್ಯ ಆಟೋವೊಂದನ್ನು ಹತ್ತಿದ್ದರು. ಚಾಲಕನಿಗೆ ವಿಳಾಸ ಹೇಳಿದಾಗ ಆತ 'ಹಾ, ಹೋಗೋಣ' ಎಂದು ಹೇಳಿ ಆಟೋ ಸ್ಟಾರ್ಟ್ ಮಾಡಿದ್ದಾನೆ.
ಆದರೆ, ಸ್ವಲ್ಪ ದೂರ ಹೋದ ಬಳಿಕ ಇದ್ದಕ್ಕಿದ್ದಂತೆ ಬೇರೆಯದೇ ದಾರಿಯಲ್ಲಿ ಆಟೋ ತಿರುಗಿಸಿದ್ದಾನೆ. ಆತಂಕಗೊಂಡ ಸೃಷ್ಟಿ, "ಅಣ್ಣಾ, ಎಲ್ಲಿಗೆ ಹೋಗುತ್ತಿದ್ದೀರಾ?" ಎಂದು ಕೇಳಿದಾಗ, ಆತ "ಒಂದೇ ನಿಮಿಷ, ನನ್ನ ಹೆಂಡತಿಗೆ ಟಿಫಿನ್ ಕೊಡಬೇಕು" ಎಂದು ಹೇಳಿ ಯಾವುದೋ ಅಪರಿಚಿತ ಮನೆಯೊಂದರ ಮುಂದೆ ಆಟೋ ನಿಲ್ಲಿಸಿದ್ದಾನೆ. ಆತನಿಗಾಗಿ ಸೃಷ್ಟಿ ಬರೋಬ್ಬರಿ 7 ನಿಮಿಷಗಳ ಕಾಲ ಆಟೋದಲ್ಲೇ ಕಾಯಬೇಕಾಯಿತು. ತಾನು ಹಣ ಕೊಟ್ಟು ಬುಕ್ ಮಾಡಿದ ಆಟೋದಲ್ಲಿ ಹೀಗೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಅವರಿಗೆ ಆಶ್ಚರ್ಯ ತರಿಸಿತ್ತು.
ಪರೋಟಾ ತಿಂದ ಚಾಲಕ, ಹೆಚ್ಚುವರಿ ಹಣ ವಸೂಲಿ
ಆಟೋ ಚಾಲಕನ ವಿಚಿತ್ರ ವರ್ತನೆ ಅಲ್ಲಿಗೇ ಮುಗಿಯಲಿಲ್ಲ. ಮನೆಯಿಂದ ವಾಪಸ್ ಬಂದ ಆತ, ಕೈಯಲ್ಲಿ ತಂದಿದ್ದ ಪರೋಟಾವನ್ನು ಆರಾಮವಾಗಿ ತಿನ್ನಲು ಆರಂಭಿಸಿದ್ದಾನೆ. ತನಗಾಗಿ ಇಷ್ಟು ಹೊತ್ತು ಕಾಯ್ದು ಕುಳಿತಿದ್ದ ಪ್ರಯಾಣಿಕಳಿಗೆ ಕನಿಷ್ಠ ಸೌಜನ್ಯಕ್ಕಾದರೂ ಒಂದು ತುಂಡು ಪರೋಟಾ ಕೇಳಲಿಲ್ಲ ಎಂದು ಸೃಷ್ಟಿ ತಮಾಷೆಯಾಗಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದೆಲ್ಲ ಮುಗಿದ ಮೇಲೆ ಕೊನೆಗೂ ಸೃಷ್ಟಿಯನ್ನು ಅವರ ಹಾಸ್ಟೆಲ್‌ಗೆ ಬಿಟ್ಟ ಆಟೋ ಚಾಲಕ, ತಾನು ತನ್ನ ಹೆಂಡತಿಗೆ ಟಿಫಿನ್ ಕೊಡಲು ದಾರಿ ಬದಲಿಸಿ ಬಂದಿದ್ದಕ್ಕೆ ಆಕೆಯ ಬಳಿಯೇ 30 ರೂಪಾಯಿ ಹೆಚ್ಚುವರಿ ಹಣ ವಸೂಲಿ ಮಾಡಿದ್ದಾನೆ! ಈ ಘಟನೆಯಿಂದ ಬೇಸತ್ತ ಸೃಷ್ಟಿ, "ಓಲಾ/ಉಬರ್ ಬಿಟ್ಟು ಎಂದಿಗೂ ಸಾಮಾನ್ಯ ಆಟೋಗಳನ್ನು ಹತ್ತಬೇಡಿ, ಅವರು ನಮ್ಮನ್ನು ಸುಲಭವಾಗಿ ವಂಚಿಸುತ್ತಾರೆ" ಎಂದು ಎಚ್ಚರಿಕೆ ನೀಡಿದ್ದಾರೆ.
ನೆಟ್ಟಿಗರ ಹಾಸ್ಯಾಸ್ಪದ ಕಾಮೆಂಟ್‌ಗಳು
ಸೃಷ್ಟಿ ಅವರ ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ನೂರಾರು ಮಂದಿ ಲೈಕ್ ಹಾಗೂ ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ನೆಟ್ಟಿಗರು ತಮ್ಮದೇ ಆದ ಸ್ಥಳೀಯ ಆಟೋ ಚಾಲಕರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಇದೊಂದು ತಮಾಷೆಯ ಘಟನೆ ಎಂದು ಭಾವಿಸಿದರೆ, ಇನ್ನು ಕೆಲವರು ಸ್ಥಳೀಯ ಆಟೋ ಚಾಲಕರ ಸುಲಿಗೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Never take AUTOS instead of uber/ola
— Srishti (@srishticodes) June 30, 2026
Once I got in an auto to go back to hostel after internship instead of uber.
told him the address.
he said "haan haan chalte hain" then took a completely different turn.
I asked bhaiya kidhar ja rahe ho. He said "ek minute bas meri biwi ko…
"ನಿಮಗೆ ಆತ ಪರೋಟಾ ಕೊಡಲಿಲ್ಲ ಎಂಬುವುದೇ ಅಸಲಿ ಸಮಸ್ಯೆ, ಕರ್ಮ ಅವನಿಗೆ ತಕ್ಕ ಶಾಸ್ತಿ ಮಾಡುತ್ತದೆ" ಎಂದು ಓರ್ವ ಬಳಕೆದಾರರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ಬಡವರ ಮೇಲೆ ಕನಿಕರ ತೋರಿಸಿ ಎನ್ನುತ್ತಾರೆ, ಆದರೆ ಇವರು ನಮ್ಮನ್ನೇ ಮೂರ್ಖರನ್ನಾಗಿಸಿ ಹೆಚ್ಚುವರಿ ಹಣ ಕೀಳುತ್ತಾರೆ. ಬಡತನವನ್ನು ಇಂತಹ ವಂಚನೆಗೆ ಲೈಸೆನ್ಸ್ ಆಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ಆಟೋಗಳು ಓಲಾ ಅಥವಾ ಉಬರ್‌ಗಿಂತ ಹೆಚ್ಚು ಹಣ ಕೀಳುತ್ತವೆ ಎಂಬುದು ಮತ್ತೊಮ್ಮೆ ಈ ಘಟನೆಯಿಂದ ಸಾಬೀತಾಗಿದೆ. ಒಟ್ಟಿನಲ್ಲಿ ಈ ಘಟನೆ ಓದುಗರಿಗೆ ನಗು ತರಿಸುವುದರ ಜೊತೆಗೆ ಆಟೋ ಚಾಲಕರ ವರ್ತನೆಯ ಬಗ್ಗೆಯೂ ಹೊಸ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications