ಆಸ್ತಿಕ, ನಾಸ್ತಿಕರೆಲ್ಲರಿಗೂ ಮೆಚ್ಚಿನ ತಾಣ ಶಿಡ್ಲು ಮಲ್ಲಿಕಾರ್ಜುನ ಬೆಟ್ಟ: ಏನಿದರ ವಿಶೇಷತೆ?
ಮೈಸೂರು, ಜೂನ್ 14: ವಾರಪೂರ್ತಿ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿಸಿಕೊಂಡವರು, ಸದಾ ಕಾಂಕ್ರಿಟ್ ಕಾಡುಗಳಲ್ಲಿ ವಾಸಮಾಡುತ್ತಾ, ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುತ್ತಾ ಶುದ್ಧ ಗಾಳಿಯನ್ನು ಸೇವಿಸಲಾಗದೆ ನಗರದ ಬದುಕಿನಲ್ಲಿ ಒದ್ದಾಡುವವರು ವಾರಕ್ಕೊಮ್ಮೆಯಾದರೂ ಒಂದೊಳ್ಳೆಯ ಪರಿಸರದಲ್ಲಿ ಒಂದಷ್ಟು ಹೊತ್ತು ಇದ್ದು ಬರೋಣ ಎಂದು ಬಯಸುವುದು ಸಹಜವೇ.
ಈಗಾಗಲೇ ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಸುರಿದ ಪರಿಣಾಮ ಬಿಸಿಲಿನ ಧಗೆಗೆ ಸಿಲುಕಿ ಒಣಗಿ ಹೋಗಿದ್ದ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತಿದೆ. ಮರಕಾಡುಗಳು ಹಸಿರಿನಿಂದ ಕಂಗೊಳಿಸುತ್ತಾ ಜೀವನೋಲ್ಲಾಸ ತುಂಬುತ್ತಿವೆ. ಮುಂಗಾರು ಮಳೆಗೆ ಖುಷಿಯಾದ ರೈತ ತಮ್ಮ ಹೊಲಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾಗಿರುವುದರಿಂದ ಒಣಗಿದ ಹೊಲ, ಗದ್ದೆಗಳಿಗೂ ಹೊಸ ಕಳೆ ಬಂದಿದೆ.

ಇದೀಗ ಬಿಸಿಲಿಗೆ ಬಾಯ್ತೆರೆದಿದ್ದ ಕೆರೆಕಟ್ಟೆಗಳು ನೀರು ಕುಡಿದಿವೆ. ಹಳ್ಳಿಯ ಹಾದಿಯಲ್ಲಿ ಸಾಗುತ್ತಾ ಹೋಗುತ್ತಿದ್ದರೆ ತಂಪಾದ ಗಾಳಿ, ಸುಂದರ ನೋಟ ಮನಸ್ಸಿಗೆ ಮುದ ನೀಡುತ್ತದೆ. ಇಂತಹ ನಿಸರ್ಗ ಸುಂದರ ಪರಿಸರವನ್ನು ನೋಡುತ್ತಾ ಬೆಟ್ಟವೇರುವ ಹಾಗಿದ್ದರೆ ಎಷ್ಟು ಚೆಂದ ಅಲ್ವಾ? ಇಂತಹ ಅನುಭವ ಪಡೆಯಲೆಂದೇ ಏನೋ ನಿಸರ್ಗವೇ ಸೃಷ್ಟಿ ಮಾಡಿರುವಂತಹ ತಾಣವೊಂದಿದ್ದು ಅದುವೇ ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನ ಬೆಟ್ಟವಾಗಿದೆ.
ಆಸ್ತಿಕ, ನಾಸ್ತಿಕರೆಲ್ಲರಿಗೂ ಮೆಚ್ಚಿನ ತಾಣ
ಶಿಡ್ಲು ಮಲ್ಲಿಕಾರ್ಜುನ ಬೆಟ್ಟವು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಬೆಟ್ಟವೇ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವಾಗಿದ್ದು, ಹೆಸರಿಗೆ ತಕ್ಕಂತೆ ಬೆಟ್ಟದಪುರವು ಸುಂದರ ಪರಿಸರನ್ನು ಹೊಂದಿದೆ. ಇಲ್ಲಿರುವ ಮಲ್ಲಿಕಾರ್ಜುನ ಬೆಟ್ಟ ಪ್ರಮುಖ ಆಕರ್ಷಣೆಯಾಗಿದೆ. ಈ ಬೆಟ್ಟಕ್ಕೆ ದೈವಮಹಿಮೆಯೂ ಇರುವುದರಿಂದ ಆಸ್ತಿಕ, ನಾಸ್ತಿಕ ಎನ್ನದೆ ಎಲ್ಲರೂ ಇಲ್ಲಿಗೆ ಬರುವುದು ವಿಶೇಷವಾಗಿದೆ.
ಈ ಬೆಟ್ಟವು ಮೈಸೂರು ಜಿಲ್ಲೆಯಲ್ಲಿರುವ ಅತಿ ಎತ್ತರದ ಬೆಟ್ಟಗಳಲ್ಲಿ ಒಂದಾಗಿದ್ದು, ಈ ಬೆಟ್ಟವೇರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಮೆಟ್ಟಿಲನ್ನು ಹತ್ತುತ್ತಾ ಹೋದರೆ ನಿಸರ್ಗದ ಸುಂದರ ದೃಶ್ಯಗಳು ಒಂದರ ಮೇಲೊಂದರಂತೆ ಕಣ್ಮುಂದೆ ಹಾದು ಹೋಗುತ್ತದೆ. ಹೀಗಾಗಿಯೇ ದೇವರ ದರ್ಶನ ಜೊತೆಗೆ ಚಾರಣ ಮಾಡಲು ಹೆಚ್ಚಿನ ಜನರು ಇಲ್ಲಿಗೆ ಬರುವುದು ಮಾಮೂಲಿಯಾಗಿದೆ.

ಚೋಳರ ಕಾಲದಲ್ಲಿ ನಿರ್ಮಾಣವಾದ ದೇಗುಲ
ಇನ್ನು ಇಲ್ಲಿ ಬರೀ ಬೆಟ್ಟ ಮಾತ್ರವಲ್ಲದೆ ಮಲ್ಲಿಕಾರ್ಜುನನ ಸನ್ನಿಧಿಯೂ ಆಗಿದೆ. ಬೆಟ್ಟದ ಮೇಲಿರುವ ಶಿಡ್ಲುಮಲ್ಲಿಕಾರ್ಜುನ ದೇಗುಲ ಇವತ್ತು ನಿನ್ನೆಯದಲ್ಲ. ಎತ್ತರವಾದ ಬೆಟ್ಟದ ಮೇಲೆ ನೆಲೆನಿಂತಿರುವ ದೇಗುಲ ಆಕರ್ಷಣೀಯವಾಗಿದೆ. ಇಲ್ಲಿ ಈ ದೇಗುಲವನ್ನು ನಿರ್ಮಿಸಿದ್ದು ಚೋಳ ರಾಜರು ಎಂದು ಹೇಳಲಾಗಿದ್ದು, ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇಗುಲ ಇತಿಹಾಸದ ಕಥೆ ಹೇಳಲೆಂದೇ ಬೆಟ್ಟದ ಮೇಲೆ ಮೈದಾಳಿ ನಿಂತಿದೆಯೇನೋ ಎಂಬಂತೆ ಭಾಸವಾಗುತ್ತಿದೆ.
ಶಿಡ್ಲು ಮಲ್ಲಿಕಾರ್ಜುನ ಬೆಟ್ಟವು ಪಶ್ಚಿಮಘಟ್ಟಗಳ ಬೆಟ್ಟಶ್ರೇಣಿಗಳ ಸಾಲಿಗೆ ಸೇರ್ಪಡೆಯಾಗಿದ್ದು, ನೆಲಮಟ್ಟದಿಂದ ಸುಮಾರು 3,600 ಮೆಟ್ಟಿಲೇರಿ ಬೆಟ್ಟದ ಮೇಲೆ ತೆರಳಿದರೆ ಮಲ್ಲಿಕಾರ್ಜುನ ದೇಗುಲವನ್ನು ತಲುಪಬಹುದಾಗಿದ್ದು, ಇಲ್ಲಿರುವ ಮಲ್ಲಿಕಾರ್ಜುನ ಸುತ್ತಮುತ್ತಲಿನ ಜನರ ಆರಾಧ್ಯದೈವನಾಗಿದ್ದಾನೆ.
ಕೊಡಗು ಮೈಸೂರು ಗಡಿಭಾಗದ ತಾಣ
ಶಿಡ್ಲು ಮಲ್ಲಿಕಾರ್ಜುನ ಬೆಟ್ಟಕ್ಕೆ ತೆರಳುವುದೇ ಒಂದು ಮರೆಯಲಾರದ ಅನುಭವ ಅದರಲ್ಲೂ ಇಲ್ಲಿ ಮುಂಜಾನೆ ತೆರಳಿದರೆ ಅಲ್ಲಿ ಕಾಣುವ ನಿಸರ್ಗದ ನೋಟ ಹುರುಪು ನೀಡುತ್ತದೆ. ಅದರಲ್ಲೂ ದೂರದಿಂದಲೇ ಇಡೀ ಬೆಟ್ಟವನ್ನೇ ಆವರಿಸುವ ಮಂಜು ಖುಷಿಕೊಡುತ್ತದೆ. ಬೆಟ್ಟವೇರುತ್ತಾ ಹೋದಂತೆಲ್ಲ ಮಂಜಿನ ತೆರೆಯನ್ನು ಸೀಳಿ ಬಂದು ಸ್ಪರ್ಶಿಸುವ ಸೂರ್ಯ ರಶ್ಮಿ ಮೈಮನವನ್ನು ಪುಳಕಗೊಳಿಸುತ್ತದೆ. ಇದರ ಜೊತೆಗೆ ಬೆಟ್ಟದಲ್ಲಿ ಬೀಡುಬಿಟ್ಟ ಪಕ್ಷಿಗಳ ಚಿಲಿಪಿಲಿ ನಿನಾದ ನಮ್ಮ ಆಯಾಸವನ್ನು ಬದಿಗೊತ್ತಿ ಮುಂದೆ ಸಾಗುವಂತೆ ಮಾಡುತ್ತದೆ.
ಇನ್ನು ಕೊಡಗು ಮತ್ತು ಮೈಸೂರಿಗೆ ಗಡಿಭಾಗದಲ್ಲಿರುವ ಈ ಬೆಟ್ಟವು ನಿಸರ್ಗ ಸೌಂದರ್ಯದ ಗಣಿಯಾಗಿದೆ. ಆದ್ದರಿಂದ ಕೊಡಗಿಗೆ ತೆರಳುವ ಪ್ರವಾಸಿಗರು ಇತ್ತ ಮುಖ ಮಾಡಿ ಬೆಟ್ಟವನ್ನೇರಿ ಇಲ್ಲಿನ ಪ್ರಕೃತಿ ರಮಣೀಯತೆಯನ್ನು ಸವಿಯುತ್ತಾರೆ. ಒಟ್ಟಾರೆ ಹೇಳಬೇಕೆಂದರೆ ನಿಸರ್ಗದ ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಸಮಯವನ್ನು ಕಳೆಯಲು ಬಯಸುವವರು ಇಲ್ಲಿಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications