Vande Bharat Express: 2024ರಲ್ಲಿ ಟ್ರ್ಯಾಕ್‌ಗೆ ಇಳಿಯಲಿವೆ 3 ಮಾದರಿಯ "ವಂದೇ ಭಾರತ್" ರೈಲುಗಳು: ಅಶ್ವಿನಿ ವೃಷ್ಣವ್
ನವದೆಹಲಿ, ಮೇ, 26: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈಗಾಗಲೇ ದೇಶದ ಹಲವೆಡೆ ಸಂಚಾರ ಆರಂಭಿಸಿದ್ದು, ಇದು ದಿನದಿಂದ ದಿನಕ್ಕೆ ಹೆಚ್ಚು ಜನಮನ್ನಣೆಯನ್ನೂ ಪಡೆದುಕೊಳ್ಳುತ್ತಲೇ ಇದೆ. ಹಾಗೆಯೇ ಮುಂದಿನ ವರ್ಷ ಅಂದರೆ 2024ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ 3 ಮಾದರಿ ರೈಲುಗಳು ಟ್ರ್ಯಾಕ್‌ಗೆ ಇಳಿಯಲಿವೆ ಎಂದು ಅಶ್ವನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
2024ರ ಫೆಬ್ರವರಿ ಮತ್ತು ಮಾರ್ಚ್ ವೇಳೆಗೆ ವಂದೇ ಚೇರ್‌ಕಾರ್, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ ಎನ್ನುವ 3 ಮಾದರಿಯ ವಂದೇ ಭಾರತ್ ರೈಲುಗಳು ಸಂಚಾರ ಮಾಡಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

3 ಮಾದರಿಯ ರೈಲುಗಳಿವು
1. ವಂದೇ ಚೇರ್‌ಕಾರ್
2. ವಂದೇ ಮೆಟ್ರೋ
3. ವಂದೇ ಸ್ಲೀಪರ್
ಇನ್ನು "ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ದೇಶದಲ್ಲಿರುವ ಎಲ್ಲಾ ರೈಲು ಹಳಿಗಳನ್ನು 160 ಕಿಲೋ ಮೀಟರ್ ವೇಗಕ್ಕೆ ತಕ್ಕಂತೆ ಸಿದ್ಧಪಡಿಸಲಾಗುತ್ತದೆ. ಹಾಗೆಯೇ 3 ಮಾದರಿಗಳಲ್ಲಿ ವಂದೇ ಭಾರತ್ ರೈಲುಗಳು ಮುಂದಿನ ವರ್ಷ ಸಂಚಾರ ಆರಂಭಿಸಲಿವೆ," ಎಂದು ತಿಳಿಸಿದ್ದಾರೆ.
ಹಾಗೆಯೇ 100 ಕಿಲೋ ಮೀಟರ್ ದೂರಕ್ಕೆ ವಂದೇ ಮೆಟ್ರೋ, 100ರಿಂದ 550 ಕಿಲೋ ಮೀಟರ್ ದೂರದವರೆಗೆ ವಂದೇ ಚೇರ್‌ಕಾರ್ ಮತ್ತು 550 ಕಿಲೋ ಮೀಟರ್ ದೂರದವರೆಗೆ ವಂದೇ ಸ್ಲೀಪರ್ ರೈಲುಗಳು ಸಂಚಾರ ಮಾಡಲಿವೆ. ಈ 3 ಮಾದರಿಯ ರೈಲುಗಳು 2024ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳ ವೇಳೆಗೆ ಸಂಚಾರ ಆರಂಭಿಸಲಿವೆ." ಎಂದು ಹೇಳಿದರು.
ಇನ್ನು 2023ರ ಜೂನ್ ಮಧ್ಯದ ವೇಳೆಗೆ ಎಲ್ಲಾ ರಾಜ್ಯಗಳು ವಂದೇ ಭಾರತ್ ಸೇವೆಯನ್ನು ಪಡೆದುಕೊಳ್ಳಲಿವೆ. 8 ರಿಂದ 9 ದಿನದಲ್ಲಿ ಒಂದು ರೈಲನ್ನು ತಯಾರು ಮಾಡಲಾಗುತ್ತಿದೆ ಅಂತಲೂ ಮಾಹಿತಿ ನೀಡಿದರು.
ಇನ್ನು ನವಹಲಿಯಿಂದ ಉತ್ತರಾಖಂಡ್‌ನ ಡೆಹ್ರಾಡೂನ್‌ಗೆ ಚಲಿಸಲಿರುವ ದೇಶದ 18ನೇ ಹಾಗೂ ಉತ್ತರಾಖಂಡ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಗುರುವಾರ ವರ್ಚುವಲ್ ಆಗಿ ಚಾಲನೆ ನೀಡಿದರು. ದೆಹಲಿಯಿಂದ ಬೇರೆ ನಗರಕ್ಕೆ ಸಂಪರ್ಕಿಸುತ್ತಿರುವ 6ನೇ ವಂದೇ ಭಾರತ್ ರೈಲು ಇದಾಗಿದ್ದು, ಕೇವಲ 4 ತಾಸು 30 ನಿಮಿಷಗಳಲ್ಲಿ ಡೆಹ್ರಾಡೂನ್ ತಲುಪಲಿದೆ.
ಶತಾಬ್ದಿ ಎಕ್ಸ್‌ಪ್ರೆಸ್ 6 ತಾಸು 10 ನಿಮಿಷ ತೆಗದುಕೊಳ್ಳುತ್ತಿದ್ದು, ವಂದೇ ಭಾರತ್ ಮಾತ್ರ ಪ್ರಯಾಣದ ಅವಧಿಯನ್ನು 1 ತಾಸು 40 ನಿಮಿಷ ಕಡಿಮೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಂದೇ ಮೆಟ್ರೋ ಆರಂಭ ಯಾವಾಗ?
ಮತ್ತೊಂದೆಡೆ ಇದೀಗ ವಂದೇ ಭಾರತೀಯ ರೈಲ್ವೆಯು ಶೀಘ್ರದಲ್ಲೇ ವಂದೇ ಮೆಟ್ರೋವನ್ನು ಪ್ರಾರಂಭಿಸಲಿದೆ. ಈ "ವಂದೇ ಮೆಟ್ರೋ" 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಎರಡು ನಗರಗಳನ್ನು ಸಂಪರ್ಕಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ರೈಲ್ವೆಯ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, 2023ರ ಡಿಸೆಂಬರ್ ವೇಳೆಗೆ ಈ "ವಂದೇ ಮೆಟ್ರೋ" ರೈಲು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಇದು ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.
ಈ ಮೆಟ್ರೋ ಪ್ರಯಾಣಿಕರಿಗೆ ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ನೀಡಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೆಲವು ದಿನಗಳ ಹಿಂದೆ ಈ ರೈಲಿನ ಬಗ್ಗೆ ಮಾಹಿತಿ ನೀಡಿದ್ದು, 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ನಗರಗಳ ನಡುವೆ ಈ ರೈಲು ಸೇವೆ ಆರಂಭಿಸಲಿದೆ. ಒಂದು ದಿನದಲ್ಲಿ ನಾಲ್ಕರಿಂದ ಐದು ಟ್ರಿಪ್‌ಗಳ ಮೂಲಕ ಪ್ರಯಾಣಿಕರನ್ನು ಹೊತ್ತೊಯ್ಯಲಿದೆ.
ಅಷ್ಟೇ ಅಲ್ಲದೆ ಇದರ ವೇಗವು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಹೆಚ್ಚಾಗಿರುತ್ತದೆ. ಹಾಗೆಯೆ ಇದರ ಟಿಕೆಟ್ ದರಗಳು ಇತರ ರೈಲುಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಇದರಿಂದ ಪ್ರಯಾಣಿಕರು ವೇಗವಾಗಿ ಮತ್ತು ಅಗ್ಗದ ದರದಲ್ಲಿ ಪ್ರಯಾಣ ಮಾಡಬಹುದಾಗಿರುತ್ತದೆ. ವಂದೇ ಮೆಟ್ರೋ ಎಂಟು ಬೋಗಿಗಳನ್ನು ಹೊಂದಿರಲಿದ್ದು, ಇದು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಚಿಕ್ಕದಾಗಿರಲಿದೆ.
ಇನ್ನು "ನಾವು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ದೊಡ್ಡ ನಗರಗಳ ಸುತ್ತಲೂ ಪ್ರಯಾಣ ಬೆಳೆಸುವವರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಅದಕ್ಕಾಗಿ ನಾವು ವಂದೇ ಭಾರತ್ ರೈಲಿಗೆ ಸಮಾನವಾದ ವಂದೇ ಮೆಟ್ರೋವನ್ನು ತರುತ್ತಿದ್ದೇವೆ. ಈ ವರ್ಷ ವಿನ್ಯಾಸ ಮತ್ತು ಉತ್ಪಾದನೆ ಪೂರ್ಣಗೊಳ್ಳಲಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ರೈಲಿನ ಉತ್ಪಾದನೆಯ ವೇಗವನ್ನು ಹೆಚ್ಚಿಸಲಾಗುವುದು," ಎಂದು ಇತ್ತೀಚೆಗಷ್ಟೆ ರೈಲ್ವೆ ಸಚಿವರು ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದರು.
"ವಂದೇ ಮೆಟ್ರೋ"ದ ವಿಶೇಷತೆಗಳು
1. ಹಾಗೆಯೇ ವೇಗದ ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.
2. ಈ ರೈಲುಗಳು ಎಂಟು ಕೋಚ್‌ಗಳನ್ನು ಹೊಂದಿದ್ದು, ಮೆಟ್ರೋ ರೈಲಿನಂತೆ ಇರಲಿವೆ.
3. ವಂದೇ ಭಾರತ್ ಮೆಟ್ರೋ ಪ್ರಯಾಣಿಕರು ಇದರಲ್ಲಿ ಸುಖಕರ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ.
4. ಜನರು ತಮ್ಮ ಊರುಗಳಿಂದ ದೊಡ್ಡ ನಗರಗಳಲ್ಲಿನ ಕಚೇರಿಗಳಿಗೆ ಆರಾಮವಾಗಿ ಪ್ರಯಾಣಿಸಲು ಸಹಾಯ ಮಾಡಲು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
5. ರೈಲ್ವೇ ಸಚಿವಾಲಯವು ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಲಕ್ನೋ ಮೂಲದ ಆರ್‌ಡಿಎಸ್‌ಒ ಜನರಲ್ ಮ್ಯಾನೇಜರ್‌ಗಳಿಗೆ ಎಂಟು ಬೋಗಿಗಳ ವಂದೇ ಭಾರತ್ ರೈಲುಗಳನ್ನು ಶೀಘ್ರವಾಗಿ ಹೊರತರುವಂತೆ ನಿರ್ದೇಶಿಸಿದೆ.












Click it and Unblock the Notifications