ದಿನದಿಂದ ದಿನಕ್ಕೆ ಅದ್ಭುತವಾಗುತ್ತಿದೆ ಮಡಿಕೇರಿಯ ರಾಜಾಸೀಟ್: ನಿಸರ್ಗದ ಲಾಸ್ಯ ನೋಡಲು ತಪ್ಪದೇ ಬನ್ನಿ
ಮಡಿಕೇರಿ, ಆಗಸ್ಟ್ 19: ಕೊಡಗಿನಲ್ಲಿ ಮಳೆ ತಗ್ಗಿದ ಪರಿಣಾಮ ನಿಸರ್ಗದ ಚೆಲುವಿನ ಲಾಸ್ಯ ಕಣ್ಮನ ತಣಿಸುತ್ತಿದೆ. ಮಂಜಿನ ತೆರೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದೇ ಒಂಥರಾ ಸಂಭ್ರಮ. ಹೀಗಾಗಿಯೇ ಕೊಡಗಿನತ್ತ ಪ್ರವಾಸಿಗರ ದಂಡು ಆಗಮಿಸುವುದು ಕಂಡು ಬರುತ್ತಿದೆ. ಒಂದಷ್ಟು ಸಮಯವನ್ನು ಪ್ರಶಾಂತ ವಾತಾವರಣ ನಿಸರ್ಗದ ಮಡಿಲಲ್ಲಿ ಕಳೆದು ಹೋಗುವುದೇ ಎಲ್ಲಿಲ್ಲದ ಸಡಗರವಾಗಿದೆ. ಅದರಲ್ಲೂ ಮಡಿಕೇರಿ ನಗರಕ್ಕೆ ಭೇಟಿ ನೀಡಿದವರು ರಾಜಾಸೀಟ್ ಗೆ ತೆರಳಿ ಅಲ್ಲಿ ಕಾಲ ಕಳೆಯುವುದು ಖುಷಿ ಕೊಡುತ್ತಿದೆ.
ಕೊಡಗಿನ ಪ್ರವಾಸಿ ತಾಣಗಳ ಪೈಕಿ ನಿಸರ್ಗ ಸುಂದರತೆಯಿಂದಲೇ ಹೆಸರು ವಾಸಿಯಾಗಿರುವುದು ಮಡಿಕೇರಿಯ ರಾಜಾಸೀಟ್. ಇದು ಪ್ರವಾಸಿಗರ ಪ್ರಮುಖ ಸಂದರ್ಶನ ಯೋಗ್ಯ ತಾಣವಾಗಿ ಜನಜನಿತವಾಗಿದೆ. ಹೀಗಾಗಿಯೇ ಕೊಡಗು ಎಂದಾಕ್ಷಣ ಪ್ರವಾಸಿಗನ ಮನದಲ್ಲಿ ರಾಜಾಸೀಟಿನ ಚಿತ್ರ ಮೂಡುವುದು ಸಹಜ. ಇಲ್ಲಿ ಮುಂಜಾನೆ, ಸಂಜೆ ಮಾತ್ರವಲ್ಲ ಮಟಮಟ ಮಧ್ಯಾಹ್ನದಲ್ಲಿಯೂ ತಂಗಾಳಿ ಬೀಸಿದ ಅನುಭವವಾಗುತ್ತದೆ. ಮಡಿಕೇರಿ ನಗರದ ಅಂಚಿನಲ್ಲಿ ನಿರ್ಮಾಣವಾಗಿರುವ ರಾಜಾಸೀಟ್ ಉದ್ಯಾನದಿಂದ ಇಣುಕಿ ನೋಡಿದರೆ ಮೈಜುಮ್ಮೆನಿಸುವ ಕಂದಕ ಅದರ ನಡುವಿನ ಪ್ರಕೃತಿಯ ವಿಹಂಗಮ ನೋಟ ಮೈಮನವನ್ನು ಪುಳಕಗೊಳಿಸುತ್ತದೆ.

ಇಲ್ಲಿಂದ ನಿಂತು ನೋಡುವ ಕಣ್ಣುಗಳಿಗೆ ದೂರದಲ್ಲಿ ಮುಗಿಲೆತ್ತರಕ್ಕೆ ಬೆಳೆದು ಪೈಪೋಟಿ ನೀಡಲೇನೋ ಎಂಬಂತೆ ನಿಂತಿರುವ ಗಿರಿಶಿಖರಗಳು, ಅವುಗಳ ನಡುವಿನ ಇಳಿಜಾರಿನಲ್ಲಿ ಬೆಳೆದು ನಿಂತಹೆಮ್ಮರಗಳು, ಕಾಫಿ, ಏಲಕ್ಕಿ ತೋಟಗಳ ನಡುವಿನ ಗದ್ದೆ ಬಯಲುಗಳು, ಕೆಳಗಿನ ಕಂದಕದ ಅಂಕುಡೊಂಕಾದ ರಸ್ತೆಯಲ್ಲಿ ಸಾಗಿ ಬರುವ ವಾಹನಗಳು, ಪಕ್ಕದ ಗುಡ್ಡದಲ್ಲಿ ಒತ್ತೊತ್ತಾಗಿ ಎದ್ದು ನಿಂತ ಜನವಸತಿಗಳು, ಹೀಗೆ ಒಂದೆರಡಲ್ಲ ಹತ್ತಾರು ಸುಂದರ ದೃಶ್ಯಗಳು ಕಣ್ಣ ಮುಂದೆ ಹಾದುಹೋಗುತ್ತಲೇ ಇರುತ್ತದೆ.
ಮಸಣದ ಮೇಲಿನ ಉದ್ಯಾನವನ
ಮಳೆಗಾಲದ ಈ ಸಮಯದಲ್ಲಿ ಮುಂಜಾನೆ ಮಾತ್ರವಲ್ಲದೆ, ಮಧ್ಯಾಹ್ನದಲ್ಲಿಯೇ ಮಡಿಕೇರಿಗೆ ಮುತ್ತಿಕ್ಕುವ ಮಂಜು ಮಳೆಗೆ ರಾಜಾಸೀಟು ಬಗೆಬಗೆಯ ಚಿತ್ರ ಬರೆಯುವ ಕ್ಯಾನ್ವಾಸ್ ನಂತೆ ಗೋಚರಿಸುತ್ತದೆ. ಮಂಜಿನ ರಾಶಿ ಗುಡ್ಡದಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಹಸಿರ ಮರಗಳ ಮೇಲೆಲ್ಲಾ ಬೆಳ್ಳಿಯಂತೆ ಸುರಿದು ಕಂದಕಗಳನ್ನೆಲ್ಲಾ ತುಂಬಿ ಮಂಜಿನ ಸಾಗರ ಸೃಷ್ಟಿಸಿ ನೋಡುಗರನ್ನು ತಬ್ಬಿಬ್ಬುಗೊಳಿಸುತ್ತದೆ. ಒಮ್ಮೆಲೆ ದೂರದಿಂದ ಅಟ್ಟಿಸಿಕೊಂಡು ಬರುವ ಮಳೆಯ ದೃಶ್ಯವೂ ರೋಚಕವಾಗಿರುತ್ತದೆ.

ಇದರ ನಡುವೆ ಆ ಗುಡ್ಡ ಈ ಗುಡ್ಡ ಮಧ್ಯದ ಕಣಿವೆಗೆ ಸೇತುವೆ ಕಟ್ಟಿ ಒಂದೆಡೆಯಿಂದ ಮತ್ತೊಂದೆಡೆಗೆ ಲಾಗ ಹೊಡೆಯುವ ಮಂಜಿನ ಮಂಗನಾಟವೂ ಅಚ್ಚರಿ ಮೂಡಿಸುತ್ತದೆ. ಕಣಿವೆಗಳ ನಡುವಿನ ಹಾವು ಸರಿದಂತಿರುವ ರಸ್ತೆಯಲ್ಲಿ ಸಾಗಿಬರುವ ವಾಹನಗಳ ಮಂದ ದೀಪಗಳ ನೋಟವು ಹೊಸ ಅನುಭವ ನೀಡುತ್ತದೆ. ಇವತ್ತು ಸುಂದರ ಉದ್ಯಾನವನವಾಗಿ ಕಂಗೊಳಿಸುವ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟೀಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟೀಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.
ಆಕರ್ಷಣೀಯ ಕಮಾನಿನ ಮಂಟಪ
ಇನ್ನು ಈ ಉದ್ಯಾನಕ್ಕೆ ರಾಜಾಸೀಟ್ ಎಂಬ ಹೆಸರು ಹೇಗೆ ಬಂತೆಂಬುವುದರ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿದರೆ ಒಂದಷ್ಟು ಮಾಹಿತಿ ದೊರೆಯುತ್ತದೆ. ಹಿಂದೆ ಚಿಕ್ಕವೀರರಾಜನ ಕಾಲದಲ್ಲಿ ರಾಜ ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದರಂತೆ.

ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು. ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದೆ.
ತೋಟಗಾರಿಕಾ ಇಲಾಖೆಯ ಅಧೀನದಲ್ಲಿರುವ ರಾಜಾಸೀಟ್ನಲ್ಲಿ ಕಾರಂಜಿ, ಕೃತಕ ಜಲಪಾತಗಳನ್ನು ಕೂಡ ನಿರ್ಮಿಸಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ರಾಜಾಸೀಟಿನ ಬಳಿಯಲ್ಲಿಯೇ ಪುಟಾಣಿ ರೈಲು ಕೂಡ ಇದೆ. ರೈಲು ಸಂಪರ್ಕವನ್ನೇ ಕಾಣದ ಕೊಡಗಿಗೆ ಇದೇ ಏಕೈಕ ರೈಲು. ಈ ರೈಲನ್ನು ನೋಡಿ ಇಲ್ಲಿನ ಮಕ್ಕಳು ರೈಲಿನ ಕಲ್ಪನೆ ಮಾಡಿಕೊಳ್ಳುತ್ತಾರೆ. ಕಾವೇರಿ ಪಟ್ಟಣದಿಂದ ಹೊರಡುವ ರೈಲು ಬ್ರಹ್ಮಗಿರಿ ಕಣಿವೆಗಾಗಿ ಸಾಗುತ್ತದೆ. ಈ ರೈಲು ಕೊಡಗಿಗೆ ಬಂದು ಮೂರ್ನಾಲ್ಕು ದಶಕಗಳು ಕಳೆದಿವೆ.

ಮನಸ್ಸಿಗೆ ನೆಮ್ಮದಿ ನೀಡುವ ತಾಣ
ಮೊದಲಿಗೆ ಗಾಲ್ಫ್ ಗ್ರೌಂಡ್ ಬಳಿ ಸ್ಥಾಪನೆ ಮಾಡಲಾಗಿತ್ತಾದರೂ ಮಡಿಕೇರಿ ಪಟ್ಟಣದಿಂದ ಹೊರವಲಯದಲ್ಲಿದ್ದುದರಿಂದ ಅಲ್ಲಿಗೆ ಜನರು ತೆರಳದ ಕಾರಣ ರಾಜಾಸೀಟ್ ಬಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಇಲ್ಲಿಯ ತನಕ ಇದು ರಾಜಾಸೀಟ್ನ ಪ್ರಮುಖ ಆಕರ್ಷಣೆಯಾಗಿದೆ. ಇದರ ಉಸ್ತುವಾರಿಯನ್ನು ನಗರಸಭೆಯೇ ನೋಡಿಕೊಳ್ಳುತ್ತಿದೆ. ರಾಜಾಸೀಟ್ ಉದ್ಯಾನದ ಒಂದು ಭಾಗದಲ್ಲಿ ಶಕ್ತಿದೇವತೆ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮನ ದೇಗುಲವಿದೆ. ದೇವಾಲಯವನ್ನು ದಾಟಿ ಮುನ್ನಡೆದರೆ ಆಕಾಶವಾಣಿ ಕೇಂದ್ರ, ನೆಹರು ಮಂಟಪವಿದೆ.
ನಿಸರ್ಗ ರಮಣೀಯತೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡು ಪ್ರವಾಸಿಗರನ್ನು ಸೆಳೆಯುತ್ತಿರುವ ರಾಜಾಸೀಟ್ ದೂರದಿಂದ ಬರುವ ಅದರಲ್ಲೂ ಪೇಟೆ ಪಟ್ಟಣಗಳ ಜಂಜಾಟದಲ್ಲಿ, ಕೆಲಸ ಕಾರ್ಯಗಳ ಒತ್ತಡದಲ್ಲಿ ಕಳೆದು ಹೋದವರಿಗೆ, ಸದಾ ತಮ್ಮದೇ ಬದುಕು ಕಟ್ಟಿಕೊಂಡು ಶಬ್ದ ಮಾಲಿನ್ಯದಲ್ಲಿ ಬದುಕುವವರಿಗೆ ಉಸಿರಾಡಲು ಒಂದೊಳ್ಳೆಯ ಗಾಳಿ, ಸದ್ದು ಗದ್ದಲವಿಲ್ಲದ ಪ್ರಶಾಂತತೆ, ಕಣ್ಣನ್ನು ತಂಪಾಗಿಸುವ ಹಸಿರು ನೆಮ್ಮದಿ ನೀಡುವುದಲ್ಲದೆ, ಜಿಫ್ಲೈನ್ ಸಾಹಸ ಕ್ರೀಡೆಗೂ ಇಲ್ಲಿ ಅವಕಾಶವಿರುವುದು ವಿಶೇಷವಾಗಿದೆ.












Click it and Unblock the Notifications