ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೂ ಈ 8 ರೈಲುಗಳ ಸೇವೆ ವಿಸ್ತರಣೆ
ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಶುಭಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮೈಸೂರು ಮತ್ತು ಬೆಂಗಳೂರು ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಪ್ರಮುಖ ರೈಲುಗಳಲ್ಲಿ ಒಟ್ಟು 8 ರೈಲುಗಳು ಇನ್ಮುಂದೆ ಮೈಸೂರಿನ ಹೊರ ವಲಯದಲ್ಲಿನ ಅಶೋಕಪುರಂ ರೈಲ್ವೆ ನಿಲ್ದಾಣಗಳಿಗೂ ವಿಸ್ತರಣೆ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಮೈಸೂರಿನಿಂದ ನಂಜನಗೂಡು, ಚಾಮರಾಜನಗರಕ್ಕೆ ಹೋಗುವ ಮಾರ್ಗದಲ್ಲಿರುವ ಅಶೋಕಪುರಂ ರೈಲ್ವೆ ನಿಲ್ದಾಣ ತುಂಬಾ ಹಳೆಯದ್ದಾಗಿದೆ. ಆದರೂ ಅದನ್ನು ಈಗ ಅಭಿವೃದ್ದಿಪಡಿಸಲಾಗಿದೆ. ಅಲ್ಲಿ ಮತ್ತೊಂದು ದ್ವಾರವನ್ನು ತೆರೆಯಲಾಗಿದ್ದು, ಟಿಕೆಟ್ ಕೌಂಟರ್ ಅನ್ನು ಸಹ ಪ್ರಾರಂಭಿಸಲಾಗಿದೆ. ಮೈಸೂರು ದಕ್ಷಿಣ ಭಾಗದ ಜನ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಹೋಗುವ ಬದಲಿಗೆ ಅಶೋಕಪುರಂನಿಂದಲೇ ಬೆಂಗಳೂರು ನಡುವೆ ಸಂಚರಿಸುವ 8 ರೈಲುಗಳನ್ನು ಇನ್ಮುಂದೆ ಪ್ರಯಾಣಿಕರು ಬಳಸಿಕೊಳ್ಳಬಹುದು. ಇದರಿಂದ ಮುಖ್ಯ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರ ಆದಂತಾಗಲಿದೆ.

ಅಷ್ಟೇ ಅಲ್ಲದೆ, ಅಶೋಕಪುರಂ ಮೈಸೂರು-ಬೆಂಗಳೂರು ಹಾಗೂ ಬೆಂಗಳೂರು-ಮೈಸೂರು ಅಶೋಕಪುರಂ ನಡುವೆ ಎರಡು ಮೆಮು ಜೋಡಿ ಮೆಮು ರೈಲುಗಳ ಸೇವೆಗೂ ಇದೇ ವೇಳೆ ಚಾಲನೆ ಸಿಕ್ಕಿದೆ. ಭಾನುವಾರದಿಂದ ಅಂದರೆ ಇಂದಿನಿಂದಲೇ ಮೆಮು ರೈಲುಗಳ ಸೇವೆ ಆರಂಭ ಆಗಿದೆ. 2025 ಫೆಬ್ರವರಿ 16ರಿಂದ, ಎರಡು ಜೋಡಿ ಮೆಮು ರೈಲು ಸೇವೆಗಳು (ರೈಲು ಸಂಖ್ಯೆ 06525/26 & 66551/52) ಮೈಸೂರಿನಿಂದ ಅಶೋಕಪುರಂ ರೈಲು ನಿಲ್ದಾಣಕ್ಕೆ ವಿಸ್ತರಿಸಲಾಗುವುದು ಎಂದು ತಿಳಿದುಬಂದಿದೆ.
ಇದರಿಂದ ಅಶೋಕಪುರಂ, ಮೈಸೂರು-ಬೆಂಗಳೂರಿನ ನಡುವಿನ ಸಂಪರ್ಕವನ್ನು ಹೆಚ್ಚಿಸಿದಂತಾಗಲಿದೆ. ಈ ಸೇವೆಗಳು ದೈನಂದಿನ ಪ್ರಯಾಣಿಕರು ಮತ್ತು ದೂರ ಪ್ರಯಾಣಿಸುವವರಿಗೆ ಆರಾಮದಾಯಕ ಹಾಗೂ ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಒದಗಿಸಲಿದೆ ಎಂದು ರೈಲ್ವೆ ಇಲಾಖೆ ಮೈಸೂರು ಕಚೇರಿ ತಿಳಿಸಿದೆ.
ಬೆಂಗಳೂರು-ಮೈಸೂರಿನವರೆಗೆ ಸಂಚರಿಸುವ ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್, ಮೈಸೂರು ಕೆಎಸ್‌ಆರ್ ಬೆಂಗಳೂರು ಸಿಟಿ ಮಾಲ್ಗುಡಿ ಎಕ್ಸೆಪ್ರೆಸ್, ಕಾಚಿಗುಡ ಮೈಸೂರು ಎಕ್ಸ್‌ಪ್ರೆಸ್, ಚನ್ನೈ ಸೆಂಟ್ರಲ್ ಮೈಸೂರು ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು, ಮೈಸೂರು ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳು ಅಶೋಕಪುರಂ ರೈಲ್ವೆ ನಿಲ್ದಾಣದವರೆಗೂ ವಿಸ್ತರಣೆ ಆಗಲಿವೆ.
ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ರೈಲು ಸೇವೆಗಳನ್ನು ಸುಧಾರಿಸಲು, ನೈಋತ್ಯ ರೈಲ್ವೆ ಮೈಸೂರು ವಿಭಾಗವು ಅಶೋಕಪುರಂ ರೈಲು ನಿಲ್ದಾಣದಲ್ಲಿ ನವೀಕರಿಸಿದ ಸೌಲಭ್ಯಗಳನ್ನು ಒದಗಿಸಿದೆ. ಎಲ್ಲಾ ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು, ನಿಲ್ದಾಣದ ದ್ವಿತೀಯ ಪ್ರವೇಶದ ಬಳಿ ಹೊಸ ಬುಕ್ಕಿಂಗ್ ಕಚೇರಿ ನಿರ್ಮಿಸಲಾಗಿದೆ.
ಈ ಕಚೇರಿಯು ಪ್ರಯಾಣಿಕರಿಗೆ ಅನುಕೂವ ಆಗುವಂತೆ ಟಿಕೆಟ್ ಸೌಲಭ್ಯಗಳನ್ನು ಒದಗಿಸಲಿದೆ. ಅಶೋಕಪುರಂ ರೈಲು ನಿಲ್ದಾಣದ ಹೊಸ ಸೌಲಭ್ಯಗಳು ಪ್ರಯಾಣಿಕರ ಸೇವೆಗಳನ್ನು ಸುಧಾರಿಸಿ, ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಶೋಕಪುರಂ ರೈಲು ನಿಲ್ದಾಣದ ದ್ವಿತೀಯ ಪ್ರವೇಶದ ಬಳಿ ಹೊಸ ಬುಕ್ಕಿಂಗ್ ಕಚೇರಿ ಉದ್ಘಾಟಿಸಿ, ಅಶೋಕಪುರಂ ಮತ್ತು ಬೆಂಗಳೂರು ನಡುವಿನ ವಿಶೇಷ ಮೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ಮಾತನಾಡಿದ ಅವರು, ಮೈಸೂರು ವಿಭಾಗದಲ್ಲಿ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸಲು ರೈಲ್ವೆ ಹಮ್ಮಿಕೊಂಡಿರುವ ಕಾರ್ಯಗಳನ್ನು ಶ್ಲಾಘಿಸಿದರು. ಅವರು ಈ ಭಾಗದ ಜನರ ಹಿತದೃಷ್ಟಿಯಿಂದ ಮತ್ತಷ್ಟು ಯೋಜನೆಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.












Click it and Unblock the Notifications