ಕೊಪ್ಪಳ; 18 ಕಿ. ಮೀ. ಹೊಸ ರೈಲು ಮಾರ್ಗ ನಿರ್ಮಾಣ
ಭಾರತೀಯ ರೈಲ್ವೆ ಕೊಪ್ಫಳ ಜಿಲ್ಲೆಯ ಕುಷ್ಟಗಿ ಮತ್ತು ಜಮ್ಲಾಪುರ ರಸ್ತೆ ನಡುವೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣ ಮಾಡುತ್ತಿದೆ.
ಕೊಪ್ಪಳ, ಫೆಬ್ರವರಿ 27; ಭಾರತೀಯ ರೈಲ್ವೆ ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ ಗೇಜ್ ರೈಲು ಮಾರ್ಗ ನಿರ್ಮಾಣ ಮಾಡಲಿದೆ. ಗದಗ ಮತ್ತು ವಾಡಿ ನಡುವಿನ 257 ಕಿ. ಮೀ. ರೈಲು ಮಾರ್ಗದ ಯೋಜನೆಯ ಭಾಗವಾಗಿ ಈ ಹೊಸ ಮಾರ್ಗ ನಿರ್ಮಾಣವಾಗುತ್ತಿದೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಗದಗ-ವಾಡಿ ರೈಲು ಮಾರ್ಗಕ್ಕೆ 350 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ.
ಕೊಪ್ಫಳ ಜಿಲ್ಲೆಯ ಕುಷ್ಟಗಿ ಮತ್ತು ಜುಮ್ಲಾಪುರ ರಸ್ತೆ ನಡುವೆ 18.90 ಕಿ. ಮೀ.ಗಳ ಹೊಸ ಬ್ರಾಡ್ ಗೇಜ್ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯ ಅಂದಾಜು ವೆಚ್ಚ 262.74 ಕೋಟಿಯಾಗಿದೆ. 24 ತಿಂಗಳಿನಲ್ಲಿ ಈ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಇದೆ. ಸಿಗ್ನಲಿಂಗ್, ವಿದ್ಯುದೀಕರಣಗಳು ಸಹ ಇದರಲ್ಲಿ ಒಳಗೊಂಡಿದೆ.

ಈ ಹೊಸ ರೈಲು ಮಾರ್ಗದಲ್ಲಿ 6 ಮೇಜರ್ ಬ್ರಿಡ್ಜ್, 25 ಚಿಕ್ಕ ಸೇತುವೆ, 2 ಮೇಲ್ಸೇತುವೆ, 14 ಅಂಡರ್‌ಪಾಸ್, 2 ರೈಲ್ವೆ ಲೆವಲ್ ಕ್ರಾಸಿಂಗ್‌ಗಳು ಬರಲಿವೆ. ಯೋಜನೆ ಕುಷ್ಟಗಿ ರೈಲು ನಿಲ್ದಾಣದಲ್ಲಿ ಆರಂಭವಾಗಲಿದೆ. ಜುಮ್ಲಾಪುರ ರಸ್ತೆಯಲ್ಲಿ ಕೊನೆಯಾಗಲಿದೆ.
18.90 ಕಿ. ಮೀ.ಗಳ ಹೊಸ ಮಾರ್ಗ ನಿರ್ಮಾಣದಿಂದಾಗಿ ಹುಬ್ಬಳ್ಳಿ ಮತ್ತು ಕಲಬುರಗಿ, ಬೀದರ್, ಹೈದರಾಬಾದ್ ನಡುವಿನ ಸಂಚಾರಕ್ಕೆ ಅನುಕೂಲವಾಗಲಿದೆ. ಪ್ರಯಾಣದ ಅವಧಿಯೂ ಉಳಿತಾಯವಾಗಲಿದೆ. 24 ತಿಂಗಳಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂಬ ಗುರಿಯನ್ನು ಹೊಂದಲಾಗಿದೆ.
ಗದಗ-ವಾಡಿ ರೈಲು ಮಾರ್ಗ; 2841.84 ಕೋಟಿ ರೂ. ಮೊತ್ತದ ಗದಗ ಮತ್ತು ವಾಡಿ ನಡುವಿನ 257.26 ಕಿ. ಮೀ. ಮಾರ್ಗದ ಭಾಗವಾಗಿಯೇ ಕುಷ್ಟಗಿ ಮತ್ತು ಜುಮ್ಲಾಪುರ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಇದೇ ಮಾರ್ಗದ ಭಾಗವಾಗಿ ತಳಕಲ್-ಕುಷ್ಟಗಿ ನಡುವೆ 57 ಕಿ. ಮೀ. ಮಾರ್ಗ ನಿರ್ಮಾಣವಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆಯ ವೆಚ್ಚವನ್ನು ಶೇ 50-50ರಂತೆ ಹಂಚಿಕೊಂಡಿದೆ.
ಗದಗ-ವಾಡಿ ರೈಲು ಮಾರ್ಗ ಮುಂಬೈ ಕರ್ನಾಟಕ-ಹೈದರಾಬಾದ್ ಕರ್ನಾಟಕವನ್ನು ಸಂಪರ್ಕಿಸುವ ಬಹುನಿರೀಕ್ಷಿತ ರೈಲು ಮಾರ್ಗವಾಗಿದೆ. ಈ ರೈಲು ಯೋಜನೆ ಜಾರಿಯಾಗಬೇಕು ಎಂಬುದು ಹಲವು ವರ್ಷಗಳ ಹೋರಾಟ, ಇದಕ್ಕಾಗಿ ಹಲವು ಸಂಘಟನೆಗಳು ಸಹ ಬೆಂಬಲ ನೀಡಿದ್ದವು. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ಜಾರಿಗೆ ಬರುವುದು ವಿಳಂಬವಾಗಿದೆ.












Click it and Unblock the Notifications