Pride of Karnataka: ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು: ರಜೆ ಕಳೆಯಲು ಇಲ್ಲಿದೆ ಬೆಸ್ಟ್ ಪ್ಲಾನ್
ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ರಜೆ ದಿನಗಳನ್ನು ಎಂಜಾಯ್ ಮಾಡಲು ಇಚ್ಛಿಸುವವರಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಹೊಸ ಮಾರ್ಗಗಳಲ್ಲಿ ಹಾಗೂ ಆಕರ್ಷಕ ಆಫರ್‌ಗಳೊಂದಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಡಿಸೆಂಬರ್ 14ರಿಂದ ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಕರ್ನಾಟಕ ಮತ್ತು ದಕ್ಷಿಣ ಭಾರತದ ಮೂಲಕ ಎರಡು ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ಸೇವೆ ಪ್ರಾರಂಭಿಸಲಿದೆ. ಈ ಮೂಲಕ ಪ್ರಯಾಣಿಕರು ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ರಾಜಾ ದಿನಗಳನ್ನು ಕಳೆಯಲು ನೀವು ಪ್ಲಾನ್ ಮಾಡಿಕೊಳ್ಳುತ್ತಿದ್ದರೆ ತಪ್ಪದೆ ಈ ಸುದ್ದಿ ಓದಿ.
ಗೋಲ್ಡನ್ ಚಾರಿಯಟ್ ಐಷಾರಾಮಿ (Golden Chariot luxury tourist train) ಪ್ರವಾಸಿ ರೈಲು ಸೇವೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಇಲಾಖೆಯು ಮಹತ್ವದ ಅಪ್ಡೇಟ್ಸ್ ಕೊಟ್ಟಿದೆ. ಈ ರೈಲು ಕರ್ನಾಟಕದ ಶ್ರೀಮಂತ ಹಾಗೂ ವೈಭವಯುತ ಪರಂಪರೆಯನ್ನು ಪರಿಚಯಿಸುತ್ತದೆ. ಇದೀಗ ಡಿಸೆಂಬರ್ 14ರಿಂದ ಈ ರೈಲು ಇನ್ನಷ್ಟು ಹೊಸ ಸೇವೆಗಳೊಂದಿಗೆ ತನ್ನ ಹೊಸ ಪಯಣವನ್ನು ಪ್ರಾರಂಭಿಸುತ್ತಿದೆ. ಸಾರ್ವಜನಿಕರಿಗೆ ಹೊಸ ಸೇವೆ ನೀಡಲು ಸಿದ್ಧವಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಐಆರ್‌ಸಿಟಿಸಿ ಹೇಳಿದೆ.

2024 -25ನೇ ಸಾಲಿನ ಮೊದಲ ರೈಲು ಸೇವೆಯು ಕರ್ನಾಟಕದಲ್ಲಿ ಡಿಸೆಂಬರ್ 14ರಿಂದ ಬೆಂಗಳೂರಿಂದನಿಂದ ಪ್ರಾರಂಭವಾಗಲಿದೆ. ಬೆಂಗಳೂರು ಮಾರ್ಗವಾಗಿ ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ, ಗೋವಾಗೆ ತಲುಪಿ, ಪುನಃ ಬೆಂಗಳೂರಿಗೆ ಬರಲಿದೆ. ಈ ರೈಲು ಸೇವೆಯು 5 ರಾತ್ರಿ ಹಾಗೂ 6 ಹಗಲನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಜ್ಯುವೆಲ್ಸ್ ಆಫ್ ಸೌತ್ ಟ್ರೈನ್: ಮತ್ತೊಂದು ಪ್ರಮುಖ ಟ್ರೈನ್ ಜ್ಯುವೆಲ್ಸ್ ಆಫ್ ಸೌತ್ ಟ್ರೈನ್ ಡಿಸೆಂಬರ್ 21ರಿಂದ ತನ್ನ ಸೇವೆಯನ್ನು ಪ್ರಾರಂಭಿಸಲಿದೆ. ಜ್ಯುವೆಲ್ಸ್ ಆಫ್ ಸೌತ್ ರೈಲು ಬೆಂಗಳೂರಿನಿಂದ ಮೈಸೂರು, ಕಾಂಚೀಪುರಂ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡ್, ಕೊಚ್ಚಿ ಹಾಗೂ ಚೇರ್ತಲಗಳನ್ನು ಕವರ್ ಮಾಡಿಕೊಂಡು ಬೆಂಗಳೂರಿಗೆ ಬರಲಿದೆ. ಈ ಪ್ರವಾಸವು 5 ರಾತ್ರಿ ಮತ್ತು 6 ಹಗಲುಗಳನ್ನು ಒಳಗೊಂಡಿರಲಿದೆ.

ಐಷಾರಾಮಿ ಸೌಲಭ್ಯ: ಈ ಟ್ರೈನಿನಲ್ಲಿ ಹಲವು ವಿಶೇಷ ಸೌಲಭ್ಯಗಳು ಇರಲಿವೆ. ಐಷಾರಾಮಿ ವಿನ್ಯಾಸವನ್ನು ಹಾಗೂ ಆಸನ ವ್ಯವಸ್ಥೆಯನ್ನು ಈ ರೈಲು ಒಳಗೊಂಡಿರಲಿದೆ. ನವೀಕರಿಸಿದ ಐಷಾರಾಮಿ ಕ್ಯಾಬಿನ್‌ಗಳು ಹಾಗೂ ಸಾಧನಗಳು ಇರಲಿವೆ. ವಿಶೇಷ ವಿನ್ಯಾಸದ ಬಾತ್ ರೂಮ್‌ಗಳು,ವೈಫೈ ಹಾಗೂ ಸ್ಮಾರ್ಟ್ ಟಿವಿ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿ ಇರಲಿದೆ ಎಂದು ಹೇಳಲಾಗಿದೆ. ಈ ರೈಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಫೈರ್ ಅಲಾರ್ಮ್ ಸಿಸ್ಟಂ ಇರಲಿದ್ದು, ಇದು ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ . ಆರೋಗ್ಯ ಸ್ಪಾ ಸೇರಿದಂತೆ ಹಲವು ಸೌಲಭ್ಯಗಳನ್ನು ಇದು ಒಳಗೊಂಡಿರಲಿದೆ ಎನ್ನಲಾಗಿದೆ.
ವರ್ಷಾಂತ್ಯವಾಗಿರುವುದರಿಂದ ಹೆಚ್ಚು ಜನ ರಜೆಗಳ ಮೇಲೆ ಪ್ರವಾಸದ ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಿದ್ದು, ಈ ಎರಡು ರೈಲುಗಳ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಆರು ದಿನಗಳಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡುವ ಸುವರ್ಣ ಅವಕಾಶ ಇದಾಗಿದೆ.












Click it and Unblock the Notifications