• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಗಲ ಮಡಿಕೆಗೆ ನಡೆದುಕೊಂಡರೆ ನಾಗ ದೋಷ ಪರಿಹಾರ!

By ಪ್ರಣವ್ ಸಿಂಹ
|

ಅಂತ್ಯ ಸುಬ್ರಹ್ಮಣ್ಯ ಎಂದೇ ಜನಪ್ರಿಯವಾಗಿರುವ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ಚರ್ಮವ್ಯಾದಿ, ಕಣ್ಣು, ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಸುಬ್ರಹ್ಮಣ್ಯನ ಅನುಗ್ರಹವೇ ಪರಿಹಾರ ಎಂಬ ನಂಬಿಕೆ ಅವರದು.

ಉತ್ತರ ಪಿನಾಕಿನಿ ನದಿ ತಟದಲ್ಲಿರುವ ಈ ದೇಗುಲಕ್ಕೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಇತರೆ ರಾಜ್ಯಗಳ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ನಾಗದೋಷ ನಿವಾರಣೆಗಾಗಿ ಇಲ್ಲಿಗೆ ಬರುವವರೇ ಹೆಚ್ಚು. ಈ ದೇಗುಲಕ್ಕೆ 5 ನೂರು ವರ್ಷಗಳ ಇತಿಹಾಸವಿದೆ ಎಂದು ಹಿರಿಯರು ಹೇಳುತ್ತಾರೆ.[ನವರಾತ್ರಿಗೆ ಸಿದ್ಧಗೊಂಡಿದೆ ಹೆಬ್ಬೂರು ಶ್ರೀಚಕ್ರ ಕಾಮಾಕ್ಷಿ ದೇಗುಲ]

ಶತಮಾನಗಳ ಹಿಂದೆ ನೊಳಂಬ ಪಲ್ಲವರ ಕಾಲದಲ್ಲಿ ನಾಗಲಮಡಿಕೆ ಗ್ರಾಮ ಪುಟ್ಟ ಅಗ್ರಹಾರವಾಗಿತ್ತು. ಅನ್ನಂಭಟ್ಟ ಎಂಬ ಭಕ್ತ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಅನುಯಾಯಿಯಾಗಿದ್ದರು. ಪ್ರತಿ ವರ್ಷ ಕುಕ್ಕೆಯಲ್ಲಿ ನಡೆಯುವ ರಥೋತ್ಸವಕ್ಕೆ ಅನ್ನಂಭಟ್ಟರು ಅನ್ನಾಹಾರ ಸೇವಿಸದೆ ಕಾಲ್ನಡಿಗೆ ಮೂಲಕ ಹೋಗಿ ಪೂಜೆ ಸಲ್ಲಿಸುತ್ತಿದ್ದರು.

ವಯಸ್ಸು ಹೆಚ್ಚಿದಂತೆ ಭಟ್ಟರ ಶಕ್ತಿ ಕುಂದತೊಡಗಿತು. ರಥೋತ್ಸವದ ವೇಳೆಗೆ ಕುಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಅನ್ನಂಭಟ್ಟರು ರಥೋತ್ಸವಕ್ಕೆ ಬರುವುದಿಲ್ಲ ಎಂದು ನಿರ್ಧರಿಸಿ, ಅಲ್ಲಿನ ಭಕ್ತರು ರಥವನ್ನು ಎಳೆಯಲು ಮುಂದಾದರು. ಆದರೆ ಒಂದಿಂಚೂ ಕದಲಿಸಲು ಸಾಧ್ಯವಾಗಿಲ್ಲ.[ವಾರಾಂತ್ಯ ವಿಶೇಷ: ದೇವರಾಯನದುರ್ಗದಲ್ಲಿ ಅಪರೂಪದ ಶಿವ ದೇಗುಲ]

ಸುಬ್ರಹ್ಮಣ್ಯ ಸ್ವಾಮಿ ಭಕ್ತನೋರ್ವನ ಮೈಮೇಲೆ ಆವಾಹನೆಯಾಗಿ, ನನ್ನ ಭಕ್ತ ದೂರದಲ್ಲಿ ಬರುತ್ತಿದ್ದಾನೆ. ಆತ ಬರುವವರೆಗೆ ಕಾಯಬೇಕು ಎಂದು ಸೂಚಿಸಿದ್ದಾರೆ. ಭಟ್ಟರು ಬಂದು ಪೂಜೆ ನೆರವೇರಿಸಿದ ನಂತರ ರಥ ಕದಲಿದೆ. ಆ ನಂತರ ಅನ್ನಂಭಟ್ಟರಿಗೆ ವಯಸ್ಸಾದ ಕಾರಣ ನಾಗಲಮಡಿಕೆಯಲ್ಲಿಯೇ ಪುಜಾ ಕೈಂಕರ್ಯ ಮುಂದೆವರೆಸಿಕೊಂಡು ಹೋಗುವಂತೆ ಆವಾಹನೆಗೊಂಡ ಭಕ್ತನ ಮೂಲಕ ಸೂಚಿಸಲಾಗಿದೆ. ಜೊತೆಗೆ ಕುಕ್ಕೆ ದೇಗುಲದಲ್ಲಿದ್ದ ಒಂದು ಪಂಚ ಲೋಹದ ವಿಗ್ರಹವನ್ನು ಅನ್ನಂಭಟ್ಟರಿಗೆ ಕೊಡಲಾಗಿದೆ. ಇಂದಿಗೂ ಪಂಚ ಲೋಹದ ವಿಗ್ರಹವನ್ನು ಉತ್ಸವ ಮೂರ್ತಿಯಾಗಿ ನಾಗಲಮಡಿಕೆ ದೇಗುಲದಲ್ಲಿ ಆರಾಧಿಸಲಾಗುತ್ತಿದೆ.

ಸ್ವಪ್ನದಲ್ಲಿ ಸುಬ್ರಹ್ಮಣ್ಯ

ಸ್ವಪ್ನದಲ್ಲಿ ಸುಬ್ರಹ್ಮಣ್ಯ

ಕೆಲ ದಿನಗಳ ನಂತರ ಅನ್ನಂಭಟ್ಟರ ಕನಸಿನಲ್ಲಿ ಸುಬ್ರಹ್ಮಣ್ಯಸ್ವಾಮಿ ಕಾಣಿಸಿಕೊಂಡು, ಉತ್ತರ ಪಿನಾಕಿನಿ ನದಿಯಲ್ಲಿ ತಾನಿರುವುದಾಗಿ, ತನ್ನನ್ನು ಹುಡುಕಿ ಪ್ರತಿಷ್ಠಾಪನೆ ನಡೆಸಬೇಕು ಎಂದು ತಿಳಿಸಿದ್ದಾರೆ. ಸ್ವಪ್ನ ವೃತ್ತಾಂತವನ್ನು ಗ್ರಾಮಸ್ಥರಿಗೆ ತಿಳಿಸಿದ ಭಟ್ಟರು ಎತ್ತಿನ ಮಡಿಕೆಗಳ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ನದಿಯ ನಿಗದಿತ ಸ್ಥಳದಲ್ಲಿ ಎತ್ತುಗಳು ಮುಂದೆ ಹೋಗಲು ಸಾಧ್ಯವಾಗದೆ ನಿಂತಿವೆ. ಮಡಿಕೆ ಇದ್ದ ಸ್ಥಳವನ್ನು ಅಗೆದು ನೋಡಿದಾಗ ಏಳು ಹೆಡೆ ಸರ್ಪ, ಸುತ್ತಿಕೊಂಡಿರುವ ನಾಗರ ವಿಗ್ರಹ ಸಿಕ್ಕಿದೆ.

ನದಿ ತಟದಲ್ಲಿ ವಿಗ್ರಹ

ನದಿ ತಟದಲ್ಲಿ ವಿಗ್ರಹ

ಸ್ವಪ್ನದಲ್ಲಿ ದೇವರು ನಿರ್ದೇಶನ ನೀಡಿದಂತೆ ನದಿ ತಟದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಮಡಿಕೆಗೆ ನಾಗರ ವಿಗ್ರಹ ಸಿಕ್ಕಿದ್ದರಿಂದ ನಾಗಲಮಡಿಕೆ ಎಂಬ ಹೆಸರಿನಿಂದ ಗ್ರಾಮವನ್ನು ಕರೆಯಲಾಗುತ್ತದೆ. ಆಂಧ್ರದ ರೊದ್ದಂ ವ್ಯಾಪಾರಿ ಬಾಲ ಸುಬ್ಬಯ್ಯ ಎಂಬುವರು ದೈವ ಪ್ರೇರಣೆಯಂತೆ ದೇಗುಲ ನಿರ್ಮಿಸಿದ್ದಾರೆ. ಅವರ ವಂಶಸ್ಥರು ಇಂದಿಗೂ ಜಾತ್ರೆಯ ದಿನಗಳಂದು ಪೂಜೆ, ಅನ್ನದಾಸೋಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಸಮಸ್ಯೆಗೆ ಪರಿಹಾರ

ಸಮಸ್ಯೆಗೆ ಪರಿಹಾರ

ಕುಕ್ಕೆಯನ್ನು ಆದಿ ಸುಬ್ರಹ್ಮಣ್ಯ ಎಂತಲೂ, ಘಾಟಿಯನ್ನು ಮಧ್ಯ ಸುಬ್ರಹ್ಮಣ್ಯ ಎಂದು, ನಾಗಲಮಡಿಕೆಯನ್ನು ಅಂತ್ಯ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಾಗಲಮಡಿಕೆ ದೇಗುಲದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಹೋಮ, ಹವನ ಇತ್ಯಾದಿ ವಿಶೇಷ ಪೂಜೆ ನಡೆಸಲಾಗುತ್ತದೆ. ಕಿವಿಯಲ್ಲಿ ಕೀವು ಸೋರುವುದು, ಕಣ್ಣಿನ ಸಮಸ್ಯೆ, ಉಸಿರಾಟ, ಚರ್ಮ ಸಮಸ್ಯೆ, ವಿವಾಹ, ಸಂತಾನ ಭಾಗ್ಯ, ಕೋರ್ಟ್, ಕಚೇರಿ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಭಕ್ತರು ದೇವಸ್ಥಾನಕ್ಕೆ ಬರುವುದು ಸಾಮಾನ್ಯ. ಇಲ್ಲಿಗೆ ಬಂದು ಸಮಸ್ಯೆ ಪರಿಹರಿಸಿಕೊಂಡಿರುವುದಾಗಿ ಭಕ್ತರು ತಿಳಿಸುತ್ತಾರೆ.

ತೀಟೆ ನಾಗಪ್ಪ

ತೀಟೆ ನಾಗಪ್ಪ

ನಾಗಲಮಡಿಕೆಯಿಂದ ಪೆಂಡ್ಲಿಜೀವಿಗೆ ಹೋಗುವ ಮಾರ್ಗದಲ್ಲಿ ತೀಟೆ ನಾಗಪ್ಪ ದೇಗುಲವಿದೆ. ಉದ್ಭವ ಮೂರ್ತಿ ತೀಟೆ ನಾಗಪ್ಪನಿಗೆ ಪೂಜೆ ಸಲ್ಲಿಸುವುದರಿಂದ ಚರ್ಮ ವ್ಯಾಧಿ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಭಕ್ತರು ವಿಗ್ರಹವನ್ನು ಮಾಡಿ, ಪೂಜೆ ಸಲ್ಲಿಸಲು ಇಲ್ಲಿ ಅವಕಾಶವಿದೆ.

ಬ್ರಹ್ಮ ರಥೋತ್ಸವ ವಿಶೇಷ

ಬ್ರಹ್ಮ ರಥೋತ್ಸವ ವಿಶೇಷ

ಪುಷ್ಯ ಮಾಸದ ಷಷ್ಠಿಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ದೂರದೂರುಗಳಿಂದ ಎತ್ತಿನ ಬಂಡಿಯಲ್ಲಿ ಬಂದು ನದಿ ತಟದಲ್ಲಿ ಅಡುಗೆ ತಯಾರಿಸಿ ಪೂಜೆ ನಂತರ ಒಂದು ಹೊತ್ತು ಬಿಡುವ ಪದ್ಧತಿ ಈ ಭಾಗದ ಜನರಲ್ಲಿದೆ. ಮಾರ್ಗಶಿರ, ಪುಷ್ಯ, ಮಾಘ ಮಾಸಗಳ ಷಷ್ಠಿಯಂದು ಆರಾಧನೆ, ವಿಶೇಷ ಪೂಜಾ ಮಹೋತ್ಸವ ನಡೆಸಲಾಗುತ್ತದೆ.

ಅನ್ನದ ರಾಶಿ ಮೇಲೆ ಪೂಜೆ

ಅನ್ನದ ರಾಶಿ ಮೇಲೆ ಪೂಜೆ

ಮೂರು ಮಾಸಗಳ ಷಷ್ಠಿಯಂದು ಅನ್ನದ ರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ನಂತರ ನಾಗರಹಾವು ಅನ್ನದ ರಾಶಿಯ ಮೇಲೆ ಹಾದು ಹೋದ ಗುರುತು ವೀಕ್ಷಿಸಲು ಭಕ್ತರು ಮುಗಿ ಬೀಳುತ್ತಾರೆ. ಜಿಲ್ಲೆಯಲ್ಲಿಯೇ ಪ್ರಮುಖ ದನಗಳ ಜಾತ್ರೆ ಎಂಬ ಅಗ್ಗಳಿಕೆ ನಾಗಲಮಡಿಕೆ ಜಾತ್ರೆಗಿದೆ.

ಮಾಹಿತಿಗೆ ಸಂಪರ್ಕಿಸಿ

ಮಾಹಿತಿಗೆ ಸಂಪರ್ಕಿಸಿ

ಮೂರು ಮಾಸಗಳನ್ನು ಹೊರತುಪಡಿಸಿ ಮಂಗಳವಾರ, ಭಾನುವಾರಗಳಂದು ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ದೇಗುಲ ಪ್ರದೇಶದಲ್ಲಿ ಆಗಾಗ ನಿಜ ಸರ್ಪ ದರ್ಶನ ಕೊಡುತ್ತಿರುತ್ತದೆ. ಒಂದಿಡೀ ದಿನ ಗರ್ಭಗುಡಿಯಲ್ಲಿ ದರ್ಶನ ನೀಡಿದ ಬಗ್ಗೆ ಇಲ್ಲಿ ಅರ್ಚಕರು ಮೆಲುಕು ಹಾಕುತ್ತಾರೆ. ಮಾಹಿತಿಗಾಗಿ ಪ್ರಧಾನ ಅರ್ಚಕ ಬದ್ರಿನಾಥ್-9448747746 ಸಂಪಕಿಸಬಹುದು.

English summary
Nagalamadike Subrahmanya temple famous as antya subrahmanya. Temple situated in Pavagada taluk, Tumakuru District. People visit temple believing that, all problems like delay in marriage, skin problems other problems solve here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more