Pallakki Bus; NWKRTC ಪಲ್ಲಕಿ ಬಸ್ ಮಾರ್ಗಗಳು, ದರ
ಬೆಂಗಳೂರು, ಮೇ 07: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಮಾರ್ಗಗಳಲ್ಲಿ 'ಪಲ್ಲಕ್ಕಿ' ಮಾದರಿ ಸ್ಲೀಪರ್ ಬಸ್‌ಗಳನ್ನು ಓಡಿಸುತ್ತಿದೆ. ಆನ್‌ಲೈನ್ ಮೂಲಕವೂ ಈ ಬಸ್‌ಗಳಲ್ಲಿ ಸಂಚಾರ ನಡೆಸಲು ಟಿಕೆಟ್ ಬುಕ್ ಮಾಡಬಹುದಾಗಿದೆ.
ಕೆಎಸ್ಆರ್‌ಟಿಸಿ ಮೊದಲು 'ಪಲ್ಲಕ್ಕಿ' ಹೆಸರಿನ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿತ್ತು. ಬಳಿಕ ಬಸ್‌ಗಳನ್ನು ಖರೀದಿ ಮಾಡಿ ವಿವಿಧ ಸಾರಿಗೆ ನಿಗಮಕ್ಕೆ ಹಂಚಿಕೆ ಮಾಡಲಾಗಿದೆ. ಮಾರ್ಗದ ಆಧಾರದ ಮೇಲೆ ನಿಗಮಗಳು ಬಸ್‌ಗಳನ್ನು ಓಡಿಸುತ್ತಿವೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗ 'ಪಲ್ಲಕ್ಕಿ' ಮಾದರಿ ಬಸ್‌ಗಳು ಸಂಚಾರ ನಡೆಸುವ ಮಾರ್ಗಗಳ ವಿವರಗಳನ್ನು ನೀಡಿದೆ. ದರ, ಸಮಯವನ್ನು ಸಹ ನೀಡಿದ್ದು, ಪ್ರಯಾಣಿಕರು ನಾನ್ ಎಸಿ ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
NWKRTC ಟ್ವೀಟ್ ಮಾಹಿತಿ ಪ್ರಕಾರ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆ ಹುಬ್ಬಳ್ಳಿ-ಶಿರಡಿ, ಬೆಳಗಾವಿ-ಲಾತೂರ, ರಾಮದುರ್ಗ-ಬೆಂಗಳೂರು, ಮುರುಡೇಶ್ವರ- ಬೆಂಗಳೂರು ಮತ್ತು ಬೀಳಗಿ-ಬೆಂಗಳೂರು ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಜನರು ಆನ್‌ಲೈನ್ ಟಿಕೆಟ್‌ಗಳಿಗಾಗಿ http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಮಾರ್ಗಗಳು, ದರದ ಮಾಹಿತಿ: ಮಾಹಿತಿ ಪ್ರಕಾರ ಹುಬ್ಬಳ್ಳಿ-ಶಿರಡಿ ಮಾರ್ಗದ ಪ್ರಯಾಣ ದರ 1,300 ರೂ.ಗಳು. ಈ ಬಸ್ ಹುಬ್ಬಳ್ಳಿಯಿಂದ ಹೊರಟು 20:08, ಶಿರಡಿಯನ್ನು 08;45ಕ್ಕೆ ತಲುಪುತ್ತದೆ. ಶಿರಡಿಯಿಂದ 20:00ಕ್ಕೆ ಹೊರಟು, ಹುಬ್ಬಳ್ಳಿಯನ್ನು 08:45ಕ್ಕೆ ತಲುಪಲಿದೆ. ಈ ಬಸ್ ಧಾರವಾಡ, ಬೆಳಗಾವಿ, ಪುಣೆ, ಅಹಮದ್ ನಗರ ಮೂಲಕ ಸಾಗುತ್ತದೆ.
ಬೆಳಗಾವಿ-ಲಾತೂರ ನಡುವಿನ 'ಪಲ್ಲಕ್ಕಿ' ಬಸ್ ಲೋಕಾಪುರ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳುಜಾಪುರ ಮೂಲಕ ಸಾಗುತ್ತದೆ. ಈ ಮಾರ್ಗದ ಪ್ರಯಾಣ ದರ 924 ರೂ.ಗಳು. ಈ ಬಸ್ ಬೆಳಗಾವಿಯಿಂದ 20:00ಕ್ಕೆ ಹೊರಟು, ಲಾತೂರ 06:20ಕ್ಕೆ ತಲುಪಲಿದೆ. ಲಾತೂರದಿಂದ 19:30ಕ್ಕೆ ಹೊರಟು, ಬೆಳಗಾವಿಗೆ 50.30ಕ್ಕೆ ತಲುಪುತ್ತದೆ.
ರಾಮದುರ್ಗ-ಬೆಂಗಳೂರು ನಡುವಿನ 'ಪಲ್ಲಕ್ಕಿ' ಬಸ್ ದರ 1070 ರೂ.ಗಳು. ಈ ಬಸ್ ನರಗುಂದ, ನವಲಗುಂದ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮಾರ್ಗವಾಗಿ ಸಂಚಾರ ನಡೆಸುತ್ತದೆ. ರಾಮದುರ್ಗದಿಂದ ಬಸ್ 20:03ಕ್ಕೆ ಹೊರಟು, ಬೆಂಗಳೂರು ನಗರವನ್ನು 07:10ಕ್ಕೆ ತಲುಪುತ್ತದೆ. ಬೆಂಗಳೂರು ನಗರದಿಂದ 21:15ಕ್ಕೆ ಹೊರಟು, ರಾಮದುರ್ಗವನ್ನು 07:30ಕ್ಕೆ ತಲುಪಲಿದೆ.
ಮುರುಡೇಶ್ವರ-ಬೆಂಗಳೂರು ನಡುವಿನ 'ಪಲ್ಲಕ್ಕಿ' ಬಸ್ ಪ್ರಯಾಣ ದರ 1018 ರೂ.ಗಳು. ಈ ಬಸ್ ಭಟ್ಕಳ, ಬೈಂದೂರು, ಕೊಲ್ಲೂರು, ನಗರ, ಹೊಸನಗರ ಮೂಲಕ ಸಂಚಾರ ನಡೆಸುತ್ತದೆ. ಮುರುಡೇಶ್ವರದಿಂದ ಬಸ್ 19:15ಕ್ಕೆ ಹೊರಟು ಬೆಂಗಳೂರು ನಗರವನ್ನು 06:30ಕ್ಕೆ ತಲುಪುತ್ತದೆ. ಬೆಂಗಳೂರು ನಗರದಿಂದ 19:15ಕ್ಕೆ ಹೊರಟು ಮುರುಡೇಶ್ವರವನ್ನು 07:00ಕ್ಕೆ ತಲುಪಲಿದೆ.
ಬೀಳಗಿ-ಬೆಂಗಳೂರು ನಡುವಿನ 'ಪಲ್ಲಕ್ಕಿ' ಬಸ್ ಗದ್ದನಕೇರಿ ಕ್ರಾಸ್, ಬಾಗಲಕೋಟೆ, ಹುನಗುಂದ, ಇಳಕಲ್, ಕುಷ್ಟಗಿ ಮೂಲಕ ಸಂಚಾರ ನಡೆಸುತ್ತದೆ. ಈ ಬಸ್ ಪ್ರಯಾಣ ದರ 897 ರೂ.ಗಳು. ಬೀಳಗಿಯಿಂದ ಬಸ್ 19:13ಕ್ಕೆ ಹೊರಟು ಬೆಂಗಳೂರು ನಗರವನ್ನು 06:00ಕ್ಕೆ ತಲುಪುತ್ತದೆ. ಬೆಂಗಳೂರು ನಗರದಿಂದ 21:00 ಹೊರಟು, ಬೀಳಗಿಯನ್ನು 07:45ಕ್ಕೆ ತಲುಪುತ್ತದೆ.
2023ರ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ 'ಪಲ್ಲಕ್ಕಿ' ಮಾದರಿಯ ನೂತನ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಗೊಂಡಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಬಸ್‌ಗಳಿಗೆ 'ಪಲ್ಲಕ್ಕಿ' ಎಂಬ ಹೆಸರು ನೀಡಿದರು. 'ಸಂತೋಷವು ಪ್ರಯಾಣಿಸುತ್ತಿದೆ' ಎಂಬ ಟ್ಯಾಗ್‌ಲೈನ್ ಅನ್ನು ಇದಕ್ಕೆ ನೀಡಲಾಗಿದೆ. 30 ಸೀಟುಗಳ ಈ ಬಸ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಸುಖಕರ ಪ್ರಯಾಣಕ್ಕೆ ಬಸ್ ಪ್ರಸಿದ್ಧಿ ಪಡೆದಿದೆ.












Click it and Unblock the Notifications