Gokak falls tour package; ಬಸ್ ವೇಳಾಪಟ್ಟಿ, ದರ
ಧಾರವಾಡ, ಜುಲೈ 31; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮಳೆಗಾಲದ ಅವಧಿಯಲ್ಲಿ ಪ್ರವಾಸ ಹೋಗುವವರಿಗಾಗಿ ಹಲವಾರು ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿದೆ. ಈಗ ಜನರ ಬೇಡಿಕೆಯಂತೆ ಧಾರವಾಡ ಮತ್ತು ಬೆಳಗಾವಿಯ ಗೋಕಾಕ್ ಫಾಲ್ಸ್ ನಡುವೆ ವಿಶೇಷ ಪ್ಯಾಕೇಜ್ ಆರಂಭಗೊಳಿಸಿದೆ.
ಧಾರವಾಡ-ದಾಂಡೇಲಿ, ಹುಬ್ಬಳ್ಳಿ-ಜೋಗ, ಬೆಳಗಾವಿ-ಗೋಕಾಕ್ ಫಾಲ್ಸ್, ಬೆಳಗಾವಿ-ಅಂಬೋಲಿ ಫಾಲ್ಸ್ ಮಾದರಿಯಲ್ಲಿಯೇ ಈಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ-ಗೋಕಾಕ್ ಫಾಲ್ಸ್ ವಿಶೇಷ ಪ್ಯಾಕೇಜ್ ಸಾರಿಗೆಯನ್ನು ಘೋಷಣೆ ಮಾಡಿದೆ. ಪತ್ರಿಕಾ ಪ್ರಕಟಣೆಯಲ್ಲಿ ಪ್ಯಾಕೇಜ್ ವೇಳಾಪಟ್ಟಿ, ದರದ ಮಾಹಿತಿ ನೀಡಿದೆ.

ಧಾರವಾಡ-ಗೋಕಾಕ್ ಫಾಲ್ಸ್ ನಡುವಿನ ವಿಶೇಷ ಪ್ಯಾಕೇಜ್ ಬಸ್ ಪ್ರತಿ ಭಾನುವಾರ, ಸಾರ್ವತ್ರಿಕ ರಜಾ ದಿನಗಳು, ಪ್ರತಿ 2 ಮತ್ತು 4ನೇ ಶನಿವಾರ ಸಂಚಾರ ನಡೆಸುತ್ತದೆ. ಈ ಬಸ್‌ಗಳು ವಿಶೇಷ ಸಾರಿಗೆಯಾದ ಕಾರಣ ಕರ್ನಾಟಕ ಸರ್ಕಾರದ 'ಶಕ್ತಿ' ಯೋಜನೆಗೆ ಒಳಪಡುವುದಿಲ್ಲ. ಆದ್ದರಿಂದ ಮಹಿಳೆಯರು ಸಂಪೂರ್ಣ ಪ್ರಯಾಣ ದರವನ್ನು ನೀಡಿ ಸಂಚಾರ ಮಾಡಬೇಕಿದೆ.
ಪ್ಯಾಕೇಜ್ ದರಗಳು, ವೇಳಾಪಟ್ಟಿ; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ಮತ್ತು ಬೆಳಗಾವಿಯ ಗೋಕಾಕ್ ಫಾಲ್ಸ್ ನಡುವಿನ ವಿಶೇಷ ಪ್ಯಾಕೇಜ್ ಸಾರಿಗೆಗೆ ವಯಸ್ಕರಿಗೆ 340 ರೂ. ಮತ್ತು ಮಕ್ಕಳಿಗೆ 170 ರೂ. ದರವನ್ನು ನಿಗದಿ ಮಾಡಿದೆ. ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಸಹ ಸಂಚಾರ ನಡೆಸಬಹುದಾಗಿದೆ.
ಜನರು ಈ ಪ್ಯಾಕೇಜ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ಆನ್‌ಲೈನ್ ಮೂಲಕ ಸಹ ಟಿಕೆಟ್ ಬುಕ್ ಮಾಡಬಹುದು. ಇದಕ್ಕಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆಗಳು 9148266332, 7760982552.
ಧಾರವಾಡ ಮತ್ತು ಗೋಕಾಕ್ ಫಾಲ್ಸ್ ನಡುವಿನ ವಿಶೇಷ ಪ್ಯಾಕೇಜ್ ಸಾರಿಗೆ ಬಸ್ ಧಾರವಾಡ, ನವಿಲು ತೀರ್ಥ ಡ್ಯಾಂ, ಸೊಗಲ ಕ್ಷೇತ್ರ, ಗೋಕಾಕ್ ಫಾಲ್ಸ್, ಹಿಡಕಲ್ ಡ್ಯಾಂ ಮೂಲಕ ಧಾರವಾಡಕ್ಕೆ ವಾಪಸ್ ಆಗಲಿದೆ.
ಧಾರವಾಡದಿಂದ ಬೆಳಗ್ಗೆ 7.30ಕ್ಕೆ ಹೊರಡುವ ಬಸ್, ನವಿಲು ತೀರ್ಥ ಡ್ಯಾಂಗೆ 9 ಗಂಟೆಗೆ ತಲುಪಲಿದೆ. ನವಿಲು ತೀರ್ಥ ಡ್ಯಾಂನಿಂದ 10.15ಕ್ಕೆ ಹೊರಟು, ಸೊಗಲ ಕ್ಷೇತ್ರಕ್ಕೆ 11 ಗಂಟೆಗೆ ತಲುಪಲಿದೆ. ಸೊಗಲ ಕ್ಷೇತ್ರದಿಂದ 11.45ಕ್ಕೆ ಬಸ್ ಹೊರಡಲಿದೆ.
ಗೋಕಾಕ್ ಫಾಲ್ಸ್‌ಗೆ ಬಸ್ 13 ಗಂಟೆಗೆ ತಲುಪಲಿದೆ. ಗೋಕಾಕ್ ಫಾಲ್ಸ್‌ನಿಂದ 15 ಗಂಟೆಗೆ ಹೊರಟು, ಹಿಡಕಲ್ ಡ್ಯಾಂಗೆ 15:30ಕ್ಕೆ ತಲುಪಲಿದೆ. ಹಿಡಕಲ್ ಡ್ಯಾಂನಿಂದ 16 ಗಂಟೆಗೆ ಹೊರಟು, ಧಾರವಾಡಕ್ಕೆ 19 ಗಂಟೆಗೆ ವಾಪಸ್ ಆಗಲಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಿರುವುದರಿಂದ ಪ್ರವಾಸಿ ತಾಣಗಳಿಗೆ ಭೇಟಿಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಪ್ಯಾಕೇಜ್ ಬುಕ್ ಮಾಡುವುದಕ್ಕೂ ಮೊದಲು ಸ್ಥಳೀಯರು, ಪ್ಯಾಕೇಜ್ ವಿವರ ಪಡೆಯಲು ಇರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ.












Click it and Unblock the Notifications