ಕಲಬುರಗಿ-ಬೀದರ್ ನಡುವೆ ಹೊಸ ರೈಲು; ವೇಳಾಪಟ್ಟಿ
ಕೇಂದ್ರ ರೈಲ್ವೆ ಸಚಿವಾಲಯ ಕಲಬುರಗಿ-ಬೀದರ್ ನಡುವೆ ಹೊಸ ರೈಲು ಓಡಿಸಲು ಒಪ್ಪಿಗೆ ನೀಡಿದೆ. ರೈಲಿನ ವೇಳಾಪಟ್ಟಿ ಇಲ್ಲಿದೆ.
ಕಲಬುರಗಿ, ಫೆಬ್ರವರಿ 28; ಕೇಂದ್ರ ರೈಲ್ವೆ ಸಚಿವಾಲಯ ಕಲಬುರಗಿ-ಬೀದರ್ ಜನರಿಗೆ ಸಿಹಿಸುದ್ದಿ ನೀಡಿದೆ. ಉಭಯ ಜಿಲ್ಲೆಗಳ ಜನರ ಬಹುಕಾಲದ ಬೇಡಿಕೆಗೆ ಹಸಿರು ನಿಶಾನೆ ತೋರಿಸಿದೆ. ಕಲಬುರಗಿ-ಬೀದರ್ ನಡುವೆ ಮತ್ತೊಂದು ರೈಲು ಓಡಿಸಲು ಒಪ್ಪಿಗೆ ಸಿಕ್ಕಿದೆ, ಹೊಸ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕಲಬುರಗಿಯ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಕಲಬುರಗಿ-ಬೀದರ್ ನಡುವೆ ಮತ್ತೊಂದು ರೈಲು ಸಂಚಾರ ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಕುರಿತು ಅಶ್ವಿನಿ ವೈಷ್ಣವ್ ಡಾ. ಉಮೇಶ್ ಜಾಧವ್‌ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಕಲಬುರಗಿ-ಬೀದರ್ ನಡುವೆ ಸದ್ಯ ಒಂದು ಡೆಮು ರೈಲು ಸಂಚಾರ ನಡೆಸುತ್ತಿದೆ. ಇದು ದಿನಕ್ಕೆ ಎರಡು ಬಾರಿ ಓಡಾಟ ನಡೆಸುತ್ತದೆ. ಆದರೆ ಉಭಯ ಜಿಲ್ಲೆಗಳ ನಡುವೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಿದ್ದು, ಮತ್ತೊಂದು ರೈಲು ಬೇಕು ಎಂಬ ಬೇಡಿಕೆ ಇತ್ತು. ಈ ಕುರಿತು ಸಂಸದರು ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದರು.
ವೇಳಾಪಟ್ಟಿ; ಹೊಸದಾಗಿ ಕಲಬುರಗಿ-ಬೀದರ್ ನಡುವೆ ಸಂಚಾರ ಆರಂಭಿಸುವ ಡೆಮು ರೈಲು ಪ್ರತಿದಿನ ಬೆಳಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು, 10.15ಕ್ಕೆ ಬೀದರ್ ತಲುಪಲಿದೆ. ಬೀದರ್‌ನಿಂದ 10.30ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ಕಲಬುರಗಿಗೆ ವಾಪಸ್ ಆಗಲಿದೆ. ಮತ್ತೆ 1.30ಕ್ಕೆ ಕಲಬುರಗಿಯಿಂದ ಹೊರಟು ಸಂಜೆ 4.45ಕ್ಕೆ ಬೀದರ್ ತಲುಪಲಿದೆ. ಬೀದರ್‌ನಿಂದ ಸಂಜೆ 5 ಗಂಟೆಗೆ ಹೊರಟು, ಸಂಜೆ 7.40ಕ್ಕೆ ಕಲಬುರಗಿಗೆ ವಾಪಸ್ ಆಗಲಿದೆ.

ರೈಲುಗಳ ನಿಲುಗಡೆಗೆ ಒಪ್ಪಿಗೆ; ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ರೈಲ್ವೆ ಇಲಾಖೆ ಕಲಬುರಗಿ, ಶಹಾಬಾದ್, ವಾಡಿ ಮತ್ತು ನಾಲವಾರ ರೈಲು ನಿಲ್ದಾಣಗಳಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳನ್ನು ನಿಲ್ಲಿಸಲು ಅನುಮತಿ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.
ಶಹಾಬಾದ್ ರೈಲು ನಿಲ್ದಾಣದಲ್ಲಿ ಮುಂಬೈ-ನಾಗರಕೋಯಿಲ್ ಎಕ್ಸ್‌ಪ್ರೆಸ್, ಮುಂಬೈ-ತಿರುವನಂತಪುರಂ ಎಕ್ಸ್‌ಪ್ರೆಸ್ ರೈಲು ನಿಲ್ಲಲಿದೆ. ಕಲಬುರಗಿ ರೈಲು ನಿಲ್ದಾಣದಲ್ಲಿ ಅಹಮದಾಬಾದ್-ಚೆನ್ನೈ ಎಕ್ಸ್‌ಪ್ರೆಸ್, ಕೇವಾಡಿಯಾ-ಚೆನ್ನೈ ಎಕ್ಸ್‌ಪ್ರೆಸ್ ಮತ್ತು ವಾಡಿ ನಿಲ್ದಾಣದಲ್ಲಿ ಮುಂಬೈ ಎಲ್‌ಟಿಟಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ಮತ್ತು ನಾಲವಾರದಲ್ಲಿ ಲಾತೂರ್-ಯಶವಂತಪುರ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗಲಿದೆ.












Click it and Unblock the Notifications