IRCTCಯಿಂದ ಊಟಿಗೆ ಪ್ರವಾಸ ಪ್ಯಾಕೇಜ್ ಘೋಷಣೆ: ದಿನಾಂಕ, ದರಗಳ ಮಾಹಿತಿಯನ್ನು ತಿಳಿಯಿರಿ
ಹೈದರಾಬಾದ್, ಮಾರ್ಚ್, 24: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸುತ್ತಲೇ ಬಂದಿದೆ. ಇದೀಗ ಮತ್ತೆ ಹೈದರಾಬಾದ್‌ನಿಂದ ಸ್ವರ್ಗದಂತಿರುವ ಊಟಿಯ ಗಿರಿಧಾಮಕ್ಕೆ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಹಾಗಾದರೆ ಈ ಪ್ರವಾಸ ಪ್ಯಾಕೇಜ್‌ನ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಪ್ಯಾಕೇಜ್ ಪ್ರವಾಸಿಗರಿಗೆ ಊಟಿ ಮತ್ತು ಅಲ್ಲಿನ ಸುತ್ತಮುತ್ತಲಿನ ರಮಣೀಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶವನ್ನು ಕಲ್ಪಿಸಿದೆ. ಹಾಗೆಯೇ ಪ್ರಯಾಣಿಕರು ಆರಾಮದಾಯಕವಾಗಿ ಯಾವುದೇ ತೊಂದರೆಯಿಲ್ಲದ ಪ್ರಯಾಣದ ಅನುಭವವನ್ನು ಕೂಡ ಇಲ್ಲಿ ಪಡೆಯಬಹುದಾಗಿದೆ.

ಮಾರ್ಚ್ 28ರಿಂದ ಪ್ರವಾಸ ಆರಂಭ
ಮಾರ್ಚ್ 28 ರಂದು ಈ ಪ್ರವಾಸ ಆರಂಭವಾಗಲಿದ್ದು, ಜೂನ್ 27ಕ್ಕೆ ಅಂತ್ಯವಾಗಲಿದೆ. ಇದು 6 ಹಗಲು ಮತ್ತು 5 ರಾತ್ರಿಯ ಪ್ರವಾಸವಾಗಿದೆ. ಪ್ಯಾಕೇಜ್‌ನ ದರಗಳ ವಿವರವನ್ನು ನೋಡುವುದಾದರೆ, ಪ್ರತಿ ವ್ಯಕ್ತಿಗೆ 9,280 ರೂಪಾಯಿ ವೆಚ್ಚ ಆಗಲಿದೆ. ರೈಲಿನ ಮೂಲಕ ಪ್ರಯಾಣ ಆರಂಭವಾಗಲಿದ್ದು, ಇಲ್ಲಿ ಹೋಟೆಲ್, ವಸತಿ, ಕ್ಯಾಬ್ ಸೌಲಭ್ಯ, ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇದರೊಂದಿಗೆ ನೀವು ಊಟಿ ಮತ್ತು ಅದರ ಸುತ್ತಮುತ್ತಲಿನ ಆಕರ್ಷಣೀಯ ಪ್ರವಾಸಿ ತಾಣಗಳಿಗೂ ಸಹ ಭೇಟಿ ನೀಡಬಹುದಾಗಿದೆ.
ಯಾವೆಲ್ಲ ಸ್ಥಳಗಳನ್ನು ವೀಕ್ಷಿಸಬಹುದು?
ಇನ್ನು ಪ್ರಸಿದ್ಧ ಊಟಿ ಸರೋವರಕ್ಕೆ ಭೇಟಿ ನೀಡಿ ಆನಂದಿಸಬಹುದಾಗಿದೆ. ಪ್ರವಾಸಿಗರು ಅಲ್ಲಿ ಬೋಟಿಂಗ್ ಸೇರಿದಂತೆ ಇತರ ಜಲ ಕ್ರೀಡೆಗಳನ್ನು ಸಹ ಆನಂದಿಸಬಹುದಾಗಿದೆ. ಜೊತೆಗೆ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿರುವ ಬೆರಗುಗೊಳಿಸುವ ಬೊಟಾನಿಕಲ್ ಗಾರ್ಡನ್‌ಗಳಿಗೂ ತೆರಳಬಹುದಾಗಿದೆ. ಇದರೊಂದಿಗೆ ದೊಡ್ಡಬೆಟ್ಟ ಶಿಖರಕ್ಕೆ ಭೇಟಿ ನೀಡುವುದು, ನೀಲಗಿರಿ ಬೆಟ್ಟಗಳಲ್ಲಿನ ಅತೀ ಎತ್ತರದ ಪ್ರದೇಶ ಮತ್ತು ಸುಂದರವಾದ ಪೈಕಾರ ಜಲಪಾತದ ಸೊಬಗನ್ನು ಸವಿಯಬಹುದಾಗಿದೆ.

ಲೆಹ್-ಲಡಾಖ್‌ಗೆ ಟೂರ್ ಪ್ಯಾಕೇಜ್
ಇದೇ ರೀತಿ ಇತ್ತೀಚೆಗಷ್ಟೇ ಐಆರ್‌ಸಿಟಿಸಿಯು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾದ ಲೆಹ್-ಲಡಾಖ್‌ಗೆ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ರದೇಶಕ್ಕೆ ಪ್ರತಿ ವರ್ಷವೂ ಸಹ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ನೀವು ಸಹ ಬೇಸಿಗೆ ಕಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದರೆ, ಐಆರ್‌ಸಿಟಿಸಿ ಘೋಷಿಸಿದ ಪ್ರವಾಸ ಪ್ಯಾಕೇಜ್ ಉತ್ತಮವಾಗಿದೆ. ಹಾಗಾದರೆ ಈ ಪ್ಯಾಕೇಜ್‌ನ ದರಗಳ ವಿವರವನ್ನು ತಿಳಿಯಿರಿ.
7 ಹಗಲು ಮತ್ತು 6 ರಾತ್ರಿಗಳ ಪ್ರವಾಸ ಪ್ಯಾಕೇಜ್ ಇದ್ದಾಗಿದ್ದು, ಈ ಪ್ರವಾಸ ಮೇ 4ರಂದು ಹೈದರಾಬಾದ್‌ನಿಂದ ಪ್ರಾರಂಭವಾಗುತ್ತದೆ. ಹೈದರಾಬಾದ್‌ನಿಂದ ಲೇಹ್‌ಗೆ ಹಿಂದಿರುಗಲು ವಿಮಾನಯಾನ ಶುಲ್ಕ, ಬಸ್, ಹೋಟೆಲ್, ಆಹಾರ, ಮಾರ್ಗದರ್ಶಿ ಮತ್ತು ವಿಮೆಯ ಸೌಲಭ್ಯಗಳನ್ನು ಕೂಡ ಈ ಪ್ಯಾಕೇಜ್‌ನಲ್ಲಿ ಕಲ್ಪಿಸಲಾಗಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.
ಪ್ರವಾಸ ಪ್ಯಾಕೇಜ್‌ನ ದರಗಳ ವಿವರ
ಪ್ರವಾಸ ಪ್ಯಾಕೇಜ್ ಮೂರು ವಿಭಿನ್ನ ಆಕ್ಯುಪೆನ್ಸಿ ವರ್ಗಗಳಲ್ಲಿ ಲಭ್ಯವಿದೆ. ಸಿಂಗಲ್, ಡಬಲ್ ಮತ್ತು ತ್ರಬಲ್ ಎನ್ನುವ ಮೂರು ವರ್ಗಗಳಿರುತ್ತವೆ. ಕಂಪರ್ಟ್‌ಮೆಂಟ್ ವರ್ಗದಲ್ಲಿ ಮೂವರಿಗೆ 47,830 ರೂಪಾಯಿ, ಇಬ್ಬರಿಗೆ 48,560 ರೂಪಾಯಿ ಮತ್ತು ಸಿಂಗಲ್ ಆಕ್ಯುಪೆನ್ಸಿಗೆ 54,500 ರೂಪಾಯಿ ಆಗಲಿದೆ. ಇನ್ನು 5 ರಿಂದ 11 ವರ್ಷದೊಳಗಿನ ಮಕ್ಕಳನ್ನು ಕೂಡ ಕರೆದುಕೊಂಡು ಹೋಗಬಹುದಾಗಿದೆ. ಮಕ್ಕಳಿಗೆ ಹಾಸಿಗೆಯೊಂದಿಗೆ 45,575 ರೂಪಾಯಿ, ಹಾಸಿಗೆಯಿಲ್ಲದೆ 41,750 ರೂಪಾಯಿ ವೆಚ್ಚ ಆಗಲಿದೆ.
ಪ್ಯಾಕೇಜ್‌ನ ಪ್ರಮುಖ ಅಂಶಗಳು
ಇದು 7 ದಿನ ಹಗಲು ಮತ್ತು 6 ರಾತ್ರಿ ಪ್ರವಾಸ ಆಗಿದೆ. ಇದರಲ್ಲಿ ತುರ್ತುಕ್‌ಗೂ ಕೂಡ ಭೇಟಿ ನೀಡಬಹುದಾಗಿದೆ. ಪ್ರವಾಸದ ಸಮಯದಲ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯು ಇರಲಿದೆ. ಸಾರಿಗೆಯ ವಿಧಾನವು ವಿಮಾನವಾಗಿರುತ್ತದೆ. ನೀವು IRCTC ವೆಬ್‌ಸೈಟ್, irctctourism.com ಅಥವಾ IRCTC ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಈ ಪ್ರವಾಸ ಪ್ಯಾಕೇಜ್ ಅನ್ನು ಬುಕ್ ಮಾಡಬಹುದಾಗಿದೆ.












Click it and Unblock the Notifications