Davanagere-Ayodhya train: ದಾವಣಗೆರೆ ಮೂಲಕ ಅಯೋಧ್ಯೆಗೆ ರೈಲು?-ಮಾಹಿತಿ ತಿಳಿಯಿರಿ
ದಾವಣಗೆರೆ, ಜನವರಿ, 31: ಅಯೋಧ್ಯೆಯ ರಾಮ ಮಂದಿರವನ್ನು ಜನವರಿ 22ರಂದು ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಆಗಿನಿಂದಲೂ ದೇಶದ ವಿವಿಧ ಭಾಗಗಳಿಂದ ಅಯೋಧ್ಯೆಗೆ ವಿಶೇಷ ರೈಲು ಸೇವೆಯನ್ನು ಭಾರತೀಯ ರೈಲ್ವೆ ಒದಗಿಸುತ್ತಾ ಬಂದಿದೆ.
ಅಲ್ಲದೆ ಕರ್ನಾಟಕ ಕೆಲವು ಜಿಲ್ಲೆಗಳಿಂದಲೂ ವಿಶೇಷ ರೈಲುಗಳನ್ನು ಬಿಡಲಾಗಿದೆ. ಹಾಗೆಯೇ ಇದೀಗ ದಾವಣಗೆರೆ ಮೂಲಕವೂ ಅಯೋಧ್ಯೆಗೆ ವಿಶೇಷ ರೈಲು ಸೇವೆ ಒದಗಿಸುವಂತೆ ಸಂಸದ ಜಿಎಂ ಸಿದ್ದೇಶ್ವರ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಒತ್ತಾಯಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಬಳಿಕ ಅಯೋಧ್ಯೆಗೆ ಪ್ರತಿದಿನ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಮೂಲಕವೂ ಅಯೋಧ್ಯೆಗೆ ವಿಶೇಷ ರೈಲು ಓಡಿಸುವಂತೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಒತ್ತಾಯಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಮಂಡಳಿ ಅಧ್ಯಕ್ಷೆ ಜಯವರ್ಮ ಸಿನ್ಹಾ ರವರಿಗೆ ಪತ್ರ ಬರೆದಿರುವ ಸಂಸದ ಜಿಎಂ ಸಿದ್ದೇಶ್ವರ ಅವರು, ರಾಜ್ಯದಿಂದ ಈಗಾಗಲೇ ಘೋಷಣೆ ಮಾಡಿರುವ ಅಯೋಧ್ಯೆ ವಿಶೇಷ ರೈಲುಗಳು ಬೆಳಗಾವಿ, ಹುಬ್ಬಳ್ಳಿ, ಹೊಸಪೇಟೆ ಮೂಲಕ ಹಾಗೂ ಬೆಂಗಳೂರು, ಮೈಸೂರು ಕಡೆಯಿಂದ ಹೊರಡುವ ರೈಲುಗಳು ಚಿತ್ರದುರ್ಗದವರೆಗೆ ಬಂದು ಚಿತ್ರದುರ್ಗ-ರಾಯದುರ್ಗ ಮೂಲಕ ಹೊಸಪೇಟೆ ತಲುಪಿ ಅಲ್ಲಿಂದ ಅಯೋಧ್ಯೆ ಕಡೆ ಪ್ರಯಾಣ ಬೆಳೆಸಲಿವೆ ಎಂದರು.
ಹಾಗೆಯೇ ಮಧ್ಯ ಕರ್ನಾಟಕದಲ್ಲಿನ ದಾವಣಗೆರೆ ಮೂಲಕವೂ ವಿಶೇಷ ರೈಲುಗಳು ಇಲ್ಲದೇ ಇರುವುದರಿಂದ ಈ ಭಾಗದ ಜನರಿಗೆ ಅನಾನುಕೂಲ ಆಗಲಿದೆ ಎಂಬುದನ್ನು ವಿವರಿಸಿದ್ದಾರೆ. ಬೆಂಗಳೂರು ಅಥವಾ ಮೈಸೂರು ಕಡೆಯಿಂದ ಹೊರಡುವ ವಿಶೇಷ ರೈಲುಗಳು ಅರಸೀಕರೆ-ಚಿಕ್ಕಾಜಾಜೂರು-ದಾವಣಗೆರೆ-ಹರಪನಹಳ್ಳಿ-ಕೊಟ್ಟೂರು ಮೂಲಕ ಹೊಸಪೇಟೆ ತಲುಪಿ ಅಯೋಧ್ಯೆ ಕಡೆ ಪ್ರಯಾಣ ಬೆಳೆಸಬಹುದು ಎಂಬುದನ್ನು ಸಂಸದ ಸಿದ್ದೇಶ್ವರ ಅವರು ಗಮನಕ್ಕೆ ತಂದಿದ್ದಾರೆ.












Click it and Unblock the Notifications