ಕ್ರಿಸ್‌ಮಸ್: ಖಾಸಗಿ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ, ಇಲ್ಲಿದೆ ಟಿಕೆಟ್ ದರದ ವಿವರ
ಬೆಂಗಳೂರು, ಡಿಸೆಂಬರ್, 22: ಇದೀಗ ಕ್ರಿಸ್‌ಮಸ್ ಹಬ್ಬ, ಮತ್ತು ಹೊಸವರ್ಷ ಇರುವುದರಿಂದ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವವರು ತಮ್ಮ ಊರುಗಳತ್ತ ತೆರಳಲು ಮುಂದಾಗಿದ್ದಾರೆ. ಅದರಲ್ಲೂ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಾಲು ರಜೆಗಳು ಇರುವುದರಿಂದ ಜನರು ತಮ್ಮ ಬೇರೆಡೆ ಪ್ರಯಾಣ ಬೆಳೆಸಲು ಪ್ಲಾನ್ ಹಾಕಿಕೊಂಡಿದ್ದಾರೆ. ಇದನ್ನು ಗಮನಿಸಿದ ಖಾಸಗಿ ಬಸ್‌ನವರು ಇದೇ ಸರಿಯಾದ ಸಮಯ ಎಂದು ಪ್ರಯಾಣಿಕರ ಬಳಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ರಜೆಗಳಲ್ಲಿ ಪ್ರವಾಸಕ್ಕೆ ತೆರಳುವ ಯೋಚನೆಯಲ್ಲಿ ಇರುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಬಿಸಿ ತಟ್ಟಿದೆ. ಪ್ರಯಾಣ ದರ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಅಲ್ಲದೆ ಖಾಸಗಿ ಬಸ್‌ನವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಸಾಮಾನ್ಯ ದಿನಗಳ ದರಕ್ಕೆ ಹೋಲಿಸಿದರೆ ಖಾಸಗಿ ಬಸ್ ಬಸ್‌ನವರು ಮೂರರಿಂದ ನಾಲ್ಕು ಪಟ್ಟು ಟಿಕೆಟ್ ದರವನ್ನು ಹೆಚ್ಚಿಸಿದ್ದಾರೆ ಎನ್ನುವ ಆರೋಪಗಳು ಕೆಳಿಬರುತ್ತಿವೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮುಂದಿನ ವಾರ ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳಿಗೆ ರಜೆ ಇದ್ದು, ಬೇರೆ ಊರುಗಳಿಗೆ ಪ್ರವಾಸ ಬೆಳೆಸಲು ಮುಂದಾಗಿದ್ದಾರೆ. ಆದರೆ ಬೇರೆ ಕಡೆ ಪ್ರವಾಸ ಹೊರಟಿರುವ ಜನರು ಖಾಸಗಿ ಬಸ್ ಪ್ರಯಾಣ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಇಷ್ಟು ದುಪ್ಪಟ್ಟು ಬೆಲೆಯಲ್ಲಿ ಟಿಕೆಟ್ ಖರೀದಿಸಿ ಪ್ರವಾಸ ಹೋಗಲು ಸಾಧ್ಯವೇ ಎನ್ನುವ ಚಿಂತೆಯಲ್ಲಿದ್ದಾರೆ.

ಭರವಸೆ ನೀಡಿದ್ದ ಸಾರಿಗೆ ಸಚಿವ ಶ್ರೀರಾಮುಲು
ಹಬ್ಬ ಮತ್ತು ಸರ್ಕಾರಿ ರಜೆಗಳ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಈ ಸಂಬಂಧ ಬಸ್ ಮಾಲೀಕರ ಸಭೆಗಳನ್ನೂ ನಡೆಸಿ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಯಾವುದೇ ಸೂಚನೆಗಳಿಗೂ ಕಿಮತ್ತಿಲ್ಲದೆ, ತಾವು ನಡೆದದ್ದೇ ಹಾದಿ ಎಂಬಂತೆ ಖಾಸಗಿ ಬಸ್‌ನವರು ಪ್ರಯಾಣಿಕರ ಬಳಿ ದುಪ್ಪಟ್ಟು ಹಣವನ್ನು ಕೀಳುತ್ತಿದ್ದಾರೆ.

ತಮಗಿಷ್ಟ ಬಂದಂತೆ ಪ್ರಯಾಣ ದರ ಹೆಚ್ಚಳ
ಖಾಸಗಿ ಬಸ್‌ನವರು ತಮಗೆ ಇಷ್ಟ ಬಂದಂತೆ ಪ್ರಯಾಣ ದರವನ್ನು ಹೆಚ್ಚಳ ಮಾಡುತ್ತಿದ್ದಾರೆ. ಕ್ರಿಸ್‌ಮಸ್ ರಜೆಗೆ ಕೇರಳ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಾಗಿದೆ. ಇದೇ ಸರಿಯಾದ ಸಮಯ ಎಂದು ಬೇಡಿಕೆ ಇರುವ ಮಾರ್ಗಗಳಲ್ಲೇ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಹುಬ್ಬಳ್ಳಿ ಮತ್ತು ಬೆಳಗಾವಿಗೆ ಶುಕ್ರವಾರ (ಡಿಸೆಂಬರ್ 23) ಪ್ರಯಾಣ ಮಾಡುವವರಿಗೆ ಗರಿಷ್ಠ ದರ 3,000ದಿಂದ 5,000 ರೂಪಾಯಿ ಇದೆ. ಗೋವಾಕ್ಕೆ ಕೆಲವು ಬಸ್‌ಗಳಲ್ಲಿ 7 ಸಾವಿದಿಂದ 10,000 ರೂಪಾಯಿವರೆಗೂ ತೆಗೆದುಕೊಳ್ಳುತ್ತಾರೆ. ಕೆಲವು ಬಸ್‌ಗಳಲ್ಲಿ ಮಾತ್ರ 5,000 ರೂಪಾಯಿ ಪ್ರಯಾಣ ದರ ಇದೆ.

ಜಿಲ್ಲಾವಾರು ಪ್ರಯಾಣ ದರದ ಪಟ್ಟಿ
ಇನ್ನು ಬೆಂಗಳೂರಿನಿಂದ ಎರ್ನಾಕುಲಂ ಪ್ರಯಾಣಕ್ಕೂ 7 ಸಾವಿರ ರೂಪಾಯಿ ದರ ಇದೆ. ಮಂಗಳೂರಿಗೆ 1,100 ರೂಪಾಯಿ, ಮೈಸೂರಿಗೆ 1,999 ರೂಪಾಯಿ, ಮಡಿಕೇರಿಗೆ 1,130 ರೂಪಾಯಿ ದರ ಇದೆ. ಹುಬ್ಬಳ್ಳಿ ಮತ್ತು ಬೆಳಗಾವಿಗೆ ಡಿಸೆಂಬರ್ 25ರಂದು ಪ್ರಯಾಣ ಮಾಡಲು ಟಿಕೆಟ್ ಕಾಯ್ದಿರಿಸಲು ಬಯಸಿದರೆ ಲಕ್ಸುರಿ ಬಸ್‌ಗಳಲ್ಲಿ 2,000 ಸಾವಿರ ಗರಿಷ್ಠ ದರ ನಿಗದಿಯಾಗಿರುವುದು ವೆಬ್‌ಸೈಟ್‌ಗಳಲ್ಲಿ ಕಾಣಬಹುದಾಗಿದೆ.
ಇನ್ನು ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಮಾತ್ರ ಪ್ರಯಾಣ ದರ ಸಾಮಾನ್ಯ ದಿನಗಳಷ್ಟೇ ಇದೆ. ಹೊರ ರಾಜ್ಯಗಳಿಗೆ ವಿಶೇಷ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಕೆಎಸ್ಆರ್‌ಸಿಗೆ ತುಂಬಾ ಕಷ್ಟದ ಕೆಲಸವಾಗಿದೆ. ಪ್ರಯಾಣಿಕರ ಬೇಡಿಕೆಯನ್ನು ಆಧರಿಸಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಿದರೆ ಅಂತರರಾಜ್ಯ ಒಪ್ಪಂದ ಉಲ್ಲಂಘನೆ ಆದಂತಾಗುತ್ತದೆ. ಆದ್ದರಿಂದ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದು ಕಷ್ಟವಾಗಿದೆ. ಇದರ ನಡುವೆಯೂ ಕ್ರಿಸ್‌ಮಸ್ ರಜೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಲು ಹೆಚ್ಚುವರಿ 300 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಕೆಎಸ್ಆರ್‌ಟಿಸಿಯಿಂದ ಈ ಹಿಂದೆ ಮಾಹಿತಿ ಲಭ್ಯವಾಗಿತ್ತು.

ಪ್ರಯಾಣಿಕರ ಬಳಿ ಬೇಕಾಬಿಟ್ಟಿ ಹಣ ವಸೂಲಿ
ಬೆಂಗಳೂರು - ಎರ್ನಾಕುಲಂ 3,500 ರೂಪಾಯಿ, ಬೆಂಗಳೂರು - ಗೋವಾ 3,450 ರೂಪಾಯಿ, ಬೆಂಗಳೂರು - ಮಂಗಳೂರು 2,080 ರೂಪಾಯಿ, ಹುಬ್ಬಳ್ಳಿ - ಮೈಸೂರು 5,000 ರೂಪಾಯಿ, ಬೆಂಗಳೂರು - ಮೈಸೂರು 1,999 ರೂಪಾಯಿ, ಬೆಂಗಳೂರು - ಮಡಿಕೇರಿಗೆ 1,080 ರೂಪಾಯಿ ದರವನ್ನು ನಿಗದಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೊಸವರ್ಷ ಬಂತೆಂದರೆ ಸಾಕು ಗೋವಾದ ಕಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಇನ್ನು ಇದೇ ಸರಿಯಾದ ಸಮಯ ಅಂದುಕೊಂಡು ಖಾಸಗಿ ಬಸ್‌ನವರು ತಮಗೆ ಇಷ್ಟಬಂದಂತೆ ಪ್ರಯಾಣ ದರವನ್ನು ಹೆಚ್ಚಳ ಮಾಡುತ್ತಾರೆ. ಪ್ರಯಾಣಿಕರು ಯಾವುದೇ ಪರ್ಯಾಯ ದಾರಿ ಇಲ್ಲದೇ ಖಾಸಗಿ ಬಸ್‌ನವರು ಕೇಳುವಷ್ಟೇ ಹಣವನ್ನು ಕೊಟ್ಟು ಪ್ರಯಾಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಖಾಸಗಿ ಬಸ್‌ನವರ ಟಿಕೆಟ್ ದರದ ಸುಲಿಗೆಗೆ ಬ್ರೇಕ್ ಹಾಕಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.











Click it and Unblock the Notifications