Budget 2025: ಕೇಂದ್ರ ಬಜೆಟ್, 50 ಪ್ರವಾಸಿ ತಾಣಗಳ ಅಭಿವೃದ್ಧಿ, ಯೋಜನೆ ವಿವರ
ನವದೆಹಲಿ, ಫೆಬ್ರವರಿ 01: 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಶನಿವಾರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ಜಾರಿಗೊಳಿಸಲಿವೆ. ಮೂಲ ಸೌಲಭ್ಯವನ್ನು ಅಭಿವೃದ್ಧಿಗೊಳಿಸಲು ರಾಜ್ಯಗಳು ಭೂಮಿಯನ್ನು ನೀಡಬೇಕಿದೆ. ಈ ಪ್ರವಾಸಿತಾಣಗಳಲ್ಲಿರುವ ಹೋಟೆಲ್‌ಗಳನ್ನು ಸಹ ಅಭಿವೃದ್ಧಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಈ ಮಾದರಿ ಅಭಿವೃದ್ಧಿ ಮೂಲಕ ಹೊಸ ಉದ್ಯೋಗ ಸೃಷ್ಟಿಗೆ ಸಹ ಆದ್ಯತೆ ನೀಡಲಾಗುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಉದ್ಯೋಗವನ್ನು ಸೃಷ್ಟಿಸಲು ಸ್ಥಳೀಯ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಮುದ್ರಾ ಯೋಜನೆಯಡಿ ಸಾಲ: ಪ್ರವಾಸೋದ್ಯಮ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಮುದ್ರಾ ಯೋಜನೆಯಡಿ ಹೋ ಸ್ಟೇಗಳಿಗೆ ಸಾಲ ನೀಡಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ.
ಏಪ್ರಿಲ್ 8, 2015 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಉದ್ಘಾಟಿಸಿದರು. ಯೋಜನೆಯಡಿ 10 ಲಕ್ಷದವರೆಗೆ ಸಾಲ ನೀಡುವ ಮೂಲಕ ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳನ್ನು ಸಬಲೀಕರಣಗೊಳಿಸಲಾಗುತ್ತಿದೆ.
ಉದ್ಯಮಿಗಳಿಗೆ ಬೆಂಬಲವನ್ನು ಬಲಪಡಿಸಲು, ಹಣಕಾಸು ಸಚಿವರು ಜುಲೈ 23, 2024 ರಂದು ಕೇಂದ್ರ ಬಜೆಟ್ 2024-25ರ ಸಮಯದಲ್ಲಿ ಮುದ್ರಾ ಯೋಜನೆಯಡಿ ನೀಡುವ ಸಾಲದ ಮಿತಿಯನ್ನು ರೂ. 20 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು. 2024ರಿಂದ ಇದು ಜಾರಿಗೆ ಬಂದಿದೆ.
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಪ್ರವಾಸಿ ತಾಣಗಳಿಗೆ ಸಾರಿಗೆ ಸಂಪರ್ಕವನ್ನು ಉತ್ತಮಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ ಪ್ರವಾಸಿ ತಾಣಗಳ ಸ್ವಚ್ಛತೆ, ನಿರ್ವಹಣೆ ಆಧರಿಸಿ ರಾಜ್ಯಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ವಿದೇಶಿ ಪ್ರವಾಸಿಗರನ್ನು ಸೆಳೆಯಲು ಇ-ವೀಸಾ ನೀತಿಯನ್ನು ಇನ್ನಷ್ಟು ಸರಳಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಪರಿಸರವನ್ನು ಕಾಪಾಡಿಕೊಳ್ಳುವ ಜೊತೆಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಹಲವು ಬಾರಿ ಒತ್ತಿ ಹೇಳಿದೆ. ಸಚಿವಾಲಯ, ಇಡೀ ದೇಶಕ್ಕೆ ಅನ್ವಯವಾಗುವಂತೆ ಪ್ರವಾಸೋದ್ಯಮಕ್ಕಾಗಿ ಪ್ರಮುಖವಾಗಿ ವಸತಿ, ಪ್ರವಾಸಗಳ ಆಯೋಜನೆ, ಕಡಲ ತೀರಗಳು, ಹಿನ್ನೀರು, ಕೆರೆಗಳು ಮತ್ತು ನದಿ ಪಾತ್ರಗಳು ಇತ್ಯಾದಿಗಳಿಗೆ ಭಾರತೀಯ ಸುಸ್ಥಿರ ಪ್ರವಾಸೋದ್ಯಮ ಮಾನದಂಡಗಳನ್ನು ರೂಪಿಸಿದೆ.
ಪ್ರವಾಸೋದ್ಯಮ ಸಚಿವಾಲಯ, ಪ್ರವಾಸ ಆಯೋಜಕರು, ಸಾಹಸ ಪ್ರವಾಸ ಆಪರೇಟರ್‌ಗಳು, ಟ್ರಾವೆಲ್ ಏಜೆಂಟ್‌ಗಳು ಇತ್ಯಾದಿ ಪ್ರವಾಸೋದ್ಯಮ ಸೇವೆ ಒದಗಿಸುವವರು ಸುರಕ್ಷಿತ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ನೀತಿ ಸಂಹಿತೆ ಪಾಲನೆ ಮಾಡುವುದು ಕಡ್ಡಾಯವಾಗಿದೆ.












Click it and Unblock the Notifications