ಬೆಳಗಾವಿ-ಮಣಗೂರು ರೈಲು ವಯಾ ಹುಬ್ಬಳ್ಳಿ, ವೇಳಾಪಟ್ಟಿ, ನಿಲ್ದಾಣ
ಬೆಳಗಾವಿ, ಅಕ್ಟೋಬರ್ 19: ನೈಋತ್ಯ ರೈಲ್ವೆ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಬೆಳಗಾವಿ-ಮಣಗೂರು ವಯಾ ಹುಬ್ಬಳ್ಳಿ, ಧಾರವಾಡ ರೈಲನ್ನು ಪುನಃ ಪ್ರಾರಂಭಿಸಿದೆ. ಬೇಡಿಕೆಯ ಮೇಲೆ ರೈಲು ಅಡಿ ಈ ರೈಲು ಸೇವೆ ಆರಂಭವಾಗಿದ್ದು, ಜನರು ಸಂಚಾರ ನಡೆಸಲು ಸಹಕಾರಿಯಾಗಿದೆ. ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ರೈಲು ನಂಬರ್ 07335/ 07336 ಬೆಳಗಾವಿ-ಮಣಗೂರು ವಯಾ ಹುಬ್ಬಳ್ಳಿ, ಧಾರವಾಡ ಸಂಚಾರವನ್ನು ನಡೆಸಲಿದೆ. ವಾರದಲ್ಲಿ 4 ದಿನಗಳ ಕಾಲ (ಭಾನುವಾರ, ಮಂಗಳವಾರ, ಬುಧವಾರ ಮತ್ತು ಶನಿವಾರ) ಒಟ್ಟು 95 ಟ್ರಿಪ್ ಈ ರೈಲು ಸಂಚಾರ ನಡೆಸಲು ರೈಲ್ವೆ ಬೋರ್ಡ್ ಒಪ್ಪಿಗೆಯನ್ನು ನೀಡಿದೆ.

ರೈಲು ವೇಳಾಪಟ್ಟಿ: ರೈಲ್ವೆ ಬೋರ್ಡ್ ಮಾಹಿತಿ ಪ್ರಕಾರ ರೈಲು ಸಂಖ್ಯೆ 07335 ಬೆಳಗಾವಿ-ಮಣಗೂರು ಎಕ್ಸ್‌ಪ್ರೆಸ್ 16 ಅಕ್ಟೋಬರ್ 2024 ರಿಂದ 30 ಮಾರ್ಚ್ 2025ರ ತನಕ ವಾರದಲ್ಲಿ 4 ದಿನಗಳ ಕಾಲ ಸಂಚಾರವನ್ನು ನಡೆಸಲಿದೆ. ಬೆಳಗಾವಿಯಿಂದ ಮಧ್ಯಾಹ್ನ 12.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 11.43ಕ್ಕೆ ಮಣಗೂರು ರೈಲು ನಿಲ್ದಾಣ ತಲುಪಲಿದೆ.
ರೈಲು ಸಂಖ್ಯೆ 07336 ಮಣಗೂರು-ಬೆಳಗಾವಿ ವಯಾ ಹುಬ್ಬಳ್ಳಿ, ಧಾರವಾಡ ರೈಲು 17 ಅಕ್ಟೋಬರ್‌ನಿಂದ 31 ಮಾರ್ಚ್ 2025ರ ತನಕ 95 ಟ್ರಿಪ್ ಸಂಚಾರವನ್ನು ನಡೆಸಲಿದೆ. ಮಣಗೂರಿನಿಂದ ರೈಲು ಮಧ್ಯಾಹ್ನ 3.40ಕ್ಕೆ ಹೊರಟು, ಮರುದಿನ ಸಂಜೆ 4 ಗಂಟೆಗೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 07335 ಬೆಳಗಾವಿ-ಮಣಗೂರು ಎಕ್ಸ್‌ಪ್ರೆಸ್ ಧಾರವಾಡಕ್ಕೆ 2.58/ 3 ಗಂಟೆ, ಹುಬ್ಬಳ್ಳಿಗೆ 3.20/ 3.30 ಆಗಮಿಸಿ ನಿರ್ಗಮಿಸಲಿದೆ. ರೈಲು ಸಂಖ್ಯೆ 07336 ಮಣಗೂರು-ಬೆಳಗಾವಿ ರೈಲು ಹುಬ್ಬಳ್ಳಿಗೆ 12.10/ 12.20, ಧಾರವಾಡಕ್ಕೆ 12.48/ 12.50 ಆಗಮನ ನಿರ್ಗಮನ.
ಈ ರೈಲುಗಳು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದರೋಜಿ, ಬಳ್ಳಾರಿ, ಗುಂತಕಲ್, ಅಡೋನಿ, ಕೋಸಗಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ಚಿತ್ತಾಪುರ, ಸೇಡಂ, ತಂದೂರು, ವಿಕ್ರಾದಾಬಾದ್, ಲಿಂಗಂಪಲ್ಲಿ, ಬೇಗಂಪೇಟ್, ಸಿಕಂದರಾಬಾದ್, ಬೋಗಿಘರ್, ಕಾಜಿಪೇಟ್, ವಾರಂಗಲ್, ಕೇಸಮುದ್ರಂ, ಮೆಹಬೂಬಾಬಾದ್, ದೋರಣಗಲ್, ಗಾಂಧಿಪುರಂ, ಭದ್ರಾಚಲಂ ರೋಡ್ ಮೂಲಕ ಸಂಚಾರ ನಡೆಸಲಿದೆ.
ಈ ರೈಲು 17 ಬೋಗಿಯನ್ನು ಒಳಗೊಂಡಿದೆ. 2 ಎಸಿ 3ಟೈರ್, 1 ಎಸಿ 2 ಟೈರ್, 8 ಸ್ಲೀಪರ್ ಕೋಚ್, 4 ಸಾಮಾನ್ಯ ಬೋಗಿ, 2 ಎಸ್‌ಎಲ್‌ಆರ್ ಬೋಗಿಯನ್ನು ಒಳಗೊಂಡಿದೆ. ರೈಲಿನ ಪ್ರಾಥಮಿಕ ನಿರ್ವಹಣೆ ಬೆಳಗಾವಿಯಲ್ಲಿ ನಡೆಯಲಿದೆ.
ಧಾರವಾಡದ ಸಂಸದ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಹ್ಲಾದ್ ಜೋಶಿ ಬೆಳಗಾವಿ-ಮಣಗೂರು ವಯಾ ಧಾರವಾಡ ರೈಲನ್ನು ಪುನಃ ಆರಂಭಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆ ಮಾಡಿದ್ದರು. ಈ ರೈಲಿನಿಂದ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದರು. ಈ ಬೇಡಿಕೆಗೆ ಇಲಾಖೆ ಒಪ್ಪಿಗೆ ನೀಡಿದೆ.












Click it and Unblock the Notifications