NWKSRTCಗೆ 784 ಹೊಸ ಬಸ್‌ಗಳ ಸೇರ್ಪಡೆ-ಯಾವಾಗ ಹಾಗೂ ಎಷ್ಟು ಮಾರ್ಗಗಳಿಗೆ?-ಮಾಹಿತಿ ತಿಳಿಯಿರಿ
ಧಾರವಾಡ, ಜನವರಿ, 08: ಸಚಿವ ರಾಮಲಿಂಗಾರೆಡ್ಡಿಯವರು ಸಚಿವರಾದಾಗಿನಿಂದಾಗಲೂ ಸಾರಿಗೆ ಇಲಾಖೆಯಲ್ಲಿ ಬದಲಾವಣೆ ಪರ್ವವೆ ನಡೆಯುತ್ತಿದೆ. ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC)ಯ 7 ಜಿಲ್ಲೆಗಳಿಗೆ 784 ಹೊಸ ಬಸ್‌ಗಳು ಸೇರ್ಪಡೆಯಾಗಲಿದೆ. ಮಾರ್ಚ್ ವೇಳೆಗೆ ಬಸ್‌ಗಳನ್ನು ಪೂರೈಸಲು ಸೂಚನೆ ನೀಡಿದ್ದೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ನಗರ ಸಾರಿಗೆ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹೊಸ ಬಸ್‌ಗಳು ಬಂದ ನಂತರ ಈ ಒತ್ತಡ ಕಡಿಮೆ ಆಗಲಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಮುಂದಿನ ದಿನಗಳಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಇನ್ನು ಇದೀಗ ನಾವು ಹೊಸದಾಗಿ 2 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಒಂದು ಬಸ್ ಅನ್ನೂ ಖರೀದಿಸಿರಲಿಲ್ಲ. ನೇಮಕಾತಿಯನ್ನು ಮಾಡಿರಲಿಲ್ಲ ಎಂದರು. ಹಾಗೆಯೇ ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, 13 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ನವೀಕರಣ ಮಾಡಲಾಗುತ್ತದೆ ಎಂದು ತಿಳಿಸಿದರು.












Click it and Unblock the Notifications