ಮೋಡಗಳ ಮೇಲೆ ನಡೆಯುವ ಅನುಭವ! ಬೇಸಿಗೆಯಲ್ಲಿ ಭೇಟಿ ನೀಡಲೇಬೇಕಾದ ಈ 5 ಗಿರಿಧಾಮಗಳು
ಬೇಸಿಗೆಯ ತಾಪಮಾನದಿಂದ ತಪ್ಪಿಸಿಕೊಳ್ಳಲು ಜನರು ಸಾಮಾನ್ಯವಾಗಿ ಗಿರಿಧಾಮಗಳಿಗೆ ಭೇಟಿ ನೀಡುತ್ತಾರೆ. ಆದರೆ ಕೆಲವು ಗಿರಿಧಾಮಗಳು ಕೇವಲ ತಂಪು ವಾತಾವರಣ ಮಾತ್ರವಲ್ಲ, ಮೋಡಗಳ ಮೇಲೆಯೇ ನಿಂತಿರುವಂತಹ ವಿಶಿಷ್ಟ ಅನುಭವವನ್ನೂ ನೀಡುತ್ತವೆ. ಬೆಳಗಿನ ಹೊತ್ತಿನಲ್ಲಿ ಅಥವಾ ಮಳೆಯ ನಂತರ, ಮೋಡಗಳು ಪರ್ವತಗಳ ಕೆಳಭಾಗದಲ್ಲಿ ಹರಡಿಕೊಂಡಿರುವ ದೃಶ್ಯಗಳು ಕನಸಿನ ಲೋಕಕ್ಕೆ ಕರೆದೊಯ್ಯುತ್ತವೆ.
ಮೋಡಗಳ ಮೇಲೆ ನಡೆಯುವಂತಹ ಅನುಭವ ನೀಡುವ 5 ಗಿರಿಧಾಮಗಳ ವಿವರ:

ನಂದಿ ಬೆಟ್ಟ
ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಗಿರಿಧಾಮ. ನಂದಿ ಬೆಟ್ಟ ಬೆಳಗಿನ ಮಂಜು ಮತ್ತು ಮೋಡಗಳ ದೃಶ್ಯಕ್ಕೆ ಪ್ರಸಿದ್ಧ. ಸೂರ್ಯೋದಯದ ಸಮಯದಲ್ಲಿ ಮೋಡಗಳ ಮಧ್ಯೆ ಬೆಟ್ಟಗಳು ಹೊರಬರುವ ದೃಶ್ಯ ಪ್ರವಾಸಿಗರನ್ನು ಸೆಳೆಯುತ್ತದೆ. ಇದು ವಾರಾಂತ್ಯದ ಜನಪ್ರಿಯ ಪ್ರವಾಸಿ ತಾಣವಾಗಿದೆ.
ಕೊಡೈಕೆನಾಲ್
ಕೊಡೈಕೆನಾಲ್ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪಳನಿ ಬೆಟ್ಟಗಳ ಮೇಲಿರುವ ಸುಂದರ ಗಿರಿಧಾಮ. ಮಂಜಿನಿಂದ ಆವೃತವಾದ ಕಣಿವೆಗಳು, ದಟ್ಟ ಅರಣ್ಯಗಳು ಮತ್ತು ಸುಂದರ ವೀಕ್ಷಣಾ ಸ್ಥಳಗಳಿಗೆ ಪ್ರಸಿದ್ಧ. 'ಕೋಕರ್ಸ್ ವಾಕ್' ಸೇರಿದಂತೆ ಹಲವೆಡೆ ಮೋಡಗಳು ಪರ್ವತಗಳನ್ನು ಸುತ್ತುವರಿದಿರುವ ದೃಶ್ಯವನ್ನು ನೋಡಬಹುದು.
ತ್ರಿಯುಂಡ್
ಹಿಮಾಚಲ ಪ್ರದೇಶದಲ್ಲಿರುವ ತ್ರಿಯುಂಡ್ ಟ್ರೆಕ್ಕಿಂಗ್‌ಗಾಗಿ ಪ್ರಸಿದ್ಧ ತಾಣ. ಧರ್ಮಶಾಲಾದ ಮೆಕ್ಲಿಯೋಡ್ ಗಂಜ್‌ನಿಂದ ಆರಂಭವಾಗುವ ತ್ರಿವುಂಡ್ ಚಾರಣವು, ಧೌಲಧರ್ ಪರ್ವತ ಶ್ರೇಣಿಗಳ ಅದ್ಭುತ ನೋಟವನ್ನು ನೀಡುವ ಅತ್ಯಂತ ಪ್ರೇಕ್ಷಣೀಯ ತಾಣವಾಗಿದೆ.
ಡ್ಯೂಕ್‌ಸ್ ನೋಸ್
ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಈ ಪರ್ವತ ಶಿಖರ 'ನಾಗ್ಫಣಿ' ಎಂದೂ ಕರೆಯಲಾಗುತ್ತದೆ. ಮಂಜಿನ ಸಮಯದಲ್ಲಿ ಮೋಡಗಳು ಕಣಿವೆಗಳ ನಡುವೆ ಹರಿದಾಡುತ್ತವೆ. ಇಲ್ಲಿ ನಿಂತಾಗ ಮೋಡಗಳ ಮೇಲಿರುವ ಅನುಭವ ಸಿಗುತ್ತದೆ.
ಕುದುರೆಮುಖ
ಕರ್ನಾಟಕದ ಕುದುರೆಮುಖ ತನ್ನ ಹಸಿರು ಪರ್ವತ ಪ್ರದೇಶ ಮತ್ತು ಟ್ರೆಕ್ಕಿಂಗ್ ಮಾರ್ಗಗಳಿಗೆ ಹೆಸರುವಾಸಿ. ಎತ್ತರಕ್ಕೆ ಏರಿದಂತೆ ಮೋಡಗಳು ಕೆಳಗೆ ಕಾಣುವ ಅನುಭವ ಸಿಗುತ್ತದೆ. ಹಸಿರು ಮೈದಾನಗಳು ಮತ್ತು ತಂಪಾದ ಗಾಳಿ ಈ ಸ್ಥಳವನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಒಂದು ಸುಂದರ ಗಿರಿಶಿಖರ ಮತ್ತು ಜನಪ್ರಿಯ ಚಾರಣ ತಾಣವಾಗಿದೆ.
ಪರ್ವತ ಪ್ರದೇಶಗಳಲ್ಲಿ ತೇವಾಂಶವುಳ್ಳ ಗಾಳಿಯು ಮೇಲೇರಿ ತಂಪಾದಾಗ ಮೋಡಗಳು ರೂಪುಗೊಳ್ಳುತ್ತವೆ. ಹವಾಮಾನದ ಏರುಪೇರಿನಿಂದಾಗಿ ಈ ಮೋಡಗಳು ಕೆಲವೊಮ್ಮೆ ಪರ್ವತದ ಕೆಳಭಾಗದಲ್ಲಿಯೇ ಉಳಿಯುತ್ತವೆ. ಆಗ ಶಿಖರದ ಮೇಲಿರುವವರಿಗೆ ತಾವು ಮೋಡಗಳಿಗಿಂತ ಎತ್ತರದಲ್ಲಿದ್ದೇವೆ ಎಂಬ ಅದ್ಭುತ ಅನುಭವ ಉಂಟಾಗುತ್ತದೆ.
ಈ ಹಿಲ್ ಸ್ಟೇಷನ್‌ಗಳು ಬೇಸಿಗೆಯಲ್ಲಿ ತಂಪು ಮಾತ್ರವಲ್ಲ, ವಿಭಿನ್ನ ಪ್ರಕೃತಿ ಅನುಭವವನ್ನು ನೀಡುತ್ತವೆ. ನಗರ ಜೀವನದ ಗದ್ದಲದಿಂದ ದೂರ ಹೋಗಿ ಪ್ರಕೃತಿಯ ನಡುವೆ ವಿಶ್ರಾಂತಿ ಪಡೆಯಲು ಇದು ಉತ್ತಮ ಆಯ್ಕೆಯಾಗಿವೆ.














Click it and Unblock the Notifications