ನಿಸರ್ಗ ನಿರ್ಮಿತ ತಾಣ ಬಿಸಿಲೆ ಘಾಟ್ ಗೆ ಬನ್ನಿ

ನಿಸರ್ಗದ ಚೆಲುವನ್ನೆಲ್ಲಾ ಮೈಮೇಲೆ ಎಳೆದುಕೊಂಡು ಪ್ರವಾಸಿಗರ ಮನತಣಿಸಲೆಂದೇ ಸೃಷ್ಟಿಯಾಗಿರುವ ತಾಣವೇ ಬಿಸಿಲೆಘಾಟ್. ಅತ್ತ ದಕ್ಷಿಣ ಕನ್ನಡ, ಇತ್ತ ಕೊಡಗು. ನಡುವಿನ ಹಾಸನ ಜಿಲ್ಲೆಯ ನೆಲದಲ್ಲಿ ನೆಲೆ ನಿಂತಿದೆ ಬಿಸಿಲೆಘಾಟ್. ಕೊಡಗಿನ ಸೋಮವಾರಪೇಟೆ, ದಕ್ಷಿಣಕನ್ನಡದ ಕುಕ್ಕೆಸುಬ್ರಹ್ಮಣ್ಯ, ಹಾಸನದ ಸಕಲೇಶಪುರಕ್ಕೆ ಈ ತಾಣ ಸಮೀಪವಿರುವುದರಿಂದ ಈ ಸ್ಥಳಗಳಿಗೆ ಭೇಟಿ ನೀಡಿದ ಪ್ರವಾಸಿಗರಿಗೆ ಬಿಸಿಲೆಘಾಟ್‌ಗೆ ತೆರಳುವುದು ಕಷ್ಟವಾಗುವುದಿಲ್ಲ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಧಿಕ ಸಂಖ್ಯೆಯಲ್ಲಿ ತೆರಳುವ ಪ್ರವಾಸಿಗರು ದೇವರ ದರ್ಶನ ಮಾಡಿಕೊಂಡು ಹಿಂತಿರುಗಿಬಿಡುತ್ತಾರೆ. ಆದರೆ ಹೆಚ್ಚಿನವರಿಗೆ ಅಲ್ಲಿಂದ ಕೆಲವೇ ಕಿ.ಮೀ. ಕ್ರಮಿಸಿದರೆ ನಿಸರ್ಗ ನಿರ್ಮಿತ ಚೆಲುವಿನ ತಾಣಗಳಲ್ಲಿ ಒಂದಾದ ಬಿಸಿಲೆಘಾಟ್‌ನ್ನು ವೀಕ್ಷಿಸಬಹುದು ಎಂಬುವುದು ಗೊತ್ತೇ ಆಗುವುದಿಲ್ಲ. ಹಾಗಾಗಿ ಸುಂದರ ತಾಣವೊಂದರ ದರ್ಶನ ಭಾಗ್ಯದಿಂದ ವಂಚಿತರಾಗಿಬಿಡುತ್ತಾರೆ.
ತಲುಪುವುದು ಹೇಗೆ?: ಹಾಸನಕ್ಕೆ ತೆರಳುವ ಪ್ರವಾಸಿಗರು ಸಕಲೇಶಪುರಕ್ಕೆ ತೆರಳಿದರೆ ಅಲ್ಲಿಂದ 50 ಕಿ.ಮೀ. ದೂರ ಕ್ರಮಿಸಿದರೆ ಬಿಸಿಲೆಘಾಟ್ ತಲುಪಬಹುದು. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅಲ್ಲಿಂದ ಸುಮಾರು 20 ಕಿ.ಮೀ.ಸಾಗಿದರೆ ಸಾಕು. ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ತಾಲೂಕು ಕೇಂದ್ರದಲ್ಲೊಂದಾದ ಸೋಮವಾರಪೇಟೆಗೆ ತೆರಳಿ ಅಲ್ಲಿಂದ 40ಕಿ.ಮೀ. ದೂರವನ್ನು ಶಾಂತಳ್ಳಿ, ಕುಂದಳ್ಳಿ ರಸ್ತೆಯಲ್ಲಿ ವಣಗೂರು ಮೂಲಕ ಸಾಗಿದರೆ ಕೂಡುರಸ್ತೆ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಬಿಸಿಲೆಘಾಟ್‌ನ್ನು ತಲುಪಬಹುದು.
ಕೊಡಗಿನ ಪ್ರೇಕ್ಷಣೀಯ ತಾಣಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಮೈಸೂರಿನಿಂದ ಕುಶಾಲನಗರ, ಸೋಮವಾರಪೇಟೆ, ಶಾಂತಳ್ಳಿ ಮೂಲಕ ಬಿಸಿಲೆ ಘಾಟ್ ತಲುಪಬಹುದು. ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೂ ತೆರಳಬಹುದಾಗಿದೆ. ಬಿಸಿಲೆಘಾಟ್ ಮೂರು ಜಿಲ್ಲೆಗೆ ಹೊಂದಿಕೊಂಡಂತೆ ಇರುವುದರಿಂದ ಇಲ್ಲಿಗೆ ತೆರಳಲು ಪ್ರವಾಸಿಗರಿಗೆ ಅನುಕೂಲವಾಗಿದೆ.
ಈ ತಾಣ ಪಶ್ಚಿಮ ಘಟ್ಟದ ಅರಣ್ಯದ ಸುಂದರ ನೋಟವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ಮಲೆನಾಡಿನಲ್ಲಿ ನೆಲೆನಿಂತಿರುವುದರಿಂದ ರಸ್ತೆಯ ಇಬ್ಭಾಗದಲ್ಲಿಯೂ ಬೆಳೆದು ನಿಂತ ಹೆಮ್ಮರಗಳು, ಬೆಟ್ಟಗುಡ್ಡಗಳ ನಡುವಿನ ಅಂಕುಡೊಂಕಾದ ರಸ್ತೆಯಲ್ಲಿ ಸಾಗಬೇಕು. ಇದೊಂದು ರೀತಿಯ ರೋಮಾಂಚನಕಾರಿ ಅನುಭವ ಎಂದರೆ ತಪ್ಪಾಗಲಾರದು.
ಸೋಮವಾರಪೇಟೆ ಹಾಗೂ ಸಕಲೇಶಪುರದ ಕಡೆಯಿಂದ ಬರುವವರು ಕೂಡುರಸ್ತೆಯಿಂದ ಮುಂದಕ್ಕೆ ಹೋದರೆ ಎಡಭಾಗದಲ್ಲಿ ಪ್ರವೇಶ ದ್ವಾರ ಎದುರಾಗುತ್ತದೆ. ಪ್ರವೇಶದ್ವಾರವನ್ನು ಹೊಕ್ಕಿ ಮುನ್ನಡೆದರೆ ನಿಸರ್ಗದ ರಮಣೀಯ ದೃಶ್ಯ ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿ ಬಿಡುತ್ತದೆ. ಗುಡ್ಡದ ಮೇಲಿನ ಕಡಿದಾದ ದಾರಿಯಲ್ಲಿ ಸಾಗುತ್ತಿದ್ದರೆ ಎಡಭಾಗದಲ್ಲಿ ಕಣ್ಣು ಹಾಯಿಸಿದುದ್ದಕ್ಕೂ ಕಾಣುವ ನೂರಾರು ಅಡಿಯ ಪ್ರಪಾತ ಎದೆ ಢವಢವ ಬಡಿದುಕೊಳ್ಳುವಂತೆ ಮಾಡುತ್ತದೆ. ಅರಣ್ಯ ಇಲಾಖೆಯ ಅಧೀನದಲ್ಲಿ ಈ ತಾಣವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ.
ನೆಮ್ಮದಿಯ ತಾಣ : ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ. ದೂರದಲ್ಲಿ ಸಾಲುಗಟ್ಟಿ ನಿಂತ ಹಾಸನ, ಕೊಡಗು, ದಕ್ಷಿಣಕನ್ನಡ ಜಿಲ್ಲೆಗಳಿಗೆ ಸೇರಿದ ಬೆಟ್ಟಗಳು ಮುಗಿಲನ್ನು ಚುಂಬಿಸುತ್ತಿವೆಯೇನೋ ಎಂಬಂತೆ ಗೋಚರವಾಗುತ್ತದೆ. ಬೆಟ್ಟ ಸಾಲುಗಳ ನಡುವೆ ಗಗನಚುಂಬಿಯಾಗಿ ಕಣ್ಮನ ಸೆಳೆಯುವ ಬೆಟ್ಟಗಳೆಂದರೆ, ಹಾಸನ ಜಿಲ್ಲೆಗೆ ಸೇರಿದ 1112 ಮೀ. ಎತ್ತರದ ಪಟ್ಟಬೆಟ್ಟ, 900 ಮೀ. ಎತ್ತರದ ಇನ್ನಿಕಲ್ಲು ಬೆಟ್ಟ, ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ 1319 ಮೀ. ಎತ್ತರದ ಕುಮಾರ ಪರ್ವತ, ಕೊಡಗಿಗೆ ಸೇರಿದ 1119 ಮೀ. ಎತ್ತರದ ದೊಡ್ಡಬೆಟ್ಟ ಹಾಗೂ 1712 ಮೀ. ಎತ್ತರದ ಪುಷ್ಪಗಿರಿ ಪರ್ವತಗಳು ಗಮನಸೆಳೆಯುತ್ತವೆ.
ಈ ಬೆಟ್ಟಗಳ ಮೇಲೆ ಬೆಳೆದು ನಿಂತ ಹಸಿರು ಕಾನನಗಳು ಹಾಗೂ ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಗಿಡಮರಗಳು, ಹೆಬ್ಬಂಡೆಗಳ ಮೇಲಿಂದ ಧುಮುಕುವ ಜಲಪಾತಗಳು, ಪ್ರಪಾತದಾಳದಲ್ಲಿ ಭೋರ್ಗರೆಯುವ ಗಿರಿಹೊಳೆಯ ಸದ್ದು, ಸುಯ್ಯೆಂದು ಬೀಸಿ ಬರುವ ಗಾಳಿ, ವನ್ಯ ಪ್ರಾಣಿಗಳ ಘೀಳಿಡುವ ಸದ್ದು, ಹಕ್ಕಿಗಳ ಚಿಲಿಪಿಲಿಯೊಂದಿಗೆ ಜೇನಿನ ಝೇಂಕಾರವು ನಿಸರ್ಗದ ಚೆಲುವನ್ನು ಅನುಭವಿಸಲೆಂದು ಬರುವ ಪ್ರವಾಸಿಗರ ಮನವನ್ನು ಬಡಿದೆಬ್ಬಿಸಿ ಕುಪ್ಪಳಿಸಿ ಕುಣಿಯುವಂತೆ ಮಾಡಿಬಿಡುತ್ತದೆ.
ಅರಣ್ಯದ ನಡುವೆ ನಿರ್ಮಾಣವಾಗಿರುವ ತಾಣವಾದುದರಿಂದ ಇಲ್ಲಿ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದ್ದು, ರಾತ್ರಿ ವೇಳೆಯಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವುದು ಅಪಾಯ. ಏಕೆಂದರೆ ಅರಣ್ಯವಲಯವಾದುದರಿಂದ ಕಾಡಾನೆ ಸೇರಿದಂತೆ ವನ್ಯ ಮೃಗಗಳು ಸಂಚರಿಸುತ್ತಿರುತ್ತವೆ. ಇಲ್ಲಿಗೆ ಸಮೀಪದ ಗ್ರಾಮಗಳ ಮನೆಗಳಲ್ಲಿ ಪ್ರವಾಸಿಗರಿಗೆ ಊಟದ ವ್ಯವಸ್ಥೆಗಳಿವೆಯಾದರೂ ಆಹಾರ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಒಳ್ಳೆಯದು.
ನಿಸರ್ಗದ ಚೆಲುವನ್ನು ತನ್ನೊಡಲಲ್ಲಿ ಸೇರಿಸಿಕೊಂಡು ನಿಂತಿರುವ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ದಯವಿಟ್ಟು ಪ್ಲಾಸ್ಟಿಕ್ ಚೀಲ, ಬಾಟಲಿ ಮುಂತಾದ ವಸ್ತುಗಳನ್ನು ಎಸೆದು ಪರಿಸರವನ್ನು ಹಾಳುಗೆಡವಬೇಡಿ ಎನ್ನುವುದು ಪ್ರಕೃತಿ ಪ್ರೇಮಿಗಳ ವಿನಂತಿಯಾಗಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications