ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಮಹಾತ್ಮೆ : ನಾಡಿನ ನ್ಯಾಯದೇಗುಲ "ಧರ್ಮಸ್ಥಳ"

By * ಬಾಲರಾಜ್ ತಂತ್ರಿ
|
Google Oneindia Kannada News

Dharmasthala Manjunatha Swamy
ಎಲ್ಲ ವರ್ಗದ ಜನರನ್ನು ಏಕರೀತಿಯಲ್ಲಿ ಕಾಣುವ, ಶಾಂತಿಯ ನೆಲೆವೀಡಾಗಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ, ರಾಜಕೀಯ ಕಾರಣಗಳಿಂದಾಗಿ ಸುದ್ದಿಯ ಕೇಂದ್ರ ಬಿಂದುವಾಗಿದೆ. ಭಕ್ತಾದಿಗಳು ವರ್ಷಪೂರ್ತಿ ಮಂಜುನಾಥನ ಸಂದರ್ಶನಕ್ಕೆಂದು ಇಲ್ಲಿಗೆ ಬರುತ್ತಾರೆ. ಈ ಧಾರ್ಮಿಕ ಕ್ಷೇತ್ರದ ಐತಿಹಾಸಿಕ ಮಹತ್ವ ಮತ್ತು ಅಲ್ಲಿನ ನಡಾವಳಿಗಳ ಕುರಿತು ಸಂಕ್ಷಿಪ್ತ ಲೇಖನ ಇಲ್ಲಿದೆ.

ಐತಿಹಾಸಿಕ ಮಹತ್ವ : ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ದ ಧಾರ್ಮಿಕ ತಾಣ ಮಂಜುನಾಥಸ್ವಾಮಿಯ ನೆಲೆಬೀಡು ಧರ್ಮಸ್ಥಳ. ನೇತ್ರಾವತಿ ನದಿ ದಡದಲ್ಲಿರುವ ಈ ದೇವಾಲಯಕ್ಕೆ ಸುಮಾರು 700 - 800 ವರ್ಷಗಳ ಇತಿಹಾಸವಿದೆ. ಶ್ರೀ ಕ್ಷೇತ್ರವನ್ನು ಹಿಂದೆ "ಕುಡುಮ" ಎಂದು ಕರೆಯಲಾಗುತ್ತಿತ್ತು. ಈ ಪ್ರಾಂತ್ಯದ ನೆಲ್ಯಾಡಿಬೀಡು ಎನ್ನುವ ಮನೆಯಲ್ಲಿ ಮಹಾನ್ ದೈವಭಕ್ತರಾದ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎನ್ನುವ ದಂಪತಿಗಳಿದ್ದರು. ಧರ್ಮಿಷ್ಟರಾದ ಈ ದಂಪತಿಗಳ ಮನೆಗೆ ಒಮ್ಮೆ ನಾಲ್ಕು ಜನ ಅತಿಥಿಗಳು ಆಗಮಿಸಿದರು. ಬಂದ ಅತಿಥಿಗಳನ್ನು ನೇಮನಿಷ್ಠೆಯಿಂದ ದಂಪತಿಗಳು ಸತ್ಕರಿಸಿದರು.

ಅದೇ ದಿನ ರಾತ್ರಿ ಬಂದಿದ್ದ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಹೆಗ್ಡೆ ಅವರ ಕನಸಿನಲ್ಲಿ ಬಂದು ಇದೇ ಮನೆಯಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಆದೇಶದಂತೆ ದಂಪತಿಗಳು ತಾವು ವಾಸವಾಗಿದ್ದ ಮನೆಯನ್ನು ತೆರವು ಮಾಡಿ ದೇವತೆಗಳಿಗೆ ಬಿಟ್ಟು ಕೊಟ್ಟರು. ಕಾಳರಾಹು, ಕಾಳರಕಾಯ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ದೇವತೆಗಳು ಆ ಮನೆಯಲ್ಲಿ ನೆಲೆ ನಿಂತರು. ದೈವಗಳ ಆದೇಶದಂತೆ ಪೆರ್ಗಡೆಯವರು ಗುಡಿ ಕಟ್ಟಿಸಿ, ಬ್ರಾಹ್ಮಣ ಅರ್ಚಕರನ್ನು ನೇಮಿಸಿದರು. ಧರ್ಮದೇವತೆಗಳು ಅಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿ, ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿ ಕೊಟ್ಟರು.

ಅಣ್ಣಪ್ಪಸ್ವಾಮಿ ಕದ್ರಿ ಎನ್ನುವ ಪ್ರದೇಶದಿಂದ ಶಿವಲಿಂಗವನ್ನು ತರುವ ಮುನ್ನವೇ ಧರ್ಮದೇವತೆಗಳು ದೇವಾಲಯವನ್ನು ನಿರ್ಮಿಸಿದ್ದರು ಮತ್ತು ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಯಿತು ಎನ್ನುವುದು ಇತಿಹಾಸ. ಕ್ಷೇತ್ರದ ರಕ್ಷಣೆಗೆ ಧರ್ಮದೇವತೆಗಳು ಅಣ್ಣಪ್ಪನನ್ನು ನೇಮಿಸಿದರು. ಹಾಗಾಗಿ ಇಲ್ಲಿ ಅಣ್ಣಪ್ಪ ಪಂಜುರ್ಲಿಯ (ಅಣ್ಣಪ್ಪ) ಶಕ್ತಿ ಅಪರಿಮಿತ ಎನ್ನಲಾಗಿದೆ. ಧರ್ಮದೇವತೆಗಳು ನಿರ್ಮಿಸಿದ್ದ ದೇವಾಲಯವಾದ್ದರಿಂದ ಕ್ಷೇತ್ರ ಧರ್ಮಸ್ಥಳವೆಂದು ಹೆಸರಾಯಿತು.

ಕ್ಷೇತ್ರದಲ್ಲಿ ದೈನಂದಿನ ಪೂಜೆ, ಅನ್ನ ಸಂತರ್ಪಣೆ, ಧಾರ್ಮಿಕ ವಿಧಿವಿಧಾನಗಳಲ್ಲಿ ಸ್ವಲ್ಪ ಲೋಪದೋಷ ಬಂದರೂ ಧರ್ಮಾಧಿಕಾರಿಗಳಿಗೆ ಅಣ್ಣಪ್ಪ ಕನಸಿನಲ್ಲಿ ಬಂದು ಎಚ್ಚರಿಸುತ್ತಾನೆ ಎನ್ನುವ ಮಾತು ಈಗಲೂ ಚಾಲ್ತಿಯಲ್ಲಿದೆ. ಉಡುಪಿಯ ಶ್ರೀ ವಾದಿರಾಜ ತೀರ್ಥರು ಇಲ್ಲಿಗೆ ಬಂದು ಶಿವನಿಗೆ ಪೂಜೆ ಸಲ್ಲಿಸುತ್ತಿದ್ದರೆನ್ನುವುದು ಇತಿಹಾಸ. ಹೆಗ್ಗಡೆ ಕುಟುಂಬದ ಸುಮಾರು 20 ತಲೆಮಾರಿನವರು ಕ್ಷೇತ್ರಕ್ಕಾಗಿ ತಮ್ಮನ್ನು ಮುಡಿಪಾಗಿ ಇಟ್ಟು ಕೊಂಡಿದ್ದಾರೆ. 1918ರಲ್ಲಿ ಮಂಜಯ್ಯ ಹೆಗ್ಗಡೆಯವರು ಕ್ಷೇತ್ರದ ಧರ್ಮಾಧಿಕಾರಿಯಾಗಿ 37 ವರ್ಷ ಸೇವೆ ಸಲ್ಲಿಸಿದರು. ಆ ನಂತರ ರತ್ನವರ್ಮ ಹೆಗ್ಗಡೆಯವರು 13 ವರ್ಷ ಸೇವೆ ಸಲ್ಲಿಸಿದರೆ, ತನ್ನ ಇಪ್ಪತ್ತನೇ ವಯಸ್ಸಿನಿಂದ ಅಂದರೆ 1968ರಿಂದ ಡಾ. ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ, ಚೈತ್ರಾ ಮಾಸದಲ್ಲಿ ಅಣ್ಣಪ್ಪ ದೈವಗಳ ನೇಮೋತ್ಸವ, ಮಹಾರಥೊತ್ಸವ, ಮಾಘ ಮಾಸದಲ್ಲಿ ಮಹಾಶಿವರಾತ್ರಿ ಮುಂತಾದ ಉತ್ಸವಗಳು ನಡೆಯುತ್ತದೆ. 2005ರಲ್ಲಿ ಮಹಾನಡಾವಳಿ ಉತ್ಸವ ನಡೆದಿತ್ತು.

ಕ್ಷೇತ್ರದ ನಿಯಮಗಳು : ಪುರುಷರು ಕಡ್ಡಾಯವಾಗಿ ಅಂಗಿ ಮತ್ತು ಬನಿಯನ್ ತೆಗೆದು ಗುಡಿ ಪ್ರವೇಶಿಸಬೇಕು. ಮಹಿಳೆಯರು ನೈಟಿ, ಹಾಫ್ ಪ್ಯಾಂಟ್ ಹಾಕಿಕೊಂಡು ಬಂದರೆ ಮತ್ತು ಎರಡು ವರ್ಷದ ಒಳಗಿನ ಮಕ್ಕಳಿಗೆ ದೇವಾಲಯದ ಆವರಣದಲ್ಲಿ ಪ್ರವೇಶವಿಲ್ಲ. ಬಂದ ಯಾತ್ರಾರ್ಥಿಗಳಿಗೆ ಉಚಿತ ಭೋಜನ ವ್ಯವಸ್ಥೆ ಇದೆ. ದೇವರ ದರ್ಶನಕ್ಕೆ ಬಂದವರು ಪ್ರಸಾದ ಸ್ವೀಕರಿಸಿ ಹೋಗುವುದು ಪದ್ಧತಿ. "ಮಾತು ಬಿಡ ಮಂಜುನಾಥ", ಸ್ವಾಮಿಯ ಹೆಸರಿನಲ್ಲಿ ಆಣೆ, ಪ್ರಮಾಣ ಮಾಡಿ ತಪ್ಪಾಗಿ ನಡೆದುಕೊಂಡರೆ ಮಂಜುನಾಥನು ಮೆಚ್ಚನು ಎನ್ನುವುದು ಈ ನಾಡಿಗೆ ತಿಳಿದಿರುವ ವಿಚಾರ.

ಸಂಘ ಸಂಸ್ಥೆಗಳು : ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ, ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೊತ್ಥಾನ ಟ್ರಸ್ಟ್, ಭಜನೆ ತರಬೇತಿ ಶಾಲೆ, ಅಂಚೆ ಕುಂಚ, ಯೋಗ ತರಬೇತಿ ಶಾಲೆ, ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ, ಎಸ್ ಡಿ ಎಂ ಕಾಲೇಜು, ಆಯುರ್ವೇದಿಕ ಶಾಲೆ ಮತ್ತು ಕಾಲೇಜು ಮುಂತಾದ ಹಲವಾರು ಸಮಾಜ ಸುಧಾರಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯ ನಡೆಸಿಕೊಂಡು ಬರುತ್ತಿದೆ.

ನೋಡಬಹುದಾದ ಸ್ಥಳಗಳು : ಕ್ಷೇತ್ರದ ಆವರಣದಲ್ಲಿ ಕಾರ್ ಮ್ಯೂಸಿಯಂ, ಮಂಜುಷಾ ವಸ್ತು ಸಂಗ್ರಹಾಲಯ, ಬಾಹುಬಲಿ ಬೆಟ್ಟ, ಚಂದ್ರಕಾಂತ ಸ್ವಾಮಿ ದೇವಾಲಯ, ಅಣ್ಣಪ್ಪಸ್ವಾಮಿ ಬೆಟ್ಟ. 60 ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ದೇವಾಲಯ, 90 ಕಿ.ಮೀ ದೂರದಲ್ಲಿ ಉಡುಪಿ ಶ್ರೀಕೃಷ್ಣ ದೇವಾಲಯ, 50 ಕಿ.ಮೀ ದೂರದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯ.

ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ವೆಬ್ ಸೈಟ್: http://www.shridharmasthala.org/index.asp ದೇವಾಲಯದ ದೂರವಾಣಿ ಸಂಖ್ಯೆ: 08256 -277121 /141, ಇ-ಮೇಲ್: [email protected]

English summary
Sri Kshetra Dharmasthala : Manjunatha Swamy temple in Belthangadi taluk, Mangalore district is one of the most visited pilgrimage place in Karnataka. Sri Veerendra Heggade is the dharmadhikari of the temple. Here is historic importance of the temple on the banks of Netravati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X