'ವಿಶ್ವಸಂಸ್ಥೆ ವಿಶ್ವ ನಾಯಕರ ಸಭೆಗೆ ನಾವೂ ಹಾಜರಾಗು‌ತ್ತೇವೆ' ಎಂದ ತಾಲಿಬಾನ್‌

ಕಾಬೂಲ್‌, ಸೆಪ್ಟೆಂಬರ್‌ 22: ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡು ಒಂದು ತಿಂಗಳು ಕಳೆದಿದೆ. ಈಗ ತಾಲಿಬಾನ್‌ ಸರ್ಕಾರವನ್ನು ಕೂಡಾ ರಚನೆ ಮಾಡಿದೆ. ಈ ನಡುವೆ ಈ ವಾರದಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಾನು ಕೂಡಾ ಹಾಜರಾಗಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದೆ.

ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿರುವ ವಿಶ್ವ ಸಂಸ್ಥೆಯ ವಕ್ತಾರರು, "ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಈ ವಾರ ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಾನು ಕೂಡಾ ಹಾಜರಾಗಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ," ಎಂದು ತಿಳಿಸಿದ್ದಾರೆ.

9/11 ದಾಳಿಯ ಬಳಿಕ ಅಮೆರಿಕವೂ ತಾಲಿಬಾನ್‌ ಅನ್ನು ಅಫ್ಘಾನಿಸ್ತಾನದಿಂದ ಹೊರಗಟ್ಟಿ ಅಫ್ಘಾನಿಸ್ತಾನದಲ್ಲಿ ತನ್ನ ಸೇನೆಯನ್ನು ನಿಯೋಜನೆ ಮಾಡಿತು. ಆದರೆ ಸುಮಾರು ಎರಡು ದಶಕಗಳ ಬಳಿಕ ಅಫ್ಘಾನಿಸ್ತಾನದಿಂದ ಅಮೆರಿಕವೂ ತನ್ನ ಸೇನೆಯನ್ನು ವಾಪಾಸ್‌ ಪಡೆದುಕೊಂಡಿತು. ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಾಸ್‌ ಪಡೆಯುವ ಪ್ರಕ್ರಿಯೆ ಆರಂಭ ಮಾಡುತ್ತಿದ್ದಂತೆ ಅಫ್ಘಾನ್‌ ಮೇಲೆ ದಾಳಿ ಆರಂಭಿಸಿದ ತಾಲಿಬಾನ್‌ ಆಗಸ್ಟ್‌ 15 ರಂದು ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ, ನಿರೀಕ್ಷೆಗೂ ಅಧಿಕ ವೇಗದಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್‌ ತನ್ನ ಹಿಡಿತಕ್ಕೆ ಪಡೆದು ಈಗ ಸರ್ಕಾರವನ್ನು ರಚಿಸಿಕೊಂಡಿದೆ.

"ವಿಶ್ವಸಂಸ್ಥೆ ವಿಶ್ವನಾಯಕರ ಸಭೆಗೆ ನಾವೂ ಹಾಜರಾಗು‌ತ್ತೇವೆ"

"ಪ್ರಸ್ತುತ ಮಾನ್ಯತೆ ಪಡೆದ ಅಫ್ಘಾನ್ ರಾಯಭಾರಿ ಗುಲಾಮ್ ಇಸಾಜಿರಿಂದ ಸೆಪ್ಟೆಂಬರ್ 15 ರಂದು ಅಫ್ಘಾನಿಸ್ತಾನದ ನಿಯೋಗದ 76 ನೇ ವಾರ್ಷಿಕ ಅಧಿವೇಶನದ ಪಟ್ಟಿಯನ್ನು ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಪಡೆದರು," ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ. ಇದಾದ ಕೆಲವು ದಿನಗಳ ನಂತರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌ಗೆ ಅಫ್ಘಾನಿಸ್ತಾನದಿಂದ ಪತ್ರವೊಂದು ಬಂದಿದೆ. ಈ ಪತ್ರವು ಇಸ್ಲಾಮಿಕ್‌ ಎಮಿರೇಟ್‌ ಆಫ್‌ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಎಂಬ ಹೆಸರಲ್ಲಿ ಇದ್ದು, ಇದಕ್ಕೆ ಅಮೀರ್‌ ಖಾನ್‌ ಮುತ್ತಾಕಿ ಸಹಿ ಹಾಕಿದ್ದಾರೆ. ಹಾಗೆಯೇ "ಅಫ್ಘಾನಿಸ್ತಾನದ ವಿದೇಶಾಂಗ ಸಚಿವರಾಗಿ ನನಗೆ ವಿಶ್ವ ಸಂಸ್ಥೆಯ ವಿಶ್ವ ನಾಯಕರ ಸಭೆಯಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು," ಎಂದು ಎಂದು ಮನವಿ ಮಾಡಿದ್ದಾರೆ.

"ಅಶ್ರಫ್‌ ಘನಿಯನ್ನು ಹೊರಹಾಕಲಾಗಿದೆ, ಸುಹೈಲ್‌ ಶಾಹಿನ್‌ ವಿಶ್ವಸಂಸ್ಥೆ ಪ್ರತಿನಿಧಿ"

ಈ ಪತ್ರದಲ್ಲಿ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ, "ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್‌ ಘನಿಯನ್ನು ಆಗಸ್ಟ್‌ 15 ರಂದು ಹೊರಹಾಕಲಾಗಿದೆ ಹಾಗೂ ದೇಶದಲ್ಲಿ, ವಿಶ್ವದಾದ್ಯಂತ ಅಫ್ಘಾನಿಸ್ತಾನದ ಅಧ್ಯಕ್ಷ ಎಂದು ಅಶ್ರಫ್‌ ಘನಿಯನ್ನು ಗುರುತಿಸಲಾಗುವುದಿಲ್ಲ. ಆದ್ದರಿಂದ ಗುಲಾಮ್ ಇಸಾಜಿ ಅಫ್ಘಾನಿಸ್ತಾನವನ್ನು ಈಗ ಪ್ರತಿನಿಧಿಸುವುದಿಲ್ಲ," ಎಂದು ಉಲ್ಲೇಖ ಮಾಡಿರುವುದಾಗಿ ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ. ಹಾಗೆಯೇ "ತಾಲಿಬಾನ್‌ ತಮ್ಮ ಸರ್ಕಾರದ ಪರವಾಗಿ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿ, ರಾಯಭಾರಿ ಮೊಹಮ್ಮದ್‌ ಸುಹೈಲ್‌ ಶಾಹಿನ್‌ರನ್ನು ನಾಮನಿರ್ದೇಶನ ಮಾಡುವುದಾಗಿ ಪತ್ರದಲ್ಲಿ ತಿಳಿಸಿದೆ," ಎಂದು ಕೂಡಾ ವಿಶ್ವಸಂಸ್ಥೆ ವಕ್ತಾರರು ಹೇಳಿದ್ದಾರೆ.

"ಈ ವಿಶ್ವಸಂಸ್ಥೆ ಸಭೆಯಲ್ಲಿ ತಾಲಿಬಾನ್‌ಗೆ ಅವಕಾಶ ದೊರೆಯದು"

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಸಂಸ್ಥೆಯ ಹಿರಿಯ ವಕ್ತಾರರು, "ತಾಲಿಬಾನ್‌ನ ಈ ಮನವಿಯ ಬಗ್ಗೆ ನಮಗೆ ತಿಳಿದಿದೆ," ಎಂದು ಹೇಳಿದ್ದಾರೆ. "ಈ ವಿಶ್ವಸಂಸ್ಥೆಯ ಸಮಿತಿಯ ಸದಸ್ಯ ಅಮೆರಿಕ ಆಗಿದೆ. ಈ ಸಭೆಯನ್ನು ಅಮೆರಿಕ ಹೇಗೆ ನಡೆಸಬಹುದು ಎಂಬುವುದನ್ನು ಊಹಿಸಬಹುದು," ಎಂದು ವಕ್ತಾರರೊಬ್ಬರು ಅಭಿಪ್ರಾಯಿಸಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, "ಈ ಬಗ್ಗೆ ಉದ್ದೇಶ ಪೂರ್ವಕವಾಗಿ ನಿರ್ಧಾರ ಕೈಗೊಳ್ಳುವುದನ್ನು ತಡ ಮಾಡಬಹುದು. ಈ ವಿಶ್ವ ಉನ್ನತ ನಾಯಕರ ಅಧಿವೇಶನದ ಸಾಮಾನ್ಯ ಸಭೆಯಲ್ಲಿ ತಾಲಿಬಾನ್‌ಗೆ ಮಾತನಾಡಲು ಅವಕಾಶ ದೊರೆಯುವುದಿಲ್ಲ," ಎಂದು ಹೇಳಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯ ಸಭೆಯಲ್ಲಿ ಯಾವುದೇ ಮಾತುಕತೆ ನಡೆದರೆ, ಒಂಬತ್ತು ರಾಷ್ಟ್ರಗಳ ವಿಶ್ವಸಂಸ್ಥೆ ಒಕ್ಕೂಟ ಸಭೆಯನ್ನು ಸೇರಬೇಕಾಗುತ್ತದೆ. ಈ ಪತ್ರವನ್ನು ಈ ಸಮಿತಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಸಮಿತಿಯಲ್ಲಿ ಅಮೆರಿಕ, ರಷ್ಯಾ, ಚೀನಾ, ಬೂತಾನ್‌, ಬಹಾಮಾ, ಚಿಲೆ, ನಮೀಬಿಯಾ, ಸಿಯೆರಾ ಲಿಯೋನ್ ಮತ್ತು ಸ್ವೀಡನ್ ಇದೆ. ಇನ್ನು ರಷ್ಯಾ ಹಾಗೂ ಚೀನಾ ತನ್ನ ಆಡಳಿತ ಲಾಭಕ್ಕಾಗಿ ತಾಲಿಬಾನ್‌ ಪರವಾಗಿ ಹೇಳಿಕೆ ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

 1996-2001 ರಲ್ಲೂ ತಾಲಿಬಾನ್‌ ಸರ್ಕಾರಕ್ಕೆ ಮಣೆಹಾಕದ ವಿಶ್ವಸಂಸ್ಥೆ

1996-2001 ರಲ್ಲೂ ತಾಲಿಬಾನ್‌ ಸರ್ಕಾರಕ್ಕೆ ಮಣೆಹಾಕದ ವಿಶ್ವಸಂಸ್ಥೆ

ಈ ಹಿಂದೆ ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಲು ಅಫ್ಘಾನಿಸ್ತಾನದ ಪ್ರತಿನಿಧಿಗೆ ಸೆಪ್ಟೆಂಬರ್‌ 27 ರಂದು ನಿಗದಿ ಮಾಡಲಾಗಿದೆ. ಇದು ವಿಶ್ವಸಂಸ್ಥೆಯ ವಿಶ್ವ ನಾಯಕರ ಸಭೆಯ ಕೊನೆಯ ದಿನವಾಗಿದೆ. ಆದರೆ ಒಂದು ವೇಳೆ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರಕ್ಕೆ ಈ ಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಿದರೆ, ತಾಲಿಬಾನ್‌ ಪರವಾಗಿ ಯಾರು ಮಾತನಾಡಲಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಆದರೆ ತಾಲಿಬಾನ್‌ ಮಾತ್ರ ಈಗಾಗಲೇ ತನ್ನ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿ ಮೊಹಮ್ಮದ್‌ ಸುಹೈಲ್‌ ಶಾಹಿನ್‌ರನ್ನು ನಾಮನಿರ್ದೇಶನ ಮಾಡಿದೆ. ತಾಲಿಬಾನ್‌ 1996 ರಿಂದ 2001 ರಲ್ಲಿ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ವಿಶ್ವಸಂಸ್ಥೆಯು ತಾಲಿಬಾನ್‌ ಸರ್ಕಾರವನ್ನು ಗುರುತಿಸಲು ಒ‌ಪ್ಪಿಕೊಂಡಿಲ್ಲ. ಬದಲಾಗಿ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನ ಸರ್ಕಾರದ ಸ್ಥಾನವನ್ನು ಅದಕ್ಕೂ ಮುಂಚಿನ ಸೇನಾಧಿಕಾರಿ ಪ್ರಾಬಲ್ಯದ ಸರ್ಕಾರಕ್ಕೆ ನೀಡಿತ್ತು. ಈ ಸೇನಾಧಿಕಾರಿ ಪ್ರಾಬಲ್ಯದ ಸರ್ಕಾರದಲ್ಲಿ ಬುರ್ಹಾನುದ್ದೀನ್ ರಬ್ಬಾನಿ ಅಧ್ಯಕ್ಷರು ಆಗಿದ್ದರು. 2011 ಆತ್ಮಾಹುತಿ ಬಾಂಬ್‌ಕೋರ ದಾಳಿಗೆ ಬುರ್ಹಾನುದ್ದೀನ್ ರಬ್ಬಾನಿ ಸಾವನ್ನಪ್ಪಿದ್ದಾರೆ.

 ''ಯುದ್ಧ ಪೀಡಿತ ದೇಶದ ಪುನರ್‌ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡಿ'' ಎಂದ ತಾಲಿಬಾನ್‌

''ಯುದ್ಧ ಪೀಡಿತ ದೇಶದ ಪುನರ್‌ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡಿ'' ಎಂದ ತಾಲಿಬಾನ್‌

ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರವನ್ನು ರಚನೆ ಏನೋ ಮಾಡಿದೆ. ಆದರೆ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗೆ ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆಯೂ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಾಲಿಬಾನ್‌, "ಯುದ್ಧ ಪೀಡಿತ ಅಫ್ಘಾನಿಸ್ತಾನವನ್ನು ಪುನರ್‌ ನಿರ್ಮಾಣ ಮಾಡಲು ಆರ್ಥಿಕ ಸಹಾಯ ಬೇಕು," ಎಂದು ತಾಲಿಬಾನ್‌ ಮನವಿ ಮಾಡಿದೆ. ಇನ್ನು ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮನ್ನಣೆಯನ್ನು ನಮಗೆ ನೀಡಬೇಕು ಎಂದು ತಾಲಿಬಾನ್‌ ಕೇಳಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರವನ್ನು ರಚನೆ ಮಾಡಿರುವುದು ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಮಾತ್ರ ಉಭಯಸಂಕಟವಾಗಿದೆ. ಇನ್ನು ಈ ನಡುವೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದಲ್ಲಿರುವ ಸಚಿವರುಗಳು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಭಯೋತ್ಪಾದಕರ ಹಾಗೂ ಭಯೋತ್ಪಾದನೆ ಸಂಘಟನೆಗಳ ಸ್ಥಾಪಕರ ಪಟ್ಟಿಯಲ್ಲಿ ಇದ್ದಾರೆ.

(ಒನ್‌ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+