ಪಪ್ಪಾ "ಮಮ್ಮೀ'' ಎಲ್ಲಿ ಎಂದು ಕೇಳುವ ಈ ಕಂದಮ್ಮನಿಗೆ ಏನು ಉತ್ತರ ಕೊಡೋಣ?
ಬೆಂಗಳೂರು, ಸೆ. 05: ಅದು ಐದು ವರ್ಷದ ಕಂದಮ್ಮ. ಆರು ತಿಂಗಳ ಹಿಂದೆ ಗಂಡನ ಜತೆ ಕ್ಷುಲ್ಲಕ ಕಾರಣಕ್ಕೆ ಬೇಸತ್ತು ಮಗುವಿನ ತಾಯಿ ನೇಣಿಗೆ ಶರಣಾದಳು. ಮೃತ ಹೆಣ್ಣು ಮಗಳ ಪೋಷಕರು ನೀಡಿದ ದೂರಿನಿಂದ ಆ ಮಗುವಿನ ಅಪ್ಪ ಜೈಲು ಸೇರಿದ. ಜೈಲಿನಿಂದ ಬಿಡುಗಡೆಯಾದ ಕೂಡಲೇ ಕಂದಮ್ಮನನ್ನು ಎತ್ತಿ ಆಡಿಸಿದ ತಂದೆಗೆ ಮುದ್ದು ಕಂದಮ್ಮ ಕೇಳಿದ್ದು ಒಂದೇ ಪ್ರಶ್ನೆ. "ಪಪ್ಪಾ, ಮಮ್ಮೀ ಎಲ್ಲಿ'' ?
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆತ್ಮಹತ್ಯೆ ಪ್ರಕರಣವೊಂದರ ಸತ್ಯಘಟನೆಯಿದು. ಅಂದಹಾಗೆ ಆ ಮುದ್ದು ಕಂದಮ್ಮನಿಗೆ "ನಿನ್ನ ಮಮ್ಮೀ, ಸ್ವಾಮಿ ಹತ್ತಿರ ಹೋಗಿದ್ದಾರೆ. ಇನ್ನೂ ಕೆಲವು ದಿನ ಆದ ಮೇಲೆ ಬರ್ತಾರೆ ಅಂತ ಹೇಳಿ ಸಮಾಧಾನ ಪಡಿಸುತ್ತಲೇ ಇದ್ದಾರೆ. ಒಂದು ದಿನ ಆ ಮಗುವಿಗೆ ಗೊತ್ತಾಗಲೇ ಬೇಕಲ್ಲವೇ "ನನ್ನಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ"ಅಂತ. ಈ ಮುಗ್ಧ ಕಂದಮ್ಮನಿಗೆ ಜೀವನ ಪರ್ಯಂತ ಅಮ್ಮನ ವಾತ್ಸಲ್ಯ ಸಿಗಲು ಸಾಧ್ಯವೇ ? ಇದು ಕೇವಲ ಒಂದು ನೈಜ ಘಟನೆ. ರಾಜ್ಯದಲ್ಲಿ ದಿನಕ್ಕೆ ಸರಾಸರಿ 70 ಮಂದಿ ಒಂದಲ್ಲಾ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಕಥೆಗಳು ಇದಕ್ಕಿಂತಲೂ ಘೋರವಾಗಿರಬಹುದು!
ಹೌದು. ರಾಜ್ಯದಲ್ಲಿ ಜನರ ಮಾನಸಿಕ ಆರೋಗ್ಯ ಕೆಡುತ್ತಿದೆ. ಮುಗ್ಧ ಜೀವಗಳು ತಮ್ಮ ಸಮಸ್ಯೆಗಳಿಗೆ ಸಾವೇ ಕೊನೆಯ ಪರಿಹಾರ ಎಂದು ತೀರ್ಮಾನಿಸಿ ಆತ್ಮಹತ್ಯೆ ಮೊರೆ ಹೋಗುತ್ತಿದ್ದಾರೆ. ಆತ್ಮಹತ್ಯೆ ಪರಿಹಾರವಲ್ಲ ಎಂಬ ಫಿಲಾಸಪಿ ನಡುವೆಯೂ ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 25 ಸಾವಿರ ಮಂದಿ ತಮ್ಮ ಜೀವವನ್ನು ತಮ್ಮ ಕೈಯಿಂದಲೇ ಕಳೆದುಕೊಂಡಿದ್ದಾರೆ. ಅಂದರೆ ಒಂದು ದಿನಕ್ಕೆ ಸರಾಸರಿ 70 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2021 ರ ಸೆಪ್ಟೆಂಬರ್ ವೇಳೆಗೆ ಅದಾಗಲೇ 20,142 ಮಂದಿ ಆತ್ಮಹತ್ಯೆ ಮಾಡಿಕೊಂಡಾಗಿದೆ!

ಸರಿಯಾದ ಸಮಯಕ್ಕೆ ಒಂದು ಸಾಂತ್ವನ, ಒಂದು ಭರವಸೆ, ಪುಟ್ಟದೊಂದು ಸಲಹೆ ಸಿಕ್ಕಿದ್ದಲ್ಲಿ, ಸಾಯುವ ತೀರ್ಮಾನದ ವಿರುದ್ಧ ಬದುಕಿನ ಭರವಸೆ ಮೂಡಿಸಿದ್ದೇ ಆದಲ್ಲಿ ಕರ್ನಾಟಕ ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 25 ಸಾವಿರ ಅಮೂಲ್ಯ ಜೀವಗಳು ಉಳಿಯುತ್ತಿದ್ದವು. ಕೊರೊನಾ ವಿಚಾರದಲ್ಲಿ ಪ್ರತಿ ಸಾವನ್ನು ಲೆಕ್ಕ ಹಾಕುವ ಸರ್ಕಾರ, ಮಾನಸಿಕ ನೋವು, ಸಾಲಬಾಧೆ ಕೌಟುಂಬಿಕ ಕಲಹ, ಪ್ರೇಮ ವೈಫಲ್ಯದಂತಹ ಕ್ಷುಲ್ಲಕ ಕಾರಣಗಳಿಗೆ ಜೀವ ಕಳೆದುಕೊಳ್ಳುತ್ತಿರುವರ ರಕ್ಷಣೆ ವಿಚಾರದಲ್ಲಿ ಆಸಕ್ತಿಯೇ ತೋರಿದಂತಿಲ್ಲ. ಕಳೆದ ಮೂರು ವರ್ಷದಲ್ಲಿನ ಅಂಕಿ ಅಂಶ ಪರಿಗಣಿಸಿದರೆ ರಾಜ್ಯದಲ್ಲಿ ಸರಾಸರಿ ವರ್ಷಕ್ಕೆ 25 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ನಟಿ ಸವಿ ಮಾದಪ್ಪ ತನ್ನ ಪ್ಲಾಟ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರು. ಕಾರಣ ಮಾನಸಿಕ ಖಿನ್ನತೆ. ಪತ್ರಕರ್ತ ಹಲ್ಲೆಗೆರೆ ಶಂಕರ್ ಅವರ ಪುತ್ರ ಮಧು ಸಾಗರ್ ಸೇರಿ ಐವರು ಸಾಮೂಹಿಕ ಆತ್ಮಹತ್ಯೆಗೆ ಶರಣಾದರು. ಕಾರಣ ಕುಟುಂಬದಲ್ಲಿ ನೆಮ್ಮದಿ ಇಲ್ಲ, ಆಡಂಭರದ ಜೀವನ ಬೆನ್ನೇರಿ ಹೋಗಿದ್ದು. ನೆಲಮಂಗಲದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣಿಗೆ ಶರಣಾದರು. ಕಾರಣ ಗಂಡನ ಅಗಲಿಕೆ ನೋವು, ಆರ್ಥಿಕ ಸಂಕಷ್ಟ. ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಸದ್ದು ಮಾಡಿದ್ದು ಕೇವಲ ಮೂರು ಪ್ರಕರಣ. ಆದರೆ ಅಪರಾಧ ಲೆಕ್ಕದ ಅಂಕಿ ಅಂಶಗಳನ್ನು ತೆರೆದು ನೋಡಿದರೆ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಮೂಡುತ್ತದೆ.

ಅಂಕಿ ಅಂಶ ಏನು ಹೇಳುತ್ತದೆ ?: ರಾಜ್ಯದಲ್ಲಿ 2019 ರಲ್ಲಿ ರಾಜ್ಯದಲ್ಲಿ 20,369 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ರಲ್ಲಿ 26,176 ಮಂದಿ ತಮ್ಮ ಜೀವ ತಾವೇ ತೆಗೆದುಕೊಂಡಿದ್ದಾರೆ. 2021 ಸೆಪ್ಟೆಂಬರ್ ವೇಳೆಗೆ 20,142 ಮಂದಿ ಅದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಾಸರಿ ದಿನಕ್ಕೆ 70 ಮಂದಿ ಸಾವಿಗೀಡಾಗುತ್ತಿದ್ದಾರೆ. ಅದೇ ಕೊರೊನಾ ಸೋಂಕಿನಿಂದ ಪ್ರತಿ ದಿನ 70 ಮಂದಿ ಸಾವನ್ನಪ್ಪಿದರೆ ಪರಿಸ್ಥಿತಿ ರಾಜ್ಯದಲ್ಲಿ ಅದೇನಾಗುತ್ತಿತ್ತೋ ? ಆದರೆ ಆತ್ಮಹತ್ಯೆ ಯಿಂದ ಆಗುವ ಸಾವುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ವಿಪರ್ಯಾಸವೆಂದರೆ ಅಭಿವೃದ್ಧಿ ನಗರೀಕರಣ ಮೈಗೂಡಿಸಿಕೊಂಡಿರುವ ನಗರ ಪ್ರದೇಶದಲ್ಲಿ ಆತ್ಮಹತ್ಯೆಗಳು ಜಾಸ್ತಿಯಾಗುತ್ತಿಗೆ. ಕಲುಬುರ್ಗಿ ಯಂತಹ ಹಿಂದುಳಿದ ಜಿಲ್ಲೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಿವೆ.
ಸರ್ಕಾರದ ಕ್ರಮವೇನು :
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆತ್ಮಹತ್ಯೆಗಳು ಜಾಸ್ತಿಯಾಗುತ್ತಿದ್ದವು. ಇದೀಗ ಪರಿಸ್ಥಿತಿ ಬದಲಾಗಿದೆ. ಭಾರತದಂತಹ ದೇಶಗಳಲ್ಲಿ ಆತ್ಮಹತ್ಯೆಗಳು ಜಾಸ್ತಿಯಾಗಿವೆ. ಜಪಾನಿನಲ್ಲಿ ಆತ್ಮಹತ್ಯೆ ತಡೆಯಲು, ಮಾನಸಿಕ ಖಿನ್ನತೆಗೆ ಒಳಗಾಗುವರನ್ನು ಅದರಿಂದ ಹೊರ ತರಲು ಪ್ರತ್ಯೇಕ ಇಲಾಖೆಯೇ ಇದೆ. ರಾಜ್ಯದಲ್ಲಿ ಆತ್ಮಹತ್ಯೆ ತಡೆಯಲು ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಪ್ತ ಸಲಹೆ ನೀಡಲಿದೆ. ವಾಸ್ತವದಲ್ಲಿ ಯಾರಿಗೆ ಅಗತ್ಯವಿದೆಯೋ ಅವರನ್ನು ತಲುಪುತ್ತಿಲ್ಲ ಎಂಬುದು ಅಷ್ಟೇ ವಾಸ್ತವ.

ಆತ್ಮಹತ್ಯೆಯೇ ಪರಿಹಾರವೇ? :
ವಕೀಲ ಬಿ. ಸಿದ್ದೇಶ್ವರ ಆಪ್ತ ಮಾತು: "ದೈಹಿಕ ಅರೋಗ್ಯದಂತೆ ಮಾನಸಿಕ ಆರೋಗ್ಯ ಕೂಡ ಮುಖ್ಯ. ಕಾನೂನಿನ ಪರಿಭಾಷೆಯಲ್ಲಿ ಹೇಳುವುದಾದರೆ, ಆತ್ಮಹತ್ಯೆ ಪ್ರಚೋದನೆ ಒಂದು ಘೋರ ಅಪರಾಧ. ಯಾರೇ ಆಗಲೀ ಆತ್ಮಹತ್ಯೆಯೇ ಪರಿಹಾರ ಎಂದು ಭಾವಿಸಬಾರದು. ಆತ್ಮಹತ್ಯೆ ಮಾಡಿಕೊಳ್ಳುವರು ಹೇಡಿಗಳು. ಜೀವನದಲ್ಲಿ ಏನೇ ಬಂದರೂ ಎದುರಿಸಬೇಕು. ಜೀವನ ಅಂದರೆ ಒಂದು ಹೋರಾಟ. ಸಾಲವಾಗಲೀ, ಕುಟುಂಬದ ಜಗಳವಾಗಲೀ, ಪ್ರೀತಿ ವೈಫಲ್ಯ ವಿಚಾರದಲ್ಲಿ ಆ ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಇಡೀ ಕುಟುಂಬಕ್ಕೆ ಕಳಂಕ ತರುವ ತೀರ್ಮಾನ. ವ್ಯಕ್ತಿ ಸದಾ ಪಾಸಿಟಿವ್ ಆಗಿ ಚಿಂತನೆ ಮಾಡಬೇಕು. ಸಾವು ಒಂದೇ ಎಲ್ಲದಕ್ಕೂ ಪರಿಹಾರವಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದು ಕೊಲೆಗಿಂತಲೂ ಘೋರ ಅಪರಾಧ. ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡುವುದಕ್ಕಿಂತಲೂ ನಮ್ಮ ಆತ್ಮವನ್ನು ನಾವೇ ಹತ್ಯೆ ಮಾಡುವುದರಿಂದ ಜೀವನ ಪದಕ್ಕೆ ಅರ್ಥ ಇರುವುದಿಲ್ಲ'' ಎಂದು ವಕೀಲ ಬಿ. ಸಿದ್ದೇಶ್ವರ ಆತ್ಮಹತ್ಯೆ ಕುರಿತು ವಿವರಿಸುತ್ತಾರೆ.

ಜೀವನ ಶೈಲಿ ಬದಲಾಗಲಿ:
ಖಿನ್ನತೆ, ಭಯ, ದುರಾಸೆ, ಅತಿಯಾದ ವ್ಯಾಮೋಹ, ನಾಟಕೀಯ ನಡವಳಿಕೆ, ಸ್ವಾರ್ಥ, ಕುಟುಂಬದಲ್ಲಿ ಹೊಂದಾಣಿಕೆ ಕೊರತೆ, ಒತ್ತಡ ಜೀವನ ಶೈಲಿ, ಸಾಲ, ಪ್ರೇಮ ವೈಫಲ್ಯ, ಮಾನಸಿಕ ಕಿರುಕುಳ ಆತ್ಮಹತ್ಯೆಗೆ ಮೂಲ ಕಾರಣಗಳು. ಇವಕ್ಕೆ ಮೊದಲು ನಾವೇ ಪರಿಹಾರ ಮಾಡಿಕೊಳ್ಳಬೇಕು. ಜೀವನ ಶೈಲಿ ಬದಲಾವಣೆ ಮಾಡಿಕೊಂಡು, ಆಸೆ, ಆಕಾಂಕ್ಷೆ, ಭಯ, ಮತ್ತು ಪಂಚೇಂದ್ರಿಯಗಳನ್ನು ನಿಯಂತ್ರಣಲ್ಲಿ ಇಟ್ಟುಕೊಳ್ಳಬೇಕು. ಸದಾ ಆಶಾವಾದಿಯಾಗಿ ದೇವರ ಮೇಲೆ ನಂಬಿಕೆ ಇಟ್ಟು ಬದುಕಬೇಕು. ಆಗ ಆತ್ಮಹತ್ಯೆಯ ತೀರ್ಮಾನಗಳೇ ಬರಲ್ಲ. ನಟಿ ದೀಪಿಕಾ ಪಡುಕೋಣೆಯೇ ಪ್ರೀತಿ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿ ವಾಪಸು ಚೇತರಿಸಿಕೊಂಡು ಈಗ ಖುಷಿಯಾಗಿಲ್ಲವೇ ? ಖಿನ್ನತೆ ಎಂದು ಆತ್ಮಹತ್ಯೆಗೆ ಶರಣಾಗಿದ್ದರೆ ? ಕಾಫಿ ಕೋಟೆ ಕಟ್ಟಿದ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡು ಸಾಧಿಸಿದ್ದೇನು ? ಎಲ್ಲಾ ಸಮಸ್ಯೆಗಳಿಗೂ ಸಮಯ ಒಂದೇ ಪರಿಹಾರ. ಹೀಗಾಗಿ ಸಮಸ್ಯೆ ಎದುರಾದಾಗ ತಾಳ್ಮೆ ವಹಿಸಬೇಕು. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಭಾವನೆ ಎಲ್ಲರಲ್ಲೂ ಬರುತ್ತದೆ. ಆದರೆ, ಆ ಕ್ಷಣ ಅದರಿಂದ ಹೊರ ಬಂದರೆ ಸಾಕು ಎಂದು ವಕೀಲ ಸಿದ್ದೇಶ್ವರ ಸಲಹೆ ಮಾಡುತ್ತಾರೆ.

ಆತ್ಮಹತ್ಯೆಗೊಂದು ಆಪ್ತ ಸಲಹೆ:
ಆತ್ಮಹತ್ಯೆ ಎಂಬುದು ಪಾಶ್ಚಾತ್ಯ ದೇಶದಲ್ಲಿ ಜಾಸ್ತಿ ಇತ್ತು. ಮನಸನ್ನು ಸದಾ ಹಸನಾಗಿಟ್ಟುಕೊಳ್ಳಲು ಭಾರತದ ಪರಂಪರೆಯಲ್ಲಿ ಋಷಿ ಮುನಿಗಳು, ಗುರು ಹಿರಿಯರು, ತಂದೆ ತಾಯಿ, ಸಂತರು ಅನೇಕ ಪರಿಹಾರ ಪರಿಚಯಿಸಿದ್ದಾರೆ. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪರಿಚಯಿಸಿರುವ ಯೋಗ, ಧ್ಯಾನ, ಪ್ರಾರ್ಥನೆ, ಸರಳ ಜೀವನ ಪದ್ಧತಿ ಅಳವಡಿಸಿಕೊಂಡರೆ ಆತ್ಮಹತ್ಯೆ ಎಂಬ ಪದವನ್ನೇ ತೆಗೆದು ಹಾಕಬಹುದು. ಸಮಾಜದಲ್ಲಿ ಇನ್ನೊಬ್ಬರು ಏನೂ ಅಂದುಕೊಳ್ಳುತ್ತಾರೆ ಅಂತ ಬುದುಕುವುದು ಬಿಡಬೇಕು. ಐಶರಾಮಿ ಜೀವನ ಶೈಲಿ ಅಳವಡಿಸಿಕೊಳ್ಳಬಾರದು. ಆತ್ಮಹತ್ಯೆ ಮಾಡಿಕೊಂಡವರು ಒಂದು ದಿನ ಸತ್ತುಹೋದರೆ ಅವರನ್ನು ಪ್ರೀತಿಸುವ ಹೃದಯಗಳು ಜೀವನ ಪರ್ಯಂತ ಇಲ್ಲಿ ನರಕ ಅನುಭವಿಸುತ್ತಿರುತ್ತವೆ. ಆತ್ಮಹತ್ಯೆ ಎಂಬುದು ಕ್ಷಮಿಸಲಾರದಂತಹ ಅಪರಾಧ. ಆತ್ಮಹತ್ಯೆ ಮಾಡಿಕೊಳ್ಳುವ ಕಾರಣಗಳೇ ಇಲ್ಲ. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವೇ ಅಲ್ಲ ಎಂಬ ವಾಸ್ತವದ ಮೇಲೆ ನಿಂತರೆ ಆತ್ಮಹತ್ಯೆಗೆ ಪ್ರೇರಪಿಸುವ ಕಾರಣಗಳು ನಿಮ್ಮ ಬಳಿ ಸುಳಿಯುವುದೂ ಇಲ್ಲ ಎಂದು ಹಲವು ಆತ್ಮಹತ್ಯೆ ಪ್ರಕರಣಗಳ ವಿವರ ಮುಂದಿಡುತ್ತಾರೆ ವಕೀಲ ಸಿದ್ದೇಶ್ವರ್ ಅವರು.












Click it and Unblock the Notifications