'ಕೇಂದ್ರ ಸರ್ಕಾರವನ್ನು ದೂರುವುದರ ಹಿಂದೆ ಸಂಚಿದೆ'
ಕೆಲವು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯು ಜನರಿಗೆ ರಕ್ಷಣೆ ಕೊಡುವುದಕ್ಕಾಗಿ ಸ್ಥಾಪಿತವಾದ ಪೋಲೀಸ್ ಇಲಾಖೆಯೋ, ಸಿಬಿಐನಂತಹ ತನಿಖಾ ಸಂಸ್ಥೆಯೋ ಎಂಬಂತೆ ಅದರ ನಿಷ್ಕ್ರಿಯತೆಯನ್ನು ಹಳಿಯುತ್ತಿದ್ದಾರೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಅಕಾಡೆಮಿಯು ಕೇಂದ್ರ ಸರ್ಕಾರದ ವಿರುದ್ಧವೇ ಖಂಡನಾ ನಿರ್ಣಯವನ್ನು ಮಂಡಿಸಬೇಕೆಂದು ಒತ್ತಾಯಿಸಿದ ಸಾಹಿತಿಗಳೂ ಇದ್ದಾರೆ. ವಿಚಾರವಾದಿಗಳ ಹತ್ಯೆಯಾದರೆ ಹಂತಕರನ್ನು ಬಂಧಿಸಿ ಕ್ರಮ ಜರುಗಿಸಲು ತನಿಖಾದಳಗಳಿವೆ.
ಪೂರ್ವನಿಯೋಜಿತ ಸಂಚಿನಿಂದಾದ ಹತ್ಯೆ ಪ್ರಕರಣಗಳಲ್ಲಿ ಹಂತಕರ ಬಂಧನ ಸುಲಭದ ಕೆಲಸವಲ್ಲ. ಯಾವ ಪಕ್ಷದ ಸರ್ಕಾರವೇ ಇರಲಿ ಹಂತಕರ ಬಂಧನವಿನ್ನೂ ಆಗಿಲ್ಲ ಎಂದಾಕ್ಷಣ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಮೊಂಡು ವಾದ ಮಾಡುವಂತಿಲ್ಲ. ಉತ್ತರ ಕನ್ನಡದಲ್ಲಿ ಶಾಸಕರಾಗಿದ್ದ ಡಾ.ಚಿತ್ತರಂಜನ್ ಹತ್ಯೆ ಮಾಡಿದ ಹಂತಕರನ್ನು ಇನ್ನೂ ಬಂಧಿಸಿಲ್ಲ. ಅವರು ಬಿಜೆಪಿ ಶಾಸಕರಾಗಿದ್ದರು ಮತ್ತು ಅವರನ್ನು ಹತ್ಯೆಗೈದವರು ಇಸ್ಲಾಮಿಕ್ ಮೂಲಭೂತವಾದಿ ಗಳೆಂದು ಸಾಬೀತಾಗಿದೆ. ಇದಕ್ಕೆ ಇವರು ಹೇಗೆ ಪ್ರತಿಕ್ರಿಯಿಸುತ್ತಾರೆ?

ಹತ್ಯೆಯ ತನಿಖೆಯಲ್ಲಿ ಹೆಚ್ಚಿನ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದರಿಂದ ಕೇಂದ್ರ ಸರ್ಕಾರವನ್ನು ದೂರುವುದರ ಹಿಂದೆ ವ್ಯವಸ್ಥಿತ ಸಂಚಿದೆಯೆಂದು ಸಾರ್ವಜನಿಕವಾಗಿ ಅನುಮಾನಿಸಿದ ಸಾಹಿತಿಗಳೂ ಇದ್ದಾರೆ. ಸಾಹಿತಿಗಳ ಈ ವರ್ತನೆ ಕೇಂದ್ರ ಸರ್ಕಾರವೇ ಈ ಎಲ್ಲ ಹತ್ಯೆಗಳನ್ನು ಮಾಡಿಸಿದೆಯೇನೋ ಎನ್ನುವಂತೆ ಹೊರ ಪ್ರಪಂಚಕ್ಕೆ ಅನಿಸುವಂತಿದೆ. ಯಾವ ಸರ್ಕಾರವೂ ಇಂತಹ ಹತ್ಯೆಯನ್ನು ಸಮರ್ಥಿಸಲಾರದು. ಉತ್ತರ ಭಾರತದಲ್ಲಿ ನಡೆದ ಗೋಮಾಂಸ ಭಕ್ಷಕ ಮುಸ್ಲಿಮನೊಬ್ಬನ ಹತ್ಯೆ ಮಾಡಿದ ಹಂತಕನು ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿದ್ದರೆ ಯಾವ ರೀತಿ ಪ್ರತಿಕ್ರಿಯಿಸಬಹುದಿತ್ತೊ ಆ ರೀತಿಯಲ್ಲಿ ಕೂಡ ಕೆಲವರು ಪ್ರತಿಕ್ರಿಯಿಸಿದ್ದಾರೆ. [ಎಲ್ಲದಕ್ಕೂ ಬಿಜೆಪಿ ದೂರುವುದನ್ನು ಬಿಡಿ]
ಏಕಕಾಲದಲ್ಲಿ ಸಾಹಿತಿಗಳ ಗುಂಪು ಈ ರೀತಿ ವರ್ತಿಸುವುದರ ಹಿಂದೆ ವ್ಯವಸ್ಥಿತವಾದ ಸಂಚಿದೆಯೇ? ಬಲವಾದ ಅನುಮಾನವಿದೆ. ಉತ್ತರ ತಮಿಳುನಾಡಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹತಿ ಜೋ ದಿ ಕ್ರೂಸ್ ದೇಶದಲ್ಲಿ ಅಲ್ಲಲ್ಲಿ ನಡೆದ ವಿಚಾರವಾದಿಗಳ ಹತ್ಯೆಗೂ ಮೋದಿ ಸರ್ಕಾರಕ್ಕೂ ಇಲ್ಲದ ಸಂಬಂಧವನ್ನು ಕಲ್ಪಿಸಿ ಕ್ಯಾತೆ ತೆಗೆಯುವ ಕೆಲವು ಸಾಹಿತಿಗಳಿಗೆ ಕಪಾಳ ಮೋಕ್ಷ ಮಾಡುವಂತೆ ಮಾತನಾಡಿದ್ದಾರೆ. ಹಿಂದೂ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಕ್ರೂಸ್ ಅವರು 'ಅಂತಾರಾಷ್ಟ್ರೀಯ ಸಮುದಾಯದ ನಡುವೆ ಭಾರತದ ಸಂಬಂಧವನ್ನು ವೃದ್ಧಿಪಡಿಸುವ ಪ್ರಯತ್ನದಲ್ಲಿ ಮೋದಿ ತೊಡಗಿರುವಾಗಲೇ ಈ ಸಂಘಟಿತ ಹುನ್ನಾರ ನಡೆಯುತ್ತಿದೆ' ಎಂದು ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. [ಕಲಬುರ್ಗಿ ಹತ್ಯೆ : ಅಮಿತ್ ಶಾ ಹೇಳುವುದೇನು?]
ವಾಸ್ತವ ಏನಿದ್ದರೂ ಭಾರತದಲ್ಲಿ ಇದೀಗ ನಡೆಯುತ್ತಿರುವ ಪ್ರಶಸ್ತಿ ವಾಪಸಾತಿಯ ನಾಟಕದ ವರದಿಯನ್ನು ಓದಿದ ಅನ್ಯ ದೇಶೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಭಾರತಕ್ಕೂ ಪಾಕಿಸ್ತಾನಕ್ಕೂ ವ್ಯತ್ಯಾಸವಿಲ್ಲ ಎಂಬ ಭ್ರಮೆ ಮೂಡಿದರೆ ಈ ಸಾಹಿತಿಗಳು ಕೆಲವರ ರಹಸ್ಯ ಉದ್ದೇಶ ಈಡೇರಿದಂತಾಗಬಹುದೋ ಏನೋ.
ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕಿಂತ ಗಂಭೀರವಾದ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನೆಲ್ಲ ಬಿಡಿ ಬಿಡಿಯಾಗಿ ಪರಿಹರಿಸುವುದಕ್ಕಿಂತ ಇಡಿಯಾಗಿ ವಿಶ್ಲೇಷಿಸಿ ಉತ್ತರವನ್ನು ಕಂಡುಕೊಳ್ಳುವ ಸಂಘಟಿತ ಪ್ರಯತ್ನಕ್ಕೆ ಸಾಹಿತಿಗಳು ಉದ್ದೇಶಪೂರ್ವಕವಾಗಿಯೇ ಇಳಿಯುತ್ತಿಲ್ಲ. ಉದಾಹರಣೆಗೆ ಲಕ್ಷಾಂತರ ಕೋಟಿ ಸಾರ್ವಜನಿಕ ಭೂಮಿಯನ್ನು ಲಪಟಾಯಿಸಿದ ಅಕ್ರಮಗಳು ಬೆಳಕಿಗೆ ಬಂದರೂ ಅದು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಸಾಹಿತಿಗಳು ಸುಮ್ಮನಿರುತ್ತಾರೆ. ಬ್ರಷ್ಟಾಚಾರದ ವಿರುದ್ಧ ಸಕ್ರಿಯವಾಗಿ ಸಾಹಿತಿಗಳು ಯಾಕೆ ಎದ್ದುನಿಲ್ಲುತ್ತಿಲ್ಲ?.












Click it and Unblock the Notifications