ಅಭಿಪ್ರಾಯ ಮಂಡಿಸಲು ಮುಕ್ತ ಅವಕಾಶ ಭಾರತದಲ್ಲಿದೆ
ಭಾರತದಲ್ಲಿ ಅಲ್ಲೊಂದು ಇಲ್ಲೊಂದು ವಿಚಾರವಾದಿಗಳ ಹತ್ಯೆ ನಡೆಯುತ್ತಿರಬಹುದು. ಆದರೆ ಇನ್ನೂ ನಿಷ್ಟುರವಾದ ಅಭಿಪ್ರಾಯ ಮಂಡಿಸುವವರಿಗೆ ಸಾಕಷ್ಟು ಮುಕ್ತ ಅವಕಾಶ ಭಾರತದಲ್ಲಿದೆ. ಸಾವಿರಾರು ಜನರನ್ನುದ್ದೇಶಿಸಿ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಪ್ರಧಾನಿ ಮೋದಿಯವರನ್ನು 'ನರಹಂತಕ'ನೆಂದು ಅಸಭ್ಯವಾಗಿ ಕರೆದರೂ ಇನ್ನೂ ಅವರನ್ನು ಯಾವ ಸರ್ಕಾರವೂ ಸಾರ್ವಜನಿಕರೂ ತರಾಟೆಗೆ ತೆಗೆದುಕೊಂಡಿಲ್ಲ ಅಲ್ಲವೇ? ಮೋದಿ ಪ್ರಧಾನಿಯಾಗಬಾರದೆಂದು ವಿಚಾರವಾದಿಗಳನೇಕರು ಅವರ ತೇಜೋವಧೆಗೆ ಹರಸಾಹಸಪಟ್ಟರು. ಮೋದಿ ಪ್ರಧಾನಿಯಾದ ಮೇಲೆ ಆರೋಪ ಮಾಡಿ ಹಗೆ ತೀರಿಸಿಕೊಳ್ಳುತ್ತಿದ್ದಾರೆ.
ಮೊದಲಿನಿಂದಲೂ ಭಾರತದ ಬೌದ್ಧಿಕ ಕ್ಷೇತ್ರವನ್ನು ಎಡಪಂಥೀಯರು ಆಳುತ್ತಲೇ ಬಂದಿದ್ದಾರೆ. ಎಡಪಂಥೀಯರು ಕಾಂಗ್ರೆಸ್ ಪ್ರಭುತ್ವವನ್ನು ಪರೋಕ್ಷವಾಗಿ ಭದ್ರಪಡಿಸುವ ಸಂಘಟಿತ ಪ್ರಯತ್ನವಾಗಿ ಹಿಂದೂ ಧರ್ಮದ ದೋಷಗಳನ್ನು ಮಾತ್ರ ಎತ್ತಿ ಹೇಳುತ್ತಾ ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಸ್ವತಂತ್ರ ವಿಚಾರಗಳು ಮೂಲೆಗುಂಪಾಯಿತು. [ಗೋಡ್ಸೆ ವಿಚಾರವಾದಿಗಳು ಕಲಬುರ್ಗಿ ಹಂತಕರು]

ವಾಮಪಂಥೀಯರು ವಿಶಾಲ ಭಾರತದ ಬಹುಸಂಖ್ಯಾತ ಸಾತ್ವಿಕ ಮನಸ್ಸನ್ನು ಯಾವ ಕಾಲಕ್ಕೂ ಪ್ರತಿನಿಧಿಸಲೇ ಇಲ್ಲ. ಎಡಪಂಥೀಯರು ಭಾರತೀಯವಾದದ್ದನ್ನೆಲ್ಲ ಹಿಂದೂಧರ್ಮದೊಡನೆ ಸಮೀಕರಿಸಿದ್ದರಿಂದ ಹಿಂದೂಗಳಲ್ಲಿ ಅಭದ್ರತೆ ಜಾಗ್ರತವಾಯಿತು. ಈ ಅಭದ್ರತೆಯೇ ಇಂದು ಬಲಪಂಥೀಯ ಸಂಘಟನೆಗಳ ಭದ್ರ ಬುನಾದಿಯಾಗಿದೆ. ಇದರ ಪರಿಣಾಮವಾಗಿ ಇಂದು ವಿಚಾರ ಸ್ವಾತಂತ್ರ್ಯಕ್ಕಿಂತ ವಿಚಾರಗಳೇ ಅತಂತ್ರವಾಗಿವೆ. [ಕಲಬುರ್ಗಿ ಹತ್ಯೆಗೆ ಖಂಡನೆ, ಸಾಹಿತಿಗಳಿಂದ ಪ್ರಶಸ್ತಿ ವಾಪಸ್]
ಈ ಗೊಂದಲವನ್ನು ರಾಜಕೀಯವಾಗಿ ಉಪಯೋಗಿಸಿಕೊಳ್ಳುವ ಪ್ರಯತ್ನಗಳು ಎಲ್ಲಾ ಕಡೆಯಲ್ಲಿಯೂ ನಡೆಯುತ್ತದೆ. ಡಾ.ಚಂದ್ರಶೇಖರ ಪಾಟೀಲ ಅವರು ಪ್ರಜಾವಾಣಿ ಸಂದರ್ಶನದಲ್ಲಿಯೂ ಪ್ರಶಸ್ತಿ ವಾಪಸಾತಿಯ ಹೋರಾಟ ಬಿಜೆಪಿ ವಿರುದ್ಧವಲ್ಲ ಎಂದು ಒಂದು ಕಡೆ ಹೇಳುತ್ತಾ ಇನ್ನೊಂದು ಕಡೆ ಮೋದಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬಲಪಂಥೀಯ ಸಂಘಟನೆಗಳಿಗೆ ಮೌನ ಸಮ್ಮತಿಯನ್ನು ನೀಡುತ್ತಿದ್ದಾರೆ ಎಂದು ಆಪಾದಿಸುವ ಪರಿಯೂ ಹೀಗೆ ಗೊಂದಲವನ್ನು ಉಪಯೋಗಿಸಿಕೊಳ್ಳುವ ಕ್ರಮವೇ ಎನಿಸುವುದಿಲ್ಲವೇ?.
ಡಾ.ಕಾರಂತರು ತುರ್ತು ಪರಿಸ್ಥಿತಿಯಲ್ಲಿ ತಮಗೆ ಕೊಡಲ್ಪಟ್ಟ ಪದ್ಮಭೂಷಣವನ್ನು ಹಿಂದಿರುಗಿಸಿದಾಗ ಎಲ್ಲಾ ಸಮಾಜವೇ ಅವರ ಹಿಂದಿತ್ತು. ಆದರೆ, ಎಂದೋ ಪಡೆದ ಪ್ರಶಸ್ತಿಯನ್ನು ಮತ್ತೆಂದೋ ಹಿಂದಿರುಗಿಸುವ ಸಾಹಿತಿಗಳು ನೆಗೆಪಾಟಲಿಗೀಡಾಗುತ್ತಿದ್ದಾರೆ. ಇದು ಯಾಕೆಂದು ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ಒಂದು ಕಾಲದಲ್ಲಿ ಸಮಾಜವನ್ನು ಮುನ್ನಡೆಸುವ ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಸಮಾಜದ ಜನರ ಮಧ್ಯದಲ್ಲಿದ್ದು ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.
ಆ ಕಾಲದಲ್ಲಿ ಅವರು ಸೋಗಲಾಡಿಗಳೆಂದು ನಿರೂಪಿಸುವುದು ಸುಲಭವಾಗಿರಲಿಲ್ಲ. ಆದರೆ, ನಗರ ಪ್ರದೇಶದಲ್ಲಿದ್ದುಕೊಂಡು ಸೆಮಿನಾರುಗಳಲ್ಲಿ ಸಮಾಜದದ ಸ್ಥಿತಿ ಗತಿಯ ಕುರಿತು ಭಾಷಣ ಮಾಡುತ್ತಾ ಆಗೊಮ್ಮೆ ಈಗೊಮ್ಮೆ ಪುಸ್ತಕ ಬರೆಯುತ್ತಾ ಜೀವಂತ ಸಮಾಜದ ಕಷ್ಟ ಸಂಕಷ್ಟಗಳಿಂದ ದೂರವಿರುವ ಬುದ್ಧಿಜೀವಿಗಳು ಇದೀಗ ತಾವು ಸೋಗಲಾಡಿಗಳಲ್ಲವೆಂದು ಪ್ರಾಯೋಗಿಕವಾಗಿ ನಿರೂಪಿಸಬೇಕಾಗಿದೆ.
ಭಾರತದಲ್ಲಿ ಪರಿಶಿಷ್ಟ ವರ್ಗದವರ ಮೇಲಿನ ಶೋಷಣೆಯನ್ನು ನಿಯಂತ್ರಿಸಲು ವಿಶೇಷ ಕಾನೂನನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ ಶೋಷಿತ ದಲಿತನೊಬ್ಬ ತನಗೆ ಜಾತಿಕಾರಣದಿಂದ ಹಿಂಸೆ ಕೊಡಲಾಗುತ್ತಿದೆಯೆಂದು ದೂರಿತ್ತರೆ ಆ ದೂರಿನನ್ವಯ ಕ್ರಮ ತೆಗೆದುಕೊಳ್ಳದಿದ್ದರೆ ಅಂತಹ ಪೋಲೀಸ್ ಅಧಿಕಾರಿಯೇ ಜೈಲಿಗೆ ಹೋಗಬೇಕಾಗುತ್ತದೆ ಮತ್ತು ಅಂತಹ ಪ್ರಕರಣಗಳಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಕೊಡಲು ಯಾವ ನ್ಯಾಯಾಲಯಕ್ಕೂ ಅಧಿಕಾರವಿರುವುದಿಲ್ಲ.
ಎಲ್ಲಕ್ಕಿಂತ ಮೊದಲು ನಾವೆಲ್ಲ ಸೇರಿ ಹದಗೆಡಿಸಿರುವ ನಮ್ಮ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಸ್ಥಿತಿಗತಿಯ ಫಲವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ಯಾವುದೋ ಒಂದು ರಾಜಕೀಯ ಪಕ್ಷವನ್ನಾಗಲೀ ಸರ್ಕಾರವನ್ನಾಗಲೀ ಮಾತ್ರ ದೂರುವ ದ್ವಂದ್ವನೀತಿಯನ್ನು ನಾವು ಬಿಟ್ಟು ವಿಶಾಲ ದೃಷ್ಟಿಕೋನದಿಂದ ಚಿಂತಿಸಿ ಸಂಯಮದಿಂದ ಮುಂದುವರಿಯಬೇಕಿದೆ.
ಲೇಖಕ : ಕಡತೋಕಾ ಗೋಪಾಲಕೃಷ್ಣ ಭಾಗವತ
ಸಂಪಾದಕ ಯಕ್ಷರಂಗ ಸಾಂಸ್ಕೃತಿ ನಿಯತಕಾಲಿಕ
ದೂರವಾಣಿ ಸಂಖ್ಯೆ 8762786856.












Click it and Unblock the Notifications