'ಆಗ ಬರಹಗಾರರೆಲ್ಲ ದಿವ್ಯ ಮೌನಕ್ಕೆ ಶರಣಾಗಿದ್ದರಂತೆ'
ಇತ್ತೀಚೆಗೆ ಅನೇಕ ಸಾಹಿತಿಗಳು ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ ಕೇಂದ್ರ ಸರ್ಕಾರ ನೀಡಿದ ಪ್ರಶಸ್ತಿಯನ್ನು ವಾಪಸ್ ನೀಡುವ ಅಭಿಯಾನದಲ್ಲಿ ತೊಡಗಿದ್ದಾರೆ. ಮೊದಮೊದಲು ಕೆಲವರು ಈ ಕ್ರಮ ಅನುಸರಿಸಿದರೂ ಕ್ರಮೇಣ ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಈ ಅಭಿಯಾನ ಮಾಡುತ್ತಿರುವುದನ್ನು ನೋಡಿದರೆ ಇವರೆಲ್ಲ ಪರಸ್ಪರ ಪೂರ್ವಭಾವೀ ಸಮಾಲೋಚನೆಯನ್ನು ಮಾಡಿಕೊಂಡಿದ್ದಾರೆ ಎಂಬ ಅನುಮಾನ ಬರುವಂತಿದೆ.
ನಿಷ್ಠುರವಾದ ಸತ್ಯವನ್ನು ನುಡಿಯುವ ವಿಚಾರವಾದಿಗಳನ್ನು ಹತ್ಯೆ ಮಾಡಲಾಗುತ್ತಿದೆ. ಆದ್ದರಿಂದ, ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದ ಅಂಚಿನಲ್ಲಿದೆ. ಇದರ ವಿರುದ್ಧ ಸಾತ್ವಿಕ ಪ್ರತಿಭಟನೆಯನ್ನು ಮಾಡಲು ಈ ಪ್ರಶಸ್ತಿ ವಾಪಸ್ ಮಾಡುಗುತ್ತಿದೆ ಎಂದು ಸಾಹಿತಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸರ್ಕಾರದ ಅಂಗ ಸಂಸ್ಥೆಯಾಗಿ ಕೆಲಸ ಮಾಡುವ ಅಕಾಡೆಮಿಗಳು ಸರ್ಕಾರದ ಅಧೀನದಲ್ಲಿಯೇ ಕೆಲಸ ಮಾಡುತ್ತಾ ಬಂದಿವೆ. ಇದರಲ್ಲಿ ಅಸಹಜವಾದದ್ದು ಏನೂ ಇಲ್ಲ. ಅನೇಕ ವರ್ಷಗಳ ಕಾಲ ಅಕಾಡೆಮಿ ಮತ್ತಿತರ ಸರ್ಕಾರದ ಅಡಿಯ ಸಂಸ್ಕೃತಿ ಸಂಬಂಧಿತ ಸಂಸ್ಥೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಗಳಾಗಿ ನೇಮಕ ಹೊಂದಿದ್ದ ಬರಹಗಾರ ಬುದ್ಧಿಜೀವಿಗಳಿಗೆ ಇದೀಗ ಸರ್ಕಾರೀ ಸಂಸ್ಥೆಗಳು ರಾಜಕೀಯದಿಂದ ಮುಕ್ತವಾಗಿರಬೇಕೆಂದು ನೆನಪಾಗಿಬಿಟ್ಟಿದೆ. [ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ]
ಯಾವುದೇ ಪಕ್ಷವು ಕೇಂದ್ರದಲ್ಲಿರಲಿ ರಾಜ್ಯದಲ್ಲಿರಲಿ, ಅಧಿಕಾರಕ್ಕೆ ಬಂದ ಕೂಡಲೇ ತಮ್ಮ ಪಕ್ಷದೊಟ್ಟಿಗೆ ಅಥವಾ ಅದರ ತತ್ವಗಳೊಟ್ಟಿಗೆ ತಮ್ಮನ್ನು ತಾವು ಗುರುತಿಸಿಕೊಂಡ ಬರಹಗಾರರನ್ನು ಮತ್ತು ಚಿಂತಕರನ್ನು ಅಥವಾ ಪ್ರತಿಭಾವಂತರನ್ನು ಬೌದ್ಧಿಕ ವಿಭಾಗಗಳಲ್ಲಿ ಸ್ಥಾನ ಕಲ್ಪಿಸಿ ಪೋಷಿಸುವುದು ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ನಡೆದುಕೊಂಡು ಬಂದ ಪರಿಪಾಠ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಭೂತಪೂರ್ವ ಜನಬೆಂಬಲವನ್ನು ಪಡೆದು ಅಧಿಕಾರಕ್ಕೆ ಬಂದ ಕೂಡಲೇ ಒಮ್ಮೆಲೇ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂಬಂತೆ ವರ್ತಿಸುವ ಸಾಹಿತಿಗಳು ಇಲ್ಲಿಯೂ ತಮ್ಮ ರಾಜಕೀಯ ಪೂರ್ವಾಗ್ರಹಗಳಿಗೆ ಬಲಿಬೀಳುತ್ತಿದ್ದಾರೆ ಎನ್ನಲು ಸಾಕಷ್ಟು ಆಧಾರಗಳಿವೆ. ವಿಚಾರವಾದಿಗಳ ಹತ್ಯೆ ಇಂದು ಮಾತ್ರವಲ್ಲ ಯಾವಾಗಲೂ ಖಂಡನೀಯವೆ.
ಸಮಾಜಕ್ಕೆ ಕಹಿ ಸತ್ಯವನ್ನು ಬೋಧಿಸಿದವರನ್ನು ಹತ್ಯೆಮಾಡುತ್ತಲೇ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಸ್ವಾತಂತ್ರ್ಯ ಬಂದ ಕೂಡಲೇ ನಾವು ಗಾಂಧಿಯನ್ನು ಹತ್ಯೆ ಮಾಡಿದ್ದೇವೆ. ಆ ನಂತರದ ದಶಕಗಳಲ್ಲಿ ಅನೇಕರ ಹತ್ಯೆಯು ಇಂತಹದೇ ಕಾರಣಕ್ಕಾಗಿ ಆಗಿದೆ. ಅಭಿಪ್ರಾಯ ಸ್ವಾತಂತ್ರ್ಯವನ್ನು ಸಂವಿಧಾನಬದ್ಧವಾಗಿ ಕೊಡಲಾಗಿದ್ದರೂ ಅದರ ಮೇಲೆ ಹಲ್ಲೆ ನಡೆಯುವ ಪ್ರಯತ್ನಗಳೂ, ನಿಷ್ಠುರ ಮತ್ತು ವೈಜ್ಞಾನಿಕ ಅಭಿಪ್ರಾಯಗಳನ್ನು ರಾಜಕೀಯ ಕಾರಣಗಳಿಗಾಗಿ ಹತ್ತಿಕ್ಕುವ ಪಟ್ಟಭದ್ರರ ಕೈ ಹಿಂದಿನಿಂದಲೂ ಪರೋಕ್ಷವಾಗಿ ಪ್ರಬಲವಾಗಿಯೇ ಇದೆ.
ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿರುವಾಗ ಸಲ್ಮಾನ್ ರಶ್ದಿಯವರ ವಿವಾದಾಸ್ಪದ 'ಸೆಟಾನಿಕ್ ವರ್ಸಸ್' ಎಂಬ ಕಾದಂಬರಿಯನ್ನು ಮತೀಯವಾದಿ ಮುಸ್ಲಿಮರನ್ನು ಒಲಿಸಿಕೊಳ್ಳುವುದಕ್ಕಾಗಿ ಅಂದಿನ ಕಾಂಗ್ರೆಸ್ ಪಕ್ಷದ ಕೇಂದ್ರ ಸರ್ಕಾರ ನಿಷೇಧಿಸಿದಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯವು ಇನ್ನೂ ಕರುಣಾಜನಕ ಸ್ಥಿತಿಯಲ್ಲಿತ್ತು. [ಕಲಬುರ್ಗಿ ಹತ್ಯೆ : ಕಾಂಗ್ರೆಸ್ ಮೌನಕ್ಕೆ ಕಾರಣವೇನು?]
ಬಾಂಗ್ಲಾದೇಶದಲ್ಲಿ ಮೂಲಭೂತವಾದಿ ಮುಸ್ಲಿಮರನ್ನು ಎದುರುಹಾಕಿಕೊಂಡು ಏಕಾಂಗಿಯಾಗಿ ಸಂಕಟದಲ್ಲಿರುವ ತಸ್ಲಿಮಾ ನಸ್ರೀಮ್ ಎಂಬ ಬರಹಗಾರ್ತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವ ಸ್ವಘೋಷಿತ ಜಾತ್ಯಾತೀತವಾದಿಗಳ ಬಣ್ಣವನ್ನು ಬಯಲುಮಾಡಿದ್ದಾರೆ.
ದಿವ್ಯ ಮೌನಕ್ಕೆ ಶರಣಾದಂತಿದೆ : ಹುಸಿ ಜಾತ್ಯಾತೀತವಾದಿಗಳ ಇತ್ತೀಚೆಗಿನ ಪ್ರಶಸ್ತಿ ವಾಪಸಾತಿ ತಂತ್ರವನ್ನು ಟೀಕಿಸುತ್ತಾ ತಸ್ಲಿಮಾ ಹೇಳುವಂತೆ ಅವರ ಪುಸ್ತಕವನ್ನು ಬಾಂಗ್ಲಾಕ್ಕೆ ಹತ್ತಿರದಲ್ಲಿರುವ ಎಡಪಂಥೀಯ ಸರ್ಕಾರದಿಂದ ಆಳಲ್ಪಡುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ನಿರ್ದಯವಾಗಿ ನಿಷೇಧಿಸಿದಾಗ ಹೆಚ್ಚಿನ ಬುದ್ಧಿಜೀವಿ ಬರಹಗಾರರೆಲ್ಲ ದಿವ್ಯ ಮೌನಕ್ಕೆ ಶರಣಾಗಿದ್ದರಂತೆ.












Click it and Unblock the Notifications