ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಬೇಕು

'ನಮ್ಮ ಪತ್ರಿಕೆಯ ಓದುಗರ ಪೈಕಿ ಶೇಕಡಾ ಐದರಷ್ಟು ಜನರೂ ಅಂತರ್ಜಾಲವನ್ನು ಬಳಸುವುದಿಲ್ಲ.' ಇದು ಪ್ರಮುಖ ಕನ್ನಡ ದಿನಪತ್ರಿಕೆಯೊಂದರ ಸಾಪ್ತಾಹಿಕ ಪುರವಣಿಯ ಸಂಪಾದಕರು ಕೆಲ ತಿಂಗಳುಗಳ ಕೆಳಗೆ ನನಗೆ ಹೇಳಿದ ಮಾತು.
'ಕೇವಲ ಶೇಕಡಾ 1.5ರಷ್ಟು (ಕನ್ನಡಿಗ) ಜನರು ಅಂತರ್ಜಾಲವನ್ನು ಬಳಸುತ್ತಾರೆ.' ಇದು ಇತ್ತೀಚೆಗೆ ಕನ್ನಡದ ಟ್ಯಾಬ್ಲಾಯ್ಡ್ ಒಂದರಲ್ಲಿ ಲೇಖಕರೊಬ್ಬರು ನೀಡಿರುವ ಹೇಳಿಕೆ.
ನನ್ನ ಪ್ರಕಾರ ಈ ಮೂರೂ ಅಭಿಪ್ರಾಯಗಳಲ್ಲೂ ತಥ್ಯಾಂಶವಿದೆ. ಆದರೆ ನಾವು ನಿರಾಶರಾಗಬೇಕಿಲ್ಲ. ಸದ್ಯಕ್ಕೇನೋ ನಾವು ಆನ್‌ಲೈನ್ ಪತ್ರಿಕೆಯೂ ಸೇರಿದಂತೆ ಅಂತರ್ಜಾಲವನ್ನು ಓದು, ಬರವಣಿಗೆ, ಚರ್ಚೆ ಮತ್ತು ಅಭಿಪ್ರಾಯ ವಿನಿಮಯಗಳಿಗಾಗಿ ಸಮೃದ್ಧವಾಗಿ ಮತ್ತು ಸಮರ್ಥವಾಗಿ ದುಡಿಸಿಕೊಳ್ಳುತ್ತಿಲ್ಲ, ಆದರೆ, ಅಂತರ್ಜಾಲವು ಮುಂದೆ ಸರ್ವಾಂತರ್ಯಾಮಿ ಹಂತ ತಲುಪತೊಡಗಿದಾಗ ಈ ದುಡಿಮೆ ತಾನಾಗಿಯೇ ಹೆಚ್ಚತೊಡಗುತ್ತದೆ. ಜೊತೆಗೇ, ಹೆಚ್ಚೆಚ್ಚು ಸಮರ್ಥವೂ ಮತ್ತು ಸಮಾಜದಲ್ಲಿ ಪ್ರಭಾವಶಾಲಿಯೂ ಆಗತೊಡಗುತ್ತದೆ. ಇಷ್ಟೇ ಅಲ್ಲ, ಈಗ ಹಲವು ಸಂದರ್ಭಗಳಲ್ಲಿ ತಾನು ಹೇಳಿದ್ದೇ ವೇದವಾಕ್ಯ ಎಂಬಂತೆ ಮೆರೆಯುತ್ತಿರುವ ಮುದ್ರಣ ಮಾಧ್ಯಮವೂ ಆಗ ತಂತಾನೇ 'ದಾರಿಗೆ' ಬರುತ್ತದೆ. ಹೀಗಾಗುವುದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ.
'ಅಂತರ್ಜಾಲ ಪತ್ರಿಕೋದ್ಯಮ'ವೆಂಬುದು ನಮ್ಮ ದೇಶದಲ್ಲಿ ಇನ್ನೂ ಕೂಸು. ಈ ಕೂಸು ಬೆಳೆದು ಮುಂದೆ ಯೌವನಕ್ಕೆ ಕಾಲಿಟ್ಟಾಗ ಅದರ ಪ್ರಭೆ, ಜೊತೆಗೆ ಪ್ರತಾಪ ಎರಡೂ ಪ್ರಖರವಾಗುತ್ತವೆ. ಸಮಾಜದ ಪ್ರಗತಿಯ ದೃಷ್ಟಿಯಿಂದ ಇದು ಸ್ವಾಗತಾರ್ಹ.
ನಿಧಾನವಾಗಿ ನಾವು ಅಂತರ್ಜಾಲದ ಯುಗಕ್ಕೆ ಕಾಲಿರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಾವು ಓದುಗರಾಗಿ ಮತ್ತು ಬರಹಗಾರರಾಗಿ ಪತ್ರಿಕೆಯೊಂದರ ಆನ್‌ಲೈನ್ ಸಾಧ್ಯತೆಗಳನ್ನು ಗರಿಷ್ಠವಾಗಿ ಮತ್ತು ಇತ್ಯಾತ್ಮಕವಾಗಿ ದುಡಿಸಿಕೊಂಡು ಅದ್ಭುತ ಸಾಮಾಜಿಕ ಪ್ರಗತಿಯನ್ನು ಹೊಂದಬಹುದು. ಅಂತರ್ಜಾಲದಲ್ಲಿ ನಮಗೆ ಲಭ್ಯವಿರುವ ಮುಕ್ತಮಾರ್ಗ ಮತ್ತು ಶೀಘ್ರ ಹಾಗೂ ವ್ಯಾಪಕ ಸಂವಹನಾ ಸೌಲಭ್ಯ ಇವು ಈ ನಿಟ್ಟಿನಲ್ಲಿ ನಮಗೆ ಅತ್ಯಂತ ಪ್ರಬಲ ಸಾಧನಗಳಾಗಿ ನೆರವಿಗೆ ಬರುತ್ತವೆ.
ಇದೆಲ್ಲ ಸಾಧ್ಯವಾಗಲು ಮೊದಲು ನಮ್ಮ ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಪಾತ್ರ ಮಹತ್ತ್ವದ್ದು.












Click it and Unblock the Notifications