ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಟ್ಯಾಕ್ಟ್ ಮಾಡಿದಾಗ ಏನು ಟೆಲ್ಲಲಿ?

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

H. Anandaram Shastry
ನನಗೀಗ ವಯಸ್ಸು ಅರವತ್ತು ಸಮೀಪಿಸುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ನಾನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಹೀಗೆಂದು ನಾನು ಭಾಷಣಕ್ಕಾಗಿ ಬಂದ ಎಲ್ಲ ಆಹ್ವಾನಗಳನ್ನೂ ಒಪ್ಪಿಕೊಳ್ಳುವುದಿಲ್ಲ. ಸಂಘಟಕರಿಗೆ ಮತ್ತು ಶ್ರೋತೃವರ್ಗಕ್ಕೆ ನನ್ನ ಭಾಷಣದ ವಿಷಯದಲ್ಲಿ ಇರಬಹುದಾದ ಆಸಕ್ತಿಯ ಬಗ್ಗೆ ಲಭ್ಯ ಸುಳಿವು ಪಡೆದು, ನನಗೆ ವಿಶ್ವಾಸ ಉಂಟಾದ ಬಳಿಕವೇ ನಾನು ಆಮಂತ್ರಣ ಒಪ್ಪಿಕೊಳ್ಳುತ್ತೇನೆ. (ಮಾತ್ರವಲ್ಲ, ನನಗೆ ಅಷ್ಟಾಗಿ ಅರಿವಿರದ ವಿಷಯದ ಬಗ್ಗೆ ಮಾತನಾಡಲು ನಿರಾಕರಿಸುತ್ತೇನೆ.) ಇಷ್ಟಾಗಿಯೂ ಕೆಲವೊಮ್ಮೆ ನಾನು ಟೋಪಿಬಿದ್ದದ್ದುಂಟು! ಅಂಥ ಒಂದು ಪ್ರಸಂಗ ಇಲ್ಲಿದೆ.

ಅದೊಂದು ವಿದ್ಯಾವಂತ ಹಿರಿಯ ನಾಗರಿಕರ ಸಂಘಟನೆ. ಅಲ್ಲಿ ಉಪನ್ಯಾಸ ನೀಡಲು ನನ್ನ ವಿಶ್ವಾಸಿಯೊಬ್ಬರಿಂದ ನನಗೆ ಕೋರಿಕೆ ಬಂತು. ಪ್ರತಿ ತಿಂಗಳೂ ನಿರ್ದಿಷ್ಟ ದಿನದಂದು ಏರ್ಪಡಿಸುವ ಉಪನ್ಯಾಸವನ್ನು ಪಿನ್ ಡ್ರಾಪ್ ಸೈಲೆನ್ಸ್‌ನಿಂದ ಶ್ರೋತೃಗಳು ಆಲಿಸುತ್ತಾರೆಂದೂ ಕನಿಷ್ಠಪಕ್ಷ ಒಂದೂವರೆ ಗಂಟೆ ಮಾತನಾಡಬೇಕಾಗುತ್ತದೆಂದೂ ವಿಷಯದ ಆಯ್ಕೆ ನನ್ನದೇ ಎಂದೂ ತಿಳಿದಾಗ ಸಂತೋಷದಿಂದ ಒಪ್ಪಿಕೊಂಡೆ. ಆರು ವಿಷಯಗಳನ್ನು ಸೂಚಿಸಿದೆ. ಎಲ್ಲವೂ ಗಂಭೀರ ವಿಷಯಗಳು. ಒಂದನ್ನು ಸಂಘಟಕರು ಆಯ್ಕೆಮಾಡಿದರು. ಆ ವಿಷಯದ ಬಗ್ಗೆ ತಯಾರಿ ನಡೆಸತೊಡಗಿದೆ.

ನನಗೆ ಚೆನ್ನಾಗಿ ಗೊತ್ತಿರುವ ವಿಷಯವೇ ಆದಾಗ್ಗ್ಯೂ ಗಟ್ಟಿಯಾದ ಪೂರ್ವಸಿದ್ಧತೆ ಇಲ್ಲದೆ ನಾನು ಮಾತನಾಡಲು ವೇದಿಕೆ ಹತ್ತುವುದಿಲ್ಲ. ಅಂತೆಯೇ ಈ ವಿಷಯದ ಬಗ್ಗೆಯೂ ಮೂರು ದಿನ ಕುಳಿತು ಸಿದ್ಧತೆ ಮಾಡಿಕೊಂಡೆ. ಹತ್ತಾರು ಪುಟಗಳಷ್ಟು ಸಾಮಗ್ರಿ ತಯಾರು ಮಾಡಿಕೊಂಡೆ.

ಆ ಮಧ್ಯೆ ಸಂಘಟನೆಯ ಕಾರ್ಯದರ್ಶಿಯವರು ನನ್ನ ಮನೆಗೆ ಬಂದು ಆಹ್ವಾನವನ್ನು ಖಾತ್ರಿಮಾಡಿ, ನನ್ನ ಬರುವಿಕೆಯನ್ನು ಖಾತ್ರಿಪಡಿಸಿಕೊಂಡುಹೋದರು. ಹಿಂದಿನ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಕೂಡ ನಡೆಸಿದ್ದಾಗಿ ಅವರು ಹೇಳಿದರಲ್ಲದೆ ನಿಗದಿತ ಸಮಯಕ್ಕೆ ಉಪನ್ಯಾಸ ಆರಂಭವಾದರೂ ಹಲವು ಶ್ರೋತೃಗಳು ಅರ್ಧ ಗಂಟೆಯಷ್ಟು ತಡವಾಗಿ ಬರುತ್ತಾರೆಂದೂ ಸೂಚನೆ ನೀಡಿದರು.

ನಾನು ಮಾತನಾಡಬೇಕಿದ್ದ ವಿಷಯ ಗಹನವೂ ಗಂಭೀರವೂ ಆಗಿರುವುದಾದ್ದರಿಂದ ಎಲ್ಲರೂ ಪೂರ್ಣ ಉಪನ್ಯಾಸವನ್ನು ಕೇಳಲಿ ಎಂಬ ಉದ್ದೇಶದಿಂದ ಹಾಗೂ ಕಳೆದ ತಿಂಗಳಿನಂತೆ ಈ ತಿಂಗಳೂ ಶ್ರೋತೃಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಸೊಗಡೂ ದೊರೆಯಲಿ ಎಂಬ ಆಶಯದಿಂದ ನನ್ನ ಉಪನ್ಯಾಸ ಕಾರ್ಯಕ್ರಮದಲ್ಲೂ ಆರಂಭದಲ್ಲಿ ಕೊಂಚ ಹೊತ್ತು ಸುಗಮ ಸಂಗೀತ ಏರ್ಪಡಿಸುವ ಸಲಹೆ ಕೊಟ್ಟೆ. ಪ್ರಸಿದ್ಧ ಗಾಯಕರಾದ ನನ್ನ ಮಿತ್ರರೊಬ್ಬರನ್ನು ಹಾಡಲು ವಿನಂತಿಸಿಕೊಂಡೆ ಕೂಡ. ಅವರು ಒಪ್ಪಿದರು. ಆದರೆ, ಪಕ್ಕವಾದ್ಯಗಳ ಕಲಾವಿದರಿಬ್ಬರಿಗೆ ಕಿಂಚಿತ್ ಗೌರವಧನ ನೀಡಲು ಸಂಘಟಕರು ಒಪ್ಪದಿದ್ದುದರಿಂದ ಗಾಯನದ ವ್ಯವಸ್ಥೆ ತಪ್ಪಿಹೋಯಿತು. ನಾನು ಸುಮ್ಮನಾದೆ.

ಉಪನ್ಯಾಸದ ದಿನ ಸಮೀಪಿಸುತ್ತಿದ್ದಂತೆ ನನಗೆ ಕಾರ್ಯದರ್ಶಿಯವರಿಂದ ದೂರವಾಣಿ ಕರೆ ಬಂತು. ಫಲಾನಾ ಕಾರಣದಿಂದ ಉಪನ್ಯಾಸವನ್ನು ರದ್ದುಮಾಡಬೇಕಾಗಿದೆಯೆಂದೂ ಮರುವಾರ ಸಂಘದ ವಾರ್ಷಿಕೋತ್ಸವ ಇದೆಯೆಂದೂ ಅದಕ್ಕೆ ಇಂಥಿಂಥವರು ಅತಿಥಿಗಳಾಗಿ ಬರುತ್ತಾರೆಂದೂ ಆಗಲೇ ನಾನೂ ಬಂದು ಮಾತಾಡಿಬಿಡಬೇಕೆಂದೂ ಹೇಳಿದರು!

".......ಅವರು ಬರ್ತಾರೆ, ಆಗ ಬಂದು ನೀವೂ ಸ್ವಲ್ಪ ಮಾತಾಡಿಬಿಡಿ", ಎಂದರು!

ಸಂಘಟಕರು ಮತ್ತು ಶ್ರೋತೃಗಳ ಆಸಕ್ತಿಯಮೇಲೆ ಅತೀವ ವಿಶ್ವಾಸ ಹೊಂದಿ ಒಂದೂವರೆ ಗಂಟೆಯ ಭಾಷಣಕ್ಕೆ ಸಿದ್ಧತೆ ಮಾಡಿಕೊಂಡಿದ್ದ ನನಗೆ, 'ನೀವೂ ಸ್ವಲ್ಪ ಮಾತಾಡಿಬಿಡಿ', ಎಂಬ ಸಂಘಟಕರ ಕ್ಯಾಷುವಲ್ ಅಪ್ರೋಚ್ ಕಂಡು ಆಘಾತವಾಯಿತು! ನೀವು ಹೇಳಿದ ಆ ಬದಲಾದ ದಿನ ನಾನು ಪ್ರವಾಸದಲ್ಲಿರುತ್ತೇನೆಂದು ಅಷ್ಟೇ ಉತ್ತರಿಸಿದೆ. (ಆ ದಿನ ನಾನು ಪ್ರವಾಸದಲ್ಲಿರುವುದು ನಿಜ.)

"ಸರಿ ಹಾಗಾದ್ರೆ, ಐ ವಿಲ್ ಕಾಂಟ್ಯಾಕ್ಟ್ ಯೂ ಅಗೈನ್", ಎಂದು ಕಾರ್ಯದರ್ಶಿಗಳು ಮಾತು ಮುಗಿಸಿದರು. ಅವರು ಮತ್ತೆ ಕಾಂಟ್ಯಾಕ್ಟ್ ಮಾಡಿದಾಗ ಅವರಿಗೆ ಏನು ಟೆಲ್ಲಲಿ ಎಂದು ಯೋಚಿಸುತ್ತಿದ್ದೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X