ಮತಾಂತರ ಮಾರಿಗೆ ಯಾರು ಕಾರಣರು?

ಮತಾಂತರ ಸಂಬಂಧಿ ಗಲಭೆಗಳಾದಾಗೆಲ್ಲ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಗಲಭೆಯನ್ನು ಖಂಡಿಸುತ್ತಾರಲ್ಲದೆ ಶಾಂತಿ, ಸೌಹಾರ್ದ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಆದರೆ, ಮತಾಂತರಕ್ಕೆ ಮತ್ತು ತದ ನಂತರದ ಗಲಭೆಗಳಿಗೆ ಪರೋಕ್ಷವಾಗಿ ಇವರೇ ಕಾರಣರಾಗಿರುತ್ತಾರೆ!

ಬಡತನ, ಅನಕ್ಷರತೆ, ಮೌಢ್ಯ ಮತ್ತು ರೋಗರುಜಿನಗಳು ಇವು ಮತಾಂತರಕ್ಕೆ ಮುಖ್ಯ ಕಾರಣಗಳು. ಬಡವರಿಗೆ ಕಿಂಚಿತ್ ಹಣಕಾಸು ನೀಡುವ ಮೂಲಕ, ನಿರಕ್ಷರಿಗಳ ತಲೆಯಲ್ಲಿ ತಪ್ಪು ಮಾಹಿತಿಗಳನ್ನು ತುಂಬುವ ಮೂಲಕ, ಮೌಢ್ಯವನ್ನೇ ಧರ್ಮವೆಂದು ನಂಬಿರುವ ಮುಗ್ಧರನ್ನು ಪವಾಡಗಳ ಹೆಸರಿನಲ್ಲಿ ಮೋಸಮಾಡುವ ಮೂಲಕ, ಅವರ ಧರ್ಮದ ಬಗ್ಗೆ ವಿಕೃತ ವಾದ ಮಂಡಿಸಿ ಹೇಸಿಗೆ ಹುಟ್ಟಿಸುವ ಮೂಲಕ ಮತ್ತು ದೈವಕೃಪೆ ಹಾಗೂ ಚಿಕಿತ್ಸೆಗಳ ನೆಪದಲ್ಲಿ ರೋಗಿಗಳನ್ನು ಸೆಳೆಯುವ ಮೂಲಕ ಮತಾಂತರ ಮಾಡಲಾಗುತ್ತದೆ. ಇದು ನಾನು ಕರ್ನಾಟಕ, ಆಂಧ್ರ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ವಾಸಿಸಿ, ಉದ್ದಗಲ ಸಂಚರಿಸಿ, ದಶಕಗಳಿಂದ ಗಮನಿಸಿದ, ಗಮನಿಸುತ್ತಿರುವ ಸತ್ಯ.

ನಮ್ಮ ಸರ್ಕಾರಗಳು ಜನರ ಬಡತನ, ಅನಕ್ಷರತೆ ಮತ್ತು ರೋಗರುಜಿನಗಳ ನಿವಾರಣೆಗೆ ವ್ಯಾಪಕ ಮತ್ತು ಖಾಯಂ ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕವಾಗಿ ಜಾರಿಗೆ ತಂದರೆ, ಜೊತೆಗೆ ನಮ್ಮ ಧಾರ್ಮಿಕ ಮುಖಂಡರು ತಂತಮ್ಮ ಭಕ್ತಸಂಕುಲದ ಮೌಢ್ಯ ನಿವಾರಣೆಯತ್ತ ಗಮನ ಹರಿಸಿದರೆ ಮತಾಂತರದ ಪಿಡುಗು ಎಷ್ಟೋ ಕಡಿಮೆಯಾಗುತ್ತದೆ. ಆದರೆ, ಆಗುತ್ತಿರುವುದೇನು? ಸರ್ಕಾರವನ್ನು ನಡೆಸುವ ರಾಜಕಾರಣಿಗಳು ಜನರನ್ನು ಬಡತನ ಮತ್ತು ಅನಕ್ಷರತೆಯಲ್ಲೇ ಇಟ್ಟು ಅವುಗಳ ಲಾಭ ಪಡೆದು ವೋಟು ಗಳಿಸಲೆತ್ನಿಸಿದರೆ ಮಠಾಧಿಪತಿಗಳೇ ಮೊದಲಾದ ಧಾರ್ಮಿಕ ಮುಖಂಡರು ತಮ್ಮ ಅನುಯಾಯಿಗಳನ್ನು ಧರ್ಮದ ಹೆಸರಿನಲ್ಲಿ ಇನ್ನಷ್ಟು ಮೂಢರನ್ನಾಗಿಸುವ (ಮತ್ತು ಅವಕಾಶ ದೊರೆತಂತೆಲ್ಲ ಕೆರಳಿಸುವ!) ಕೆಲಸ ಮಾಡುತ್ತಾರೆ. ಭಕ್ತಕೋಟಿಯಲ್ಲಿ ವಿವೇಕಯುತ ಧರ್ಮಜಾಗೃತಿ ಉಂಟುಮಾಡಬೇಕಾದ ಮಠಾಧೀಶರು ಸ್ವಯಂ ತಾವೇ ಮೌಢ್ಯದಲ್ಲಿ ಮುಳುಗಿರುತ್ತಾರೆ ಮತ್ತು ರಾಜಕಾರಣ ಮಾಡಿಕೊಂಡಿರುತ್ತಾರೆ. ಇವರೆಲ್ಲ ಸರಿಯಾದರೆ ಕ್ರಮೇಣ ಎಲ್ಲ ಸರಿಹೋಗುತ್ತದೆ. ಇಲ್ಲದಿದ್ದರೆ, ಯಾರೇನೇ ಉಪದೇಶ ಹೇಳಲಿ, ಮತಾಂತರ, ಹಿಂಸಾಚಾರ ಹೀಗೇ ಮುಂದುವರಿದುಕೊಂಡು ಹೋಗುತ್ತದೆ.

ಭಾರತವು ಸುಭದ್ರ, ಸಮೃದ್ಧ ಹಾಗೂ ಪ್ರತಿಷ್ಠಿತ ರಾಷ್ಟ್ರವಾಗಿ ಮುಂದುವರಿಯಬೇಕಾದರೆ ಜಾತ್ಯತೀತತೆ, ವೈವಿಧ್ಯದಲ್ಲಿ ಏಕತೆ ಇವುಗಳು ಎಷ್ಟು ಮುಖ್ಯವೆಂದು ಪ್ರತಿಪಾದಿಸಲಾಗುತ್ತಿದೆಯೋ ಅಷ್ಟೇ ಮುಖ್ಯ, ಭಾರತಕ್ಕೊಂದು ಸ್ವಂತಿಕೆ; ಒಂದು ಗುರುತು. ತನ್ನತನವೆಂಬುದೇ ಇಲ್ಲದ ದೇಶ ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಮಾನಸಿಕವಾಗಿ ಅನ್ಯರ ಅಡಿಯಾಳಾಗುವಂಥ ದುಃಸ್ಥಿತಿ ಆ ದೇಶದ್ದಾಗುತ್ತದೆ. ಇಂಥ ಅಪಾಯದಿಂದ ಪಾರಾಗಲು ನಮಗಿಂದು ನಮ್ಮ ಧರ್ಮ-ಸಂಸ್ಕೃತಿ-ಸಂಸ್ಕಾರಗಳೆಡೆಗೆ ಒಲವು-ಅಭಿಮಾನಗಳಿರಬೇಕಾದ್ದು ಅತ್ಯವಶ್ಯ. ಮೇಲೆ ಹೇಳಿದಂತೆ ವಿದ್ಯೆ, ಆರ್ಥಿಕ ಭದ್ರತೆ, ಆರೋಗ್ಯ ಇವುಗಳ ಜೊತೆಗೆ ಮೌಢ್ಯರಹಿತವಾದ ಧರ್ಮಪ್ರಜ್ಞೆ ನಮ್ಮಲ್ಲಿದ್ದಾಗ ಯಾರೂ ನಮ್ಮನ್ನು ತಮ್ಮೆಡೆಗೆ ಸೆಳೆದುಕೊಳ್ಳಲಾರರು. ಬರವಣಿಗೆ, ಉಪನ್ಯಾಸ, ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಕಳೆದ ನಾಲ್ಕು ದಶಕಗಳಿಂದಲೂ ಈ ದಿಸೆಯಲ್ಲಿ ಪ್ರಯತ್ನಶೀಲನಾಗಿರುವ ನಾನು ಪ್ರಸ್ತುತ ಬೆಂಗಳೂರಿನಲ್ಲಿ ಸಮಾನಮನಸ್ಕ ಸ್ನೇಹಿತರೊಡಗೂಡಿ ಅಂಥ ಪ್ರಯತ್ನ ಮುಂದುವರಿಸಿದ್ದೇನೆ. ಇದೇ ದಿನಾಂಕ 19ರಂದು ಶುಕ್ರವಾರ ಸಂಜೆ ಏಳು ಗಂಟೆಗೆ ಬೆಂಗಳೂರಿನ ಸದಾಶಿವನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಎಂದಿನಂತೆ ನಾವು ಸೇರುತ್ತೇವೆ. ಆಸಕ್ತ ಬೆಂಗಳೂರಿಗರು ಬಂದು ಒಳಗೊಳ್ಳಬಹುದು.

ನಾವೆಲ್ಲ ಸೇರಿ ಶಾಂತಿಯುತ, ಅಭಿಮಾನಯುತ, ಘನತೆಪೂರ್ಣ ಹಾಗೂ ಸುಖೀ ಭಾರತವನ್ನು ಕಟ್ಟೋಣ. ನಮ್ಮತನವನ್ನು ಎದೆಯುಬ್ಬಿಸಿ ಸಾರುವಂಥ ಮತ್ತು ಎದುರಿನವರಿಂದ ಗೌರವವನ್ನು ಹೊಂದುವಂಥ ವಾತಾವರಣಕ್ಕೆ ಪುಷ್ಟಿ ನೀಡೋಣ.--

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+