ದಾವಣಗೆರೆ ಈಗ ಬದಲಾಗಿದೆ; ಕಾಲಾಯ ತಸ್ಮೈ ನಮಃ!
ಸೊಸೈಟಿಯಲ್ಲಿದ್ದ ಗಂಟುಮುಖದ ವ್ಯಕ್ತಿ ಮುಖದಲ್ಲಿ ಈಗ ನಗೆ! ಇಂಡಿಯಾದಲ್ಲಿ ಏನ್ ಬೇಕಾದರೂ ಆಗಬಹುದು ಎಂಬುದಕ್ಕೆ ಈ ವ್ಯಕ್ತಿಯೇ ನಿದರ್ಶನ! ಮೇರಾ ಭಾರತ್ ಮಹಾನ್!

ಸಂಪಾದಕರೆ,
ಸುಮಾರು ಇಪ್ಪತ್ತೈದು ವರ್ಷಗಳಿಗೂ ಮುಂಚೆ ನಾನು ದಾವಣಗೆರೆಯ ಒಂದು ಸೊಸೈಟಿಯಲ್ಲಿ ಸಕ್ಕರೆ, ಗೋಧಿಗಳನ್ನು ಪಡೆಯಲು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿದ್ದೆ. ಐದು ಕಿಲೋ ಸಕ್ಕರೆ ಬದಲಿಗೆ ಎರಡೂವರೆ ಕಿಲೋ ಅಥವ ಅಲ್ಲಿರುತ್ತಿದ್ದ ಸದಾ ಮುಖ ಗಂಟಿಕ್ಕಿಕೊಂಡಿರುತ್ತಿದ್ದ ವ್ಯಕ್ತಿ ದಯಪಾಲಿಸಿದಷ್ಟನ್ನು ತೆಗೆದುಕೊಂಡು ಬರುತ್ತಿದ್ದೆ. ಸೊಸೈಟಿಗೆ ದಿನಸಿ ಕೊಳ್ಳಲು ಬರುತ್ತಿದ್ದವರನ್ನು ಭಿಕ್ಷುಕರಂತೆ ಆ ವ್ಯಕ್ತಿ ಕಾಣುತ್ತಿದ್ದ.
ಆ ವ್ಯಕ್ತಿಯನ್ನು ಸರದಿಯಲ್ಲಿ ನಿಂತಿರುತ್ತಿದ್ದ ಜನರು ಮನಸಾರೆ ಶಪಿಸುತ್ತ ಸಕ್ಕರೆ, ಗೋಧಿಗಳನ್ನು ಯಾರಿಗೋ ಮಾರಿಕೊಂಡಿದ್ದಾನೆಂದು ಮಾತನಾಡಿಕೊಳ್ಳುತ್ತಿದ್ದರು. ಇದು ನಾನು ಆ ಸೊಸೈಟಿಗೆ ಹೋದಾಗಲೆಲ್ಲ ನಿರಂತರ ನಡೆಯುತ್ತಿದ್ದ ಪ್ರಕ್ರಿಯೆಯಾಗಿತ್ತು. ಸೊಸೈಟಿಗೆ ಕಳಿಸಿದ ನನ್ನ ಮನೆಯವರನ್ನು ನಾನು ಶಪಿಸುತ್ತಿದ್ದೆನು.
ನಾನು ದಾವಣಗೆರೆಯನ್ನು ಖಾಲಿ ಮಾಡಿ ಬೆಂಗಳೂರು, ಬಾಂಬೆ ಮತ್ತು ಶಿಕಾಗೊ ನಗರಗಳಲ್ಲಿ ಇಪ್ಪತ್ತು ವರ್ಷಗಳೇ ಕಳೆದಿದ್ದರೂ ಆ ಸೊಸೈಟಿಯ ಅನುಭವವನ್ನೂ ಮತ್ತು ಗಂಟಿಕ್ಕಿಕೊಂಡಿರುತ್ತಿದ್ದ ಆ ಮುಖವನ್ನು ಮರೆಯಲು ಸಾಧ್ಯವಾಗಿರಲಿಲ್ಲ.
ಇತ್ತೀಚೆಗೆ ದಾವಣಗೆರೆಯಜನತಾವಾಣಿ ಅಂತರ್ಜಾಲ ಆವೃತ್ತಿಯನ್ನು ನೋಡುತ್ತಿದ್ದಾಗ ಏನಾಶ್ಚರ್ಯ! ಆ ವ್ಯಕ್ತಿಯ ನಗುತ್ತಿರುವ ಭಾವಚಿತ್ರ ಮತ್ತು ಆ ಮಹಾಶಯರಿಗೆ ’ಸಹಕಾರಿ ಧುರೀಣ’ ಎಂಬ ಬಿರುದು ಗೌರವವು ದೊರೆತಿರುವುದಾಗಿ ಸುದ್ದಿ ಪ್ರಕಟವಾಗಿತ್ತು.
ಬಹುಶಃ ಅಂದು ಸರದಿ ನಿಂತು ಇವರನ್ನು ಹಾರೈಸುತ್ತಿದ್ದ ಜನರ ಹಾರೈಕೆಯು ಫಲ ನೀಡಿ, ಇಂದು ಆ ಮಹಾಶಯರು ನಗುತ್ತಿರುವರೆಂದೆನಿಸಿ ಮೇರಾ ಭಾರತ್ ಮಹಾನ್ ಎಂದುಕೊಂಡೆ! 60ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ನನಗೆ ನಾನೆ ಹೇಳಿಕೊಂಡೆ!
-ವೀರಾ, ಚಿಕಾಗೊ












Click it and Unblock the Notifications