ಕನ್ನಡನಾಡಿನಲ್ಲೇ ಕನ್ನಡಕ್ಕೆ ಈ ಸ್ಥಿತಿಯೇ? ಛೇ... ಛೇ...
ಮಂಜುನಾಥ್ ಷಣ್ಮುಗಂ ಟ್ರಸ್ಟ್ ಸಹಯೋಗದಲ್ಲಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಸಹಾಯವಾಣಿಯಾಂದು ತಲೆಯೆತ್ತಿದೆ. ಆದರೆ ಇಲ್ಲಿ ಕನ್ನಡವೇ ಇಲ್ಲ... ಹೀಗೇಕೆಂದು ಕೇಳುವವರೂ ಇಲ್ಲವೇ...?
- ಬಿ. ಎಸ್. ಕರುಣಾ, ಬೆಂಗಳೂರು
ಕಳೆದೊಂದು ತಿಂಗಳಿನಿಂದ ದೆಹಲಿ ಮೂಲದ ಪರಿವರ್ತನಾ ಮತ್ತು ಮಂಜುನಾಥ್ ಷಣ್ಮುಗಂ ಟ್ರಸ್ಟ್ ಸಹಯೋಗದಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಸಹಾಯವಾಣಿಯಾಂದು ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.
ಮಾಹಿತಿ ಹಕ್ಕು ಕಾಯ್ದೆ ಸ್ವಾತಂತ್ರ್ಯಾನಂತರದಲ್ಲಿ ನಮ್ಮ ದೇಶದಲ್ಲಿ ಜಾರಿಯಾಗಿರುವ ಅತ್ಯಂತ ಪ್ರಭಾವಿ ಕಾಯ್ದೆಯಾಗಿದೆ. ಹಕ್ಕಿನ ಬಗ್ಗೆ ಮಾಹಿತಿ, ನಿರ್ದಿಷ್ಟ ಪ್ರಕರಣಗಳ ಬಗ್ಗೆ ಕಾರ್ಯಸೂಚಿ, ಅರ್ಜಿ ಭರ್ತಿ ಮಾಡಿ ಮುಂದುವರೆಯುವ ಪ್ರಕ್ರಿಯೆ, ಮಾಹಿತಿ ಅಧಿಕಾರಿಗಳ ಹಾಗೂ ಇತರೆ ಕಾರ್ಯಕರ್ತರ ಸಂಪರ್ಕ ದೊರಕಿಸುವುದು ಹೀಗೆ ಹಲವು ರೀತಿಯಲ್ಲಿ ಜನಸಾಮಾನ್ಯರು ಸರ್ಕಾರದ ಯಾವುದೇ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಪಡೆಯುವ ಬಗ್ಗೆ ಈ ಸಂಸ್ಥೆಗಳು ಸಹಾಯ ಮಾಡುವತ್ತ ಕಾರ್ಯ ನಿರ್ವಹಿಸುತ್ತಿವೆ. ಜನಸಾಮಾನ್ಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಈ ಸಂಸ್ಥೆಗಳ ಉದ್ದೇಶ ಪ್ರಶಂಸನೀಯ.
ಆಕ್ಷೇಪಾರ್ಹ ಸಂಗತಿಯೆಂದರೆ ಇವರು ಬೆಂಗಳೂರಿನಲ್ಲಿ ಆರಂಭಿಸಿರುವ ಸಹಾಯವಾಣಿಯಲ್ಲಿ ಕನ್ನಡ ಇಲ್ಲವಾಗಿರುವುದು! ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ವ್ಯವಹರಿಸಲು ನಮಗಿಲ್ಲಿ ಸ್ವಾಗತವಿದೆ. ಇಲ್ಲಿ ಕನ್ನಡ ಏಕಿಲ್ಲ...? ಇಂತಹ ಸಹಾಯವಾಣಿಗಳನ್ನು, ಪ್ರಾರಂಭಿಸಿ ಅದರ ಫಲ ಕನ್ನಡೇತರರಿಗೆ ಮಾತ್ರ ಸಿಗುವ ಹಾಗೆ ಮಾಡಿರುವ ಔಚಿತ್ಯವೇನೆಂದು ತಿಳಿಯಲು ಪ್ರಯತ್ನಿಸಿ ಅಲ್ಲಿಯ ಮುಖ್ಯಸ್ಥರನ್ನು ಸಂಪರ್ಕಿಸಿದಾಗ, ಹಾರಿಕೆಯ ಉತ್ತರದಿಂದ ಶುರುವಾದ ಅವರ ಸಮಜಾಯಿಷಿ,
ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕು ಎನ್ನುವ ನನ್ನ ಆಗ್ರಹಕ್ಕೆ, ಗದರಿಕೆ ಮತ್ತು ಬೆದರಿಕೆ ಒಡ್ಡುವ ಮುೂಲಕ ತಮ್ಮ ಮಾತನ್ನು ಕೊನೆಗೊಳಿಸಿದರು.
ಕರ್ನಾಟಕದ ಆಡಳಿತ ಭಾಷೆ ಕನ್ನಡ ಎಂಬ ಮಾಹಿತಿಯನ್ನು ಈ ಮಾಹಿತಿ ಕೇಂದ್ರ ಅರಿಯದಿರುವುದು ವಿಪರ್ಯಾಸವಾಗಿದೆ! ಯಾವುದೇ ಪ್ರದೇಶದಲ್ಲಿ, ಎಂತಹುದೇ ವ್ಯವಹಾರ, ವಹಿವಾಟು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು ಅಲ್ಲಿಯ ಪ್ರಾದೇಶಿಕತೆಗೆ, ಸಂಸ್ಕೃತಿಗೆ, ಭಾಷೆಗೆ ಮತ್ತು ಮೂಲ ಜನಾಂಗಕ್ಕೆ ಮನ್ನಣೆ ನೀಡುವ ಸಾಮಾನ್ಯ ಪರಿಜ್ಞಾನವನ್ನು ಹೊಂದಿರಬೇಕಾಗಿರುವುದು ಮೊದಲಿಗೆ ಎಲ್ಲರ ಕರ್ತವ್ಯವಾಗಬೇಕಿದೆ. ಕನ್ನಡಪರ ಸಂಘಟನೆಗಳಿಗೆ ಈ ಮಾಹಿತಿ ತಲುಪಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಈ ಕಚೇರಿ ಬೀಗ ಜಡಿಸಿಕೊಳ್ಳುವ ಮೊದಲು ಅಲ್ಲಿನ ಆಡಳಿತ ವರ್ಗ ಎಚ್ಚತ್ತು, ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಕನ್ನಡಕ್ಕೆ ಮನ್ನಣೆ ಕೊಡುವತ್ತ ಈ ಕೂಡಲೇ ಗಮನ ಹರಿಸಬೇಕಿದೆ.












Click it and Unblock the Notifications