ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ
ಸತ್ಯಶೋಧನೆ,ಸಾರ್ವಜನಿಕ ಹಿತಾಸಕ್ತಿಗಳು ಪತ್ರಿಕೋದ್ಯಮ(ಸಮೂಹ ಮಾಧ್ಯಮ)ದ ಅಡಿಪಾಯಗಳಾಗಿದ್ದ ಕಾಲವೊಂದಿತ್ತು.ಅದು ಸತ್ಯಯುಗದ ಕಾಲ, ಇಂದಿನ ಕಲಿಯುಗಕ್ಕೆ ಹೊಂದುವುದಿಲ್ಲ ಎಂಬ ಭಾವನೆ,ಮಾಧ್ಯಮಗಳ ಇಂದಿನ ಕೆಲವು ಮಿತ್ರರಿಗೆ ಇದ್ದಂತಿದೆ.
- ಮಂಜುನಾಥ ಅಜ್ಜಂಪುರ, ಬೆಂಗಳೂರು
ಕನ್ನಡದ ಕೆಲವು ಸುದ್ದಿವಾಹಿನಿಗಳು, ಹಿಂದಿ /ಇಂಗ್ಲಿಷ್ ಭಾಷೆಗಳ ಕೆಲವು ವಾಹಿನಿಗಳು, ಒಂದೆರಡು ಪತ್ರಿಕೆಗಳು,ಭಯೋತ್ಪಾದಕರ ಕುಟುಂಬದವರಿಗೆ ಇದೀಗ ನೀಡುತ್ತಿರುವ ಪ್ರಚಾರ ಅಪಾಯಕಾರಿಯಾಗಿದೆ,ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಬಂಧಿತರ ತಾಯಿಯಾಗಲೀ, ಕುಟುಂಬದ ಉಳಿದ ಸದಸ್ಯರಾಗಲೀ, ಆಪಾದಿತರನ್ನು ಅಮಾಯಕರೆಂದೇ ಪ್ರತಿಪಾದಿಸುತ್ತಾರೆ. ಅದರಲ್ಲಿ ಆಶ್ಚರ್ಯಪಡುವಂತಹುದೇನಿಲ್ಲ. ನಮ್ಮ ಮಗನಿಗೆ ಭಯೋತ್ಪಾದಕರೊಂದಿಗೆ ಸಂಪರ್ಕವಿತ್ತುಎಂದು ಯಾರು ತಾನೇ ಹೇಳಿಯಾರು ? ಬಿಡಿ. ಪ್ರಶ್ನೆ ಅದಲ್ಲ.ಅವರಿಗೆ ಅಷ್ಟೊಂದು ಪ್ರಚಾರ ಏಕೆ ?
ನಿಜವಾಗಲೂ ವಿಸ್ಮಯ, ವಿಚಿತ್ರ ಎನಿಸುವುದು. ಈ ಕಾರಣಕ್ಕೇ.
ಜನಮಾನಸದ ಹೆಂಗರುಳು ಬೇಗ ಕರಗಿಹೋಗಿಬಿಡುತ್ತದೆ.ಯಾವುದೋ ಸುದ್ದಿಯ ತುಣುಕು, ಇನ್ನಾವುದೋ ದೃಶ್ಯ - ಶ್ರವ್ಯ (ವೀಡಿಯೋ) ತುಣುಕು, ಸಾರ್ವಜನಿಕರ ಬಹುಕಾಲದ ಮಾನಸಿಕತೆಯನ್ನೇ ಬದಲಿಸಿಬಿಡುತ್ತದೆ. ಭಯೋತ್ಪಾದಕರಿಂದ ತೊಂದರೆಗೀಡಾದ - ಹತ್ಯೆಗೀಡಾದ ಸಾರ್ವಜನಿಕರ - ಪೊಲೀಸರ ದುಃಖ ದುಮ್ಮಾನಗಳನ್ನು ತಕ್ಷಣ ಮರೆತು, ಭಯೋತ್ಪಾದಕರ ಮನೆಯವರ ಬಗೆಗೆ "ಅಯ್ಯೋ ಪಾಪ" ಎಂದುಬಿಡುತ್ತೇವೆ.ಇದು ಮಾಧ್ಯಮದ ಕೆಲವರ "ಕೊಡುಗೆ". ಅನಗತ್ಯ ವೃತ್ತಿ ಸಂಬಂಧಿತ ಸ್ಪರ್ಧೆ ಮತ್ತು ರೋಚಕತೆಗಳಿಗೆ ಶರಣಾಗುವುದರಿಂದಾಗುವ ಅಪಾಯವಿದು.
ನಕ್ಸಲೀಯರು ಶೇಷಪ್ಪಗೌಡ, ಕೆಸಮುಡಿ ವೆಂಕಟೇಶರನ್ನು, ಪೊಲೀಸರಿಗೆ ಮಾಹಿತಿ ನೀಡಿದರೆಂಬ ಕಾರಣಕ್ಕೆ ಅಮಾನುಷವಾಗಿ ಕೊಂದು ಹಾಕಿದರು.ಆ ಕುಟುಂಬಗಳ ಕಥೆಯೇನು? ಗತಿಯೇನು? ನಕ್ಸಲರನ್ನು ನಿಗ್ರಹಿಸಲು ಮೀಸಲಾಗಿ, ಊಟ - ತಿಂಡಿ- ವಿಶ್ರಾಂತಿ ಇಲ್ಲದೆ ಕಾಡು-ಮೇಡು ಅಲೆಯುತ್ತಿರುವ ಪೊಲೀಸ್ ಪೇದೆಗಳ ಗತಿಯೇನು ? ವಿಚಿತ್ರವೆಂದರೆ ಹಿಂಸೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡಿರುವ ನಕ್ಸಲ್ ಹುಡುಗ ಹುಡುಗಿಯರಿಗೆ, ಅವರ ಸಾವಿಗೆ ಸಿಕ್ಕುವ ಪ್ರಚಾರ,ದುರದೃಷ್ಟದಿಂದ ನಕ್ಸಲರಿಂದ ಹತ್ಯೆಗೀಡಾದ ಪೊಲೀಸರ ಕುಟುಂಬಗಳಿಗೆ -ಸಾರ್ವಜನಿಕರಿಗೆ ಸಿಕ್ಕುತ್ತಿಲ್ಲ.
ಹಿಂದೆ ವೀರಪ್ಪನ್ ಪ್ರಕರಣದಲ್ಲೂ ಹೀಗೇ ಆಗಿತ್ತು.ನೂರಾರು ಜನ ಪೊಲೀಸರನ್ನು,ಅಧಿಕಾರಿಗಳನ್ನು ಆತ ನಿರ್ದಯವಾಗಿ ಕೊಂದು ಹಾಕಿದ್ದ.ವೀರಪ್ಪನ್ ಅಂತಹವರಿಗೆ ಕ್ಷಮೆಯೇ ಇಲ್ಲ.ಆದರೆ,ವೀರಪ್ಪನ್ ಸಾವಿನ ನಂತರ,ಕೆಲವು ವಾಹಿನಿಗಳವರು, ಅವನ ಹೆಂಡತಿ ಮುತ್ತುಲಕ್ಷ್ಮಿಗೆ ಅವಳ ನೋವಿಗೆ -ಅವಳ ಆರ್ಭಟಕ್ಕೆ ವಿಪರೀತ ಪ್ರಚಾರ ನೀಡಿದರು. ಅವಳ ಮಗುವಿನ ಭವಿಷ್ಯವೇನು ಎಂಬ ಕರುಣಾರ್ದ್ರ ಪ್ರಶ್ನೆಗಳನ್ನು ವೀಕ್ಷಕರಿಗೆ ಹಾಕಲಾಯಿತು.
ಹನೀಫ್ - ಸಬೀಲ್ ಸದ್ಯಕ್ಕೆ ಆಪಾದಿತರಿರಬಹುದು, ಅಪರಾಧಿಗಳೆಂದು ಇನ್ನೂ ಸಾಧಿತವಾಗದೇ ಇರಬಹುದು. ಅವರ ಕುಟುಂಬಗಳಿಗೆ ಸಿಕ್ಕುತ್ತಿರುವ ಪ್ರಚಾರ ಅನಾರೋಗ್ಯಕರ.ಸಂಸತ್ತಿನ ಮೇಲೆ ದಾಳಿಮಾಡಿದ ಭಯೋತ್ಪಾದಕನಿಗೆ ಕ್ಷಮಾದಾನ ಸಿಕ್ಕಬೇಕೆಂದು ಕೆಲವರು ಪ್ರದರ್ಶನ ಮಾಡಿದುದು ಸಹ ಈ ಸಾಲಿಗೇ ಸೇರುವಂತಹುದು.ಅವರಿಗೆ ದೊರೆತ ಅತಿಯಾದ ಪ್ರಚಾರವೂ ಬೇಸರ ತರಿಸುವಂತಹುದು. ಸಂಸತ್ತಿನ ಮೇಲಾದ ಆ ದಾಳಿಯಲ್ಲಿ ಮಡಿದ ರಕ್ಷಣಾ ಸಿಬ್ಬಂದಿಯ ಮನೆಯವರಿಗೆ ಇನ್ನಷ್ಟು ನೋವು ತರುವುದು ಶೋಭೆ ತರುವುದಿಲ್ಲ.ನಮ್ಮನ್ನು ಉಳಿಸಲುಹೋದವರು ಅವರು.
ಮುಸ್ಲಿಮರಲ್ಲಿ ಪ್ರೊ.ಮಮ್ತಾಜ್ ಅಲಿ ಖಾನ್ ಅಂತಹವರು, ಕನ್ನಡದ ಬಗ್ಗೆ ಹೋರಾಟ ಮಾಡಿ ಜನರ ಗೌರವ ಪಡೆದಂಥವರು. ಶಾಂತಿ, ಸೌಹಾರ್ದ, ಮಾನವಹಕ್ಕುಗಳು, ಸ್ವಾಭಿಮಾನ, ಸಮಾನತೆಗಳಿಗಾಗಿ ತಮ್ಮ "ಕ್ರಶ್ (CRUSH)" ಪತ್ರಿಕೆಯ ಮೂಲಕ, ಅವರು ಮೂಢನಂಬಿಕೆಗಳ ವಿರುದ್ಧ, ಶೋಷಣೆ - ಅತ್ಯಾಚಾರ - ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಎಂತಹ ವಿರೋಧಾಭಾಸ. ಪ್ರೊ.ಮಮ್ತಾಜ್ ಅಲಿ ಖಾನ್ ಅವರಿಗಿಂತ, ಪ್ರಗತಿಪರ ಮುಸ್ಲಿಮರಿಗಿಂತ ಭಯೋತ್ಪಾದಕ ಮುಸ್ಲಿಮರ ಮನೆಯವರು ಪ್ರಚಾರ ಗಳಿಸುತ್ತಾರೆ.
ಪ್ರೀತಿಯ ಪತ್ರಕರ್ತ ಮಿತ್ರರೇ,ಪ್ಲೀಸ್ ಪ್ಲೀಸ್, ನಿಮ್ಮ ಕೆಲಸ ಆರೋಗ್ಯಕರ ಸಮಾಜವನ್ನು ಎಚ್ಚರಿಕೆಯಿಂದ ಕಟ್ಟುವುದೇ ಆಗಿರಲಿ. ನಮಸ್ಕಾರ.












Click it and Unblock the Notifications