ತವರಿನ ಸೆಳೆತ ಮತ್ತು ಅಮೆರಿಕ!
ಕೆಲವು ಅನಿವಾಸಿ ಭಾರತೀಯರನ್ನು ತವರಿನ ಬಂಧ ಬಿಗಿದಿರಬಹುದು. ಆದರೆ, ಎರಡನೇ ಪೀಳಿಗೆಯ ಅಮೆರಿಕಾ ಸಂಜಾತ ಭಾರತೀಯರಿಗೆ ಭಾರತ ಎಂಬುದು ಒಂದು ಪಿಕ್ನಿಕ್ ತಾಣ.
ಎಸ್. ಮಧುಸೂದನ ಪೆಜತ್ತಾಯ[email protected]
ಕುಂಭಾಸಿ ಶ್ರೀನಿವಾಸ ಭಟ್ಟರಿಗೆ ನಮಸ್ಕಾರಗಳು
ತಮ್ಮ ಇತ್ತೀಚಿನ ಭಾರತ ಯಾತ್ರೆಯ ಬಗ್ಗೆ ಬರೆದ ‘ ಆತ್ಮಾವಲೋಕನದ ಲೇಖನ ’ ನನಗೆ ತುಂಬಾ ಮೆಚ್ಚುಗೆಯಾಯಿತು. ತಮ್ಮಂತೆ ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಸಿದ ಮಧ್ಯವಯಸ್ಸಿನ ಭಾರತೀಯರ ಮನೋತುಮುಲವನ್ನು ನಿಮ್ಮ ಈ ಪ್ರಬಂಧ ಚೆನ್ನಾಗಿ ಪ್ರತಿಬಿಂಬಿಸುತ್ತಾ ಇದೆ.
ಈ ವಯಸ್ಸಿನಲ್ಲಿ ನಿಮಗೆ ಮಾತೃಭೂಮಿಯ ಸೆಳೆತ ಮತ್ತು ಬಂಧು ಬಾಂಧವರ ಸಾಮೀಪ್ಯ ಬೇಕೆನಿಸುತ್ತಾ ಇದೆ. ಆದರೂ, ನಿಮ್ಮ ಎರಡನೇ ಪೀಳಿಗೆಯ ಯುವಜನರಿಗೆ ಹೀಗೆ ಅನ್ನಿಸುತ್ತಾ ಇದೆಯೆ? ಅವರ ಪೀಳಿಗೆಗೆ ಅಮೆರಿಕೆಯೇ ಮಾತೃ ಭೂಮಿ! ಅಮೆರಿಕೆಯೇ ಸರ್ವಸ್ವ!
ಹೀಗಾಗಿ, ಬಹಳಷ್ಟು ಜನ ಅಮೆರಿಕೆಯಲ್ಲಿ ನೆಲೆಸಿದ ನಿಮ್ಮ ಸಮಕಾಲೀನ ವಲಸೆಗಾರು ‘‘ ಸ್ವಲ್ಪ ದಿನ ಅಲ್ಲಿ, ಸ್ವಲ್ಪ ದಿನ ಇಲ್ಲಿ ’’ ಎಂಬ ಸೂತ್ರ ಪಾಲಿಸಲು ಉತ್ಸಾಹವನ್ನು ಈಗಾಗಲೇ ತೋರುತ್ತಾ ಇದ್ದಾರೆ. ಆದರೆ, ಆರ್ಥಿಕವಾಗಿ ಸಾಧ್ಯವೆನ್ನಿಸಿ, ಸಾಕಷ್ಟು ಸಮಯಾವಕಾಶ ಲಭ್ಯ ಎನಿಸಿದರೆ ಮಾತ್ರ ಹೀಗೆ ಮಾಡಲು ಕೆಲವರಿಗೆ ಮಾತ್ರ ಸಾಧ್ಯವಾವಾದೀತು.
ಈ ತರಹದ ಜೀವನಕ್ಕೆ ಮುಂದಾಗಲು ನನ್ನ ಹಲವಾರು ಬಂಧು ಬಾಂಧವರು ಉತ್ಸುಕರಾಗಿ ಮೊದಲ ಹೆಜ್ಜೆಯನ್ನು ಇರಿಸಿದ್ದಾರೆ. ಹಳೆಯ ತಲೆಮಾರಿನವರು ಇದನ್ನು ಒಪ್ಪಿದರೂ, ನಿಮ್ಮ ಇಂದಿನ ಯುವ ಜನಾಂಗದ ತರುಣ ತರುಣಿಯರಿಗೆ ಈ ನಿಮ್ಮ ನಿರ್ಧಾರ ‘ ವಿಚಿತ್ರ ’ ಅನ್ನಿಸಿದ್ದರೂ ಇರಬಹುದು.
ಎರಡನೇ ಪೀಳಿಗೆಯ ಅಮೆರಿಕಾ ಸಂಜಾತ ಭಾರತೀಯರಿಗೆ ಭಾರತ ಎಂಬುದು ಒಂದು ಪಿಕ್ನಿಕ್ ತಾಣ. ದಯವಿಟ್ಟು ನಿಮ್ಮ ಮಕ್ಕಳ ಪ್ರಾಯದ ಭಾರತೀಯ ಯುವ ಜನರನ್ನು ಸಂಪರ್ಕಿಸಿ, ಮೇಲೆ ಬರೆದ ವಿಚಾರವನ್ನು ಅವರೊಂದಿಗೆ ಚರ್ಚಿಸಿ, ಈ ಬಗ್ಗೆ ಅವರ ಪ್ರತಿಕ್ರಿಯೆ / ಅಭಿಪ್ರಾಯಗಳೇನು? ಎಂದು ವಿವರಿಸುವ ಇನ್ನೊಂದು ಲೇಖನ ಬರೆಯುವಿರಾ?
ತಮಗೆ ತೊಂದರೆ ಕೊಡುತ್ತಾ ಇರುವುದಕ್ಕೆ ಕ್ಷಮೆ ಇರಲಿ.
ಇಂತೀ ಅಭಿಮಾನ ಪೂರ್ವಕ ನಮಸ್ಕಾರಗಳು.












Click it and Unblock the Notifications