ಡಬ್ಬಿಂಗ್‌ ಓ.ಕೆ! ತಂಟೆ ಯಾಕೆ?


ಉತ್ತಮ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್‌ ಆಗದಿದ್ದರೆ, ಕನ್ನಡ ಚಿತ್ರರಂಗವೇ ಅವನತಿ ಹೊಂದುವ ಕಾಲ ದೂರವಿಲ್ಲ!

  • ವೆಂಕಟೇಶ ಬಿಳಿಗೆರೆ, ಅಟ್ಲಾಂಟ, ಅಮೇರಿಕ
  • ಮಾನ್ಯ ಸಂಪಾದಕರೇ,

    ಕನ್ನಡಕ್ಕೆ ಡಬ್‌ ಮಾಡೋದು ಇವತ್ತಿನ ದಿನದಲ್ಲಿ ತುಂಬಾ ಒಳ್ಳೇದು ಮತ್ತು ಅವಶ್ಯಕ. ಕನ್ನಡಚಿತ್ರರಂಗ ಕರ್ನಾಟಕ ರೂಪುಗೊಂಡ ಮೊದಲಿಂದಲೂ ಎಡವುತ್ತಲೇ ಇದೆ. ಕನ್ನಡ ಚಿತ್ರರಂಗದವರು ಮಾರುಕಟ್ಟೆಯನ್ನು ವಿಸ್ತರಿಸಬೇಕು. ಇದಾಗದ ಹೊರತು ಕನ್ನಡ ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ.

    ಇದುವರೆಗೂ ಕನ್ನಡ ಚಿತ್ರರಂಗದವರು ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡುವಂತಿಲ್ಲ ಎಂದು ತೀರ್ಮಾನಿಸಿದ್ದು ಕೆಲವೇ ನಟ ನಟಿಯರಿಗೆ ಅನುಕೂಲಗಳಿದ್ದರೂ ಮಾರುಕಟ್ಟೆ ದೃಷ್ಟಿಯಿಂದ ಅತಿಯಾದ ಹೊಡೆತ ಉಂಟಾಗಿದೆ.

    ಉದಾ : ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡದಿರುವುದರಿಂದ ಪರಭಾಷೆ ಚಿತ್ರಗಳನ್ನೇ ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಪರಭಾಷಾ ಚಿತ್ರ ಮಾರುಕಟ್ಟೆ ಕರ್ನಾಟಕದಲ್ಲಿ ವಿಸ್ತರಣೆಯಾಗುತ್ತದೆ. ಕನ್ನಡ ಚಿತ್ರ ಮಾರುಕಟ್ಟೆ ಕುಗ್ಗುತ್ತದೆ. ಈಗ ಬೆಂಗಳೂರಿನಲ್ಲಿ(ಕರ್ನಾಟಕದಲ್ಲಿ) ಚಿತ್ರಮಂದಿರ ಸಿಗದೇ ಡಬ್ಬಿಯಲ್ಲಿ ಕುಳಿತುಕೊಳ್ಳಬೇಕಾದ ಪ್ರಸಂಗ ಬಂದೊದಗಿದೆ. ಇದರಿಂದ ಆ ನಿರ್ಮಾಪಕರು ಆರ್ಥಿಕವಾಗಿ ದಿವಾಳಿಯಾಗಬೇಕಾಗುತ್ತದೆ.

    ಚಿತ್ರಮಂದಿರಗಳ ಅಭಾವದಿಂದ ಚೆನ್ನಾಗಿ ಓಡುತ್ತಿರುವ ಒಳ್ಳೆ ಚಿತ್ರಗಳನ್ನೂ ಎತ್ತಂಗಡಿ ಮಾಡಲಾಗುತ್ತಿದೆ. ಇದರಿಂದ ಕನ್ನಡ ಚಿತ್ರಗಳಲ್ಲೇ ಚಿತ್ರಮಂದಿರಗಳಿಗಾಗಿ ಹೊಡೆದಾಟ ಶುರುವಾಗಿದ್ದು, ಚಿತ್ರರಂಗದಲ್ಲಿ ಕೊಬ್ಬಿರುವ ನಿರ್ಮಾಪಕರು ಹಣಬಲದಿಂದ ತಮ್ಮ ಚಿತ್ರ ಕಳಪೆಯಾಗಿದ್ದರೂ ಬಿಡುಗಡೆ ಮಾಡಿಸುತ್ತಾರೆ. ಇದರಿಂದ ಜನರಿಗೆ ಕೆಟ್ಟ ಚಿತ್ರಗಳನ್ನು ಬಲವಂತವಾಗಿ ಹೇರಿದಂತಾಗುತ್ತಿದೆ. ಇದರಿಂದ ವೀಕ್ಷಕ ಬೇಸತ್ತು ಕನ್ನಡ ಚಿತ್ರ ನೋಡುವುದನ್ನೇ ನಿಲ್ಲಿಸಿ ಪಕ್ಕದ ಚಿತ್ರಮಂದಿರದ ಪರಭಾಷಾ ಚಿತ್ರಕ್ಕೆ ಹೋಗಲು ಶುರುಮಾಡುತ್ತಾನೆ.

    ಕನ್ನಡ ಚಿತ್ರ ಚೆನ್ನಾಗಿಲ್ಲವೆಂಬ ಹಣೆಪಟ್ಟಿ ಕನ್ನಡಚಿತ್ರರಂಗಕ್ಕೆ ಒಂದೆಡೆಯಾದರೆ ಮಾರುಕಟ್ಟೆ ಕುಗ್ಗುತ್ತಾ ಹೋಗುತ್ತದೆ. ಪರಭಾಷೆಯ ಚಿತ್ರಗಳು ಮತ್ತೂ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿವೆ. ಇದೇ ಕಾರಣಕ್ಕಾಗಿ ಪರಭಾಷಾ ಚಿತ್ರಗಳ ಬಹಿಷ್ಕಾರ ಮುಂತಾದವು ಆಗೊಮ್ಮೆ ಈಗೊಮ್ಮೆ ನಡೆಯುತ್ತದೆ. ಇಲ್ಲಿಯೂ ಎಲ್ಲಾ ನಿರ್ಮಾಪಕರೂ ಬೆಂಬಲಿಸುವುದಿಲ್ಲ ಕಾರಣ ಕೆಲ ನಿರ್ಮಾಪಕರು ತಮ್ಮದೇ ಆದ ಚಿತ್ರಮಂದಿರ ಇಟ್ಟುಕೊಂಡಿರುತ್ತಾರೆ ಅಥವ ಚಿತ್ರಮಂದಿರ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಇದರಿಂದ ಸಣ್ಣ ನಿರ್ಮಾಪಕರು ಸೋಲುತ್ತಾರೆ. ದೊಡ್ಡ ಕಳಪೆ ನಿರ್ಮಾಪಕರು ಮೆರೆಯುತ್ತಾರೆ. ಕನ್ನಡ ಚಿತ್ರರಂಗಕ್ಕೆ ಕಳಂಕ ತರುತ್ತಾರೆ.

    ಡಬ್ಬಿಂಗ್‌ನಿಂದಾಗುವ ಲಾಭ-ನಷ್ಟ ಗಳು :

    1. ಮಾರುಕಟ್ಟೆಯ ವಿಸ್ತರಣೆ. ಮೇಲೆ ಕಂಡಂತೆ ಈಗ ಕರ್ನಾಟಕದಲ್ಲಿರುವ ಪರಭಾಷಾ ಚಿತ್ರಮಂದಿರಗಳಲ್ಲಿ ಅವರದೇ ಕನ್ನಡ ಅವತರಣಿಕೆಯಾಗಿ ಕನ್ನಡ ಚಿತ್ರರಂಗ ಮಾರುಕಟ್ಟೆ ಹಿಗ್ಗುತ್ತದೆ.
    2. ಡಬ್‌ ಮಾಡುವುದರಿಂದ ಕನ್ನಡ ಬರದ ಪರಭಾಷಿಗರು ಕರ್ನಾಟಕದಲ್ಲಿ ಕನ್ನಡ ಕಲಿಯಲು ಸಹಕಾರಿಯಾಗಿ ಕನ್ನಡ ವೀಕ್ಷಕರು ಹೆಚ್ಚುತ್ತಾರೆ.
    3. ಡಬ್‌ ಮಾಡುವುದರಿಂದ ಅನೇಕ ಉದ್ಯೋಗಗಳು ದೊರೆಯುತ್ತವೆ. (ಉದಾ : ಡಬ್‌ ಮಾಡದಿದ್ದರೆ ಆ ಚಿತ್ರಗಳಿಂದ ಕನ್ನಡದವರಿಗೆ ಉದ್ಯೋಗ ಸಿಗುವುದಿಲ್ಲ.) ಡಬ್‌ನಿಂದ ಕನ್ನಡ ಅನುವಾದ, ಸಂಭಾಷಣೆಕಾರರಿಗೆ ಉದ್ಯೋಗ, ಕನ್ನಡ ಎಲ್ಲಾ (ಹಾಸ್ಯಗಾರ, ನಾಯಕ, ನಾಯಕಿ, ಪೋಷಕಪಾತ್ರ ಮುಂತಾದ) ಕಲಾವಿದರಿಗೂ (ಕಂಠದಾನಿಗಳಿಗೆ) ಉದ್ಯೋಗ. ಕನ್ನಡ ಚಿತ್ರ ಸಂಗೀತ ಸಾಹಿತಿಗಳಿಗೆ ಉದ್ಯೋಗ, ಕನ್ನಡ ಗಾಯಕ, ಗಾಯಕಿಯರಿಗೆ ಉದ್ಯೋಗ, ಕನ್ನಡ ಸಂಗೀತ ನಿರ್ದೇಶಕರಿಗೆ ಉದ್ಯೋಗ, ಕನ್ನಡ ಚಿತ್ರರಂಗದ ಧ್ವನಿ ರೆಕಾರ್ಡಿಂಗ್‌ನವರಿಗೆ ಉದ್ಯೋಗ, ಕನ್ನಡ ಚಿತ್ರ ಪ್ರಚಾರ ಸಂಸ್ಥೆಗೆ ಉದ್ಯೋಗ, ಕನ್ನಡ ಸಂಗೀತದ ಆಡಿಯೋ ಸಂಸ್ಥೆಗೆ ಉದ್ಯೋಗ, ಕನ್ನಡ ಆಡಿಯೋ ಮಾರಾಟಗಾರರಿಗೆ ಉದ್ಯೋಗ, ಕನ್ನಡ ವಿಡಿಯೋ ಮಾರಾಟಗಾರರಿಗೆ ಉದ್ಯೋಗ ಹೀಗೆ ಪಟ್ಟಿ ಮುಂದುವರೆಯುತ್ತಾ ಸಾಗುತ್ತದೆ. ( ಕನ್ನಡ ನಟ/ನಟಿಯ ಚಿತ್ರಾಂಗಣದವರನ್ನು ಬಿಟ್ಟು ಎಲ್ಲರಿಗೂ ಉದ್ಯೋಗ ಸಿಗುತ್ತವೆ.)
    4. ಕನ್ನಡ ಪ್ರೇಕ್ಷಕರಿಗೆ ಒಳ್ಳೆಯ ಪರಭಾಷಾ ಚಿತ್ರಗಳನ್ನು ಕನ್ನಡದಲ್ಲೇ ನೋಡುವ ಅವಕಾಶ.
    5. ಇಂದಿಗೂ ಕನ್ನಡದಲ್ಲಿ ರಾಮಾಯಣ/ಮಹಾಭಾರತ ಡಬ್‌ ಆಗದೇ ಹಿಂದಿಯಲ್ಲಿ ನೋಡಬೇಕಾದ ಪರಿಸ್ಥಿತಿ (ಇದರಿಂದ ಮಕ್ಕಳ ಮೇಲೆ ಹಿಂದಿಯ ಪ್ರಭಾವ ಜಾಸ್ತಿಯಾಗಿದ್ದು ಕನ್ನಡ ಅರ್ಥವಾಗದ ಪರಿಸ್ಥಿತಿ ಉಂಟಾಗಿದೆ) ಅದೇ ನೆರೆಯ ತಮಿಳುನಾಡಿನಲ್ಲಿ ಹಿಂದಿಯ ಒಳ್ಳೆಯ ಕಾರ್ಯಕ್ರಮಗಳನ್ನು ಡಬ್‌ ಮಾಡಿ ತಮಿಳಿನಲ್ಲೇ ತೋರಿಸಲಾಗುತ್ತಿದೆ.
    6. ಕನ್ನಡಕ್ಕೆ ಡಬ್‌ ಬೇಡವಾದರೆ ರಿಮೇಕೂ ಬೇಡ. ರಿಮೇಕ್‌ ಯಾಕೆ ಮಾಡುತ್ತಾರೆ? ಅದರಿಂದ ಕನ್ನಡ ನಟ ನಟಿ, ಚಿತ್ರೀಕರಣ ತಂಡಕ್ಕಷ್ಟೇ ಉದ್ಯೋಗ ದೊರಕುತ್ತದೆಯೇ ಹೊರತು ಬೇರೆಲ್ಲರಿಗೂ ಡಬ್‌ ಮಾಡಿದರೂ ಸಿಕ್ಕೇ ಸಿಗುತ್ತದೆ. ಅಷ್ಟಕ್ಕೂ ಅನೇಕ ನಟ ನಟಿಯರು, ಗಾಯಕ, ಗಾಯಕಿಯರು ಪರಭಾಷೆಯಿಂದ ಆಮದಾಗುತ್ತಿರುವವರು.
    7. ಕನ್ನಡ ರಿಮೇಕ್‌ ನಿರ್ಮಾಪಕರಿಗೆ ಡಬ್‌ನಿಂದ ಕಡಿಮೆ ಖರ್ಚು.

    ಉತ್ತಮ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್‌ ಆಗದಿದ್ದರೆ ಕನ್ನಡ ಚಿತ್ರರಂಗವೇ ಅವನತಿ ಹೊಂದುವ ಕಾಲ ದೂರವಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಕರ್ನಾಟಕದ ಎಲ್ಲ ಪರಭಾಷಾ ಚಿತ್ರಮಂದಿರಗಳನ್ನು ಕನ್ನಡೀಕರಣಗೊಳಿಸುವುದು ಅತೀ ಅವಶ್ಯಕ.

    ಕನ್ನಡ ನಿರ್ಮಾಪಕರು ಚಿತ್ರರಂಗದವರು ಒಬ್ಬರ ಕಾಲೊಬ್ಬರನ್ನು ಎಳೆಯುವುದು ಬಿಟ್ಟು ಪರಭಾಷಾ ಚಿತ್ರಗಳೊಂದಿಗೆ ಸ್ಪರ್ಧಿಸುವ ಮನೋಭಾವ ತಳೆಯುವುದು ಅತೀ ಅವಶ್ಯಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+