ಡಬ್ಬಿಂಗ್‌ಗೆ ಜೈ ಅನ್ನೋರು ಕನ್ನಡ ವಿರೋಧಿಗಳಾ?
‘ಕನ್ನಡ ಚಿತ್ರಗಳು ಗೆಲ್ಲುತ್ತಿಲ್ಲ.. ನಾವುಗಳು ಬೀದಿಗೆ ಬರುವ ಮುನ್ನ ಏನಾದರೂ ಮಾಡಿ’ ಎಂಬುದು ನಿರ್ಮಾಪಕರ ದೂರು. ಈ ಮಧ್ಯೆ ಡಬ್ಬಿಂಗ್ ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ.
- ಕೇಶವ ಸುತ
ನಟ ಡಾ.ರಾಜ್‌ಕುಮಾರ್ ನೇತೃತ್ವದಲ್ಲಿ ಡಬ್ಬಿಂಗ್ ವಿರುದ್ಧ ಅನೇಕ ಹೋರಾಟಗಳು ನಡೆದಿವೆ. ಡಬ್ಬಿಂಗ್‌ನಿಂದಾಗುವ ಅನಾಹುತಗಳನ್ನು ಮುಂದಿಟ್ಟುಕೊಂಡು, ಅದರ ಪ್ರಯೋಜನಗಳನ್ನು ಬಚ್ಚಿಡುವ ಪ್ರಯತ್ನವೂ ನಡೆದಿದೆ. ಡಬ್ಬಿಂಗ್ ಬಗ್ಗೆ ಮಾತನಾಡುವ ಮಂದಿಯನ್ನು ಕನ್ನಡ ದ್ರೋಹಿಗಳೆಂದು ಗುರ್ತಿಸುವ ಫ್ಯಾಷನ್ ಚಾಲ್ತಿಯಲ್ಲಿದೆ.
ಡಬ್ಬಿಂಗ್‌ನಿಂದ ಕನ್ನಡ ಚಿತ್ರೋದ್ಯಮ ಕುಸಿಯುತ್ತದೆ. ಇಲ್ಲಿನ ಕಲಾವಿದರು, ತಂತ್ರಜ್ಞರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬ ವಾದಗಳು ಕೇಳಿಬರುತ್ತಿವೆ. ಆದರೆ ಪಕ್ಕದ ಆಂಧ್ರ ಪ್ರದೇಶದಲ್ಲಿ ಹಾಗೇನೂ ಆಗಿಲ್ಲ. ಅಲ್ಲಿ ಹಿಂದಿ, ತಮಿಳು, ಮಲಯಾಳಂ, ಕನ್ನಡ, ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಯ ಡಬ್ಬಿಂಗ್ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಜೊತೆಗೆ ಹೆಚ್ಚುಹೆಚ್ಚು ತೆಲುಗು ಚಿತ್ರಗಳೂ ತಯಾರಾಗುತ್ತಿವೆ(ಭಾರತದಲ್ಲಿ ಅತಿಹೆಚ್ಚು ಸಿನಿಮಾಗಳು ತಯಾರಾಗುವುದು ತೆಲುಗಿನಲ್ಲಿಯೇ..). ತೆಲುಗು ನಟರು, ತಂತ್ರಜ್ಞರ ಸಂಭಾವನೆ ದಿನೇದಿನೇ ಹೆಚ್ಚುತ್ತಲೇ ಇದೆ. ಅಂದರೆ ಮಾರುಕಟ್ಟೆ ಬೆಳೆಯುತ್ತಿದೆ. ಮಾರುಕಟ್ಟೆ ಬೆಳೆಸುವ ಕೆಲಸ ಸ್ಯಾಂಡಲ್‌ವುಡ್‌ನಲ್ಲಿ ಯಾಕೆ ಸಾಧ್ಯವಿಲ್ಲ?
ಡಬ್ಬಿಂಗ್‌ನಿಂದ ಸ್ಪರ್ಧೆ ಹೆಚ್ಚುತ್ತದೆ. ಒಳ್ಳೆಚಿತ್ರಗಳ ಆಯ್ಕೆ ಪ್ರೇಕ್ಷಕರಿಗೆ ದೊರಕುತ್ತದೆ. ಪರಭಾಷೆಯ ಉತ್ತಮ ಚಿತ್ರಗಳನ್ನು, ತಮ್ಮ ಮಾತೃಭಾಷೆಯಲ್ಲಿಯೇ ನೋಡಲು ಸಾಧ್ಯವಾಗುತ್ತದೆ. ಸ್ಪರ್ಧೆಯಿದ್ದಾಗ ಮಾತ್ರ, ಒಳ್ಳೆಚಿತ್ರಗಳ ಫಸಲು ಬರಲು ಸಾಧ್ಯ. ಡಬ್ಬಿಂಗ್‌ನಿಂದ ಕನ್ನಡ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಭಯ ಬರುತ್ತದೆ. ಸುಮ್ಮನೇ ರೀಲು ಸುತ್ತಿ, ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಕೆಲಸ ನಿಲ್ಲುತ್ತದೆ!
ಅಂದ ಹಾಗೇ, ಡಬ್ಬಿಂಗ್ ವಿರೋಧಿಗಳಲ್ಲಿ ನನ್ನದೊಂದು ಪ್ರಶ್ನೆ : ಡಬ್ಬಿಂಗ್ ಇಲ್ಲವೆಂದು ಜನ, ಪರಭಾಷಾ ಚಿತ್ರಗಳನ್ನು ನೋಡೋದು ನಿಲ್ಲಿಸುತ್ತಾರಾ? ರೀಮೇಕ್ ಹೆಸರಲ್ಲಿ ಭಾಷೆ ಮತ್ತು ಕಲಾವಿದರನ್ನು ಬಿಟ್ಟು(ಕೆಲವು ಸಲ ಅವರನ್ನು ಸಹಾ) ಎಲ್ಲವನ್ನು ನಕಲು ಮಾಡಲಾಗುತ್ತದೆ. ಇಂತಹ ಅನಾಹುತ ಬೇಕೆ? ಡಬ್ಬಿಂಗ್‌ನಿಂದ ಕನಿಷ್ಠ ಕನ್ನಡ ಚಿತ್ರ ನೋಡಿದ ಭಾವನೆಯಾದರೂ ದೊರಕುತ್ತದೆ. ಹೌದು ಅನ್ನುವಿರೋ? ಇಲ್ಲವೆನ್ನುವಿರೋ?
ನನ್ನದು ಇನ್ನೊಂದು ಪ್ರಶ್ನೆ : ಡಬ್ಬಿಂಗ್ ವಿರೋಧಿಸುವ ಮಂದಿ, ಪುಸ್ತಕ ರಂಗದಲ್ಲಿನ ಅನುವಾದವನ್ನು ಯಾಕೆ ವಿರೋಧಿಸುವುದಿಲ್ಲ?












Click it and Unblock the Notifications