‘ಚಿಕನ್‌ಗುನ್ಯ’ವೇ ಸರಿ ‘ಚಿಕೂನ್‌ಗುನ್ಯ’ ಅಲ್ಲ!
ನಾವು ಕೊಲ್ಲಬೇಕಾಗಿರುವದು ಖಾಯಿಲೆಯನ್ನೆ ಹೊರತು ಅದರ ಹೆಸರನ್ನಲ್ಲ, ಅಲ್ಲವೇ?
- ಡಾ. ಮುರಳೀಧರ ಹತ್ವಾರ್, ಹೇಸ್ಟಿಂಗ್ಸ್, ಇಂಗ್ಲೆಂಡ್
[email protected]
ನಿಮ್ಮ ಜಾಲದಲ್ಲಿ ಇತ್ತೀಚೆಗೆ ಪ್ರಕಟವಾದ ಚಿಕನ್ಗುನ್ಯ ಜ್ವರದ ವಿವರಣೆಯ ಲೇಖನ ಸುಲಭವಾಗಿ ಎಲ್ಲರಿಗೂ ಅರ್ಥವಾಗುವಂತಿತ್ತು. ಲೇಖಕರಿಗೆ ಅಭಿನಂದನೆಗಳು. ಆದರೆ, ‘ಚಿಕನ್ಗುನ್ಯ’ ದ ಉಚ್ಛಾರಣೆ ಲೇಖನದಲ್ಲಿ ಬರೆದಂತೆ ‘ಚಿಕೂನ್‌ಗುನ್ಯ’ ಅಲ್ಲ.
ಈಡಿಸ್ ಈಜಿಪ್ಟಿ ಎಂಬ ಹಗಲಿನಲ್ಲಿ ರಕ್ತ ಹೀರುವ ಸೊಳ್ಳೆಯಿಂದ ಹರಡುವ ಈ ವೈರಾಣು ಜ್ವರಕ್ಕೂ ‘ಚಿಕನ್’ ಗೂ ಏನೂ ಸಂಬಂಧ ಇಲ್ಲ ಎನ್ನುವದು ಸರಿ. ಆದರೆ, ಸಾಮಾನ್ಯರಲ್ಲಿ ಆ ಧ್ಶೆರ್ಯ ಮೂಡಿಸಲು ಹೆಸರನ್ನೆ ಬದಲಿಸುವದು ಸರಿಯೆ? ಅದೂ ಆಂಗ್ಲರು ಕೆಡಿಸಿದ ನಮ್ಮ ಊರುಗಳ ಹೆಸರಿಗೆಲ್ಲ ಮರು ನಾಮಕರಣವಾಗುತ್ತಿರುವಾಗ! ನಾವು ಕೊಲ್ಲಬೇಕಾಗಿರುವದು ಖಾಯಿಲೆಯನ್ನೆ ಹೊರತು ಅದರ ಹೆಸರನ್ನಲ್ಲ, ಅಲ್ಲವೇ?
ಚಿಕನ್ಗುನ್ಯ ಜ್ವರವನ್ನು ಮೊದಲು ದಾಖಲಿಸಿದ್ದು ಮಾರಿಯನ್ ರಾಬಿನ್ಸನ್ ಮತ್ತು ಲುಮ್ಸಡನ್ ಎನ್ನುವವರು. 1952ರಲ್ಲಿ ಮೊಜಾಂಬಿಕ್ ಮತ್ತು ತಾನ್ಜಾನ್ಯಿಕ ದ ಗಡಿ ಭಾಗದ ಮಾಕೊಂಡೆ ಪ್ರದೇಶದಲ್ಲಿ ಇದು ಮೊದಲಿಗೆ ಕಾಣಿಸಿಕೊಂಡಿತು ಅಥವಾ ವರ್ಣಿಸಲ್ಪಟ್ಟಿತು. ಮಾಕೊಂಡೆ ಭಾಗದಲ್ಲಿ ‘ಚಿಕನ್ಗುನ್ಯಾ’ ಎಂದರೆ ’ಬಾಗಿರುವದು’ ಎಂದರ್ಥ. ‘ಚಿಕನ್ಗುನ್ಯ’ ಪೀಡಿತರು ಗಂಟುಗಳ ನೋವಿನಿಂದ ಬಾಗಿ ನಡೆಯುವದರಿಂದ ಈ ಹೆಸರು.
ಹಿಂದೂಮಹಾಸಾಗರ ಮಧ್ಯದ ರೀಯೂನಿಯನ್ ಎಂಬ ಫ್ರೆಂಚ್ ದ್ವೀಪದಲ್ಲಿ 2005ರಲ್ಲಿ ಸುಮಾರು 2,58,000 ಚಿಕನ್ಗುನ್ಯ ರೋಗದಿಂದ ‘ಬಾಗಿ’ ಬಳಲಿದ್ದರು. ಆ ದ್ವೀಪದ ಒಟ್ಟು ಜನಸಂಖ್ಯೆಯೇ 8,00,000ಕ್ಕೂ ಸ್ವಲ್ಪ ಕಡಿಮೆ!
ಮಾರಿಶಸ್ ಮತ್ತು ಮಲೇಶಿಯಾ ದೇಶದ ಜನರನ್ನೂ ಈ ಮೊದಲು ಬಗ್ಗಿಸಿದ್ದ ಚಿಕನ್ಗುನ್ಯ ವೈರಾಣು ತನ್ನ ಬಣ್ಣ ಬದಲಿಸಿಕೊಂಡು 2005ರಿಂದ ನಮ್ಮ ದೇಶದಲ್ಲಿ ವಿಫುಲವಾಗಿರುವ ಈಡಿಸ್ ಈಜಿಪ್ಟಿ ಸೊಳ್ಳೆಗಳಲ್ಲಿ ತುಂಬಿ ಸಾವಿರಾರು ಜನರ ಗಂಟು ಹಿಡಿದಿದೆ. ದಕ್ಷಿಣದ ರಾಜ್ಯಗಳ ಜನರನ್ನು ಹೆಚ್ಚಾಗಿ ಕಾಡಿಸಿರುವ ಇದರ ಉತ್ತರ ಭಾರತದ ರಾಜ್ಯಗಳ ದಿಗ್ವಿಜಯದ ದಿನಗಳು ದೂರವಿಲ್ಲ!
ಹಲವು ದಿನ ಕಾಡಿಸಿ ಮತ್ತೆ ನಿಧಾನವಾಗಿ ಮರೆಯಾಗುವ ಚಿಕನ್ಗುನ್ಯ ಬಾಧೆಗೆ ಹೆಚ್ಚಿನ ವೈರಾಣು ರೋಗಗಳಂತೆ ಮದ್ದಿಲ್ಲ. ಇದು ಕಾಡಿಸಿ-ಪೀಡಿಸಿ ಗುಣವಾಗುವ ಖಾಯಿಲೆಯೇ ಹೊರತು ಇದರಿಂದ ಪ್ರಾಣಾಪಾಯ ಇಲ್ಲ ಎಂದೇ ಹೇಳಬಹುದು. ಆದರೂ, ಜ್ವರದ ಸೂಚನೆಗಳು ಕಂಡಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಉಪಚಾರ ಪಡೆಯುವದು ಒಳ್ಳೆಯದು.
ಆಧಾರ : ವೆಬ್‌ಸ್ಟರ್ ಅರ್ಥಕೋಶ (ಆನ್‌ಲೈನ್) ಮತ್ತು ವಿಕೆಪೀಡಿಯ.ಕಾಮ್.
ನಿಮ್ಮ ಆರೋಗ್ಯಕ್ಕಾಗಿ ತಪ್ಪದೇ ಓದಿ :
ಚಿಕನ್ ತಿಂದ್ರೆ ‘ಚಿಕೂನ್‌ಗುನ್ಯಾ’ ಬರುತ್ತಾ?












Click it and Unblock the Notifications