ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ ಇಲ್ಲದ ಮೇಲೆ... ಕನ್ನಡ ಅರಳೀತು ಹೇಗೆ?!

By Staff
|
Google Oneindia Kannada News

ಪ್ರೀತಿ ಇಲ್ಲದ ಮೇಲೆ... ಕನ್ನಡ ಅರಳೀತು ಹೇಗೆ?!
‘ಕನ್ನಡಕ್ಕೆ ಬೆಂಕಿ ಬಿದ್ದಿದೆ’ ಎನ್ನುವ ಸಂಗತಿಗೆ ಇಂಗ್ಲಿಷ್‌ನಲ್ಲಿ ಪ್ರತಿಸ್ಪಂದಿಸುವುದು ಎಷ್ಟು ಸರಿ? ಗಣಕದಲ್ಲಿ ಕನ್ನಡ ಬಳಸುವುದು ಕಷ್ಟಕಷ್ಟ ಎಂದು ಸಬೂಬು ಹೇಳಬೇಡಿ. ಬರಹ-ನುಡಿಗಳು ಕನ್ನಡಿಗರಿಗಾಗಿಯೇ ಕಾದು ಕುಳಿತಿವೆ. ಕನ್ನಡ ಬಳಸಲಾಗದಿದ್ದರೆ, ಕಂಗ್ಲಿಷ್‌ ಬಳಸಬಹುದಲ್ಲ(ಆಂಗ್ಲ ಲಿಪಿಯಲ್ಲಿ ಕನ್ನಡ ಭಾಷೆ). ಅದಕ್ಕಿರುವ ಅಡ್ಡಿಗಳಾದರೂ ಏನು ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ದಟ್ಸ್‌-ಕನ್ನಡ ತಂಡದವರಿಗೆ ನಮಸ್ಕಾರ,

ಶಶಾಂಕ ಸ್ವಾಮಿಯವರ ಪತ್ರವನ್ನು ಓದಿದ ನಂತರ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಇದರಿಂದ ಕನ್ನಡ ಭಾಷೆ ಏಕೆ ಹಿಂದೆ ಬಿದ್ದಿದೆ ಎಂದು ಚೆನ್ನಾಗಿಯೇ ತಿಳಿಯುತ್ತದೆ.

‘ಹಚ್‌’ ಅಂಗಡಿಯಲ್ಲಾದ ಅವರ ಅವಸ್ಥೆ ಶೋಚನೀಯವೇ ಸರಿ. ಆದರೆ ಅದಕ್ಕೆ ಅವರೇ ಕಾರಣ. ಈಗ ಒಬ್ಬರಿಗೆ ಕನ್ನಡ ಬರುವುದಿಲ್ಲವೆಂದು ತಿಳಿದೂ ಅವರೊಡನೆ ಕನ್ನಡದಲ್ಲಿ ಮಾತನಾಡೋಣವೆಂದು ಹಠ ಹಿಡಿದರೆ ಏನು ಹೇಳಬೇಕು? ಆ ಮ್ಯಾನೇಜರನ ವರ್ತನೆ ಸರಿಯಿಲ್ಲ ಒಪ್ಪುತ್ತೇನೆ. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡವನ್ನು ಕಲಿಯಬೇಕು ಮತ್ತು ಕನ್ನಡದಲ್ಲೇ ಮಾತಾಡಬೇಕು; ಇದೂ ನನಗೆ ಒಪ್ಪಿಗೆಯೇ. ಆದರೆ ಇಂಗ್ಲೀಷ್‌ ಭಾಷೆ ತಿಳಿದ, ಕನ್ನಡ ತಿಳಿಯದ ಬೇರೆಯವರೊಡನೆ (ಬೆಂಗಳೂರಿನಲ್ಲಿಯೇ ಇರಲಿ) ಇಂಗ್ಲಿಷ್‌ ತಿಳಿದ ಒಬ್ಬ ಕನ್ನಡಿಗ ಕನ್ನಡದಲ್ಲಿಯೇ ಮಾತನಾಡಬೇಕೆಂದು ಒತ್ತಾಯಿಸಿದರೆ ಅದು ಕನ್ನಡಾಭಿಮಾನ ಎನ್ನಿಸುವುದಿಲ್ಲ. ಕನ್ನಡದ ಬಗ್ಗೆ ಇರುವ ದುರಭಿಮಾನವೆಂದಾಗುತ್ತದೆ. ನಮಗೂ ಅನ್ಯಭಾಷೆಗಳ ದುರಭಿಮಾನಿಗಳಿಗೂ ಏನು ವ್ಯತ್ಯಾಸ ?

ಇಷ್ಟೇ ಆಗಿದ್ದರೆ ನಾನು ಈ ಪತ್ರ ಬರೆಯುತ್ತಿರಲಿಲ್ಲ. ದಟ್ಸ್‌-ಕನ್ನಡ ಒಂದು ಕನ್ನಡ ಪತ್ರಿಕೆ. ಅಲ್ಲಿಗೆ ಬರುವವೆಲ್ಲರಿಗೂ ಕನ್ನಡ ಓದಲು ಬರುತ್ತದೆ. ಆ ಪತ್ರಿಕೆಗೆ ಈ ಬಗೆಯ ಪತ್ರ ಬರೆಯಬೇಕಾದಾಗ ಕನ್ನಡ ಲಿಪಿಯಲ್ಲಿಲ್ಲದಿದ್ದರೇ ಹೋಗಲಿ, ಕಂಗ್ಲೀಷ್‌ನಲ್ಲಾದರೂ ಬರೆಯಬಹುದಿತ್ತಲ್ಲ? ನಮ್ಮ ಶೇಷಾದ್ರಿವಾಸು ಅವರ ಉತ್ತಮ ಬರಹವನ್ನು ಉಪಯೋಗಿಸಿ ಬರೆಯಬಹುದಿತ್ತಲ್ಲ? ಅದೇಕೆ ಇಲ್ಲಿ ಮಾತ್ರ ಸ್ವಚ್ಛವಾಗಿ ಇಂಗ್ಲೀಷಿನಲ್ಲಿ ಬರೆದದ್ದು? ಆಂಗ್ಲ ಪತ್ರಿಕೆಗೆ ಕಳಿಸಿದ್ದರೆ ಸರಿಯೆನ್ನಬಹುದಿತ್ತು. ಆದರೆ ಇಲ್ಲಿ ?

ಕನ್ನಡದವರೊಡನೆ ಇಂಗ್ಲೀಷಿನಲ್ಲಿ ಮಾತಾಡಿ ಕನ್ನಡ ಬರದವರೊಡನೆ ಕನ್ನಡದಲ್ಲಿಯೇ ಮಾತನಾಡಬೇಕೆನ್ನುವ ಒತ್ತಾಯದ ಪರಿ ಎಷ್ಟು ಸರಿ?

ನಾವು ಎಷ್ಟರ ಮಟ್ಟಿಗೆ ಕನ್ನಡದಲ್ಲಿ ಮಾತಾಡಲು ಮತ್ತು ಬರೆಯಲು ಯತ್ನಿಸುವುದಿಲ್ಲವೋ ಅಷ್ಟರ ಮಟ್ಟಿಗೆ ನಮ್ಮ ಭಾಷೆ ಉದ್ಧಾರವಾಗುವುದಿಲ್ಲ. ಹೌದು ನೀವು ಹೇಳಬಹುದು - ನಾನು ಯೂನಿಕ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದೆ (ಅಥವಾ ನನ್ನ ಬಳಿ ಬರಹ ತಂತ್ರಾಂಶ ಇಲ್ಲ), ವಿಷಯದ ಪ್ರಮುಖತೆಯಿಂದಾಗಿ ಬೇಗನೆ ಇಂಗ್ಲೀಷಿನಲ್ಲೇ ಬರೆದೆ ಎಂದು. ಇದು ನನ್ನ ಪ್ರಕಾರ ಸಲ್ಲದ ಮಾತು. ನೀವು ಭಾಷೆಯ ಬಗ್ಗೆ ಅಭಿಮಾನವನ್ನು ತೋರ್ಪಡಿಸದೆ ಹೋಗಿದ್ದರೆ ನಾನು ಈ ಪತ್ರ ಬರೆಯಬೇಕಾಗಿರಲಿಲ್ಲ. ಆದರೆ ಭಾಷೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಮೇಲೆಯೂ ಅದೂ ಕನ್ನಡಪತ್ರಿಕೆಯಾಂದಕ್ಕೆ ಇಂಗ್ಲೀಷಿನಲ್ಲಿ ಕನ್ನಡಕ್ಕಾದ ದ್ರೋಹದ ಬಗ್ಗೆ ಬರೆದರೆ ಒಪ್ಪುವುದು ಬಹಳ ಕಷ್ಟವಾಗುತ್ತದೆ.

ಸಂಪಾದಕರಿಗೆ ನನ್ನ ಮನವಿ. ಹಿಂದೆಯೂ ನಾನು ಇದರ ಬಗ್ಗೆ ನಿಮಗೆ ಬರೆದಿದ್ದೆ. ಕನ್ನಡ ಪತ್ರಿಕೆಯ ಸಂಪಾದಕರಾದ ನಿಮ್ಮ ಮೇಲೆ ದೊಡ್ಡ ಹೊಣೆಯಿದೆ. ವಿಶ್ವಕನ್ನಡಿಗರ ಮನೆಮಾತು ಎಂಬುದು ನಿಮ್ಮ ಪತ್ರಿಕೆಯ ಶೀರ್ಷಿಕೆಯಲ್ಲಿದೆ. ಇದು ಇನ್ನೂ ಕನ್ನಡ ಪತ್ರಿಕೆಯೆಂದು ಎಣಿಸಿದ್ದೇನೆ. ಕನ್ನಡ ಮಾತನಾಡದ ಕನ್ನಡಿಗರ ಪತ್ರಿಕೆಯಲ್ಲವೆಂದು ನನ್ನ ಭಾವನೆ. ಈಗ ಸಂಪಾದಕರಿಗೆ ಬರೆದ ಪತ್ರಗಳನ್ನು ಇಂಗ್ಲೀಷಿನಲ್ಲಿ ಸ್ವೀಕರಿಸಿದರೆ, ನಾಳೆ ಇಂಗ್ಲೀಷ್‌ ಲೇಖನಗಳನ್ನೇ ಸ್ವೀಕರಿಸಬಹುದಲ್ಲ? ಇಲ್ಲಿ ನಾನು ದುರಭಿಮಾನಿ ಎಂದು ನೀವು ಹೇಳಬಹುದು. ಆದರೆ ಕನ್ನಡ ಪತ್ರಿಕೆಯಾಳಗೆ ಕನ್ನಡವಿರಬೇಕು ಎಂಬುದಷ್ಟೇ ನನ್ನ ಮತ.

ಕನ್ನಡ ಬರುವವರೊಡನೆ ಕನ್ನಡದಲ್ಲೇ ಮಾತಾಡೋಣ. ಕನ್ನಡ ಬಂದೂ ಅದನ್ನು ಮಾತನಾಡದವರಿಗೆ ಬುದ್ಧಿ ಹೇಳೋಣ. ಕನ್ನಡ ಬರದವರಿಗೆ ಹೇಳಿ ಕೊಡೋಣ. ನಂತರ ಅವರೊಡನೆ ಕನ್ನಡದಲ್ಲಿ ವ್ಯವಹರಿಸೋಣ, ಅದಕ್ಕೆ ಮುಂಚೆಯಲ್ಲ. ಆಂದೋಲನ ಮಾಡಬೇಕು. ಆದರೆ ಅರ್ಥವತ್ತಾಗಿ. ನಮ್ಮ ಕನ್ನಡಕ್ಕಾಗಿ ‘ಓರಾಟ’ ಅಥವಾ ಚೀರಾಟ ಮಾಡುವುದು ಸಾಕು. ಮನೆಗಳಲ್ಲಿ ಮನಗಳಲ್ಲಿ ಕನ್ನಡ ಮಾತನಾಡುವವರು ಬೇಕು.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X