ಭಾರತದಲ್ಲಿ ಶಾಲೆಗೆ ಹೋಗುವ 10 ಮಕ್ಕಳಲ್ಲಿ 4 ಮಂದಿ ಪಿಯುಸಿಗೂ ಮುನ್ನವೇ ಡ್ರಾಪ್‌ಔಟ್: ನೀತಿ ಆಯೋಗದ ಆಘಾತಕಾರಿ ವರದಿ
ನವದೆಹಲಿ: ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಯಲ್ಲಿಯೇ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೈಸ್ಕೂಲ್ ಅಥವಾ ಪಿಯುಸಿ ಹಂತವನ್ನು ತಲುಪುವ ಮುನ್ನವೇ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ ಎಂದು ನೀತಿ ಆಯೋಗದ ವರದಿ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದೆ.
"ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ - ತಾತ್ಕಾಲಿಕ ವಿಶ್ಲೇಷಣೆ ಮತ್ತು ಗುಣಮಟ್ಟ ಹೆಚ್ಚಳಕ್ಕಾಗಿ ನೀತಿ ಮಾರ್ಗಸೂಚಿ"ಎಂಬ ಶೀರ್ಷಿಕೆಯಡಿ ನೀತಿ ಆಯೋಗವು ದೇಶದ ಶಿಕ್ಷಣ ವ್ಯವಸ್ಥೆಯ ಕುರಿತು ವರದಿಯೊಂದನ್ನು ಸಿದ್ಧಪಡಿಸಿದೆ. 'ದಿ ಹಿಂದೂ' ವರದಿ ಮಾಡಿರುವ ಪ್ರಕಾರ, ಶಾಲೆಗೆ ಸೇರುವ ಪ್ರತಿ 10 ಮಕ್ಕಳಲ್ಲಿ ನಾಲ್ವರು ಉನ್ನತ ಮಾಧ್ಯಮಿಕ ಶಿಕ್ಷಣವನ್ನು (ಹೈಯರ್ ಸೆಕೆಂಡರಿ) ಪೂರ್ಣಗೊಳಿಸುವ ಮೊದಲೇ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ.

ಸದ್ಯದ ನಮ್ಮ ಶಿಕ್ಷಣ ವ್ಯವಸ್ಥೆಯು 'ಪಿರಮಿಡ್' ಆಕಾರದ ಸಮಸ್ಯೆಯನ್ನು ಎದುರಿಸುತ್ತಿದೆ. ದೇಶದಲ್ಲಿ ಒಟ್ಟು 14.71 ಲಕ್ಷ ಶಾಲೆಗಳಿದ್ದು, 24.69 ಕೋಟಿ ವಿದ್ಯಾರ್ಥಿಗಳಿದ್ದಾರೆ. ಆದರೆ, ಪ್ರಾಥಮಿಕ ಹಂತದಲ್ಲಿ 7.3 ಲಕ್ಷ ಶಾಲೆಗಳಿದ್ದರೆ, ಉನ್ನತ ಮಾಧ್ಯಮಿಕ ಹಂತಕ್ಕೆ ಬರುವಾಗ ಶಾಲೆಗಳ ಸಂಖ್ಯೆ ಕೇವಲ 1.64 ಲಕ್ಷಕ್ಕೆ ತೀವ್ರವಾಗಿ ಕುಸಿಯುತ್ತದೆ.
ವರದಿಯ ಪ್ರಕಾರ, ದೇಶದ ಕೇವಲ ಶೇಕಡಾ 5.4ರಷ್ಟು ಶಾಲೆಗಳು ಮಾತ್ರ 1 ರಿಂದ 12ನೇ ತರಗತಿಯವರೆಗೆ ನಿರಂತರ ಶಿಕ್ಷಣವನ್ನು ಒಂದೇ ಕಡೆ ಒದಗಿಸುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಹೋಗಲು ಪದೇಪದೇ ಶಾಲೆಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ. ಉನ್ನತ ವ್ಯಾಸಂಗಕ್ಕಾಗಿ ಸ್ಥಳೀಯವಾಗಿ ಶಾಲೆಗಳ ಕೊರತೆಯಿರುವುದರಿಂದ, ಈ ಬದಲಾವಣೆಯ ಹಂತದಲ್ಲಿಯೇ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖರಾಗಿ ಅರ್ಧಕ್ಕೇ ಶಾಲೆ ಬಿಡುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಮತ್ತೊಂದು ಅಚ್ಚರಿಯ ವಿಚಾರವೆಂದರೆ, ದೇಶದಾದ್ಯಂತ ಸುಮಾರು 7,993 ಶಾಲೆಗಳಲ್ಲಿ 'ಶೂನ್ಯ ದಾಖಲಾತಿ' (ಯಾವೊಬ್ಬ ವಿದ್ಯಾರ್ಥಿಯೂ ಇಲ್ಲದಿರುವುದು) ವರದಿಯಾಗಿದೆ. ಇದರಲ್ಲಿ ಪಶ್ಚಿಮ ಬಂಗಾಳ (3,812) ಮತ್ತು ತೆಲಂಗಾಣ (2,245) ರಾಜ್ಯಗಳು ಅತಿ ಹೆಚ್ಚು ಶೂನ್ಯ ದಾಖಲಾತಿ ಶಾಲೆಗಳನ್ನು ಹೊಂದಿವೆ. ವಿದ್ಯಾರ್ಥಿಗಳೇ ಇಲ್ಲದಿದ್ದರೂ, ಆಡಳಿತಾತ್ಮಕ ದಾಖಲೆಗಳನ್ನು ನವೀಕರಿಸದ ಕಾರಣ ಈ ಶಾಲೆಗಳಿಗೆ ಸರ್ಕಾರದಿಂದ ಹಣಕಾಸು ಮತ್ತು ಮಾನವ ಸಂಪನ್ಮೂಲಗಳು ಪೂರೈಕೆಯಾಗುತ್ತಲೇ ಇವೆ. ಇದು ಸರ್ಕಾರದ ಯೋಜನೆ ಮತ್ತು ವಾಸ್ತವದ ನಡುವಿನ ಅಂತರವನ್ನು ಎತ್ತಿತೋರಿಸುತ್ತದೆ.
ಕೇವಲ ಶಾಲೆ ಬಿಡುವವರ ಸಂಖ್ಯೆ ಮಾತ್ರವಲ್ಲ, ಕಲಿಕೆಯ ಗುಣಮಟ್ಟದಲ್ಲೂ ಕುಸಿತ ಕಂಡುಬಂದಿರುವುದನ್ನು ವರದಿ ಉಲ್ಲೇಖಿಸಿದೆ. ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದ್ದರೂ, 8ನೇ ತರಗತಿಯ ವಿದ್ಯಾರ್ಥಿಗಳ ಓದುವ ಸಾಮರ್ಥ್ಯ ಕಡಿಮೆಯಾಗಿದೆ. 2014ರಲ್ಲಿ 8ನೇ ತರಗತಿಯ ಶೇ. 74.7ರಷ್ಟು ವಿದ್ಯಾರ್ಥಿಗಳು 2ನೇ ತರಗತಿಯ ಪಠ್ಯವನ್ನು ಸರಾಗವಾಗಿ ಓದಬಲ್ಲವರಾಗಿದ್ದರು. ಆದರೆ, 2024ರ ಹೊತ್ತಿಗೆ ಈ ಪ್ರಮಾಣ ಶೇ. 71.1ಕ್ಕೆ ಇಳಿಕೆಯಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯ ಅಗತ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ. ವಿಶೇಷವಾಗಿ ಪ್ರಾಥಮಿಕ ಶಿಕ್ಷಣದ ನಂತರ ಮುಂದಿನ ಹಂತದ ಶಿಕ್ಷಣವನ್ನು ಸುಗಮವಾಗಿ ಮುಂದುವರಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ, ವಿದ್ಯಾರ್ಥಿಗಳು ಶಾಲೆಯಲ್ಲಿ ಉಳಿಯುವಂತೆ ಮಾಡಲು ಸೂಕ್ತ ಮತ್ತು ಕಟ್ಟುನಿಟ್ಟಿನ ನೀತಿಗಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.












Click it and Unblock the Notifications