ಗಿಗ್ ಕಾರ್ಮಿಕರ ಸಮಸ್ಯೆಗಳಿಗೆ ಡಿಜಿಟಲ್ ಮುಕ್ತಿ: ದೂರು ನೀಡಲು ಬಂತು 'ಐಪಿಜಿಆರ್‌ಎಸ್' ಪೋರ್ಟಲ್

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಕಾಯ್ದೆ ಜಾರಿಗೊಳಿಸಿ ಗಮನ ಸೆಳೆದಿರುವ ಕರ್ನಾಟಕ ಸರ್ಕಾರ, ಇದೀಗ ಅವರ ಕುಂದುಕೊರತೆಗಳನ್ನು ಆಲಿಸಲು ಹಾಗೂ ತ್ವರಿತವಾಗಿ ಪರಿಹರಿಸಲು ವಿಶೇಷ ಡಿಜಿಟಲ್ ವೇದಿಕೆಯೊಂದನ್ನು ಆರಂಭಿಸಿದೆ.

ಕರ್ನಾಟಕ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯು, ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ 'ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ' (IPGRS - ಐಪಿಜಿಆರ್‌ಎಸ್‌) ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಮೂಲಕ ಗಿಗ್ ಕಾರ್ಮಿಕರು ತಮ್ಮ ವೇತನ, ರಜೆ, ದುಡಿಯುವ ಸ್ಥಿತಿಗತಿ ಸೇರಿದಂತೆ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ದೂರು ನೀಡಬಹುದಾಗಿದೆ.

Karnataka Government

ಹೀಗೆ ಸಲ್ಲಿಕೆಯಾಗುವ ದೂರುಗಳನ್ನು ಸಂಬಂಧಿಸಿದ ಕಂಪನಿಗಳಿಗೆ (ಟೆಕ್ ಅಗ್ರಿಗೇಟರ್‌ಗಳಿಗೆ) ವರ್ಗಾವಣೆ ಮಾಡಿ, ಪರಿಹಾರ ಒದಗಿಸಲಾಗುತ್ತದೆ. ಈ ಡಿಜಿಟಲ್ ವೇದಿಕೆಯು ಲಕ್ಷಾಂತರ ಗಿಗ್ ಕಾರ್ಮಿಕರು ಮತ್ತು ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳ ನಡುವೆ ಅಧಿಕೃತ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು, ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಈಗಾಗಲೇ 'ಯಾತ್ರಿ' (Yatri) ಸೇರಿದಂತೆ ಕೆಲವು ಫ್ಲಾಟ್‌ಫಾರ್ಮ್‌ಗಳು ತಮ್ಮ ಆಂತರಿಕ ಕುಂದುಕೊರತೆ ಪರಿಹಾರ ಸಮಿತಿ (IGRC) ಯನ್ನು ಸರ್ಕಾರದ ಈ ಪೋರ್ಟಲ್ ಜೊತೆ ಸಂಯೋಜಿಸಿವೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಇತರ ಪ್ರಮುಖ ಕಂಪನಿಗಳೊಂದಿಗೂ ಮಾತುಕತೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಿಗ್ ಕಾರ್ಮಿಕರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.

ಜುಲೈ 1ರಿಂದ ಶೇ.1ರಷ್ಟು ಸೆಸ್

ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ 2025ರ ಅನ್ವಯ, ಎಲ್ಲಾ ಆ್ಯಪ್ ಆಧಾರಿತ ಸಾರಿಗೆ ಮತ್ತು ಇತರ ಸೇವೆ ನೀಡುವ ಕಂಪನಿಗಳು (ಉದಾಹರಣೆಗೆ: ಓಲಾ, ಉಬರ್, ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್‌ಕಾರ್ಟ್ ಇತ್ಯಾದಿ) ತಮ್ಮ ಒಟ್ಟು ವಹಿವಾಟಿನ ಶೇ.1 ರಷ್ಟನ್ನು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಈ ನಿಯಮವು ಜುಲೈ 1 ರಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ. ಈ ರೀತಿ ಸಂಗ್ರಹವಾಗುವ ಸೆಸ್ ಹಣವನ್ನು ಗಿಗ್ ಕಾರ್ಮಿಕರ ವಿಮೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ವಿನಿಯೋಗಿಸಲಾಗುತ್ತದೆ.

ಗಿಗ್ ಕಾರ್ಮಿಕರಿಗಿರುವ ಸವಲತ್ತುಗಳು

ಸರ್ಕಾರದ ಈ ಕಲ್ಯಾಣ ಯೋಜನೆಯಡಿ ಗಿಗ್ ಕಾರ್ಮಿಕರಿಗೆ ಹಲವು ಭದ್ರತೆಗಳನ್ನು ಒದಗಿಸಲಾಗಿದೆ. ಒಂದು ವೇಳೆ ಕಾರ್ಮಿಕರು ಅಕಾಲಿಕವಾಗಿ ಸಾವನ್ನಪ್ಪಿದರೆ 4 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ನೀಡಲಾಗುತ್ತದೆ. ಅಪಘಾತದಲ್ಲಿ ಕಾಯಂ ದಿವ್ಯಾಂಗರಾದರೆ 2 ಲಕ್ಷ ರೂ. ಪರಿಹಾರ ಹಾಗೂ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ 1 ಲಕ್ಷ ರೂ.ವರೆಗೆ ಮರುಪಾವತಿ ಸೌಲಭ್ಯವನ್ನು ಈ ಮಂಡಳಿಯು ಒದಗಿಸುತ್ತದೆ.

ಹೆಚ್ಚುವರಿ ಕಾರ್ಮಿಕ ಆಯುಕ್ತರು ಹಾಗೂ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯ ಸಿಇಒ ಆಗಿರುವ ಡಾ. ಜಿ. ಮಂಜುನಾಥ್ ಈ ಬಗ್ಗೆ ಪ್ರತಿಕ್ರಿಯಿಸಿ, "ಗಿಗ್ ಕಾರ್ಮಿಕರ ಹಕ್ಕುಗಳನ್ನು ಖಾತ್ರಿಪಡಿಸಿಕೊಳ್ಳುವ ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಗಿಗ್ ಆರ್ಥಿಕತೆಯ ಸುಗಮ ಕಾರ್ಯಾಚರಣೆಗಾಗಿ ಎಲ್ಲಾ ಫ್ಲಾಟ್‌ಫಾರ್ಮ್‌ಗಳು ಐಪಿಜಿಆರ್‌ಎಸ್‌ ವೇದಿಕೆಗೆ ಸೇರ್ಪಡೆಯಾಗಬೇಕು" ಎಂದು ಸೂಚಿಸಿದ್ದಾರೆ.

ಗಿಗ್ ಕಾರ್ಮಿಕರು ಹೆಚ್ಚಿನ ಮಾಹಿತಿಗಾಗಿ, ನೊಂದಣಿಗಾಗಿ ಅಥವಾ ಯಾವುದೇ ಪರಿಹಾರದ ನೆರವಿಗಾಗಿ ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 155214 ಅನ್ನು ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+