ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಿತ್ರಾನ್ನದ ಜೊತೆ ಒಂದಿಷ್ಟು ಬಾಳಕ...

By Staff
|
Google Oneindia Kannada News


ಜೋಶಿಯವರ ವಿಚಿತ್ರಾನ್ನದಲ್ಲಿ ಲಕ್ಷದೀಪೋತ್ಸವದ ವೈಭವ ಕಂಡಿರಿ, ಅದರ ಜೊತೆಗೆ ಮಹಾದೇವರಾಯರ ಬಾಳಕ... ಸವಿದರೆ ಪುಳಕ... ರಂಗನಾಥಸ್ವಾಮಿ-ಲಕ್ಷ್ಮಮ್ಮನ ಸರಸ ಸಂಭಾಷಣೆ ನಿಮಗೆ ಗೊತ್ತೆ? ಹೌದು ಅದೇ ಸ್ವಾಮಿ -ಕಡುಬಿನ ಕಾಳಗ...

ಮಾನ್ಯ ಶ್ರೀವತ್ಸ ಜೋಷಿ ಅವರಿಗೆ ನಮಸ್ಕಾರ,

ನಿಮ್ಮ ವಿಚಿತ್ರಾನ್ನ ಓದಿದೆ. ಪರಶುರಾಮ ದೇವರ ಲಕ್ಷ ದೀಪೋತ್ಸವದ ವಿವರ, ಅದರಂಗವಾಗಿ ಬರೆದ ಕೃಷ್ಣ-ಸತ್ಯಭಾಮೆಯರ ಪ್ರೇಮ ಕಲಹದ ಶ್ಲೋಕ ಓದಿ ನಮ್ಮೂರ ಜಾತ್ರೆಯ ನೆನಪು ಮರುಕಳಿಸಿತು. ವಿಚಿತ್ರಾನ್ನದ ಜತೆ ಒಂದಿಷ್ಟು ಬಾಳಕ (ವಿಬಾಳಕ!!)ವನ್ನೂ ಬಡಿಸಿಬಿಡೋಣ ಅನ್ನಿಸಿತು.

ನಮ್ಮೂರ (ತಂಬ್ರಹಳ್ಳಿ, ಬಳ್ಳಾರಿ ಜಿಲ್ಲೆ) ಹತ್ತಿರ ರಂಗಪ್ಪನ ಗುಡ್ಡ ಇದೆ. ಅಲ್ಲಿ ರಂಗನಾಥ ಸ್ವಾಮಿ ಮತ್ತು ಲಕ್ಷ್ಮೀದೇವಿಯ ಗುಡಿಗಳು ಇವೆ. ಪ್ರತಿ ವರ್ಷ ಹೋಳೀ ಹುಣ್ಣಿಮೆಯ ದಿನ ರಂಗಪ್ಪನ ಜಾತ್ರೆ ನಡೆಯುತ್ತದೆ. (ಅಂದ ಹಾಗೆ ನಮ್ಮೂರಿನಲ್ಲಿ ಹೋಳಿ ಹುಣ್ಣಿಮೆಯ ದಿನ ಯಾರೂ ಬಣ್ಣ ಎರಚುವಂತಿಲ್ಲ; ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುವಂತಿಲ್ಲ). ಹುಣ್ಣಿಮೆಯ ದಿನ ರಥೋತ್ಸವ. ಅದರ ಮರುದಿನ, ‘ಬ್ಯಾಟಿ ಮರ’ ಎಂಬ ಉತ್ಸವ ನಡೆಯುತ್ತದೆ. ಇದು ವಿಹಾರಾರ್ಥವಾಗಿ ಬೇಟೆಗೆ ಹೋಗುವ ಸಂಕೇತ.

Tambrahalli Mahadevaraoಈ ಬೇಟೆಗೆ ಹೋಗುವಾಗ ಪಲ್ಲಕ್ಕಿಯಲ್ಲಿ ರಂಗನಾಥನ ಉತ್ಸವಮೂರ್ತಿಯನ್ನು ಮಾತ್ರ ಕರೆದೊಯ್ಯುತ್ತಾರೆ. ಶ್ರೀದೇವಿ, ಭೂದೇವಿಯರರು ಬೆಟ್ಟದ ಮೇಲೆಯೇ ಉಳಿಯುತ್ತಾರೆ. ಯಾವ ಮೃಗಗಳನ್ನೂ ಬೇಟೆಯಾಡುವುದಿಲ್ಲ. ಸುಮ್ಮನೆ ಒಂದು ಮುಳ್ಳಿನ ಜಾಲಿ ಗಿಡವನ್ನು ಬೇಟೆಯ ಮರ ಎಂದು ಕಡಿದು ತರುತ್ತಾರೆ. ಬೇಟೆಯ ಮರವನ್ನು ಮೆರೆವಣಿಗೆಯಲ್ಲಿ ಬೆಟ್ಟದ ಮೇಲಕ್ಕೆ ಕೊಂಡೊಯ್ಯುವ ಹೊತ್ತಿಗೆ ರಾತ್ರಿ ಎಂಟಾಗಿರುತ್ತದೆ. ಹಾಲು ಚೆಲ್ಲಿದ ಹಾಗೆ ಬೆಳುದಿಂಗಳು ಹರಡಿರುತ್ತದೆ. ಫಾಲ್ಗುಣ ಮಾಸದ ಉರಿಬಿಸಿಲಿಗೆ (ಅದರಲ್ಲೂ ಬಳ್ಳಾರಿ ಬಿಸಿಲು) ಬೆಟ್ಟದ ಕಲ್ಲು ಬಂಡೆಗಳು ಚುರುಗುಡುತ್ತಿರುತ್ತವೆ. ಏನಿದೆಲ್ಲಾ ಅನಾವಶ್ಯಕ ವಿವರಗಳು? ಪಾಯಿಂಟಿಗೆ ಬನ್ನಿ ಅಂತೀರೋ? ಬಂದೆ, ಬಂದೆ.

ಬೇಟೆ ಮುಗಿಸಿ ರಂಗನಾಥ ಸ್ವಾಮಿಯು ತನ್ನ ಸ್ವಸ್ಥಾನಕ್ಕೆ ಮರಳುವ ಹೊತ್ತಿಗೆ, ಹೆಂಡತಿಯರಿಬ್ಬರೂ ಮುನಿಸಿಕೊಂಡು ಬಿಟ್ಟಿರುತ್ತಾರೆ. ಗುಡಿಯ ಮುಖ್ಯ ಬಾಗಿಲು ಮುಚ್ಚಿ ಬಿಟ್ಟಿರುತ್ತದೆ. ಹೊರಗಡೆ ಕಟ್ಟೆಯ ಮೇಲೆ ದೇವಿಯ ಕಡೆಯ ಜನಗಳು ಕಾವಲು ಕೂತಿರುತ್ತಾರೆ; ಅವರ ಮುಖ್ಯಸ್ಥರನ್ನು ಮಂಜುನಾಥ ಶಾಸ್ತ್ರಿಗಳು ಎಂದಿಟ್ಟುಕೊಳ್ಳೋಣ. ಸ್ವಲ್ಪ ದೂರದಲ್ಲಿ ಪಲ್ಲಕ್ಕಿಯನ್ನು ಇಳಿಸಿ, ರಂಗನಾಥನ ಕಡೆಯವರು ಕೂತಿರುತ್ತಾರೆ.

ಅವರ ಮುಖ್ಯರನ್ನು ಗುಂಡ ಭಟ್ಟರು ಎಂದಿಟ್ಟುಕೊಳ್ಳೋಣ. ಗುಂಡ ಭಟ್ಟರು ಬಾಗಿಲು ತೆರೆಸಲು ಒಬ್ಬ ರಾಯಭಾರಿಯನ್ನು ಕಳಿಸುತ್ತಾರೆ; ಇವರ ಹೆಸರನ್ನು ತಮ್ಮಣ್ಣ ಭಟ್ಟರು ಎಂದಿಟ್ಟುಕೊಳ್ಳೋಣ. ತಮ್ಮಣ್ಣ ಭಟ್ಟರು, ಕೋಲೂರಿಕೋಂಡು ಬಾಗಿ ನಡೆಯವ ವೃದ್ಧರೆಂದು ಊಹಿಸಿಕೊಳ್ಳಿ.

ತ(ತಮ್ಮಣ್ಣ ಭಟ್ಟರು) : ಒಳಗ ಯಾರು? ಬಾಗಲಾ ತಗೀರಿ

ಮ (ಮಂಜುನಾಥ ಶಾಸ್ತ್ರಿಗಳು) : ಈ ಸರವತ್ತಿನಾಗ ಬಾಗಲಾ ಬಡಿಯೋರು ನೀವ್‌ ಯಾರು?

ತ : ‘ಚಕ್ರಿಃ’ ಬಂದಾನ ಅಂತ ಹೇಳ್ರಿ.

ಮ: ಚಕ್ರಿಃ ಅಂದ್ರ ಕುಂಬಾರ ಅಂತ ಅರ್ಥ. ಅವಗಿಲ್ಲೇನ್‌ ಕೆಲ್ಸ ಗುಡ್ಡದ ಮ್ಯಾಲೆ. ಊರಾಗ ಹೋಗಿ ಏನರ ವ್ಯಾಪಾರ ಮಾಡು ಅಂತ ಹೇಳ್ರಿ.

ತ : (ಗುಂಡ ಭಟ್ಟರ ಹತ್ತಿರ ಬಂದು) ಚಕ್ರಿಃ ಅಂದಿದ್ದಕ್ಕ ಅಪಾರ್ಥ ಮಾಡಿ ಬಿಟ್ರಪಾ.

ಗು : ಹಂಗಂದ್ರಾ? ಈ ಸಲ ಗೋಪಾಲ ಬಂದಾನ ಅಂತ ಹೇಳ್ರಿ.

ತ (ನಿಧಾನವಾಗಿ ಬಂದು) : ಗೋಪಾಲ ಬಂದಾನ ಬಾಗಲಾ ತಗೀರಿ.

ಮ : ಗೋಪಾಲ ಅಂದ್ರ ದನ ಕಾಯೋನು ಅಂತ. ಅವನಿಗಿಲ್ಲೇನು ಕೆಲಸ ಇಲ್ಲ. ಊರಾಗ ಹೋಗಿ ದನಾ ಕಟ್ಟಿ ಹಾಕು ಅಂತ ಹೇಳ್ರಿ.

ತ : (ಗುಂಡ ಭಟ್ಟರ ಹತ್ತಿರ ಬಂದು) ಮತ್ತ ವಿಪರೀತಾರ್ಥ ಮಾಡಿದ್ರಪಾ.

ಹೀಗೇ ತಮ್ಮಣ್ಣ ಭಟ್ಟರನ್ನು ಹತ್ತಾರು ಬಾರಿ ಓಡಾಡಿಸಿದ ಮೇಲೆ, ಕೊನೆಗೆ ‘ಶ್ರೀ ರಾಮ ಚಂದ್ರ ಬಂದಾನ ಅಂತ ಹೇಳ್ರಿ’ ಅನ್ನುತ್ತಾರೆ. ಆಗ ಲಕ್ಷ್ಮಿ ಕಡೆಯವರು, ‘ಹಾಗಾ. ಶ್ರೀ ರಾಮಚಂದ್ರ ಬಂದಿದ್ರ ಭಾಳಾ ಒಳ್ಳೇದಾತು. ಬಾಗಲಾ ತೆಗೀತೀವಿ. ಆದಕ್ಕೂ ಮೊದ್ಲು: ಹೆಣ್ಣು ಮಕ್ಕಳನ್ನ ಬಿಟ್ಟೂ ಬ್ಯಾಟೀಗ್‌ ಹೋಗೀರಿ. ಇಲ್ಲಿ ವಸ್ತಾ ವಡೀವಿ ಎಲ್ಲಾ ಕಳ್ತನ ಆಗ್ಯಾವ. ಅವುನ್ನೆಲ್ಲಾ ಹುಡುಕಿ ತಂದುಕೊಡ್ರಿ. ಅಮ್ಯಾಲೆ ಬಾಗಲಾ ತೆಗೀತೀವಿ’ ಅನ್ನುತ್ತಾರೆ.

ರಂಗನಾಥನ ಕಡೆಯವರು ಈಗ ಪತ್ತೇದಾರಿ ಕೆಲಸ ಪ್ರಾರಂಭಿಸುತ್ತಾರೆ. ಯಾರೋ ಒಬ್ಬರು ನೆಲಕ್ಕೆ ಬೆಟ್ಟು ತೋರಿಸಿ, ‘ಇದು ಯಾರದಪ್ಪಾ ಹೆಜ್ಜಿ’ ಅಂತಾರೆ. ಪತ್ತೇದಾರ ಊರಲ್ಲಿ ಒಬ್ಬ ದೊಡ್ಡ ಮನುಷ್ಯರ ಹೆಸರು ಹೇಳುತ್ತಾನೆ. ಎಲ್ಲರೂ ‘ಹೋ, ಇದರಾಗ ಅವರದೂ ಕೈವಾಡ ಅದಾ!’ ಅಂತ ಕೂಗುತ್ತಾರೆ. ಹೀಗೇ ಸ್ವಲ್ಪ ಹೊತ್ತು ದೊಡ್ಡ ಮನುಷ್ಯರನ್ನೆಲ್ಲಾ ಕಳ್ಳರನ್ನಾಗಿಸುವ ವಿನೋದ ನಡೆಯುತ್ತದೆ. ಕೊನೆಗೆ ಒಬ್ಬನನ್ನು ಕಳ್ಳ ಎಂದು ಹಿಡಿದು ಹೂವಿನ ಗೊಂಡೆಗಳಿಂದ ಹೊಡೆಯುತ್ತಾರೆ. ‘ಲಕ್ಷ್ಮೀರಮಣ ಗೋವಿಂದಾ’ ಎಂದಮೇಲೆ ಬಾಗಿಲು ತೆಗೆಯುತ್ತದೆ.

ಈ ವಿನೋದ ಪ್ರಸಂಗಕ್ಕೆ ‘ಕಡುಬಿನ ಕಾಳಗ’ ಎಂದು ಹೆಸರು. ಅದಕ್ಕೆ ಈ ಹೆಸರು ಹೇಗೆ ಬಂತು ಎಂಬುದು ನನಗಿನ್ನೂ ಅರ್ಥವಾಗಿಲ್ಲ.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X