Darshan Case: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಬೇಲ್ ಅರ್ಜಿ ವಿಚಾರಣೆ; ರೇಣುಕಾಸ್ವಾಮಿ ಕೇಸ್‌ನಲ್ಲಿ ಸಿಗುತ್ತಾ ಜಾಮೀನು?

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್‌ ಅವರ ಜಾಮೀನು ಅರ್ಜಿಯ ಮಹತ್ವದ ವಿಚಾರಣೆ ನಾಳೆ (ಶುಕ್ರವಾರ, ಮೇ 15) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಕಳೆದ 8 ತಿಂಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿರುವ ದರ್ಶನ್‌, ಜೈಲಿನಿಂದ ಹೊರಬರಲು ಸತತ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದೀಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿರುವ ಅವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ಈಗಾಗಲೇ ಮೇ 4ರಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆದಿತ್ತು. ಈ ವೇಳೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸೆಷನ್ಸ್‌ ಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ನಾಳಿನ ವಿಚಾರಣೆಯಲ್ಲಿ ಈ ವರದಿ ಮಹತ್ವದ ಪಾತ್ರ ವಹಿಸಲಿದೆ. ದರ್ಶನ್ ಅವರನ್ನು ಜೈಲಿನಿಂದ ಹೊರತರಲು ಅವರ ಪತ್ನಿ ವಿಜಯಲಕ್ಷ್ಮೀ ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ನಾಳೆಯಾದರೂ ದರ್ಶನ್‌ಗೆ ಜಾಮೀನು ಸಿಗುತ್ತಾ ಎಂಬ ಕಾತುರದಲ್ಲಿ ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿದ್ದಾರೆ.

Actor Darshan

ವಿಚಾರಣೆ ವಿಳಂಬದ ನೆಪ

ತಮ್ಮ ಜಾಮೀನು ಅರ್ಜಿಯಲ್ಲಿ ದರ್ಶನ್‌ ಪರ ವಕೀಲರು ಪ್ರಮುಖವಾಗಿ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ವಿಳಂಬವಾಗುತ್ತಿರುವ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಈವರೆಗೆ ಕೇವಲ 10 ಮಂದಿಯ ವಿಚಾರಣೆ ಕೂಡ ಪೂರ್ಣಗೊಂಡಿಲ್ಲ. ವಿಚಾರಣೆ ಇಷ್ಟು ನಿಧಾನವಾಗಿ ಸಾಗುತ್ತಿರುವುದರಿಂದ, ತಾವು ಈಗಾಗಲೇ 8 ತಿಂಗಳು ಜೈಲಿನಲ್ಲಿ ಕಳೆದಿದ್ದು, ಶೀಘ್ರವಾಗಿ ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಜೈಲಿನಲ್ಲಿ ಕಿರುಕುಳ - ದರ್ಶನ್ ಗಂಭೀರ ಆರೋಪ

ಜಾಮೀನು ಅರ್ಜಿಯಲ್ಲಿ ನಟ ದರ್ಶನ್‌ ಜೈಲಿನ ವ್ಯವಸ್ಥೆಯ ಬಗ್ಗೆ ಸಾಲು ಸಾಲು ದೂರುಗಳನ್ನು ನೀಡಿದ್ದಾರೆ. "ನನ್ನನ್ನು ಜೈಲಿನಲ್ಲಿ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿರುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಹಿಂಸೆಯಾಗುತ್ತಿದೆ. ಸಹ-ಕೈದಿಗಳು ನನ್ನನ್ನು ನಿಂದಿಸಿ, ಮೂದಲಿಸಿ ಪ್ರಚೋದನೆ ನೀಡುತ್ತಿದ್ದಾರೆ. ಮಾಧ್ಯಮಗಳಲ್ಲಿನ ನೆಗೆಟಿವ್ ಪ್ರಚಾರದಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ" ಎಂದು ಅವರು ಕಷ್ಟ ತೋಡಿಕೊಂಡಿದ್ದಾರೆ.

ಜೊತೆಗೆ, ಜೈಲಿನಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಕುಟುಂಬದವರನ್ನು ಭೇಟಿ ಮಾಡಲು ಸಮಾನ ಸಮಯ ನೀಡುತ್ತಿಲ್ಲ. ಸೆಲ್‌ನ ಕಾರಿಡಾರ್‌ನಲ್ಲಿ ಮಾತ್ರ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ತೀವ್ರ ಬೆನ್ನು ನೋವಿದ್ದರೂ ಸರಿಯಾದ ಫಿಸಿಯೋಥೆರಪಿ ಚಿಕಿತ್ಸೆ ನೀಡುತ್ತಿಲ್ಲ. ಸುದೀರ್ಘ ಜೈಲುವಾಸದಿಂದ ನನ್ನ ಜೀವನೋಪಾಯಕ್ಕೂ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು ಪೊಲೀಸರ ಅಫಿಡವಿಟ್

ದರ್ಶನ್ ಮಾಡಿರುವ ಈ ಎಲ್ಲಾ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಸುಪ್ರೀಂ ಕೋರ್ಟ್‌ಗೆ ಎರಡು ಅಫಿಡವಿಟ್‌ಗಳನ್ನು ಸಲ್ಲಿಕೆ ಮಾಡಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರೆ.

ಕಳೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಸೆಷನ್ಸ್ ಕೋರ್ಟ್ ಬಳಿ ಹಲವು ಪ್ರಶ್ನೆಗಳನ್ನು ಕೇಳಿತ್ತು. ಈವರೆಗೆ ಎಷ್ಟು ಸಾಕ್ಷಿಗಳ ವಿಚಾರಣೆ ನಡೆದಿದೆ? ಪ್ರಾಸಿಕ್ಯೂಷನ್ ಇನ್ನೂ ಎಷ್ಟು ಸಾಕ್ಷಿಗಳ ವಿಚಾರಣೆಗೆ ತಿಳಿಸಿದೆ? ಟ್ರಯಲ್ ಮುಗಿಯಲು ಇನ್ನೂ ಎಷ್ಟು ಸಮಯ ಬೇಕು? ಜೈಲಿನಲ್ಲಿ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳನ್ನು ನೀಡಲಾಗುತ್ತಿದೆಯೇ ಅಥವಾ ಇಲ್ಲವೇ? ಎಂಬ ಬಗ್ಗೆ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿತ್ತು. ನಾಳೆ ಈ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ನಾಳೆ ದರ್ಶನ್‌ಗೆ ಬೇಲ್ ಸಿಗುತ್ತಾ ಅಥವಾ ಜೈಲುವಾಸ ಮುಂದುವರಿಯುತ್ತಾ ಎಂಬುದು ನಿರ್ಧಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+