• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಗಾದರೆ ನೀನು ಸಾಹಿತಿಯಲ್ಲ, ಬಾಣಂತಿ!

By Super
|

ಮಾನ್ಯ ಸಂಪಾದಕರೆ,

ಉಲ್ಲೇಖ : 'ಗಂಡನ ಮನೆಯಿಂದ ಹೆರಿಗೆಗಾಗಿ ಹೆಣ್ಣುಮಕ್ಕಳು ತವರಿಗೆ ಬರುತ್ತಾರಲ್ಲಾ..."

ಲೇಖಕಿಯರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು 'ಪುಸ್ತಕ ಪ್ರಸವ " ಕ್ಕೆ ಹೋಲಿಸುವುದೇಕೋ ನನಗೆ ಈವರೆಗೂ ಅರ್ಥವಾಗಿಲ್ಲ. ಈ ಮಧ್ಯೆ ನೀವು ನಳಿನಿ ಮಯ್ಯ, ಸಂಧ್ಯಾ ...ಅವರ ಬಗ್ಗೆ ಬರೆದಾಗಲೂ ಹೀಗೆಯೇ ಬರೆದ ನೆನಪು. ನಾನು ಮುಂದೆ ಎಂದಾದರೂ ಪುಸ್ತಕ ಬಿಡುಗಡೆ ಮಾಡಿ,...ನೀವೇ ಮುನ್ನುಡಿ ಬರೆಯುವ 'ಅನಿವಾರ್ಯ ಕರ್ಮ" ನಿಮಗೆ ಒದಗಿದರೆ ... ಒಂದು ಕಿಮ್ಮತ್ತು. 'ನಾನು ಮೊದಲನೆಯ ಹೆರಿಗೆಗೂ ತವರಿಗೆ ಹೋಗಿರಲಿಲ್ಲ ! "

ಒಂದು ಹನಿಗವನ ನೋಡಿ(ದುಂಡಿರಾಜ್‌?)

ಬರೆಯುವುದೆಂದರೆ ಹೆರಿಗೆಯ ಹಾಗೆ ಏನಂತ್ತಿ?

-ತ್ರಿವೇಣಿ, ಅಮೆರಿಕಾ

ಮಾನ್ಯರೆ,

ಪುಸ್ತಕ ಪ್ರಸವ ಇತ್ಯಾದಿ ಮಾತುಗಳನ್ನು ಹಿಂದೆಯೂ ಕೇಳಿದ್ದೆ. (ಬಹುಶಃ ಶಾಮ್‌ ಬರೆದದ್ದು ಇರಬಹುದು) ಭಾವನೆಗಳಿಂದ ಅಥವಾ ವಿಚಾರಗಳಿಂದ ತುಂಬಿರುವ ಬರಹಗಾರನ ಮನಸ್ಸು ಬಸಿರಾದ ಹೆಣ್ಣಿನ ಹಾಗೆ. ಹೇಗೆ ಗರ್ಭವತಿ ಹಡೆಯಲೇಬೇಕೋ ಬರಹಗಾರ/ಬರಹಗಾರ್ತಿ ತನ್ನ ಭಾವ / ವಿಚಾರಗಳನ್ನು ಹೊರಹಾಕಲೇಬೇಕು. (ಪುಸ್ತಕ ರೂಪದಲ್ಲಿ)

ಇನ್ನು ತವರಿಗೆ ಹೋಗುವ ವಿಚಾರ : ಅದು ಸ್ವಲ್ಪ ಹಳೆಯ ಚಿಂತನೆ ಅನ್ನಬಹುದು. (ನನ್ನ ಹೆಂಡತಿಯ ಮೂರೂ ಹೆರಿಗೆ ಅಮೆರಿಕಾದಲ್ಲೇ ಆಗಿದೆ) ಈ ಉಪಮೆ ಸ್ವಲ್ಪ ಸವಕಲಾಗಿರಲೂಬಹುದು? ಏನೇ ಇರಲಿ, ಬರಹಗಾರ ಮತ್ತು ಬರಹಗಾರ್ತಿಯರ ಭಾವನೆಗಳು ತವರಿನಲ್ಲಾಗಲಿ, ಗಂಡನಮನೆಯಲ್ಲಾಗಲೀ (ಅತ್ತೆ ಮನೆ ಅನ್ನುವಂತಿಲ್ಲ !) ಪುಸ್ತಕ ರೂಪದಲ್ಲಿ ಪ್ರಕಾಶಗೊಳ್ಳಲೆಂದು ಹಾರೈಸುತ್ತೇನೆ.

- ನಟರಾಜ್‌, ಅಮೆರಿಕ

*

ಸನ್ಮಾನ್ಯ ಓದುಗರಲ್ಲಿ ನಿವೇದನೆ:

ಪತ್ರಿಕೆಗೆ ಬರೆಯುವ ಭಾಷೆ ಪದಗಳ ಕುಲುಮೆಯಿಂದ ಮತ್ತು ಕ್ಲೀಷೆಗಳ ಅಮಲಿನಿಂದ ಕೂಡಿರುತ್ತದೆ. ಓದುಗ ಮಹಾಶಯರ ಭೋಗೋಳಿಕ, ಸಾಮಾಜಿಕ , ಕೌಟುಂಬಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟು ಪದಗಳನ್ನು ಆರಿಸಿ ಬಳಸಬೇಕು ಎಂಬ ಅಂಶವನ್ನು ಕಾಲೇಜಿನಲ್ಲಿ ಹೇಳಿಕೊಡುತ್ತಾರೆ. ಅದು ಒಂದು ವಿಚಾರ. ಅದೇನೇ ಇರಲಿ, ತನಗರಿವಿಲ್ಲದೆ ' ಸವಕಲಾಗಿಬಿಟ್ಟಿದೆ" ಎನ್ನುವ ಪದಗಳಿಗೆ ಕೆಲವು ಪತ್ರಿಕೆಗಳು ಮರುಜೀವ ತುಂಬುವುದುಂಟು (ತವರು : Native Place, ಎಲ್ಲರೂ ತವರು ತೊರೆದವರೇ ಎನ್ನುವ ಸಂಗತಿ ಬೇರೆ) ಬರೆಯುವ ಅವಸರ ಅಥವಾ ಭರಾಟೆಯಲ್ಲಿ ಇತರ ಭಾಷೆಯ ಪದಗಳನ್ನು , ನುಡಿಗಟ್ಟುಗಳನ್ನು ಬಳಸುತ್ತಾ ಸಾಗುವ ಪತ್ರಿಕೆಗಳು ಕನ್ನಡ ಶಬ್ದಕೋಶಕ್ಕೆ ಹೊಸ ಪದಗಳನ್ನು ಕೊಡುವುದುಂಟು. ಇದು ಅಗತ್ಯ ಕೂಡ. (ರಾಜ್ಯದಲ್ಲಿ ಇವತ್ತು Naxalara ಹಾವಳಿ ಹೆಚ್ಚಾಗಿದೆ, ಕಟ್ಟೆಚ್ಚರ = Red Alert in Shivajinagar, ಸುಗ್ರೀವಾಜ್ಞೆ = New Ordinance gets Governers nod, ಮುಂತಾದವು. ಅಂತೆಯೇ ಕೆಲವು ಪದಗಳನ್ನು ಸಂದರ್ಭ, ವ್ಯಕ್ತಿ, ಸನ್ನಿವೇಶಕ್ಕನುಗುಣವಾಗಿ ಓದಿಕೊಂಡು ಹೋಗಬೇಕೆಂದು ಪತ್ರಿಕೆಗಳು ಸೂಚಿಸುತ್ತವೆ. (ಉದಾ : ಉಪ-ಮುಖ್ಯಮಂತ್ರಿ ಒಬ್ಬ ಕುರುಬ, ಆ ಸಂಪಾದಕಿ ಒಬ್ಬ ಬೃಹಸ್ಪತಿ, ಸೀತಾಪತಿ ನಿನಗೆ ಚಾಪೆಯೇ ಗತಿ ಇತ್ಯಾದಿ.

ಚಾಗದಭೋಗದಕ್ಕರದಂತಹ ಪದಗಳು ಇವತ್ತು ಪ್ರೊ. ಅ.ರಾ. ಮಿತ್ರ, ಎಂ. ಎಂ. ಕಲಬುರ್ಗಿ, ವೆಂಕಟಾಚಲ ಶಾಸ್ತ್ರಿ ಅವರ ಸೊತ್ತಾಗಿ ಮಾತ್ರ ಉಳಿದಿದೆ. ನಮ್ಮ ರಾಜ್ಯದ ಕಚೇರಿ -ಕಾಲೇಜು- ಹೋಟೆಲು- ಮತ್ತು ನಡುಮನೆಯಲ್ಲಿ I am amazed, How come yaar ಎಂಬಂತಹ ಪದಗಳು ಜನಜೀವನದಲ್ಲಿ ಹಾಸುಹೊಕ್ಕಾಗಿಬಿಟ್ಟಿವೆ. ಇವತ್ತು ಕರ್ನಾಟಕದಲ್ಲಿ ಕನ್ನಡಿಗರಿಗೆ ಜನಿಸಿದ ಒಬ್ಬ ಪುಣ್ಯಾತ್‌ಗಿತ್ತಿ ಕೂಡ ತಾನು ಬಸುರಿ ಎಂದು ಹೇಳಿಕೊಳ್ಳುವುದಿಲ್ಲ. ಆಕೆ ಆಗುವುದು ಏನಿದ್ದರೂ Pregnant ಅಷ್ಟೆ.

ಇನ್ನು ತವರಿನ ವಿಚಾರ : ಡಾಟ್‌ಕಾಂನಲ್ಲಿ ಕನ್ನಡ ಓದುವವರಲ್ಲಿ ಅನಿವಾಸಿ ಕನ್ನಡಿಗರ ಸಂಖ್ಯೆ ದೊಡ್ಡದು ಎನ್ನುವುದು ಇವತ್ತಿಗಂತೂ ಸತ್ಯ. ಅದರಲ್ಲೂ, ಸಾರಿಗೆ ಒಗ್ಗರಣೆ ಹಾಕಿಯೂ ಅನುಭವವಿಲ್ಲದ ಕೆಲವು ಹೆಣ್ಮಕ್ಕಳು ಮದುವೆಯಾಗಿ ಟಿಂಬೆಕ್ಟುಗೆ ಹೋದನಂತರ, ಬ್ರೆಡ್ಡು ಚೀಪುತ್ತಾ ಮನೆ, ಅಮ್ಮ, ಅಮ್ಮನ ಅಡುಗೆ, ಬಾಣಂತನ, ಆರೈಕೆ, ಉಷ್ಣ-ಸೀತ ನೆನೆಸಿಕೊಂಡು ಕರಳು ಚುರುಕ್ಕೆನಿಸಿಕೊಳ್ಳುವುದೂ ಸಾಮಾನ್ಯ. ಅಂತಹ ಮಾನಿನಿಯರಿಗೆ ಆಗಾಗ ಅಮ್ಮನ ಅಂದರೆ ತವರಿನ ನೆನಪಾಗಲೆನ್ನುವ ಆಶಯದಿಂದ ತವರು, ಅಜ್ಜಿಮನೆ, ಉಂಡಮನೆ, ಹೊಕ್ಕಮನೆ, ಮುಂತಾದ ಪದಗಳನ್ನು ದಟ್ಸ್‌ಕನ್ನಡ ಆಗಾಗ ಬಳಸುವುದುಂಟು. ಉದ್ದೇಶ ಇಷ್ಟೆ : ಕನ್ನಡ ಓದುವಾಗಲಾದರೂ ಮನೆಬಿಟ್ಟ ಮಾನಿನಿಯರಿಗೆ ತವರಿನ ನೆನಪು ಮರುಕಳಿಸಲಿ!! ನಿಜ. ಓದುತ್ತಾ , ಓದುತ್ತಾ ಕೆಲವು ಪದಗಳನ್ನು ಕಂಡರೆ ಸಾಕು ಅಸಹ್ಯ, ಜಿಗುಪ್ಸೆ ಮೂಡುತ್ತದೆ. (ಉದಾ : ಅಭಿವೃದ್ಧಿಯತ್ತ ಭಾರತ ದಾಪುಗಾಲು ; ಜನಸಂಖ್ಯಾ ಹತೋಟಿಗೆ ಲಾಲೂ ಪ್ರಸಾದ್‌ ಕರೆ; ಟೈಮೇ ಸಾಕಾಗ್ತಾಯಿಲ್ಲ; ಬೋರಣ್ಣ ರಾಜೀನಾಮೆ, ಈರಣ್ಣನ ನೇಮಕ ; ಅಮೆರಿಕದಿಂದ ಅಳಿಯ ಮಗಳು Short visitge ಬಂದಿದಾರೆ, ಬೇಗ ಮನೆಗೆ ಹೋಗ್ಬೇಕು ಕಣ್ರೀ....ಇತ್ಯಾದಿ)

ಇವಿಷ್ಟೂ ಭಾಷೆ ಮತ್ತು ಪದಬಳಕೆಯ ಮಾತಾಯಿತು. 'ಪುಸ್ತಕ ಪ್ರಸವ" ಪದಪ್ರಯೋಗವನ್ನು ಕೇವಲ 250 ಪುಟಗಳ ಬುಕ್‌ ರೀಲೀಜ್‌ ಸುದ್ದಿಯ ಹಿನ್ನೆಲೆಯಲ್ಲಿ ಓದಿಕೊಳ್ಳುವುದು ಸೂಕ್ತವಲ್ಲ. ಪುಸ್ತಕ ಬರೆಯುವುದು ಹೇಗೆ ಸುಲಭದ ಮಾತಲ್ಲವೋ, ಹಾಗೆಯೇ ಬರೆದದ್ದನ್ನು ಪ್ರಕಟಿಸಿ ನಾಲ್ಕು ಜನಕ್ಕೆ ತಲುಪಿಸುವ ಕೆಲಸ ಹಲವು ತಾಪತ್ರಯಗಳಿಂದ ಕೂಡಿರುತ್ತದೆ. ಪುಸ್ತಕ ಬರೆದು ಪ್ರಕಟಿಸಿದವರ ಅನುಭವಗಳನ್ನು ಖಾಸಗಿಯಾಗಿ ಕೇಳಿ ನೋಡಿ. ಪುಸ್ತಕವನ್ನು ಹೆರುವ ಆ ತಾಪತ್ರಯ ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿಗೆ ಗೊತ್ತಿರುತ್ತದೆ.

ಈ ಪತ್ರಿಕೆಯ ಸಂಪಾದಕನೆನಿಸಿಕೊಂಡ ನಾನು ಹೆರಿಗೆ ನೋವನ್ನು ಕಂಡವನಲ್ಲ, ಪುಸ್ತಕ ಬರೆದು ಪ್ರಕಟಿಸುವ ಗೋಜಿಗೆ ಹೋದವನಲ್ಲ. ಆದ್ದರಿಂದ ಪ್ರಸವದ ನೋವುಗಳು ನನಗೆ ಪರಿಚಿತವಲ್ಲ. (ಗಾದೆ : ಆರು ಹಡೆದವಳ ಮುಂದೆ ಮೂರು ಹಡೆದವಳು ತಿಣುಕಬಾರದು!)

ಕಡೆಮಾತು : ಅನಿವಾಸಿ ಬಂಧುಗಳಲ್ಲಿ ಅನೇಕ ಬರಹಗಾರರಿದ್ದಾರೆ. ಗಂಡಸರು ಇದ್ದಾರೆ, ಹೆಂಗಸರೂ ಇದ್ದಾರೆ. ಅಲಬಾಮಾದ ವೈ. ಆರ್‌. ಮೋಹನ್‌, ನ್ಯೂಯಾರ್ಕಿನ ಎಚ್‌.ಕೆ. ಚಂದ್ರಶೇಖರ್‌, ಮಿನೆಸೋಟದ ಗುರುಪ್ರಸಾದ್‌ ಕಾಗಿನೆಲೆ, ವಾಷಿಂಗ್‌ಟನ್ನಿನ ಶ್ರೀನಿವಾಸ್‌, ಲಾಸ್‌ಏಂಜಲಿಸ್‌ನ ನಾಗ ಐತಾಳ, ಪೋಟೋಮಿಕ್‌ನ ಮೈಶ್ರೀ ನಟರಾಜ್‌, ಕ್ಯಾಲಿಫೋರ್ನಿಯಾದ ಎಂ. ಆರ್‌. ದತ್ತಾತ್ರಿ, ವಿಶ್ವನಾಥ್‌ ಹುಲಿಕಲ್‌, ಈಗ ಮೈಸೂರು ನಿವಾಸಿಯಾಗಿರುವ ಶಿಕಾರಿಪುರ ಹರಿಹರೇಶ್ವರ, ಮುಂತಾದವರ ಕೃತಿಗಳು ' ಬಿಡುಗಡೆ" ಆಗಿವೆ.

ಕ್ಯಾಲಿಫೋರ್ನಿಯಾದ ಸಂಧ್ಯಾ ರವೀಂದ್ರನಾಥ್‌, ಚಿಕಾಗೋದ ಶಾರದಾ ಬೈಯಣ್ಣ ಮತ್ತು ನಳಿನಿ ಮಯ್ಯ, ವಾಷಿಂಗ್‌ಟನ್‌ ಡಿಸಿಯ ಶಶಿಕಲಾ ಚಂದ್ರಶೇಖರ್‌, ಈಗ ಮಣಿಪಾಲದಲ್ಲಿ ನೆಲೆಸಿರುವ ಜ್ಯೋತಿ ಮಹದೇವ ಮುಂತಾದವರ ಕೃತಿಗಳ ಚೊಚ್ಚಲ ' ಹೆರಿಗೆ" ತವರಿನಲ್ಲಾಗಿದೆ!

-ಇಂತಿ, ಶಾಮ್‌ (ಸಂಪಾದಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How come kannada books are always delivered and not released?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more