ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಮೇಲೆ ಹಿಂದಿ ಸವಾರಿ!

By Staff
|
Google Oneindia Kannada News


ದಕ್ಷಿಣ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತದಿಂದ ಹೇರುವ ಯತ್ನ ಕೇಂದ್ರ ಸರ್ಕಾರದಿಂದ ನಡೆದಿದೆ. ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ಮೂಲಕ ಸಂವಿಧಾನಕ್ಕೆ ಕೆಲವರು ಅಪಚಾರವೆಸಗುತ್ತಿದ್ದಾರೆ. ಹಿಂದಿ ಹೇರಿಕೆಯಿಂದ ಕನ್ನಡದ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಏನಾಗುತ್ತದೆ? -ಲೇಖನ ಓದಿ.

  • ಸಂಪಿಗೆ ಶ್ರೀನಿವಾಸ, ಬನವಾಸಿ ಬಳಗ, ಬೆಂಗಳೂರು
    [email protected]
1947ರಲ್ಲಿ ಭಾರತ ಬ್ರಿಟೀಷರ ಆಳ್ವಿಕೆಯಿಂದ ಸ್ವತಂತ್ರವಾದಾಗ ಕನ್ನಡ ಮಾತನಾಡುವ ಪ್ರದೇಶಗಳು ಬೇರೆ ಬೇರೆ ಆಡಳಿತ ಪ್ರದೇಶಗಳಲ್ಲಿ ಹಂಚಿ ಹೋಗಿತ್ತು. 1954ರಲ್ಲಿ ಕೇಂದ್ರ ಸರ್ಕಾರ ಫಜಲ್‌ ಆಲಿ ನೇತೃತ್ವದಲ್ಲಿ ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು. ಈ ಆಯೋಗದ ವರದಿಯಂತೆ ಕರ್ನಾಟಕ ರಾಜ್ಯ 1956ರ ನವಂಬರ್‌ 1ರಂದು ಉದಯವಾಯಿತು.

ಈ ಭಾಷಾವಾರು ರಾಜ್ಯಗಳ ಸ್ಥಾಪನೆಯ ಉದ್ದೇಶ ರಾಜ್ಯದ ಬಹುಸಂಖ್ಯಾತ ಭಾಷಿಕರು ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ರಕ್ಷಿಸಿಕೊಂಡು ಅಭಿವೃದ್ಧಿ ಹೊಂದಲಿ ಎಂದು. ಹೀಗೆ ರಚನೆಯಾದ ಕರ್ನಾಟಕ ರಾಜ್ಯದಲ್ಲಿ ಬಹುಸಂಖ್ಯಾತರ ಭಾಷೆಯಾದ ಕನ್ನಡ ಭಾಷೆಗೆ ಪ್ರಮುಖ ಸ್ಥಾನಮಾನ ಸಿಗುತ್ತದೆ ಎಂದು ಕನ್ನಡ ಪ್ರದೇಶಗಳ ಏಕೀಕರಣಕ್ಕಾಗಿ ಹೋರಾಡಿದ ನಮ್ಮ ಹಿರಿಯರ ಆಕಾಂಕ್ಷೆಯಾಗಿತ್ತು. ಆದರೆ ಅಖಂಡ ಕರ್ನಾಟಕ ಸ್ಥಾಪನೆಯಾಗಿ 50 ವರುಷಗಳಾದರೂ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವಲ್ಲಿ ನಮ್ಮ ರಾಜ್ಯ ಸರ್ಕಾರ ಯಶಸ್ವಿಯಾಗಿಲ್ಲ ಎನ್ನುವುದು ಬಹಳ ದುಃಖದ ವಿಚಾರ.

Sampige Srinivasಹಿಂದಿ ಭಾರತ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಮಾತ್ರ. ಅದು ರಾಷ್ಟ್ರ ಭಾಷೆ ಎಂದು ಭಾರತದ ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಕೇಂದ್ರ ಸರ್ಕಾರಗಳು ಬೇರೆ ರಾಜ್ಯಗಳ ಮೇಲೆ, ಅದರಲ್ಲೂ ದಕ್ಷಿಣದ ರಾಜ್ಯಗಳ ಮೇಲೆ ಹೇರುತ್ತ ಬಂದಿದೆ.

ಹಿಂದಿ ಭಾಷೆ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಂಚಲ ಮತ್ತು ದೆಹಲಿಯಲ್ಲಿ ಮಾತ್ರ ಆಧಿಕೃತ ಭಾಷೆಯಾಗಿದೆ. ಉಳಿದ ರಾಜ್ಯಗಳಲ್ಲಿ ಆಯಾರಾಜ್ಯಗಳ ಬಹುಸಂಖ್ಯಾತ ಜನರಾಡುವ ಭಾಷೆಯನ್ನು ಅಧಿಕೃತ ಭಾಷೆ ಎಂದು ಸಂವಿಧಾನ ಹೇಳಿದೆ. ಹೀಗಿದ್ದು ಹಿಂದಿಯನ್ನು ಎಲ್ಲಾ ರಾಜ್ಯಗಳ ಮೇಲೆ ಹೇರುವ ಕೇಂದ್ರ ಸರ್ಕಾರದ ನೀತಿ ಸಮಂಜಸವಲ್ಲ.

ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಭಾಷೆ ಅರ್ಥವಾಗುವ, ಅಥವಾ ಮಾತನಾಡುವ ಮಂದಿ ಬಹಳ ಕಡಿಮೆ. ಉತ್ತರ ಭಾರತದಿಂದ ವಲಸೆ ಬಂದಿರುವ ಜನರಷ್ಟೇ ಕರ್ನಾಟಕದಲ್ಲಿ ಹಿಂದಿ ಮಾತನಾಡುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಈ ರಾಜ್ಯಗಳಲ್ಲಿ ಹಿಂದಿ ಪ್ರಚಾರ ಪರಿಷತ್ತುಗಳ ಮೂಲಕ, ಶಿಕ್ಷಣದಲ್ಲಿ ಹಿಂದಿಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಮೂಲಕ, ದೂರದರ್ಶನ ಮತ್ತು ಆಕಶವಾಣಿ ಕೇಂದ್ರಗಳಲ್ಲಿ ಹಿಂದಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡುವ ಮೂಲಕ, ಹಿಂದಿ ಸಿನಿಮಾಗಳ ಮೂಲಕ ಹಿಂದಿ ರಾಷ್ಟ್ರ ಭಾಷೆ ಎಂದು ಸುಳ್ಳು ಪ್ರಚಾರ ಮಾಡುತ್ತ ಹಿಂದಿಯನ್ನು ಕನ್ನಡಿಗರ ಮೇಲೆ ಹೇರಿ ಕನ್ನಡಿಗರು ಹಿಂದಿ ಕಲಿಯುವಂತೆ ಪ್ರಚೋದಿಸಿದ್ದಾರೆ, ಪ್ರಚೋದಿಸುತ್ತಿದ್ದಾರೆ. ಈ ಸುಳ್ಳು ಪ್ರಚೋದನೆಯನ್ನು ಬಹಳಷ್ಟು ಕನ್ನಡಿಗರು ನಂಬಿ ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಆತ್ಮೀಯತೆಯಿಂದ ಸ್ವೀಕರಿಸಿಬಿಟ್ಟಿದ್ದಾರೆ.

ಇದರ ಪರಿಣಾಮವಾಗಿ ಬಹಳಷ್ಟು ಕನ್ನಡಿಗರಿಗೆ ಹಿಂದಿ ಭಾಷೆಯ ಬಗ್ಗೆ ಸಲ್ಲದ ವ್ಯಾಮೋಹ ಶುರುವಾಗಿದೆ. ಶಾಲಾ-ಕಾಲೇಜುಗಳಲ್ಲಿ, ಕೆಲಸಮಾಡುವ ಸ್ಥಳಗಲ್ಲಿ ಉತ್ತರಭಾರತದ ವಲಸಿಗರೊಂದಿಗೆ ಕನ್ನಡಿಗರು ಸುಲಲಿತವಾಗಿ ಹಿಂದಿಯಲ್ಲಿ ವ್ಯವಹರಿಸುತ್ತಾರೆ.

ಬೆಂಗಳೂರಿನ ಯಾವುದೇ ವಾಣಿಜ್ಯಮಳಿಗೆಗಳಿಗೆ ಹೋದರೂ ಅಲ್ಲಿನ ಸಿಬ್ಬಂದಿ ಸೆಕ್ಯೂರಿಟಿಯಿಂದ ಹಿಡಿದು ಸ್ವಾಗತಕಾರಿಣಿಯವರೆಗೂ ಹಿಂದಿ/ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಾರೆ. ನಮ್ಮ ಹಿಂದಿಪ್ರೇಮಿ ಕನ್ನಡಿಗರು ಅವರೊಂದಿಗೆ ಹಿಂದಿಯಲ್ಲೇ ವ್ಯವಹರಿಸುತ್ತಾರೆ. ಇದರಿಂದ ಉತ್ತರ ಭಾರತೀಯರು ಕನ್ನಡ ಕಲಿಯದೆ ತಮ್ಮ ಭಾಷೆ ರಾಷ್ಟ್ರ ಭಾಷೆ ಎನ್ನುವ ಅಹಂಕಾರದಿಂದ ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಕೀಳಾಗಿ ನೋಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಹಿಂದಿ ಬಾರದ ಕನ್ನಡಿಗರು ಅವರೊಂದಿಗೆ ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದರೆ ಕನ್ನಡವನ್ನು ಅವಹೇಳನ ಮಾಡುವ ಮಟ್ಟಕ್ಕೆ ಉತ್ತರಭಾರತೀಯರು ಇಲ್ಲಿ ಬೆಳೆದಿದ್ದಾರೆ.

ಹಿಂದಿಯನ್ನು ಕನ್ನಡಿಗರು ಎಷ್ಟು ಹಚ್ಚಿಕೊಂಡಿದ್ದಾರೆ ಎಂದರೆ ಕನ್ನಡ ಸಿನಿಮಾಗಳನ್ನು ತಿರಸ್ಕರಿಸಿ ಹಿಂದಿ ಸಿನಿಮಾಗಳಿಗೆ ಮುಗಿಬಿದ್ದಿದ್ದಾರೆ. ಬಾಲಿವುಡ್‌ನ ಹಿಂದಿ ಸಿನಿಮಾಗಳ ಅಶ್ಲೀಲತೆ, ಹಿಂಸೆಯ ವೈಭವೀಕರಣ ಯುವ ಕನ್ನಡಿಗರಿಗೆ ಆಪ್ಯಾಯಮಾನವಾಗಿದೆ. ಯುವ ಕನ್ನಡಿಗರು ಹಿಂದಿ ಚಿತ್ರಗಳ ನಾಯಕ/ನಾಯಕಿಯರ ಅಭಿಮಾನಿಗಳಾಗಿ ಅವರ ವೇಷಭೂಷಣಗಳನ್ನು ಅನುಕರಣೆ ಮಾಡುತ್ತಿದ್ದಾರೆ.

ಈ ಹಿಂದಿ ಚಿತ್ರಗಳಿಂದ ಪ್ರೇರಿತರಾಗಿ ಕನ್ನಡ ಚಿತ್ರರಂಗವು ಯುವಕನ್ನಡಿಗರನ್ನು ಸೆಳೆಯಲು ಕನ್ನಡ ಚಿತ್ರಗಳಲ್ಲೂ ಅಶ್ಲೀಲತೆ, ಹಿಂಸೆಯನ್ನು ವೈಭವೀಕರಿಸಲು ಮುಂದಾಗಿದ್ದಾರೆ. ಇದರಿಂದ ಕನ್ನಡ ಚಿತ್ರಗಳ ಗುಣಮಟ್ಟ ಕುಸಿದಿದೆ. ಸದಬಿರುಚಿಯ ಕನ್ನಡ ಚಿತ್ರಗಳಿಗೆ ಕನ್ನಡಿಗರಿಂದಲೇ ಪ್ರೋತ್ಸಾಹ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹಳಷ್ಟು ಕನ್ನಡಿಗರ ಮನೆಯಲ್ಲಿ ದೂರದರ್ಶನದಲ್ಲಿ ಕನ್ನಡ ವಾಹಿನಿಗಳನ್ನು ನೋಡದೆ ಹಿಂದಿಯ ವಾಹಿನಿಗಳಲ್ಲಿ ಪ್ರಸಾರವಾಗುವ ದಾರಾವಾಹಿಗಳನ್ನು ನೋಡುತ್ತಾರೆ. ಇದರಿಂದ ಕನ್ನಡದ ಸಂಸ್ಕೃತಿಗೆ ದಕ್ಕೆಯಾಗಿದೆ. ಉತ್ತರ ಭಾರತೀಯರ ಸಂಸ್ಕೃತಿಗೆ ನಮ್ಮ ಕನ್ನಡಿಗರು ಬಲಿಯಾಗುತ್ತಿದ್ದಾರೆ.

ಕನ್ನಡದ ಹಬ್ಬಗಳಾದ ನಾಗರ ಪಂಚಮಿ, ಯುಗಾದಿ, ಸಂಕ್ರಾಂತಿಗಳನ್ನು ಮರೆತು ಉತ್ತರ ಭಾರತೀಯರ ಹಬ್ಬಗಳಾದ ರಾಖಿ, ಹೋಲಿ, ಕಡವಾ ಚೌತ್‌ಗಳೆಡೆಗೆ ನಮ್ಮ ಯುವಪೀಳಿಗೆ ಆಕರ್ಷಿತರಾಗುತ್ತಿದ್ದಾರೆ. ಕನ್ನಡಿಗರ ಅಡಿಗೆ ಮನೆಗೂ ಹಿಂದಿ ಭಾಷೆ ಲಗ್ಗೆ ಇಟ್ಟಿದೆ. ಕನ್ನಡ ಕಂದಮ್ಮಗಳ ನಾಲಿಗೆಯ ಮೇಲೆ ಕಸ್ತೂರಿ ಕನ್ನಡ ಪದಗಳ ಬದಲು ಹಿಂದಿಯ ಚಿತ್ರಗೀತೆಗಳ ಸಾಲುಗಳು ನಲಿದಾಡುತ್ತಿವೆ!

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಹಿಂದಿ ಪ್ರಚಾರ ಪರಿಷತ್ತುಗಳನ್ನು ಸ್ಥಾಪಿಸಿ ರಾಷ್ಟ್ರೀಕೃತ ಬ್ಯಾಂಕುಗಳು, ಜೀವ ವಿಮಾ ನಿಗಮ, ಅಂಚೆ ಇಲಾಖೆ, ಭಾರತೀಯ ರೈಲ್ವೆ, ಇತ್ಯಾದಿ ಕೇಂದ್ರೀಯ ಸಂಸ್ಥೆಗಳಲ್ಲಿ ಹಿಂದಿಯನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಇರಬೇಕಾದ ಸ್ಥಾನವನ್ನು ಹಿಂದಿ ಕಬಳಿಸಿಬಿಟ್ಟಿದೆ.

ಕೇಂದ್ರೀಯ ಸಂಸ್ಥೆಗಳಾದ ಅಂಚೆ ಇಲಾಖೆ, ಜೀವ ವಿಮಾ ನಿಗಮ ಇತ್ಯಾದಿ ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಗಾಳಿಗೆ ತೂರಿದ್ದಾರೆ. ಅರ್ಜಿಗಳು, ಚೆಲನ್‌ಗಳು, ಇನ್ನಿತರ ವ್ಯವಹಾರಗಳಲ್ಲೂ ಹಿಂದಿ, ಇಂಗ್ಲಿಷ ಭಾಷೆಗಳಿಗೆ ಮಾತ್ರ ಅಲ್ಲಿ ಸ್ಥಾನವಿದೆ. ಕನ್ನಡ ಮಾಯವಾಗಿದೆ. ಕನ್ನಡಿಗರ ಹಿತಕಾಯಬೇಕಾದ ರಾಜ್ಯ ಸರ್ಕಾರ ಇದನ್ನೆಲ್ಲಾ ನೋಡಿಕೊಂಡು ಮೌನವಾಗಿದೆ.

ಕನ್ನಡಿಗರು ಹಿಂದಿ ರಾಷ್ಟ್ರಭಾಷೆ ಎನ್ನುವ ಭ್ರಮೆಯಿಂದ ಆದಷ್ಟು ಬೇಗ ಹೊರಬರಬೇಕಾಗಿದೆ. ಹಿಂದಿಯಿಂದ ಕನ್ನಡಕ್ಕೆ ಆಗಿರುವ, ಆಗುತ್ತಿರುವ ಹಾನಿಯ ಬಗ್ಗೆ ಜಾಗೃತರಾಗಬೇಕಿದೆ. ಇಲ್ಲವಾದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡದ ಸ್ಥಾನದಲ್ಲಿ ಹಿಂದಿ ಮೆರೆಯುವ ದಿನ ದೂರವಿರಲಾರದು.

ಹಿಂದಿ ರಾಷ್ಟ್ರಭಾಷೆಯೇ?


ಪೂರಕ ಓದಿಗೆ :
ಭಾಷಾ ನೀತಿ : ಒಂದು ಚಿಂತನೆ


ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X