ದೇಶದ ಬೆನ್ನೆಲುಬು!
ಅನ್ನ ನೀಡುವ ರೈತರ ಗೋಳು ದಿನೇದಿನೇ ಹೆಚ್ಚುತ್ತಲೇ ಇದೆ...ಆದರೆ ಅದನ್ನ ಕೇಳೋರ್ಯಾರು?
- ಹಳೇಬೀಡು ಸ್ವಾಮಿ
[email protected]
ಮಾನ್ಯ ಸಂಪಾದಕರೇ,
ದಟ್ಸ್‌ಕನ್ನಡದಲ್ಲಿ ಪ್ರಕಟವಾದಂತೆ ‘ಕಿಲೋ ಟೊಮೆಟೊ ಕೆ ್ಕ ಂ.80ಪೈಸೆ! ಬೆಳೆಗಾರರ ಬೆನ್ನಿಗೆ ಬರೆ’ ಈ ಮಾತು ನಿಜ. ಆದರೆ ಈ ವರ್ಷ ಟೊಮೆಟೊವನ್ನು ರಸ್ತೆಗೆ ಸುರಿದು ರೈತರು ಗಲಾಟೆ ಮಾಡಿದಂತೆ ಕಾಣಲಿಲ್ಲ. ಮಾಡಿದ್ದರೂ ಮಾಧ್ಯಮದವರು ಬೇಸತ್ತು ಸುಮ್ಮನಾಗಿರಬೇಕು. ಪಾಪ ನಮ್ಮ ಬಡ ರೈತರ ಗೋಳನ್ನು ಕೇಳುವವರಿಲ್ಲ. ರೈತರ ಪಕ್ಷ ಅಂತ ಒಂದಿತ್ತು. ಅದೂ ಹೋಳಾಗಿ-ಹಾಳಾಗಿ ಹೋಗಿದೆ.
ಆದರೆ ಬೆಂಗಳೂರಿನಲ್ಲಿ 0.80ಪೈಸೆಯಂತೆ ಟೊಮೆಟೊ ಸಿಕ್ಕುತ್ತಿಲ್ಲ. ಬಹುಶಃ ಮಧ್ಯವರ್ತಿಗಳು ಇಲ್ಲೂ ಕೈತೂರಿಸಿರಬೇಕು. ಬೆಂಗಳೂರಲ್ಲಿ ತಿಂಗಳಿಗೆ 1,50,000ರೂ.ಗಿಂತಲೂ ಹೆಚ್ಚು ವರಮಾನವಿರುವವರು ಬಹಳ ಮಂದಿಯಿದ್ದಾರೆ. ಅಂತಹವರಿಗೆ ತರಕಾರಿ ರೇಟ್ ಎಷ್ಟು ಜಾಸ್ತಿಯಾದರೂ ತೊಂದರೆಯಿಲ್ಲ.
ರೈತರ ಬಗೆಗಿನ ವಸ್ತುಸ್ಥಿತಿಯನ್ನು ಹೀಗೆ ಪಟ್ಟಿಮಾಡಬಹುದು :
1) ಬೆಲೆ ಕಡಿಮೆಯಾದರೆ ಬೆಳೆದವನಿಗೆ ಕಣ್ಣಲ್ಲಿ ನೀರು ಬರುತ್ತದೆ. ಒಳ್ಳೆ ಮಳೆಯಾಗಿ ಇಲ್ಲವೇ ಬೋರ್‌ವೆಲ್‌ನಲ್ಲಿ ನೀರೆತ್ತಿ ಕಷ್ಟುಪಟ್ಟು ಟೊಮೊಟೊ ಬೆಳೆದ ರೈತನಿಗೆ ಕೆ.ಜಿ. ಗೆ 0.80ಪೈಸೆ ಅಂದ್ರೆ ಹೇಗೆ?
2) ಬೆಂಗಳೂರಿಗೆ ಬೆಳೆದ ಮಾಲು ತರಲು ಸಾಗಾಣಿಕಾ ವೆಚ್ಚ ಮುಗಿಲು ಮುಟ್ಟಿದೆ. ಈಚೀಚೆಗೆ ಪ್ರತಿ ತಿಂಗಳೂ ಪೆಟ್ರೋಲ್-ಡೀಸೆಲ್ ಬೆಲೆಗಳು ಮತ್ತು ವಾಹನಗಳ ಬೆಲೆಗಳು ಏರುತ್ತಲೇ ಇವೆ. ರಸ್ತೆ ಅಪಘಾತಗಳು ಜಾಸ್ತಿಯಾಗಿವೆ. ಅಗ್ಗದ ಹಳೆಯ ವಾಹನಗಳನ್ನೂ ರಸ್ತೆಯ ಮೇಲೆ ಬಿಡುತ್ತಿಲ್ಲ. ಪ್ರಪಂಚದಲ್ಲೇ ಪೆಟ್ರೋಲ್-ಡೀಸೆಲ್ ಬೆಲೆ ಬೆಂಗಳೂರಿನಲ್ಲಿಯೇ ಜಾಸ್ತಿಯಂತೆ.
3) ಆ ಸುಂಕ-ಈ ಸುಂಕ, ಲಾರಿ ಬಾಡಿಗೆ ಇತ್ಯಾದಿ ಕೊಟ್ಟು, ಅಲ್ಲಿಂದ ಇಲ್ಲಿಗೆ ಟೊಮೆಟೋ ತರುವವರು ಹಣ ಚೆಲ್ಲಬೇಕು. ಈ ಮಧ್ಯೆ ದಲ್ಲಾಳಿಗಳ ಅಂದರೆ ಮಧ್ಯವರ್ತಿಗಳ ಕಾಟ. ಬೆಳೆದವನಿಂದ ತಿನ್ನುವವನ ಮಧ್ಯೆ 3-4ಮಂದಿ ಮಧ್ಯವರ್ತಿಗಳಿರುತ್ತಾರೆ. ಅವರೆಲ್ಲರಿಗೂ ಬಹಳ ಲಾಭ ಬೇಕೇಬೇಕು.
ಹೀಗಾಗಿ ಬೆಳೆದವನಿಗೂ ಸುಖವಿಲ್ಲ. ಕೊಂಡು ತಿನ್ನುವವನಿಗೂ ಸುಖವಿಲ್ಲ ಈ ದೇಶದಲ್ಲಿ. ಕೆಲವರು ಕಾರಲ್ಲಿ/ಬಸ್ಸಲ್ಲಿ ಹೋಗಿ ಅಗ್ಗವಿರುವ ಕಡೆಯಿಂದ ತಂದರೂ ಬಹಳ ತುಟ್ಟಿ ಆಗುತ್ತದೆ.
ಇದಕ್ಕೆಪರಿಹಾರ ನನಗೆ ಕಂಡಂತೆ ಹೀಗಿದೆ:
1) ಸಂಕಷ್ಟದಲ್ಲಿರುವ ರೈತನಿಗೆ ಪುಕ್ಕಟ್ಟೆ ಕರೆಂಟ್ ನೀಡಬೇಕು.
2) ಸಂಘಟಿತ ಕಾಫೀ ತೋಟಗಾರರಿಗೆ ಸಿಗುವ ಪ್ರೋತ್ಸಾಹ ಸೊಪ್ಪು ತರಕಾರಿ ಬೆಳೆಯುವವರಿಗಿಲ್ಲ. ಸಂಘಟಿತರಾಗಿ ಹೋರಾಡುವ ಶಕ್ತಿ ಇಲ್ಲದ ಇವರಿಗೆ ಸರಕಾರವೇ ಸಹಾಯ ಮಾಡಬೇಕು.
3) ಬೆಳೆದ ಮಾಲನ್ನು ನಾಲ್ಕು ದಿನ ಕೆಡದಂತೆ ಇಡುವ ಸೌಲಭ್ಯ ಸಣ್ಣರೈತರಿಗಿಲ್ಲ. ರೈತರಿಗೆ ಹೇಗೆ ಸಹಾಯ ಮಾಡಬಹುದೆಂದು ಸರ್ಕಾರ ಚಿಂತಿಸಬೇಕು. ಮುಂದುವರಿದ ದೇಶಗಳಲ್ಲಿರುವಂತೆ ರೈತರ ಮಾರ್ಕೆಟ್ ಮತ್ತು ಕೋಲ್ಡ್ ಸ್ಟೋರೇಜ್ ಅನುಕೂಲ ಕಲ್ಪಿಸಬೇಕು.
4) ಸಾಗಾಣಿಕೆ ವೆಚ್ಚ ಕಡಿಮೆ ಮಾಡಬೇಕು. ಸಾಧ್ಯವಾದರೆ ಬೇರೆ ರಾಜ್ಯಗಳಿಗೆ, ಹೊರ ದೇಶಕ್ಕೆ ರಫ್ತುಮಾಡಲು ಸಹಾಯ ಮಾಡಬೇಕು.
5) ರೈತರ ಸರಕಾರ ಅಗತ್ಯ. ಈಗ ಎಲ್ಲರ ಗಮನ ಹಾಗೂ ಪ್ರೊತ್ಸಾಹ ಐಟಿಗೆ ಮಾತ್ರ ದಕ್ಕುತ್ತಿದೆ. ಐಟಿ ದೊರೆಗಳು ಕೇಳಿದ್ದನ್ನೆಲ್ಲ ಸರಕಾರ ಕೊಡುತ್ತಿದೆ. ಅವರಿಗೆ ‘ರೆಡ್ ಕಾರ್ಪೆಟ್’ ಹಾಸಲಾಗಿದೆ. ಬೆಂಗಳೂರು ಕೆಲವರಿಗಷ್ಟೇ ಸ್ವರ್ಗವಾಗಿ, ಮಿಕ್ಕವರಿಗೆಲ್ಲ ನರಕವಾಗುತ್ತಿದೆ. ಕಳೆದ ವರ್ಷಗಳಲ್ಲಿ ಅನೇಕ ರೈತರು ಸಾಲ ಮಾಡಿ, ಅದನ್ನು ತೀರಿಸಲಾಗದೇ ಆತ್ಯಹತ್ಯೆಗೆ ಶರಣಾದರು. ಅವರ ಬಗ್ಗೆ ಯಾರಿಗೂ ಅನುಕಂಪವಿಲ್ಲ. ಸರ್ಕಾರದಿಂದ ಧನ ಸಹಾಯ ಸಿಗುತ್ತದೆಂದು ಅನೇಕರು ಸತ್ತರೆಂದು ಬಿಳಿಕಾಲರ್‌ನ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೇಳುತ್ತಿದ್ದಾರೆ.
ರೈತರೆಲ್ಲ ಸತ್ತು, ಐ.ಟಿ ಉದ್ಯಮ ಬೆಳೆದರೇ ದೇಶ ಉಳಿಯುತ್ತದೆಯೇ? ತಿನ್ನಲಿಕ್ಕೆ ಅನ್ನ ಬೇಕಲ್ಲವೇ? ಐ.ಟಿ. ತಿನ್ನುವುದಕ್ಕೆ ಬರುತ್ತದೆಯೇ? ದುಡ್ಡು ತಿಂದು ಬದುಕಲಾಗುತ್ತದೆಯೇ?
ರೈತನೇ ದೇಶದ ಬೆನ್ನೆಲುಬು ಎಂದು ಬರೆಯುತ್ತಾರೆ, ಹಾಡುತ್ತಾರೆ. ಆದರೆ ಅವನ ಬಗ್ಗೆ ಚಿಂತಿಸುವವರಿಲ್ಲ. ಅದು ಬರೀ ‘ಸ್ಲೋಗನ್’!.












Click it and Unblock the Notifications